×
Ad

ಜನಸಾಮಾನ್ಯರ ಮುಂಗಡಪತ್ರ

Update: 2017-03-17 00:20 IST

ನವಉದಾರೀಕರಣದ ಈ ದಿನಗಳಲ್ಲಿ ಜನಪರವಾಗಿರುವ ಮುಂಗಡಪತ್ರವೊಂದನ್ನು ಮಂಡಿಸುವುದು ಸುಲಭದ ಸಂಗತಿಯಲ್ಲ. ಇಡೀ ದೇಶವೇ 90ರ ದಶಕದ ನಂತರ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಒಪ್ಪಿಕೊಂಡಿರುವಾಗ ಆ ಚೌಕಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ಯಾವುದೇ ರಾಜ್ಯ ಸರಕಾರ ತನ್ನ ಆಯವ್ಯಯವನ್ನು ಮಂಡಿಸುವುದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ ಮಂಡಿಸಿದ ಪ್ರಸಕ್ತ ಸಾಲಿನ ಮುಂಗಡ ಪತ್ರ ಸ್ವಾಗತಾರ್ಹವಾಗಿದೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಅನ್ನಭಾಗ್ಯದಂತಹ ಜನಪರ ಯೋಜನೆಗಳನ್ನು ನೀಡಿದ ಸಿದ್ದರಾಮಯ್ಯನವರು ನೋಟು ನಿಷೇಧದಿಂದ ರಾಜ್ಯದ ಬೊಕ್ಕಸ ತತ್ತರಿಸಿರುವಾಗಲೂ ಅತ್ಯುತ್ತಮವಾದ ಬಜೆಟ್ ಮಂಡಿಸಿದ್ದಾರೆ.

ತಾವು ಬದುಕಿನುದ್ದಕ್ಕೂ ನಂಬಿಕೊಂಡು ಬಂದ ಸಮಾಜವಾದ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಪೂರಕವಾಗಿ ಜನಸಾಮಾನ್ಯರ ನೋವು ಮತ್ತು ಸಂಕಟಗಳಿಗೆ ಸ್ಪಂದಿಸಿದ್ದಾರೆ. ಮುಂದಿನವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಸರಕಾರ ಮಂಡಿಸಿದ ಕೊನೆಯ ಪೂರ್ಣ ಪ್ರಮಾಣದ ಮುಂಗಡ ಪತ್ರ ಇದು. ಅಂತಲೇ ಎಲ್ಲರನ್ನೂ ಓಲೈಸಲು ಯತ್ನಿಸಿದ್ದಾರೆ. ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಪ್ರತಿಪಕ್ಷಗಳು ಮತ್ತು ಕೆಲ ಮಾಧ್ಯಮಗಳೂ ಟೀಕಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂಗಡ ಪತ್ರದಲ್ಲಿ ಅಂತಹ ಅಗ್ಗದ ಕೆಲಸಕ್ಕೆ ಕೈಹಾಕಿಲ್ಲ. ಚುನಾವಣೆಗಾಗಿ ಓಲೈಕೆಯ ರಾಜಕಾರಣ ಮಾಡಬೇಕಿಂದಿದ್ದರೆ ರೈತರ ಕೃಷಿ ಸಾಲವನ್ನು ಅವರು ಮನ್ನಾ ಮಾಡಬೇಕಾಗಿತ್ತು. ಚುನಾವಣೆ ಬಂದಾಗ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಈ ರೀತಿ ಸಾಲಮನ್ನಾ ಮಾಡುತ್ತಲೇ ಬಂದಿವೆ. ಆದರೆ, ಸಿದ್ದರಾಮಯ್ಯನವರು ಅದಕ್ಕೆ ಕೈಹಾಕಿಲ್ಲ.

