ಎಂದೂ ಏನೂ ಕೆಟ್ಟದು ಮಾಡದ ನಾನು ಊಟಕ್ಕಾಗಿ ಆತನ ಮೊಬೈಲ್ ಕದ್ದೆ . ಆದರೆ ... : ಅಶ್ಫಾಕ್

Update: 2017-03-15 07:34 GMT

ನಾನು ಎರಡು ದಿನಗಳಿಂದ ಹಸಿವಿನಿಂದ ಕಂಗೆಟ್ಟಿದ್ದೆ. ಒಂದು ಬನ್ ತಿಂದು ಎಷ್ಟು ದಿನ ಒಬ್ಬ ಜೀವಿಸಬಹುದು ? ನನ್ನ ಗೆಳೆಯ ನನ್ನನ್ನು ಆತನ ಜತೆ ಬರಲು ಹೇಳಿದ. ಅವರು ವಸ್ತುಗಳನ್ನು ಕದ್ದು ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ನಿಜ ಹೇಳಬೇಕೆಂದರೆ ನಾನು ಕಳ್ಳರ ಗ್ಯಾಂಗೊಂದನ್ನು ಸೇರಿದ್ದೆ. ಒಂಥರಾ ವಿಚಿತ್ರ ಭಾವನೆ ನನ್ನನ್ನು ಕಾಡುತ್ತಿತ್ತು.

ನನ್ನ ಅಜ್ಜಿ ಯಾವುದೇ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ ಸಂದರ್ಭದಲ್ಲೂ ನಾನು ಇಂತಹ ಅಪರಾಧಕ್ಕೆ ಕೈ ಹಾಕಿರಲಿಲ್ಲ. ಆಕೆ ತಾನೊಬ್ಬಳೇ ನನ್ನನ್ನು ಬೆಳೆಸಿ ದೊಡ್ಡವನಾಗಿಸಿದ್ದಳಲ್ಲದೆ ಅವಳಿಗೆ ತಿಳಿದಿದ್ದ ಎಲ್ಲಾ ಸದ್ಬುದ್ಧಿಗಳನ್ನೂ ನನಗೆ ತಿಳಿ ಹೇಳಿದ್ದಳು. ನನ್ನ ಬಗ್ಗೆ ಚೆನ್ನಾಗಿ ತಿಳಿದಿದ್ದ ನನ್ನ ಗೆಳೆಯ ರೂಬೆಲ್ ನನ್ನನ್ನು ಉತ್ತೇಜಿಸಿ, ಈಗ ನಾವು ಕೇವಲ ಕಳ್ಳತನ ಮಾಡುತ್ತೇವೆಯೇ ಹೊರತು ಯಾರನ್ನೂ ಸಾಯಿಸುವುದಿಲ್ಲ ಎಂದು ಹೇಳಿದ. ಅದೃಷ್ಟ ನನ್ನ ಕಡೆಗಿತ್ತು. ಆ ದಿನ ಆ ವ್ಯಕ್ತಿ ಒಬ್ಬನೇ ಶಾಲೆಯ ಗೇಟ್ ಒಂದರ ಬಳಿ ಯಾವುದೇ ಪರಿವೆಯಿಲ್ಲದೆ ನಿಂತಿದ್ದ. ಆತನಲ್ಲಿದ್ದ ಮೊಬೈಲ್ ಫೋನ್ ಎಗರಿಸಿ ಅಲ್ಲಿಂದ ಪರಾರಿಯಾಗಲು ನನಗೆ ಕೇವಲ ಒಂದು ಸೆಕೆಂಡ್ ಸಾಕಾಗಿತ್ತು.

ನನ್ನ ಗೆಳೆಯ ಕೂಡಲೇ ಅದರ ಸಿಮ್ ತೆಗೆದು ನನ್ನ ಕೈಗಿತ್ತ. ನಾನು ಅಲ್ಲಿಯ ತನಕ ಯಾವುದೇ ಮೊಬೈಲ್ ಫೋನ್ ನೋಡಿರಲಿಲ್ಲವಾದುದರಿಂದ ಅದನ್ನು ಒಂದು ದಿನದ ಮಟ್ಟಿಗೆ ಇಟ್ಟುಕೊಳ್ಳುವ ಬಗ್ಗೆ ನನ್ನ ಗೆಳೆಯನಲ್ಲಿ ಹೇಳಿದೆ. ಅದು ಒಳ್ಳೆಯ ಅಭಿಪ್ರಾಯವೆಂದು ಆತ ಹೇಳಿದ. ಆತನ ಕೈಯಿಂದ ಅದನ್ನು ಕಸಿದು ಅದನ್ನು ಸೂಕ್ಷ್ಮವಾಗಿ ಗಮನಿಸಿದೆ. ಅದರ ಡಿಸ್ಪ್ಲೇನಲ್ಲಿ ಒಬ್ಬಳು ಪುಟ್ಟ ಹುಡುಗಿ ನಗುತ್ತಿದ್ದಳು. ಆಕೆ ನನ್ನನ್ನು ನೋಡಿ ನಗುತ್ತಿದ್ದಳೆಂದು ನಾನಂದುಕೊಂಡೆ.

