ವಿದೇಶಗಳಲ್ಲೂ ಮೋಡಿ ಮಾಡುತ್ತಿರುವ ಮುಸ್ತಫಾರ ಇಡ್ಲಿ-ದೋಸೆ ಹಿಟ್ಟು
ಈಗಾಗಲೇ ‘ಐಡಿ ಫ್ರೆಶ್ ಫುಡ್’ ಅಜ್ಮಾನ್‌ನಲ್ಲಿರುವ ತನ್ನ ಉತ್ಪಾದನಾ ಘಟಕದ ಮೂಲಕ ಲಕ್ಷಾಂತರ ದಕ್ಷಿಣ ಭಾರತೀಯರ ನೆಲೆಯಾಗಿರುವ ಅಬುದಾಬಿ ಮತ್ತು ದುಬೈಗಳಲ್ಲಿ ತನ್ನ ಉತ್ಪಾದನೆಗಳನ್ನು ಮಾರಾಟ ಮಾಡುತ್ತಿದ್ದರೂ ಅಮೆರಿಕ ಮತ್ತು ಬ್ರಿಟನ್ ಮಾರುಕಟ್ಟೆಗೆ ಪ್ರವೇಶಿಸುವುದು
ಒಂದು ದೊಡ್ಡ ಜಿಗಿತವಾಗಿದೆ.
ಐಐಮ್-ಬಿ ಪದವೀಧರ ಪಿಸಿ ಮುಸ್ತಫಾರ ‘ಐಡಿ ಫ್ರೆಶ್ ಫುಡ್’ ಶೀಘ್ರದಲ್ಲಿ ಪ್ಯಾಕ್ ಮಾಡಲ್ಪಟ್ಟ ಕಲಸಿದ ಹಿಟ್ಟನ್ನು ವಿದೇಶಗಳಲ್ಲೂ ಮಾರಾಟ ಮಾಡಲಿದೆ.
ಭಾರತೀಯ ಕುಟುಂಬಗಳು ಮನೆಯಲ್ಲಿ ಆಹಾರವನ್ನು ಸಿದ್ಧಪಡಿಸುವುದರಿಂದ ಸಿದ್ಧಾಹಾರ ತಯಾರಕರತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿರುವಂತೆಯೇ ಮುಸ್ತಫಾರ ಐಡಿ ಫ್ರೆಶ್ ಫುಡ್ ಈ 50 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಮಾರುಕಟ್ಟೆಯನ್ನು ಆಕ್ರಮಿಸಲು ಸನ್ನದ್ಧವಾಗಿದೆ. ಭಾರತೀಯರಿಂದ ಶ್ಲಾಘನೆಗೆ ಪಾತ್ರವಾಗಿರುವ ದಶಕದಷ್ಟು ಹಳೆಯ ಬೆಂಗಳೂರು ಮೂಲದ ಈ ಸಂಸ್ಥೆ ಪ್ಯಾಕ್ ಮಾಡಲ್ಪಟ್ಟ ಇಡ್ಲಿ-ದೋಸೆಯ ಕಲಸಿದ ಹಿಟ್ಟು, ಪರೋಟ ಮತ್ತು ವಿವಿಧ ರೀತಿಯ ಚಟ್ನಿಗಳನ್ನು ತಯಾರಿಸುತ್ತಿದ್ದು ಸದ್ಯ ಜಗತ್ತಿನಾದ್ಯಂತ ಪಸರಿಸಿರುವ ಅನಿವಾಸಿ ಭಾರತೀಯರತ್ತ ಗಮನಹರಿಸಿದೆ.
