ನಮ್ಮ ಅಕಾಡಮಿಗಳು

Update: 2017-03-11 18:40 GMT

ರಾಜಕೀಯ ಶಕ್ತಿ, ಪ್ರಭಾವ ಮತ್ತಿತರ ಕಾರಣಗಳಿಂದಾಗಿ ಯೋಗ್ಯತೆ, ಸಾಮರ್ಥ್ಯಗಳಿಲ್ಲದವರು ಅಥವಾ ನಾಮಮಾತ್ರ ಅರ್ಹತೆಯುಳ್ಳವರು ಈ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿರುವುದನ್ನು ಈಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಂತೆ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ನಾವು ಕಾಣುತ್ತಿದ್ದೇವೆ. ಇದರಿಂದಾಗಿ ಇಂಥ ಸ್ಥಾನಗಳ ಕಾರ್ಯನಿರ್ವಹಣೆಯಲ್ಲಿ ಸತ್ಯನಿಷ್ಠೆ, ತತ್ವನಿಷ್ಠೆ, ಪ್ರಾಮಾಣಿಕತೆಗಳು ನೇಪಥ್ಯಕ್ಕೆ ಸರಿದು ಅನ್ಯ ಪರಿಗಣನೆಗಳೇ ಪ್ರಧಾನವಾಗುತ್ತಿವೆ. 


ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಹಾಗೆ ಬಹುಶ: ಕರ್ನಾಟಕದಲ್ಲಿರುವಷ್ಟು ಅಕಾಡಮಿಗಳು ಭಾರತದ ಬೇರಾವ ರಾಜ್ಯಗಳಲ್ಲೂ ಇರಲಿಕ್ಕಿಲ್ಲ. ಇರಲಿ, ಈ ‘ಹೆಚ್ಚು’ಗಾರಿಕೆ ಸಂಖ್ಯಾ ದೃಷ್ಟಿಯಿಂದ ಮಾತ್ರವಲ್ಲ ಮೌಲಿಕವಾಗಿಯೂ ಗಮನಾರ್ಹವಾದುದು. ಈ ಅಕಾಡಮಿಗಳು ನಮ್ಮ ಬಹುಸಂಸ್ಕೃತಿಯ ಸಂಕೇತವೂ ಹೌದು. ಕರ್ನಾಟಕದ ಬಹುತ್ವ ರೂಪಲಕ್ಷಣಗಳಿಗೆ ಇದಕ್ಕಿಂತ ಮಿಗಿಲಾದ ಮತ್ತೊಂದು ನಿದರ್ಶನ ಬೇಕೇ?

ನಮ್ಮ ಅಕಾಡಮಿಗಳು ಸುದ್ದಿಪಿಪಾಸುಗಳೇನಲ್ಲ. ವರ್ಷಕ್ಕೊಮ್ಮೆ ಮತ್ತು ಮೂರು ವರ್ಷಕ್ಕೊಮ್ಮೆ ಅವು ಸುದ್ದಿಯಲ್ಲಿರುತ್ತವೆ. ಪ್ರತೀ ವರ್ಷ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದಾಗ ಅವು ಸುದ್ದಿಯಲ್ಲಿರುತ್ತವೆ. ಅಕಾಡಮಿಗಳ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿ ಮೂರು ವರ್ಷಗಳು. ಮೂರು ವರ್ಷಗಳ ಅವಧಿ ಮುಗಿದ ನಂತರ ಮುಂದಿನ ಅಧ್ಯಕ್ಷರು, ಸದಸ್ಯರು ಯಾರು ಎಂಬ ಊಹಾಪೋಹ ಮತ್ತು ವಶೀಲಿಬಾಜಿ ವರದಿಗಳು ಶುರುವಾಗಿ ಅಕಾಡಮಿಗಳಿಗೆ ಮತ್ತೆ ಸುದ್ದಿಭಾಗ್ಯ ಪ್ರಾಪ್ತವಾಗುತ್ತದೆ. ಈ ಮಧ್ಯೆ ಒಂದಷ್ಟು ‘ನಾರುವ’ ಸೆಮಿನಾರುಗಳು, ಕರ್ತಾರರಿಲ್ಲದ ಕಮ್ಮಟಗಳು, ಪುಸ್ತಕ ಪ್ರಕಟಣೆಗಳು ನಡೆದಿರಬಹುದು. ಇಂದಿನ ಸುದ್ದಿ ಸ್ಫೋಟ ಧಾವಂತದಲ್ಲಿ ಇವಕ್ಕೆಲ್ಲ ಮೂರುಕಾಸಿನ ಬೆಲೆಯಿಲ್ಲ. ಅಕಾಡಮಿಗಳಿಗೂ ಇದಕ್ಕಿಂತ ಹೆಚ್ಚಿನದು ಬೇಕಿಲ್ಲ. ವರ್ಷಕ್ಕೆ ಎರಡು ಮೂರು ಗಮನ ಸೆಳೆವ ಕಾರ್ಯಕ್ರಮಗಳ ಭಾನಗಡಿ ಸಾಲದೇ! ಕರ್ನಾಟಕದ ಬಹುಪಾಲು ಅಕಾಡಮಿಗಳು ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಇತರ ಪದಾಧಿಕಾರಗಳ ಅಧಿಕಾರಾವಧಿ ಇದೀಗ ಮುಗಿದಿದೆ/ಮುಗಿಯುತ್ತಾ ಬಂದಿದೆ.

