×
Ad

ಮಣಿಪುರ: ಬಹುಮತಕ್ಕೆ ಬೇಕಾದ ಬೆಂಬಲ ಬಾಚಿಕೊಂಡ ಬಿಜೆಪಿ

Update: 2017-03-13 09:29 IST

ಇಂಫಾಲ, ಮಾ.13: ಮಣಿಪುರದಲ್ಲೂ ಮೊದಲ ಬಾರಿಗೆ ಸರಕಾರ ರಚನೆಗೆ ಬಿಜೆಪಿ ಸಜ್ಜಾಗಿದ್ದು, ಬಹುಮತಕ್ಕೆ ಬೇಕಾದ ಬೆಂಬಲ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಾದೇಶಿಕ ಪಕ್ಷಗಳಬೆಂಬಲಪತ್ರವನ್ನು ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಅವರಿಗೆ ಸಲ್ಲಿಸಲಾಗಿದ್ದು, 60 ಸದಸ್ಯಬಲದ ವಿಧಾನಸಭೆಯಲ್ಲಿ 32 ಶಾಸಕರ ಬೆಂಬಲವನ್ನು ಬಿಜೆಪಿ ಪ್ರದರ್ಶಿಸಿದೆ.

ಚುನಾವಣೆಯಲ್ಲಿ 21 ಸ್ಥಾನ ಗೆದ್ದಿದ್ದ ಬಿಜೆಪಿ, ನ್ಯಾಷನಲ್ ಪೀಪಲ್ಸ್ ಪಾರ್ಟಿಯ ನಾಲ್ವರು ಶಾಸಕರು, ನಾಗಾ ಪೀಪಲ್ಸ್ ಫ್ರಂಟ್‌ನ ನಾಲ್ಕು ಮಂದಿ ಹಾಗೂ ಎಲ್‌ಜೆಪಿಯ ಒಬ್ಬ ಸದಸ್ಯರ ಬೆಂಬಲ ಪಡೆದಿದೆ. ಏಕೈಕ ಪಕ್ಷೇತರ ಸದಸ್ಯ ಅಶಬ್ ಉದ್ದಿನ್ ಮತ್ತು ತೃಣಮೂಲ ಕಾಂಗ್ರೆಸ್ ಶಾಸಕ ರಬೀಂದ್ರೊಸಿಂಗ್ ಅವರೂ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.

ಆದಾಗ್ಯೂ ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಇಬ್ಬೊಬಿ ಸಿಂಗ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ, ಏಕೈಕ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೇ ಸರ್ಕಾರ ರಚನೆಗೆ ಮೊದಲು ಆಹ್ವಾನ ನೀಡಬೇಕು ಎಂದು ಆಗ್ರಹಿಸಿದರು. ಸದನದಲ್ಲಿ ಬೆಂಬಲ ಸಾಬೀತುಪಡಿಸಲು ಪಕ್ಷಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗದಲ್ಲಿ ರಬಿಂದ್ರೊ ಸಿಂಗ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಪ್ರಹ್ಲಾದ್ ಸಿಂಗ್ ಪಟೇಲ್ ಸೇರಿದ್ದರು. ಕಾಂಗ್ರೆಸ್ ಶಾಸಕ ಶ್ಯಾಮ ಕುಮಾರ್ ಸಿಂಗ್ ಅವರು ಕೂಡಾ ಬಿಜೆಪಿ ನಿಯೋಗದಲ್ಲಿ ಇದ್ದುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯನ್ನು ಬೆಂಬಲಿಸುವವರ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿದ್ದರೂ, ಅವರು ಬಿಜೆಪಿ ನಿಯೋಗದ ಜತೆ ತೆರಳಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷವನ್ನು ಒಡೆಯಲು ಬಿಜೆಪಿ ಸಂಚು ಹೂಡಿದೆ ಎಂಬ ಆರೋಪ ಕೇಳಿಬಂದಿದೆ.

ಪಕ್ಷೇತರ ಶಾಸಕ ಅಶಬ್ ಮತ್ತೆ ಗುವಾಹತಿಗೆ ಪ್ರಯಾಣ ಬೆಳೆಸಿದ್ದು, ಇದಕ್ಕೂ ಮುನ್ನ ಇಂಫಾಲ ವಿಮಾನ ನಿಲ್ದಾಣದಲ್ಲಿ ನಾಟಕೀಯ ಬೆಳವಣಿಗೆ ನಡೆಯಿತು. ಮಧ್ಯಾಹ್ನ ವೇಳೆ ಇಂಫಾಲಕ್ಕೆ ಆಗಮಿಸಿದ ಅಶಬ್ ಜತೆಗೆ ಕಾಂಗ್ರೆಸ್ ಸಚಿವ ಅಬ್ದುಲ್ ನಸೀರ್ ಇದ್ದರು. ಆದರೆ ಬಿಜೆಪಿ ಶಾಸಕ ವಿಶ್ವಜಿತ್ ಸಿಂಗ್ ಅವರು ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಜತೆ ಕಾಯುತ್ತಿದ್ದರು.

ಅಶಬ್ ಆಗಮಿಸಿದ ತಕ್ಷಣ ಸಿಐಎಸ್‌ಎಫ್ ಅಧಿಕಾರಿಗಳ ನೆರವಿನೊಂದಿಗೆ ಅವರನ್ನು ಕರೆದೊಯ್ದರು ಎಂದು ಅಬ್ದುಲ್ ನಸೀರ್ ಆಪಾದಿಸಿದ್ದಾರೆ. ಆದರೆ ವಿಶ್ವಜಿತ್ ಹಾಗೂ ನಸೀರ್ ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಖಾಸಗಿ ವಿಮಾನದಲ್ಲಿ ಅಶಬ್ ತಮ್ಮ ಕ್ಷೇತ್ರಕ್ಕೆ ಮರಳಿದ್ದಾರೆ ಎಂದು ಸಿಐಎಸ್‌ಎಫ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News