ಇಂದು ಇಡ್ಲಿ-ದೋಸೆ ಹಿಟ್ಟು ಶೀಘ್ರದಲ್ಲೇ ಅಮೆರಿಕ, ಬ್ರಿಟನ್ ಮತ್ತು ಸಿಂಗಾಪುರದಲ್ಲಿ ಲಭ್ಯವಾಗಲಿದ್ದು ಈ ದೇಶಗಳು ಬಹುದೊಡ್ಡ ಸಂಖ್ಯೆಯಲ್ಲಿ ಭಾರತೀಯರನ್ನು ಅದರಲ್ಲೂ ದಕ್ಷಿಣ ಭಾರತೀಯರನ್ನು ಹೊಂದಿದೆ. ಮಾರ್ಚ್ 8ರಂದು, ವಿಪ್ರೋ ಸ್ಥಾಪಕ ಅಝೀಮ್ ಪ್ರೇಮ್‌ಜಿಯ ಹೂಡಿಕೆ ಸಂಸ್ಥೆ ‘ಪ್ರೇಮ್‌ಜಿ ಇನ್ವೆಸ್ಟ್’ನಿಂದ ರೂ. 150 ಕೋಟಿ (22.5 ಮಿಲಿಯನ್ ಡಾಲರ್) ಪಡೆದಿರುವುದಾಗಿ ‘ಐಡಿ ಫ್ರೆಶ್ ಫುಡ್’ ಘೋಷಿಸಿತು. ‘‘ಈ ಬಂಡವಾಳವನ್ನು ನಮ್ಮ ಉದ್ದಿಮೆಯನ್ನು ವಿಸ್ತರಿಸಲು ಬಳಸಲಾಗುವುದು. ಸದ್ಯ ನಾವು ದಿಲ್ಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಮತ್ತಷ್ಟು ಉತ್ಪಾದನಾ ಘಟಕಗಳನ್ನು (ಅಡುಗೆಮನೆ) ತೆರೆಯುತ್ತೇವೆ. ಈಗಾಗಲೇ ನಮ್ಮ ಬಳಿ ಐದು ಉತ್ಪಾದನಾ ಘಟಕಗಳಿವೆ’’ ಎಂದು ಮುಸ್ತಫಾ ತಿಳಿಸಿದ್ದರು. ಇದರೊಂದಿಗೆ ಸಂಸ್ಥೆಯು ವಡೆಯ ಹಿಟ್ಟನ್ನು ತನ್ನ ಉತ್ಪಾದನಾ ಪಟ್ಟಿಯಲ್ಲಿ ಸೇರಿಸಿಕೊಳ್ಳಲಿದೆ. ಮೃದುವಾದ ಇಡ್ಲಿ ಮತ್ತು ಗರಿಗರಿಯಾದ ದೋಸೆ ದಕ್ಷಿಣ ಭಾರತದ ಪ್ರಮುಖ ಉಪಾಹಾರಗಳು. ಇವುಗಳನ್ನು ನೆಲಗಡಲೆ ಮತ್ತು ನೆನೆದ ಅಕ್ಕಿಯನ್ನು ಸರಿಯಾದ ಅನುಪಾತದಲ್ಲಿ ಮಿಶ್ರಮಾಡಿ ತಯಾರಿಸಲಾಗುತ್ತದೆ. ಹೀಗೆ ಕಲಸಿದ ಹಿಟ್ಟನ್ನು ರಾತ್ರಿ ಹುದುಗಲು ಇಟ್ಟು ಬೆಳಗ್ಗೆ ಬಳಸಲಾಗುತ್ತದೆ.
ಕೋಟ್ಯಂತರ ಇತರ ಜನರಂತೆ ಕೇರಳದ ವಯನಾಡ್ ಜಿಲ್ಲೆಯ ತೋಟದ ಕೆಲಸಗಾರನ ಮಗ ಮುಸ್ತಫಾ ಕೂಡಾ ಈ ತಯಾರಿಕೆಯನ್ನು ನೋಡಿಕೊಂಡೇ ಬೆಳೆದರು.
ತಲೆಮಾರುಗಳಿಂದ ಮಹಿಳೆಯರು ತಾಜಾ ಹಿಟ್ಟನ್ನು ತಯಾರಿಸಲು ಪ್ರತಿದಿನ ಗಂಟೆಗಟ್ಟಲೆ ಸವೆಸುತ್ತಾರೆ. ಆದರೆ ಹೆಚ್ಚೆಚ್ಚು ಮಹಿಳೆಯರು ಉದ್ಯೋಗಕ್ಕೆ ಸೇರುತ್ತಿರುವಂತೆ ಮನೆಯಲ್ಲಿ ಅಡುಗೆ ತಯಾರಿಸಲು ಪರ್ಯಾಯ ವ್ಯವಸ್ಥೆಯನ್ನು ಹುಡುಕುತ್ತಿರುವಾಗ ಪ್ಯಾಕ್ ಮಾಡಲ್ಪಟ್ಟ ಆಹಾರಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಮೊಸರು ಮತ್ತು ಇಡ್ಲಿ-ದೋಸೆ ಹಿಟ್ಟು ಈ ಬದಲಾವಣೆಗೆ ಉತ್ತಮ ಉದಾಹರಣೆ. ಐದು ವರ್ಷಗಳ ಕಾಲ ಭಾರತ, ಮಧ್ಯಪ್ರಾಚ್ಯ ಮತ್ತು ಬ್ರಿಟನ್‌ನಲ್ಲಿ ಇಂಜಿನಿಯರ್ ಆಗಿ ದುಡಿದ ಮುಸ್ತಫಾ ಈ ಒಂದು ಬದಲಾವಣೆಯಲ್ಲಿ ವಿಪುಲ ಅವಕಾಶವಿರುವುದನ್ನು ಕಂಡುಕೊಂಡರು. ರಾಷ್ಟ್ರೀಯ ತಂತ್ರಜ್ಞಾನ ವಿದ್ಯಾಸಂಸ್ಥೆ, ಕೋಝಿಕ್ಕೋಡ್ ಮತ್ತು ಬೆಂಗಳೂರಿನ ಭಾರತೀಯ ವ್ಯವಸ್ಥಾಪನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದ ಮುಸ್ತಫಾ 2006ರಲ್ಲಿ ಬೆಂಗಳೂರಿನಲ್ಲಿ 50 ಚದರ ಅಡಿ ಕಚೇರಿಯನ್ನು ತೆರೆಯುವ ಮೂಲಕ ತಮ್ಮ ಉದ್ಯಮದ ಪ್ರಯಾಣವನ್ನು ಆರಂಭಿಸಿದರು. ಪ್ರಯಾಣವೇನೂ ಸುಲಭವಾಗಿರಲಿಲ್ಲ.