ಹೊಸ ಪದಾಧಿಕಾರಿಗಳನ್ನು ಸರಕಾರ ನೇಮಕಮಾಡಬೇಕಿದೆ. ಈ ಸ್ಥಾನಗಳಿಗಾಗಿ ಈಗಾಗಲೇ ಕೆಲವರು ಸಾಹಿತಿಗಳು-ಕಲಾವಿದರು ಸಚಿವರು ಮತ್ತು ಶಾಸಕರ ಬೆನ್ನಿಗೆ ಬಿದ್ದು ವಶೀಲಿಬಾಜಿ ಶುರುಮಾಡಿದ್ದಾರೆಂದು ಹೇಳಲಾಗುತ್ತಿದೆ. ಇರಲಿ. ಈ ಅಕಾಡಮಿಗಳು, ಪ್ರಾಧಿಕಾರಗಳ ಸ್ಥಾಪನೆಯ ಘನ ಉದ್ದೇಶವೇನು? ಅವುಗಳ ಕರ್ತವ್ಯ ಜವಾಬ್ದಾರಿಗಳೇನು? ಇವೆಲ್ಲ ನಿತ್ಯನೂತನವಾದ ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಸಿದ್ಧ ಉತ್ತರಗಳೂ ಇರುತ್ತವೆ. ಭಾರತದ ಪ್ರಾಚೀನವಾದ ಸಾಹಿತ್ಯ ಕಲೆಗಳಿಗೆ ನವಚೇತನ ತಂದುಕೊಟ್ಟು, ಅವುಗಳ ಬೆಳವಣಿಗೆಗೆ ಅಗತ್ಯವಾದ ಪರಿಸರವನ್ನು ಸೃಷ್ಟಿಸುವುದು ಈ ಅಕಾಡಮಿಗಳ ಸ್ಥಾಪನೆಯ ಹಿಂದಿನ ಉದ್ದೇಶ ಎಂಬುದು ಇಂಥ ಒಂದು ಸಿದ್ಧ ಉತ್ತರ. ಸ್ವಾತಂತ್ರ್ಯಪೂರ್ವದಲ್ಲೇ ಈ ಘನಕಾರ್ಯಕ್ಕಾಗಿ ‘ರಾಯಲ್ ಸೊಸೈಟಿ ಆಫ್ ಬೆಂಗಾಲ್’ ಎಂಬ ಸಂಸ್ಥೆ ಅಸ್ತಿತ್ವದಲ್ಲಿತ್ತು. ದೇಶದಾದ್ಯಂತ ಸಾಹಿತ್ಯ ಕಲೆಗಳ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ಸಾಂಸ್ಕೃತಿಕ ವಿಶ್ವಸ್ಥ ಮಂಡಳಿಯೊಂದನ್ನು ಸ್ಥಾಪಿಸುವಂತೆ ರಾಯಲ್ ಸೊಸೈಟಿ ಆಫ್ ಬೆಂಗಾಲ್ 1944ರಷ್ಟು ಹಿಂದೆಯೇ ಆಗಿನ ಬ್ರಿಟಿಷ್ ಭಾರತ ಸರಕಾರಕ್ಕೆ ಶಿಫಾರಸು ಮಾಡಿತ್ತು.

