×
Ad

ಫಿಲಿಪ್ಪೀನ್ಸ್: ಮಾದಕ ದ್ರವ್ಯದ ವಿರುದ್ಧದ ಸಮರವನ್ನು ಟೀಕಿಸಿದ ಉಪಾಧ್ಯಕ್ಷೆ

Update: 2017-03-15 21:34 IST

ಮನಿಲಾ (ಫಿಲಿಪ್ಪೀನ್ಸ್), ಮಾ. 15: ಮಾದಕ ದ್ರವ್ಯದ ವಿರುದ್ಧ ಫಿಲಿಪ್ಪೀನ್ಸ್ ಸಾರಿರುವ ಸಮರದಿಂದ ಜನರು ‘ಹತಾಶ ಹಾಗೂ ಅಸಹಾಯಕ’ರಾಗಿದ್ದಾರೆ ಹಾಗೂ ವಿಚಾರಣೆಯಿಲ್ಲದೆ ಸಾವಿರಾರು ಮಂದಿಯನ್ನು ಕೊಂದಿರುವ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಫಿಲಿಪ್ಪೀನ್ಸ್ ಉಪಾಧ್ಯಕ್ಷೆ ಲೆನಿ ರಾಬ್ರೆಡೊ ಬುಧವಾರ ಹೇಳಿದರು.

ನ್ಯಾಯಾಂಗ ಬಾಹಿರ ಹತ್ಯೆಗಳ ಕುರಿತ ವಿಶ್ವಸಂಸ್ಥೆಯ ಸಮ್ಮೇಳನವೊಂದಕ್ಕೆ ಕಳುಹಿಸಿದ ವೀಡಿಯೊ ಸಂದೇಶದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾದಕ ದ್ರವ್ಯದ ವಿರುದ್ಧ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್‌ರ ವಿವಾದಾಸ್ಪದ ಸಮರದ ಮೇಲೆ ನಿಗಾ ಇಡುವಂತೆಯೂ ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

‘‘ಅಪರಾಧ ಸಂಭವಿಸಿದಾಗ ನಾವು ಸಾಮಾನ್ಯವಾಗಿ ಪೊಲೀಸರ ಬಳಿ ತೆರಳುತ್ತೇವೆ. ಆದರೆ, ಈಗ ಎಲ್ಲಿಗೆ ಹೋಗಬೇಕೆಂದು ತಿಳಿದಿಲ್ಲ ಎಂದು ಕೆಲವರು ನನ್ನಲ್ಲಿ ಹೇಳಿದ್ದಾರೆ’’ ಎಂದು ರಾಬ್ರೆಡೊ ತನ್ನ ಸಂದೇಶದಲ್ಲಿ ಹೇಳಿದರು.

ಈ ಸಂದೇಶವನ್ನು ಆಸ್ಟ್ರಿಯದಲ್ಲಿ ಗುರುವಾರ ನಡೆಯಲಿರುವ ವಿಶ್ವಸಂಸ್ಥೆಯ ಸಮ್ಮೇಳನಕ್ಕಾಗಿ ಕಳುಹಿಸಲಾಗಿತ್ತು. ಅದನ್ನು ಬುಧವಾರ ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿದೆ.

ಮಾದಕ ದ್ರವ್ಯದ ವಿರುದ್ಧ ಸಮರ ಸಾರುವ ಭರವಸೆಯೊಂದಿಗೆ ಡುಟರ್ಟ್ ಕಳೆದ ವರ್ಷ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರನ್ನು ಪ್ರತ್ಯೇಕ ಚುನಾವಣೆಯಲ್ಲಿ ಆರಿಸಲಾಗುತ್ತದೆ. ರಾಬ್ರೆಡೊ ಪ್ರತಿಪಕ್ಷಕ್ಕೆ ಸೇರಿದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News