ಪ್ರತೀ ಮುಂಜಾನೆ ಮುಸ್ತಫಾ ಮತ್ತು ಆತನ ಸೋದರ ಸಂಬಂಧಿ ತಮ್ಮ ದ್ವಿಚಕ್ರ ವಾಹನದಲ್ಲಿ ನಗರದ ಎರಡು ಡಝನ್ ಸಣ್ಣ ಅಂಗಡಿಗಳಿಗೆ ಸುತ್ತು ಹಾಕುತ್ತಿದ್ದರು. ತಾಜಾ ಹಿಟ್ಟು ಸಿದ್ಧವಾಗಿ ಸಿಗುತ್ತಿದ್ದ ಅನುಕೂಲತೆಯಿಂದಾಗಿ ಗ್ರಾಹಕರು ಆತನ ಉತ್ಪಾದನೆಗಳಿಗೆ ಶೀಘ್ರವಾಗಿ ಒಗ್ಗಿಕೊಂಡರು. 2014ರಲ್ಲಿ ‘ಹೆಲಿಯನ್ ಪಾರ್ಟ್ನರ್ಸ್’ ಐಡಿ ಫುಡ್‌ನಲ್ಲಿ ರೂ. 35 ಕೋಟಿ ಬಂಡವಾಳ ಹೂಡಿದರು. ಸಂಸ್ಥೆಯ ಜನಪ್ರಿಯತೆ ಇದೇ ಮಾದರಿಯ ಹಲವು ಸಂಸ್ಥೆಗಳು ಇಂಥದ್ದೇ ಉತ್ಪಾದನೆಗಳ ಮೂಲಕ ಮಾರುಕಟ್ಟಗೆ ಬರಲು ಪ್ರೇರಣೆಯಾಯಿತು. ದಿನಕಳೆದಂತೆ ಐಡಿ ಫುಡ್‌ನ ಜನಪ್ರಿಯತೆ ಬೆಂಗಳೂರು ದಾಟಿ ಬೆಳೆಯಲು ಆರಂಭಿಸಿತು. ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಕೇವಲ ಘಟಕಗಳನ್ನು ಆರಂಭಿಸುವುದಷ್ಟೇ ಬಾಕಿಯುಳಿದಿತ್ತು. 2016ರ ವೇಳೆಗೆ ಸಂಸ್ಥೆಯು ಪ್ರತಿದಿನ 1.5 ಮಿಲಿಯನ್ ಇಡ್ಲಿಯ ಹಿಟ್ಟನ್ನು ಮಾರಾಟ ಮಾಡುತ್ತಿದೆ. 2017ರ ವೇಳೆಗೆ ಸಂಸ್ಥೆಯ ವ್ಯವಹಾರ ರೂ. 150 ಕೋಟಿ ತಲುಪುವ ನಿರೀಕ್ಷೆಯಿದೆ. 2015ರಲ್ಲಿ ಸಂಸ್ಥೆಯು ಕಾಯಿಸಲು ಸಿದ್ಧವಾಗಿರುವ ಗೋಧಿ ಹಿಟ್ಟಿನ ಪರೋಟವನ್ನು ಮಾರುಕಟ್ಟೆಗೆ ಪರಿಚಯಿಸಿತು. ಈಗಾಗಲೇ ಐಡಿ ಫ್ರೆಶ್ ಫುಡ್ ಅಜ್ಮಾನ್‌ನಲ್ಲಿರುವ ತನ್ನ ಉತ್ಪಾದನಾ ಘಟಕದ ಮೂಲಕ ಲಕ್ಷಾಂತರ ದಕ್ಷಿಣ ಭಾರತೀಯರ ನೆಲೆಯಾಗಿರುವ ಅಬುದಾಬಿ ಮತ್ತು ದುಬೈಗಳಲ್ಲಿ ತನ್ನ ಉತ್ಪಾದನೆಗಳನ್ನು ಮಾರಾಟ ಮಾಡುತ್ತಿದ್ದರೂ ಅಮೆರಿಕ ಮತ್ತು ಬ್ರಿಟನ್ ಮಾರುಕಟ್ಟೆಗೆ ಪ್ರವೇಶಿಸುವುದು ಒಂದು ದೊಡ್ಡ ಜಿಗಿತವಾಗಿದೆ. ಆದರೆ ಅಲ್ಲಿ ಸಾಕಷ್ಟು ಸವಾಲುಗಳೂ ಇವೆ.
ಐಡಿಯ ಹಿಟ್ಟುಗಳು ಮೂರರಿಂದ ಏಳು ದಿನಗಳವರೆಗೆ ಬಳಸಬಹುದಾಗಿದೆ. ಹಾಗಾಗಿ ಅವುಗಳನ್ನು ಅಮೆರಿಕಕ್ಕೆ ಸರಬರಾಜು ಮಾಡುವುದು ದೊಡ್ಡ ಕೆಲಸವೇ ಸರಿ. ಇದೇ ವೇಳೆ ಸಂಸ್ಥೆಯು ಸ್ಥಳೀಯ ಉತ್ಪಾದಕರ ಜೊತೆಗಾರಿಕೆಯ ಸಾಧ್ಯತೆಗಳತ್ತ ಗಮನಹರಿಸುತ್ತಿದೆ. ಸದ್ಯಕ್ಕೆ ಸಂಸ್ಥೆಯ ಮಧ್ಯಪ್ರಾಚ್ಯದ ಉತ್ಪಾದನಾ ಘಟಕದ ಮೂಲಕ ಅಮೆರಿಕಕ್ಕೆ ಉತ್ಪಾದನೆಗಳನ್ನು ಕಳುಹಿಸಲಾಗುವುದು. ತನ್ನ ಯೋಜನೆಯ ಸಾಧ್ಯತೆಗಳನ್ನು ಪರೀಕ್ಷಿಸಲು ಸಂಸ್ಥೆಯು ಪರೀಕ್ಷಾರ್ಥವಾಗಿ ಒಂದು ಪೆಟ್ಟಿಗೆಯನ್ನು ಅಮೆರಿಕಕ್ಕೆೆ ಕಳುಹಿಸುತ್ತಿದೆ. ಮತ್ತು ಬ್ರಿಟನ್‌ನ ಮಾರುಕಟ್ಟೆಗಾಗಿ ಸ್ಥಳೀಯ ಉತ್ಪಾದಕರ ಜೊತೆ ಕೈಜೋಡಿಸಲಿದೆ. ಅಲ್ಲಿ ಬೇಡಿಕೆ ಯಾವ ರೀತಿಯಿದೆ ಎಂಬುದನ್ನು ತಿಳಿಯಲು ನಾವು ಪ್ರತಿಕ್ರಿಯಾ ತಂಡದೊಂದಿದೆ ಕೆಲಸ ಮಾಡಲಿದ್ದೇವೆ ನಂತರವೇ ಅಲ್ಲಿ ಘಟಕವನ್ನು ತೆರೆಯಬೇಕೇ ಎಂಬ ಬಗ್ಗೆ ಯೋಜನೆ ರೂಪಿಸಲಿದ್ದೇವೆ ಎನ್ನುತ್ತಾರೆ ಮುಸ್ತಫಾ.
ಇವೆಲ್ಲವನ್ನೂ ಗಮನಿಸಿದಾಗ ಮುಸ್ತಫಾರ ಸಂಸ್ಥೆಯ ಹಿಟ್ಟಿನಿಂದ ತಯಾರಿಸಲ್ಪಟ್ಟ ಇಡ್ಲಿ ಮತ್ತು ದೋಸೆಗಳು ಕಾವೇರಿಸಲು ಸಿದ್ಧವಾಗಿವೆ.
ಕೃಪೆ: scroll.in