ಸ್ವಾತಂತ್ರ್ಯ ಬಂದು ರಾಷ್ಟ್ರೀಯ ಸರಕಾರ ಅಧಿಕಾರಕ್ಕೆ ಬಂದನಂತರ ಕೇಂದ್ರ ಶಿಕ್ಷಣ ಸಚಿವರಾದ ಅಬುಲ್ ಕಲಾಂ ಆಝಾದರು ಈ ಸಲಹೆಯನ್ನು ಕೈಗೆತ್ತಿಕೊಂಡರು. ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗಳ ಅಭಿವೃದ್ಧಿಗಾಗಿ, ಜನರಲ್ಲಿ ಕಲೆ, ಸಾಹಿತ್ಯಗಳ ಬಗ್ಗೆ ಸದಭಿರುಚಿಯನ್ನು ಬೆಳೆಸಿ ಪೋಷಿಸುವ ಸಲುವಾಗಿ ಯೂರೋಪಿನ ಮಾದರಿಯ ಅಕಾಡಮಿಗಳ ಅಗತ್ಯವಿದೆಯೆಂದು ಆಝಾದರು ಭಾವಿಸಿದ್ದರು. ಸಾಹಿತ್ಯ, ಕಲೆ, ಸಂಸ್ಕೃತಿಗಳಲ್ಲಿ ಸರಕಾರ ಏಕೆ ಕೈಹಾಕಬೇಕೆಂಬುದು ನೆಹರೂ ಅವರ ಪ್ರಶ್ನೆಯಾಗಿತ್ತು. ‘‘ಕಲೆ ಸಂಸ್ಕೃತಿಗಳು ತಳಮಟ್ಟದಿಂದ ಅರಳಿ ಬೆಳೆಯಬೇಕು, ಮೇಲಿನಿಂದ ಸರಕಾರ ಇವುಗಳನ್ನು ಹೇರಬಾರದು’’ ಎಂಬುದು ನೆಹರೂ ಅವರ ಅಭಿಪ್ರಾಯವಾಗಿತ್ತು. ಅಬುಲ್ ಕಲಾಂ ಆಝಾದರು ಮಾತ್ರ ಅಕಾಡಮಿಗಳ ಸ್ಥಾಪನೆಯ ಬಗ್ಗೆ ದೃಢವಾದ ಮನಸ್ಸು ಹೊಂದಿದ್ದರು. ಅಕಾಡಮಿಗಳಿಗೆ ಹಣ ಕೊಡುವುದಷ್ಟೇ ಸರಕಾರದ ಜವಾಬ್ದಾರಿಯಾಗಬೇಕು, ಅಕಾಡಮಿಗಳು ಸರಕಾರದ ಹಸ್ತಕ್ಷೇಪವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂಬ ನೀತಿಯೊಂದಿಗೆ ಅಕಾಡಮಿಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು. 1953ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮಿಯೂ 1954ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ, ಕೇಂದ್ರ ಲಲಿತಕಲಾ ಅಕಾಡಮಿಗಳೂ ಅಸ್ತಿತ್ವಕ್ಕೆ ಬಂದವು. ಪ್ರತಿಯೊಂದು ಅಕಾಡಮಿಯೂ ಸ್ವಾಯತ್ತವಿದ್ದು ಅದರ ಕಾರ್ಯನಿರ್ವಹಣೆಯ ಜವಾಬ್ದಾರಿ ಪದಾಧಿಕಾರಗಳ ಸಮಿತಿಗೆ ಸೇರಿದ್ದು. ಕರ್ನಾಟಕದ ಅಕಾಡಮಿಗಳೂ ಹೆಚ್ಚೂ ಕಡಿಮೆ ಕೇಂದ್ರದ ಮಾದರಿಯಲ್ಲೇ ಇವೆ.