ರಾತ್ರಿ ನಾನು ಮಲಗಲು ರಸ್ತೆ ಬದಿಗೆ ಹೋದೆ. ಆ ಫೋನಿನಲ್ಲಿದ್ದ ಎಲ್ಲಾ ಚಿತ್ರಗಳನ್ನೂ ನೋಡಿದೆ. ಆ ಹುಡುಗಿಯ ನೂರಾರು ಫೋಟೋಗಳಿದ್ದವು. ಆಕೆ ಹುಟ್ಟಿದ ದಿನದಂದಿನಿಂದ ಹಿಡಿದು, ಆಕೆ ತನ್ನ ತಂದೆ, ಆ ವ್ಯಕ್ತಿಯೊಂದಿಗಿರುವ ಫೋಟೋಗಳು, ಕೊನೆಗೆ ಆ ಪುಟ್ಟ ಹುಡುಗಿಗೆ ಆಸ್ಪತ್ರೆಯ ಬೆಡ್ ನಲ್ಲಿ ಟ್ಯೂಬುಗಳನ್ನು ಸಿಕ್ಕಿಸಿ ಹಾಕಿಸಿ ಮಲಗಿಸಿರುವ ಫೋಟೋ ಇದ್ದವು. ಅಲ್ಲಿಗೆ ಎಲ್ಲವೂ ಮುಗಿಯಿತು.

ನಾನು ನನ್ನ ಗೆಳೆಯನಿಗೆ ಅದನ್ನು ನೋಡಲು ಹೇಳಿದೆ. ಆತ ಶಿಕ್ಷಿತ ಮತ್ತು ಬುದ್ಧಿವಂತ. ಒಂದು ಸಂದೇಶ ಓದಿ ‘‘ಅಶ್ಫಾಖ್, ಆ ಹುಡುಗಿ ಸತ್ತಿದ್ದಾಳೆ,’’ ಎಂದ. ಆ ಸಂದರ್ಭ ನಾನು ಅಲ್ಲಿಯೇ ಮರಗಟ್ಟಿ ಹೋದೆ. ನನಗೆ ಆ ರಾತ್ರಿ ನಿದ್ದೆ ಹತ್ತಲಿಲ್ಲ. ಆ ಹುಡುಗಿಯ ನಗುವಿನ ಸದ್ದು ನನ್ನ ಕಿವಿಯಲ್ಲಿ ಕೇಳಿಸಿದಂತಾಗುತ್ತಿತ್ತು.
ಮರುದಿನ ಗೆಳೆಯನಲ್ಲಿ ಆ ಸಿಮ್ ಮತ್ತೆ ಆ ಮೊಬೈಲ್ ಫೋನಿಗೆ ಹಾಕಲು ಹೇಳಿದೆ.

ಆ ವ್ಯಕ್ತಿ ನನ್ನನ್ನು ಹಿಡಿದು ಬಿಟ್ಟರೆ, ಕಳ್ಳರ ಗ್ಯಾಂಗ್ ನನ್ನನ್ನು ಕೊಲ್ಲುವುದೆಂದು ನನ್ನ ಗೆಳೆಯ ನನ್ನನ್ನು ಎಚ್ಚರಿಸಿದ. ನಾನು ಅದಕ್ಕೆಲ್ಲಾ ಕ್ಯಾರೇ ಅನ್ನಲಿಲ್ಲ. ನನಗೆ ಕಳೆದುಕೊಳ್ಳಲು ಏನೂ ಇಲ್ಲ. ನನಗೆ ನನ್ನ ಜೀವನದ ಮೇಲೂ ಪ್ರೀತಿ ಇರಲಿಲ್ಲ. ಆ ಫೋನನ್ನು ಆನ್ ಮಾಡಿದಾಗ ಅದು ರಿಂಗಣಿಸುತ್ತಲೇ ಇತ್ತು. ಮೊಬೈಲ್ ಫೋನಿನಲ್ಲಿ ಹೇಗೆ ಉತ್ತರಿಸುವುದೆಂದು ನನ್ನ ಗೆಳೆಯ ನನಗೆ ಕಲಿಸಿದ. ಅತ್ತ ಕಡೆಯಿಂದ ಆ ವ್ಯಕ್ತಿ ತನ್ನ ಫೋನನ್ನು ಹಿಂದಿರುಗಿಸುವಂತೆ ಬೇಡುತ್ತಿದ್ದ ಹಾಗೂ ಅದಕ್ಕಾಗಿ ನನಗೇನು ಬೇಕು ಅದನ್ನು ನೀಡಲು ಸಿದ್ಧವಿರುವುದಾಗಿ ಹೇಳಿದ.