ಕೈಲಾಗದ ಭರವಸೆಗಳನ್ನೂ ನೀಡಿಲ್ಲ. ಆದಾಯದ ಇತಿಮಿತಿಗಳ ಒಳಗೆ ಬಡ ಹಾಗೂ ಮಧ್ಯಮ ವರ್ಗಕ್ಕೆ ಭಾರವಾಗದ ಹಾಗೆ ಅತ್ಯುತ್ತಮ ಬಜೆಟ್‌ನ್ನು ಅವರು ಮಂಡಿಸಿದ್ದಾರೆ. ಜನಸಾಮಾನ್ಯರಿಗೆ ಸರಕಾರ ನೀಡುತ್ತಾ ಬಂದ ಸವಲತ್ತುಗಳಿಗೆ ಯಾವುದೇ ಕತ್ತರಿ ಪ್ರಯೋಗವನ್ನು ಅವರು ಮಾಡಿಲ್ಲ. ಸಿದ್ದರಾಮಯ್ಯನವರು 1.86 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಜಾಗತೀಕರಣದ ಆರ್ಥಿಕ ನೀತಿಯಿಂದ ಕಂಗಾಲಾಗಿ ನಿಂತ ಬಡವರಿಗೆ ಕೆಲ ಅನುಕೂಲಗಳನ್ನೂ ಕಲ್ಪಿಸಲು ಯತ್ನಿಸಿದ್ದಾರೆ. ಇನ್ನಷ್ಟು ಜನಪರ ಯೋಜನೆಗಳನ್ನು ರೂಪಿಸಬೇಕೆಂದರೆ ಅದಕ್ಕೆ ಸಂಪನ್ಮೂಲಗಳು ಬೇಕು. ಈ ರಾಜ್ಯವನ್ನು ಉದ್ಧಾರ ಮಾಡಲೆಂದೇ ಬಂದಿರುವುದಾಗಿ ಹೇಳಿಕೊಳ್ಳುವ ಐಟಿ ಬಿಟಿ ಕಾರ್ಪೊರೇಟ್ ಕಂಪೆನಿಗಳು, ರಿಯಲ್ ಎಸ್ಟೇಟ್ ಉದ್ಯಮ ಮುಂತಾದ ಭಾರೀ ಉದ್ಯಮಪತಿಗಳ ಮೇಲೆ ತೆರಿಗೆ ಹಾಕುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ.

ಅಂತಹ ಅಧಿಕಾರ ರಾಜ್ಯ ಸರಕಾರಕ್ಕೆ ಇದ್ದಿದ್ದರೆ 1.86 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಬದಲು 10 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿ ಕರ್ನಾಟಕದಲ್ಲಿ ನಾನಾ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬಹುದಾಗಿತ್ತು. ಆದರೆ, ಅದಕ್ಕೆ ಅವಕಾಶವಿಲ್ಲ. ನಮ್ಮದೂ ಒಕ್ಕೂಟ ವ್ಯವಸ್ಥೆ ಎಂದು ನಾವು ಹೇಳಿಕೊಳ್ಳುತ್ತೇವೆ. ಆದರೆ, ಸಂಪನ್ಮೂಲ ಹಂಚಿಕೆಯಲ್ಲಿ ರಾಜ್ಯಗಳಿಗೆ ಸಮಾನ ಸ್ಥಾನ ದೊರೆಯುವುದಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ತಾರತಮ್ಯ ಮಾಡುತ್ತಾ ಬಂದಿವೆ. ಜಾಗತೀಕರಣದ ಆರ್ಥಿಕ ನೀತಿ ಜಾರಿಗೆ ಬಂದ ನಂತರ ಕೇಂದ್ರ ಸರಕಾರದ ಬಳಿ ಆರ್ಥಿಕ ಕೇಂದ್ರೀಕರಣ ಹೆಚ್ಚಾಗಿದೆ. ರಾಜ್ಯಸರಕಾರಗಳು ಪ್ರತಿಯೊಂದಕ್ಕೂ ಕೇಂದ್ರದ ಮುಂದೆ ಕೈಯೊಡ್ಡಿ ನಿಲ್ಲಬೇಕಾಗಿದೆ.