ಕೇಂದ್ರ ಸಾಹಿತ್ಯ ಅಕಾಡಮಿಯ ಕಾರ್ಯ ನಿರ್ವಹಣಾ ಜವಾಬ್ದಾರಿ ಕಾರ್ಯಕಾರಿ ಸಮಿತಿಯದಾದರೆ ಒಟ್ಟಾರೆ ಹೊಣೆಗಾರಿಕೆ ಸಾರ್ವತ್ರಿಕ ಮಂಡಳಿಯದು. ಇದರಲ್ಲಿ ಸಮಗ್ರ ದೇಶದ ಪ್ರಾತಿನಿಧ್ಯವಿರುತ್ತದೆ.ಕೇಂದ್ರ ಸರಕಾರದಿಂದ ನೇಮಕಗೊಂಡ ಆರ್ಥಿಕ ಸಲಹೆಗಾರರು, ನಾಮಕರಣಗೊಂಡ ಐವರು ಸದಸ್ಯರು, ಪ್ರತಿಯೊಂದು ರಾಜ್ಯ ಸರಕಾರದ ಪ್ರತಿನಿಧಿ, ಸಾಹಿತ್ಯ ಅಕಾಡಮಿ ಮಾನ್ಯ ಮಾಡಿದ ಪ್ರತಿಯೊಂದು ಭಾಷೆಯ ಪ್ರತಿನಿಧಿಗಳಿರುತ್ತಾರೆ. ಸಾರ್ವತ್ರಿಕ ಮಂಡಳಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರನ್ನು ಚುನಾಯಿಸಿಕೊಳ್ಳುತ್ತದೆ. ಆದರೆ ಲಲಿತಕಲಾ ಅಕಾಡಮಿ ಮತ್ತು ಸಂಗೀತನಾಟಕ ಅಕಾಡಮಿಗಳಿಗೆ ಕೇಂದ್ರ ಸರಕಾರವೇ ಅಧ್ಯಕ್ಷರನ್ನು ನೇಮಕಮಾಡುತ್ತದೆ. ಕರ್ನಾಟಕದ ಅಕಾಡಮಿಗಳಿಗೆ ರಾಜ್ಯ ಸರಕಾರವೇ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುತ್ತದೆ. ಆಡಳಿತ ಮತ್ತು ಲೆಕ್ಕಪತ್ರಗಳ ಜವಾಬ್ದಾರಿ ನೋಡಿಕೊಳ್ಳಲು ಸರಕಾರಿ ಅಧಿಕಾರಿಗಳಿರುತ್ತಾರೆ. ಅಧ್ಯಕ್ಷರಿಗೆ ಒಂದಷ್ಟು ಸದಸ್ಯರನ್ನು ಸೇರಿಸಿಕೊಳ್ಳುವ ಅಧಿಕಾರ ನೀಡಲಾಗಿದೆ.

ರಾಜ್ಯದ ಅಕಾಡಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಅರ್ಹತೆಗಳೇನು? ಮಾನದಂಡಗಳೇನು? ಈ ಸ್ಥಾನಗಳಿಗೆ ಸೂಕ್ತರನ್ನು, ಸಮರ್ಥರನ್ನು ಆಯ್ಕೆಮಾಡಲು ಸರಕಾರ ಸಲಹಾ ಸಮಿತಿಗಳನ್ನೇನಾದರೂ ನೇಮಕ ಮಾಡುತ್ತದೆಯೇ? ಆಯಾ ಕ್ಷೇತ್ರದಲ್ಲಿ ಕೆಲಸಮಾಡಿದ ಅನುಭವವಿರಬೇಕು, ಗಣನೀಯ ಕೊಡುಗೆ ನೀಡಿರಬೇಕು ಎಂಬುದು ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ಅರ್ಹತೆ. ಇನ್ನು ಆಯ್ಕೆಯ ಮಾನದಂಡ...ಜಿಲ್ಲಾವಾರು ಪ್ರಾತಿನಿಧ್ಯ, ಜಾತಿಧರ್ಮವಾರು ಪ್ರಾತಿನಿಧ್ಯ ಇಂಥ ಹಲವಾರು ಮಾನದಂಡಗಳನ್ನು ಸರಕಾರ ಹೊಂದಿರುವಂತಿದೆ. ಸೂಕ್ತ ಅಭ್ಯರ್ಥಿಗಳನ್ನು ಶಿಫಾರಸು ಮಾಡಲು ಸಮಿತಿಯನ್ನು ನೇಮಕಮಾಡುವ ನಿಯಮವಾಗಲಿ ಸಂಪ್ರದಾಯವಾಗಲಿ ಇದ್ದಂತಿಲ್ಲ. ಬಹುಶಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಾರ್ತಾ ಇಲಾಖೆಗಳೇ ಈ ಕೆಲಸಮಾಡುತ್ತವೆ ಎನ್ನಬಹುದು. ರಾಜ್ಯದ ಸಾಹಿತಿ, ಕಲಾವಿದರು, ಪತ್ರಕರ್ತರ ಮಾಹಿತಿ ಕಡತಗಳು ಈ ಇಲಾಖೆಗಳಲ್ಲಿರುತ್ತವೆ ಎಂದು ಭಾವಿಸಬಹುದು.

