ಕೋಮು ಹಿಂಸೆ ತಡೆಯದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ: ಆದಿತ್ಯನಾಥ್ ಎಚ್ಚರಿಕೆ
ಲಕ್ನೌ, ಮಾ.21: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಕರ್ತವ್ಯದ ಮೊದಲನೇ ದಿನದಂದೇ ಲೋಕಭವನದಲ್ಲಿ ಆಯೋಜಿಸಲಾದ ಅಧಿಕಾರಿಗಳ ಸಭೆಯಲ್ಲಿ ಆದಿತ್ಯನಾಥ್ ಅಧಿಕಾರಿಗಳಿಗೆ ಕೋಮು ಹಿಂಸೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹೇಳಿದರಲ್ಲದೆ ಹಿಂಸೆ ತಡೆಯಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.
ಮಹಿಳೆಯರ ಸುರಕ್ಷತೆ ತಮ್ಮ ಆದ್ಯತೆಗಳಲ್ಲೊಂದು ಎಂದು ಹೇಳಿದ ಮುಖ್ಯಮಂತ್ರಿ ಪ್ರತಿಯೊಂದು ಕ್ಷೇತ್ರದಲ್ಲಿನ ಭ್ರಷ್ಟಾಚಾರವನ್ನೂ ಕೊನೆಗೊಳಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು.
ಸ್ವಚ್ಛತೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳುವ ಅಗತ್ಯತೆಯಿದೆ ಎಂದು ಹೇಳಿದ ಆದಿತ್ಯನಾಥ್ ಸ್ವಚ್ಛತೆಯ ಕೊರತೆಯಿಂದಲೇ ಉತ್ತರ ಪ್ರದೇಶದ ಯಾವುದೇ ಒಂದು ನಗರವೂ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಬಂದಿಲ್ಲ ಎಂದು ಹೇಳಿದರು.
ಈ ಸಭೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಸ್ವಚ್ಛ ಭಾರತ ಪ್ರಮಾಣವಚನವನ್ನು ಮುಖ್ಯಮಂತ್ರಿ ಬೋಧಿಸಿದರಲ್ಲದೆ ರಾಜ್ಯದಾದ್ಯಂತ ಬದ್ಧತೆಯಿಂದ ಸ್ವಚ್ಛ ಭಾರತ ಅಭಿಯಾನವನ್ನು ಕೈಗೆತ್ತಿಕೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಅವುಗಳನ್ನು ಜಾರಿಗೊಳಿಸಲು ಸರ್ವಪ್ರಯತ್ನ ನಡೆಸುವಂತೆ ಆದೇಶಿಸಿದರು.
ಗೋಹತ್ಯೆ, ಮಹಿಳೆಯರ ವಿರುದ್ಧದ ಅಪರಾಧ ಹಾಗೂ ಮತೀಯ ಹಿಂಸೆಯನ್ನು ಹತ್ತಿಕ್ಕಲು ವಿಫಲರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆಯೂ ಸರಕಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.