ಹೀಗಾಗಿ ಈ ಇತಿಮಿತಿಗಳ ನಡುವೆ ಸಿದ್ದರಾಮಯ್ಯನವರು ಮಂಡಿಸಿದ ಮುಂಗಡ ಪತ್ರ ಸಮಾಜದ ವಂಚಿತ ಸಮುದಾಯಗಳಿಗೆ ಒಂದಿಷ್ಟು ನ್ಯಾಯವನ್ನು ಒದಗಿಸಿದೆ. ಸಾಮಾಜಿಕ ನ್ಯಾಯದ ಜೊತೆಗೆ ಪ್ರಾದೇಶಿಕ ನ್ಯಾಯಕ್ಕೂ ಆದ್ಯತೆ ನೀಡಿದೆ. ಉತ್ತರಕರ್ನಾಟಕ, ಮಧ್ಯಕರ್ನಾಟಕ, ದಕ್ಷಿಣಕರ್ನಾಟಕ ಮತ್ತು ಕರಾವಳಿ ಎಂಬ ಭೇದಭಾವ ಮಾಡದೆ ಅನುದಾನ ಹಂಚಿಕೆಯಲ್ಲಿ ಎಲ್ಲ ಪ್ರದೇಶಗಳಿಗೆ ಸಮಾನವಾದ ಪಾಲು ನೀಡಿದೆ. ಕೆಲವರು ಇದನ್ನು ಅಹಿಂದ ಬಜೆಟ್ ಎಂದು ಟೀಕಿಸುತ್ತಾರೆ. ಆದರೆ, ಸಮಾಜದ ಅವಕಾಶ ವಂಚಿತ ವರ್ಗಗಳಿಗೆ ನ್ಯಾಯ ಒದಗಿಸಲು ಮುಂದಾದಾಗ ಇಂತಹ ಟೀಕೆ ಬರುವುದು ಸಹಜ. ಆದರೆ, ಸಿದ್ದರಾಮಯ್ಯನವರು ಎಲ್ಲ ಜನಸಮುದಾಯಗಳಿಗೂ ನ್ಯಾಯ ಒದಗಿಸಿರುವುದು ಬಜೆಟ್‌ನಿಂದ ಸ್ಪಷ್ಟವಾಗುತ್ತದೆ. ರಾಜ್ಯಾದ್ಯಂತ ಬಡವರಿಗೆ ಅನ್ನಭಾಗ್ಯ, ಬೆಂಗಳೂರಿನಲ್ಲಿ ಕಡಿಮೆ ದರಕ್ಕೆ ‘ನಮ್ಮ ಕ್ಯಾಂಟೀನ್’, ಮಹಿಳಾ ಸಂಘಗಳಿಗೆ ಸವಿರುಚಿ ಕ್ಯಾಂಟೀನ್, ಎಲ್ಪಿಜಿ ಆಟೊ ಖರೀದಿಸುವವರಿಗೆ ಸಬ್ಸಿಡಿ ಮುಂತಾದ ಯೋಜನೆಗಳನ್ನು ಓಲೈಕೆಯ ಯೋಜನೆಗಳೆಂದು ಟೀಕಿಸುವುದರಲ್ಲಿ ಅರ್ಥವಿಲ್ಲ.

ಜನಸಾಮಾನ್ಯರಿಗೆ ನೀಡುವ ಸಹಾಯ ಓಲೈಕೆಯಾಗುವುದಿಲ್ಲ. ಕೇಂದ್ರದ ನರೇಂದ್ರ ಮೋದಿ ಸರಕಾರ ಅಂಬಾನಿ, ಅದಾನಿಗಳು ಸೇರಿದಂತೆ ಭಾರೀ ಉದ್ಯಮಪತಿಗಳ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಮಾಡಿದೆ ಮತ್ತು ತೆರಿಗೆ ಮನ್ನಾ ಮಾಡಿದೆ. ಅದನ್ನು ಟೀಕಿಸದೇ ಇದ್ದವರು ಸಿದ್ದರಾಮಯ್ಯನವರು ಬಡವರಿಗೆ 1 ರೂ.ಗೆ ಕೆ.ಜಿ. ಅಕ್ಕಿ ನೀಡಿದರೆ ಟೀಕಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಜನತೆಯ ಬಹುದಿನದ ಬೇಡಿಕೆಯಾಗಿದ್ದ 49 ಹೊಸ ತಾಲೂಕುಗಳ ರಚನೆಯನ್ನು ಈ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಸರಕಾರಿ ನೌಕರರಿಗೆ 7ನೆ ವೇತನ ಆಯೋಗ ರಚನೆ, ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಮಲ್ಟಿಪ್ಲೆಕ್ಸ್ ಸಿನೆಮಾ ಟಿಕೆಟ್ ದರ ಗರಿಷ್ಠ 200 ರೂ. ಹೀಗೆ ಹಲವಾರು ಅಂಶಗಳು ಬಜೆಟ್‌ನಲ್ಲಿ ಅಡಕವಾಗಿವೆ. ರಾಜ್ಯದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಕಾರ ಸಂಘಗಳ ಮೂಲಕ ಇನ್ನು ಮುಂದೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ಈ ಮೊದಲು ಮಹಿಳಾ ಸ್ವಸಹಾಯ ಗುಂಪುಗಳು ಸಾಲಕ್ಕೆ ಶೇ.4ರಷ್ಟು ಬಡ್ಡಿಯನ್ನು ನೀಡುತ್ತಿದ್ದವು. ಈ ಬಜೆಟ್‌ನಲ್ಲಿ ಸಾಂಸ್ಕೃತಿಕ ಕ್ಷೇತ್ರಕ್ಕೂ ಅನೇಕ ಕೊಡುಗೆಗಳನ್ನು ನೀಡಲಾಗಿದೆ. ಬಯಲಾಟದ ಕಲಾಪ್ರಕಾರಗಳನ್ನು ರಚಿಸಲು ಉತ್ತರಕರ್ನಾಟಕದಲ್ಲಿ ಪ್ರತ್ಯೇಕ ಬಯಲಾಟ ಅಕಾಡಮಿ ಸ್ಥಾಪನೆ ಮಾಡಲಾಗಿದೆ. ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಭರವಸೆಯನ್ನು ನೀಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆ ಸ್ವಾಗತಾರ್ಹವಾಗಿದೆ. ಹಿಂದೆ ಇದನ್ನು ಜಾರಿಗೊಳಿಸಲು ಹೊರಟಾಗ ಸಂಪ್ರದಾಯವಾದಿಗಳಿಂದ ಟೀಕೆ ಬಂದಿತ್ತು. ಇಷ್ಟೆಲ್ಲ ಉತ್ತಮ ಅಂಶಗಳು ಈ ಬಜೆಟ್‌ನಲ್ಲಿ ಇದ್ದರೂ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿರುವುದು ಸರಿಯಲ್ಲ. 1.86 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೇವಲ 18,266 ಕೋಟಿ ರೂ. ಮಾತ್ರ ನೀಡಲಾಗಿದೆ.