ಮೂರು ವರ್ಷಕ್ಕೊಮ್ಮೆ ನಡೆಯುವ ಈ ನೇಮಕಗಳು ಸಂಪೂರ್ಣವಾಗಿ ಸಂಬಂಧಪಟ್ಟ ಇಲಾಖೆಗಳ ಶಿಫಾರಸುಗಳನ್ವಯ ನಡೆಯುತ್ತದೆ ಎಂದು ಖಾತ್ರಿಯಾಗಿ ಹೇಳಲಾಗದು. ಏಕೆಂದರೆ ಮೇಲಿನ ಅರ್ಹತೆಗಳಿಗೂ ಮಿಗಿಲಾಗಿ ಆಕಾಂಕ್ಷಿಗಳ ರಾಜಕೀಯ ಬಲಾಢ್ಯತೆ ಮತ್ತು ಪ್ರಭಾವಗಳೇ ನೇಮಕಗಳಲ್ಲಿ ಮೇಲುಗೈ ಪಡೆಯುತ್ತವೆ ಎಂಬುದು ಬಹಿರಂಗ ಸತ್ಯ. ಹೀಗಾದಾಗ ಅನುಭವ, ಪ್ರತಿಭೆ, ಸಾಮರ್ಥ್ಯಗಳು ಮೊದಲು ಬಲಿಪಶುಗಳಾಗುತ್ತವೆ. ರಾಜಕೀಯ ಶಕ್ತಿ, ಪ್ರಭಾವ ಮತ್ತಿತರ ಕಾರಣಗಳಿಂದಾಗಿ ಯೋಗ್ಯತೆ, ಸಾಮರ್ಥ್ಯಗಳಿಲ್ಲದವರು ಅಥವಾ ನಾಮಮಾತ್ರ ಅರ್ಹತೆಯುಳ್ಳವರು ಈ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿರುವುದನ್ನು ಈಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಂತೆ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ನಾವು ಕಾಣುತ್ತಿದ್ದೇವೆ. ಇದರಿಂದಾಗಿ ಇಂಥ ಸ್ಥಾನಗಳ ಕಾರ್ಯನಿರ್ವಹಣೆಯಲ್ಲಿ ಸತ್ಯನಿಷ್ಠೆ, ತತ್ವನಿಷ್ಠೆ, ಪ್ರಾಮಾಣಿಕತೆಗಳು ನೇಪಥ್ಯಕ್ಕೆ ಸರಿದು ಅನ್ಯ ಪರಿಗಣನೆಗಳೇ ಪ್ರಧಾನವಾಗುತ್ತಿವೆ. ಕರ್ನಾಟಕದ ಅಕಾಡಮಿಗಳು ಮತ್ತು ಪ್ರಾಧಿಕಾರಗಳ ಕಾರ್ಯನಿರ್ವಹಣೆ ಬಗ್ಗೆ ಅನೇಕ ರೀತಿಯ ಟೀಕೆಗಳಿವೆ. ಇವುಗಳಲ್ಲಿ ಕೆಲವು ವೈಯಕ್ತಿಕ ಇಷ್ಟಾನಿಷ್ಟಗಳಿಗೆ, ಅತೃಪ್ತಿಗಳಿಗೆ ಸಂಬಂಧಿಸಿದವು, ಇನ್ನು ಕೆಲವು ವಾಸ್ತವವಾದವು. ಕೆಲವು ಸರಕಾರ ಮತ್ತು ಅಕಾಡಮಿ ಫಲವಾದವು, ಕೆಲವು ಜಿಲ್ಲಾವಾರು ಪ್ರಾಬಲ್ಯ ಮತ್ತು ರಾಜಕೀಯ ‘ಶಕ್ತಿ’ಗಳ ಹಸ್ತಕ್ಷೇಪ ಫಲವಾದವು. ಹೆಚ್ಚು ದೂರು ಮತ್ತು ಅತೃಪ್ತಿಗಳು ವ್ಯಕ್ತವಾಗುತ್ತಿರುವುದು ಪ್ರಶಸ್ತಿಗಳು, ಪುಸ್ತಕ ಬಹುಮಾನಗಳು, ಪುಸ್ತಕಗಳ ಪ್ರಕಟನೆ, ಅನುವಾದ ಕಾರ್ಯ ಮತ್ತು ಪುಸ್ತಕಗಳ ಖರೀದಿಗೆ ಸಂಬಂಧಿಸಿದ್ದು.