ಒಂದು ಶಬ್ದವನ್ನೂ ಉಚ್ಛರಿಸಲು ಸಾಧ್ಯವಾಗದೆ ನಾನು ಲೈನ್ ಕಟ್ ಮಾಡಿದೆ. ಆ ವ್ಯಕ್ತಿಗೆ ಸಂಜೆ ಅದೇ ಶಾಲಾ ಗೇಟ್ ಬಳಿ ಬರುವಂತೆ ಹೇಳಿ ಮೆಸೇಜ್ ಮಾಡುವಂತೆ ನಾನು ನನ್ನ ಗೆಳೆಯನಿಗೆ  ಹೇಳಿದೆ.

ಮರುದಿನ ನಾನು ಅತ್ತ ನಡೆದಾಗ, ನನಗೆ ಹಿಂದಿರುಗಿ ಹೋಗಬೇಕೆಂದೆನಿಸಿತು. ಆ ಸುಂದರ ಫೋನನ್ನು ಮಾರಾಟ ಮಾಡಿ ಊಟ ಮಾಡುವ ಎಂಬ ಮನಸ್ಸಾಯಿತು. ಆದರೆ ಆ ಪುಟ್ಟ ಹುಡುಗಿ ನಗುತ್ತಿರುವ ಚಿತ್ರ ಕಣ್ಣಿಗೆ ಕಟ್ಟಿತ್ತು. ಆದುದರಿಂದ ಆಕೆಯ ಜತೆ ಹೆಜ್ಜೆ ಹಾಕಿದೆ. ಜನರ ನಡುವೆ ಆ ವ್ಯಕ್ತಿಯನ್ನು ನೋಡಿದೆ. ಆತ ಹುಚ್ಚನಂತೆ ಅತ್ತಿತ್ತ ನೋಡುತ್ತಿದ್ದ.

ನಾನು ಒಬ್ಬಳು ಪುಟ್ಟ ಹುಡುಗಿಯನ್ನು ನಿಲ್ಲಿಸಿ ಫೋನನ್ನು ಆಕೆಯ ಕೈಗಿತ್ತು ಆ ವ್ಯಕ್ತಿಗೆ ನೀಡುವಂತೆ ಹೇಳಿದೆ. ಆಕೆ ನಾನ್ಯಾರೆಂದು ಮುಗ್ಧಳಾಗಿ ಕೇಳಿದಳು. ನಾನೊಬ್ಬ ಸ್ಟ್ರೀಟ್ ಬಾಯ್ ಎಂದು ಆಕೆಗೆ ಹೇಳಿದೆ. ಆಕೆಗೆ ಎಷ್ಟು ಅರ್ಥವಾಯಿತೆಂದು ತಿಳಿಯದೇ ಹೋದರೂ ಆಕೆ ಆ ವ್ಯಕ್ತಿ ಇರುವ ಕಡೆ ಓಡುವುದನ್ನು ನೋಡಿದೆ. ಆ ಫೋನನ್ನು ಆ ವ್ಯಕ್ತಿ ಎದೆಗವಚಿ ಹಿಡಿದು ಜನಜಂಗುಳಿಯತ್ತ ದಿಟ್ಟಿಸುತ್ತಿರುವುದನ್ನು ನೋಡಿದೆ. ಆತನ ಕಣ್ಣು ನನ್ನ ಮೇಲೆ ಬೀಳುವ ಮುನ್ನ ನಾನು ಅಲ್ಲಿಂದ ಕಾಲ್ಕಿತ್ತೆ. ಅಂದಿನಿಂದ ಆ ಪುಟ್ಟ ಹುಡುಗಿ ನನ್ನ ಕನಸಿನಲ್ಲಿ ಬರಲೇ ಇಲ್ಲ.

- ಅಶ್ಫಾಖ್.

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News