ಅಂದರೆ ಇದು ಬಜೆಟ್‌ನ ಶೇ.9.76ರಷ್ಟಾಗುತ್ತದೆ. ಕಳೆದ ವರ್ಷದ 1.63 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ನಲ್ಲಿ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ 17,373 ಕೋಟಿ ರೂ. ನೀಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಅನುದಾನ ಪ್ರಮಾಣದಲ್ಲಿ ಶೇ.0.86ರಷ್ಟು ಕಡಿಮೆಯಾಗಿದೆ. ಈಗ ಕೊಟ್ಟಿರುವ ಅನುದಾನ ಶಿಕ್ಷಕರ ಸಂಬಳಕ್ಕೂ ಸಾಲುವುದಿಲ್ಲ. ಆದ್ದರಿಂದ ಈ ಅನುದಾನವನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಹೀಗೆ ಸರ್ವರನ್ನೂ ಒಳಗೊಳ್ಳುವ ಅತ್ಯುತ್ತಮವಾದ ಬಜೆಟನ್ನು ಮುಖ್ಯಮಂತ್ರಿ ಮಂಡಿಸಿದ್ದಾರೆ.

ಕೆಲ ಲೋಪಗಳಿರುವುದು ನಿಜ. ಅವುಗಳನ್ನೂ ಸರಿಪಡಿಸಬೇಕಾಗಿದೆ. ಇದು ಈ ಸರಕಾರದ ಕೊನೆಯ ಬಜೆಟ್ ಆಗಿರುವುದರಿಂದ ಬಜೆಟ್‌ನಲ್ಲಿ ನೀಡಿದ ಭರವಸೆಗಳನ್ನು ಜಾರಿಗೊಳಿಸಲು ಪ್ರಾಮಾಣಿಕವಾದ ಪ್ರಯತ್ನ ನಡೆಯಬೇಕಾಗಿದೆ. ಜನಪರ ಯೋಜನೆಗಳನ್ನು ಘೋಷಿಸಿದರೆ ಸಾಲದು ಅವುಗಳ ಜಾರಿಗೆ ನಿಗಾ ವಹಿಸುವುದು ಕೂಡಾ ಅವಶ್ಯವಾಗಿದೆ. ಸರಕಾರದ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಾಗಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ಈ ಮುಂಗಡಪತ್ರವನ್ನು ಇಷ್ಟಪಡುವುದಿಲ್ಲ. ಎಲ್ಲರೂ ಇಷ್ಟ ಪಡುವ ಮುಂಗಡ ಪತ್ರವನ್ನು ಮಂಡಿಸಲು ಸಾಧ್ಯವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News