ಸಾಹಿತ್ಯ ಪ್ರಶಸ್ತಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರತೀ ವರ್ಷವೂ ಹಿಂದಿನ ಮೂರು- ನಾಲ್ಕು ವರ್ಷಗಳ ಪ್ರಕಟನೆಗಳನ್ನು ಪರಿಗಣಿಸಿ ಪ್ರತಿಯೊಂದು ಭಾಷೆಯ ಶ್ರೇಷ್ಠ ಕೃತಿಗೆ ಪ್ರಶಸ್ತಿ ನೀಡುವ ಪರಿಪಾಠವಿಟ್ಟುಕೊಂಡಿದೆ. ಒಟ್ಟು ಕೊಡುಗೆ ಹಾಗೂ ಜೀವಮಾನನದ ಸಾಧನೆಯನ್ನು ಪರಿಗಣಿಸಿ ಹಿರಿಯ ಸಾಹಿತಿಗಳಿಗೆ ಫೆಲೋಶಿಪ್ ಸಹ ನೀಡುತ್ತದೆ. ಪ್ರಶಸ್ತಿಯ ಆಯ್ಕೆಗೆ ಎರಡು ಹಂತದಲ್ಲಿ ಗ್ರಂಥಗಳ ಪರಾಮರ್ಶೆ ನಡೆದು ಆಖೈರಾಗಿ ತಜ್ಞರ ಸಮಿತಿ ಶಿಫಾರಸಿನಂತೆ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಕರ್ನಾಟಕ ಸಾಹಿತ್ಯ ಅಕಾಡಮಿಯಲ್ಲೂ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಗಳನ್ನು ಕೊಡುವ ಪರಿಪಾಠವಿದೆ. ಕನ್ನಡಕ್ಕೆ ಮೌಲಿಕ ಕೊಡುಗೆ ಮತ್ತು ಜೀವಮಾನದ ಸಾಧನೆಗಳನ್ನು ಗಮನಿಸಿ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತಿದೆ. ಕಾವ್ಯ, ಸಣ್ಣ ಕಥೆ, ಕಾದಂಬರಿ, ಲಲಿತ ಪ್ರಬಂಧ, ಜೀವನ ಚರಿತ್ರೆ, ಅನುವಾದ-ಹೀಗೆ ಆಯಾ ವರ್ಷ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಉತ್ತಮ ಕೃತಿಗಳಿಗೆ ಪುಸ್ತಕ ಬಹುಮಾನ ನಿಡಲಾಗುತ್ತಿದೆ. ಬಹುಮಾನಕ್ಕೆ ಲೇಖಕ/ಪ್ರಕಾಶಕರು ಪುಸ್ತಕಗಳನ್ನು ಅಕಾಡಮಿಗೆ ಕಳುಹಿಸಿ ಕೊಡಬೇಕು. ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಗಳನ್ನು ಆಯ್ಕೆ ಮಾಡುತ್ತದೆ.

ಪ್ರಶಸ್ತಿಗೆ ಆಯ್ಕೆ ಸಮಿತಿ ಎಂಬುದು ಇದ್ದಂತಿಲ್ಲ. ಪದಾಧಿಕಾರಿಗಳ ಸಲಹೆ ಶಿಫಾರಸುಗಳನ್ವಯ ಪ್ರಶಸ್ತಿಗೆ ಸಾಹಿತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆ ಮಾಡುವಾಗ ಲೇಖಕರ ಕೊಡುಗೆ, ಸಾಹಿತ್ಯ ಮೌಲ್ಯ, ಜೀವಮಾನದ ಸಾಧನೆಗಳ ಜೊತೆಗೆ ಜಿಲ್ಲಾವಾರು ಪ್ರಾತಿನಿಧ್ಯ, ಜಾತಿ ಧರ್ಮಗಳ ಪ್ರಾತಿನಿಧ್ಯದ ಮಾನದಂಡಗಳೂ ಕೆಲಸಮಾಡುತ್ತವೆ. ಸಾಹಿತ್ಯ ಸಾಧನೆ ಜೊತೆಗೆ ಅನ್ಯ ಮಾನದಂಡಗಳಿಂದಲೂ ಪರಿಶೀಲಿಸಿದಾಗ ಶ್ರೇಷ್ಠತೆ ಜೊತೆ ರಾಜಿ ಅನಿವಾರ್ಯವಾಗಬಹುದು. ಜಿಲ್ಲಾವಾರು ಅಥವಾ ಇನ್ನಿತರ ಮಾನದಂಡಗಳಿಂದ ನೋಡಿದಾಗಲೂ ಒಂದು ಜಿಲ್ಲೆ ಅಥವಾ ಪ್ರದೇಶದ ಉತ್ತಮ ಸಾಧನೆಗೆ ಮಾನ್ಯತೆ ದೊರೆಯದೆ ಅನ್ಯಕಾರಣಗಳಿಂದಾಗಿ ನಗಣ್ಯ ‘ಸಾಧಕರಿಗೆ’ ಪ್ರಶಸ್ತಿ ಒಲಿಯಬಹುದು. ಅಧ್ಯಕ್ಷರ ಬಾಯಿಬಡಿದು, ಸಾಧನೆ-ಶ್ರೇಷ್ಠತೆಗಳನ್ನು ನಿರ್ಲಕ್ಷಿಸಿ ಸದಸ್ಯರು ದಬಾವಣೆಯಿಂದ ತಮಗೆ ಬೇಕಾದವರಿಗೆ ಪ್ರಶಸ್ತಿಗಳನ್ನು ಕೊಡಿಸಿದ ಉದಾಹರಣೆಗಳಿವೆಯೆಂದು ಅಕಾಡಮಿಗಳ ಒಳಮೂಲಗಳೇ ರಹಸ್ಯವಾಗಿ ಬಾಯಿಬಿಡುತ್ತವೆ.

ಸೃಜನಶೀಲ ಸಾಹಿತಿಗಳೇ ಅಲ್ಲದವರಿಗೆ ಪ್ರಶಸ್ತಿ ನೀಡಿರುವ ನಿದರ್ಶನಗಳಿವೆ. ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತರಿಗೆ ರಾಜ್ಯದ ಅಕಾಡಮಿಯ ಪ್ರಶಸ್ತಿಯೂ ಇಲ್ಲ, ಪುಸ್ತಕ ಬಹುಮಾನವೂ ಇಲ್ಲವಾಗಿರುವ ನಿದರ್ಶನಗಳಿವೆ. ಹೀಗಾಗಿ ಅನೇಕ ಮಂದಿ ಹಿರಿಯ ಸಾಹಿತಿಗಳಿಗೆ, ಸಾಹಿತ್ಯ ಸಾಧಕರಿಗೆ ಈ ಪ್ರಶಸ್ತಿ ಗಗನ ಕುಸುಮವೇ ಆಗಿದೆ. ತನ್ನ ಆತ್ಮಸಾಕ್ಷಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲೋ ಎಂಬಂತೆ ಈ ವರ್ಷ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಾಯ 75 ದಾಟಿದ ಇಪ್ಪತ್ನಾಲ್ಕು ಮಂದಿ ಸಾಹಿತಿಗಳಿಗೆ ‘ಸುವರ್ಣ ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಿದೆ-ಶಾಲಾಕಾಲೇಜುಗಳ ಸ್ಪರ್ಧೆಗಳಲ್ಲಿ ಸಮಾಧಾನಕರ ಬಹುಮಾನ ನೀಡುತ್ತಾರಲ್ಲ, ಹಾಗೆ. ಸುವರ್ಣ ಗೌರವ ಪುರಸ್ಕಾರಕ್ಕೆ ಪಾತ್ರರಾದ ಈ ಸಾಹಿತಿಗಳನ್ನು ಹೇಗೆ ಇಷ್ಟೂ ವರ್ಷಗಳು ಸಾಹಿತ್ಯ ಸಾಧನೆಯ ವಾರ್ಷಿಕ ಪ್ರಶಸ್ತಿಗೆ ಪರಿಗಣಿಸಲಿಲ್ಲ? ಅಲ್ಲಿ ಸಲ್ಲದವರು ಇಲ್ಲಿ ಸಂದದ್ದಾದರೂ ಹೇಗೆ? ಯಾವ ಮಾನದಂಡದಿಂದ? ಕೇವಲ ವಯೋಮಾನ ಒಂದೇ ಆದರೆ, 75 ದಾಟಿದ ಲೇಖಕರು ಇನ್ನೂ ನೂರು ಮಂದಿ ಸಿಕ್ಕಾರು. ಅವರಿಗೆಲ್ಲ ಏಕಿಲ್ಲ? ಈ ಬಗೆಯ ಸಮಾಧಾನ, ‘‘ಆ ಪ್ರಶಸ್ತಿಗೆ ನೀವು ಯೋಗ್ಯರಲ್ಲ, ಈ ಕೃಪಾಭಿಕ್ಷೆ ತೆಗೆದುಕೊಂಡು ಸುಮ್ಮನಿರಿ’’ ಎಂದು ಅವಮಾನಿಸಿದಂತಲ್ಲವೇ? ಪ್ರಶಸ್ತಿ ಅಷ್ಟೇ ಅಲ್ಲ ಸಾಹಿತಿಗಳ ಪ್ರಾತಿನಿಧಿಕ ಸಂಸ್ಥೆಯಾದ ಈ ಸ್ವಾಯತ್ತ ಅಕಾಡಮಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಅಸಹಿಷ್ಣುತೆ, ಪುಸ್ತಕಗಳ ಮುಟ್ಟುಗೋಲು ಇಂಥ ಸಂದರ್ಭಗಳಲ್ಲಿ ವೃತ್ತಿಬಾಂಧವರ ರಕ್ಷಣೆಗೆ ಬಾರದೆ, ಯಾವುದೊಂದು ನಿಲುವನ್ನೂ ತಾಳದೆ ದಿವ್ಯ ಮೌನ ತಾಳಿದ್ದಿದೆ.

ಇಂತಹ ಪರಿಸ್ಥಿತಿಯಲ್ಲಿ, ‘‘ಜನತಂತ್ರ ವ್ಯವಸ್ಥೆಯಲ್ಲಿ ಅಕಾಡಮಿಗಳಂಥ ಸ್ವಾಯತ್ತ ಸಂಸ್ಥೆಗಳು ಮುಕ್ತವಾಗಿ, ದಿಟ್ಟವಾಗಿ ಮತ್ತು ಪ್ರಾಮಾಣಿಕವಾಗಿ ಚಿಂತಿಸುತ್ತಾ ತಮ್ಮ ಘನತೆಗೆ ಕುಂದಾಗದಂತೆ ಕ್ರಿಯಾಶೀಲವಾಗಿರಬೇಕು. ಆಗ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಆ ಮೂಲಕ ಸಮಾಜ ಬಲಿಷ್ಠಗೊಳ್ಳುತ್ತ ಹೋಗುತ್ತವೆ. ಸಮಾನತೆಯ, ಘನತೆಯ ತತ್ವಕ್ಕೆ ಬದ್ಧವಾಗಿ ಕೆಲಸಮಾಡಿದಾಗ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತದೆ. ಇದು ಆಗ ಬೇಕಾದರೆ ಸ್ವತಂತ್ರ ಮನೋಧರ್ಮದವರು ಮತ್ತು ಸಮಾಜಮುಖಿ ಚಿಂತನೆಯ ಘನತೆವಂತರು ಈ ಸ್ವಾಯತ್ತ ಸಂಸ್ಥೆಗಳನ್ನು ತುಂಬುವಂತಾಗಬೇಕು. ಜಾತಿ, ಮತ, ಧರ್ಮ, ಪ್ರದೇಶ, ರಾಜಕೀಯ ಲಾಭ-ನಷ್ಟಗಳ ಮೇಲೆ ಕಣ್ಣಿಟ್ಟು ಆಯ್ಕೆ ನಡೆದರೆ ಅಂಥ ವ್ಯಕ್ತಿಗಳಿಂದ ಅಕಾಡಮಿಗಳಿಗಾಗಲಿ, ಸಮಾಜಕ್ಕಾಗಲಿ, ಸಾಹಿತ್ಯ-ಕಲೆಗಳಿಗಾಗಲಿ ಹೆಚ್ಚಿನ ಪ್ರಯೋಜನವಾಗದು’’ ಎಂದು ಖ್ಯಾತ ವಿಮರ್ಶಕ ಜಿ.ಎಚ್.ನಾಯಕ್ ಮೊದಲಾದವರು ದನಿಎತ್ತಿರುವುದು ಸ್ವಾಗತಾರ್ಹ. ಸಿದ್ದರಾಮಯ್ಯನವರ ಸರಕಾರಕ್ಕೆ ಇದು ಕೇಳಿಸುತ್ತಿದೆಯೆ?

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News