ಮಲಪ್ಪುರಂ ಉಪಚುನಾವಣೆ: ಯುಡಿಎಫ್ ಅಭ್ಯರ್ಥಿ ಪಿ.ಕೆ. ಕುಂಞಾಲಿಕುಟ್ಟಿ ನಾಮಪತ್ರ ಸಲ್ಲಿಕೆ
ಮಲಪ್ಪುರಂ, ಮಾ. 21: ಮಲಪ್ಪುರಂ ಲೋಕಸಭಾ ಉಪಚುನಾವಣೆಗೆ ಯುಡಿಎಫ್ ಅಭ್ಯರ್ಥಿಯಾಗಿ ಪಿ.ಕೆ. ಕುಂಞಾಲಿಕುಟ್ಟಿ ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಯಾದ ಮಲಪ್ಪುರಂ ಜಿಲ್ಲಾಧಿಕಾರಿ ಅಮಿತ್‌ಮಾಣಿಕ್‌ರ ಮುಂದೆ ಹಾಜರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರ ಜೊತೆ ಸಂಸದ ಇ.ಟಿ. ಮುಹಮ್ಮದ್ ಬಶೀರ್, ಮಾಜಿ ಸಚಿವ ಆರ್ಯಾಡನ್ ಮುಹಮ್ಮದ್, ಮುಸ್ಲಿಮ್ ಲೀಗ್ ಜಿಲ್ಲಾಧ್ಯಕ್ಷ ಸಾದಿಕ್‌ಅಲಿ ಶಿಹಾಬ್ ತಂಙಳ್, ಡಿಸಿಸಿ ಅಧ್ಯಕ್ಷ ವಿ.ವಿ. ಪ್ರಕಾಶ್ ಉಪಸ್ಥಿತರಿದ್ದರು. ನಿನ್ನೆ ಬೆಳಗ್ಗೆ ಹತ್ತುಗಂಟೆಗೆ ಪಾಣಕ್ಕಾಡ್ ಕೋಟಪ್ಪನಕ್ಕಲ್‌ನಲ್ಲಿರುವ ಲೀಗ್ ರಾಜ್ಯಾಧ್ಯಕ್ಷ ಹೈದರಲಿ ತಂಙಳ್‌ರನ್ನು ಭೇಟಿಯಾದರು. ಆ ನಂತರ ಮರ್‌ಹೂಂ ಮುಹ್ಮದಲಿ ಶಿಹಾಬ್ ತಂಞಳ್, ಪುಕೋಯ ತಂಙಳ್, ಉಮರಲಿ ಶಿಹಾಬ್ ತಂಙಳ್‌ರ ಗೋರಿ ಬಳಿ ತೆರಳಿ ಪ್ರಾರ್ಥನೆ ನಡೆಸಿದರು. ಬಳಿಕ ಡಿಸಿಸಿ ಕಚೇರಿಗೆ ಹೋಗಿ ಆರ್ಯಾಡನ್ ಮುಹಮ್ಮದ್‌ಮುಂತಾದ ಕಾಂಗ್ರೆಸ್ ನಾಯಕರನ್ನು ಭೇಟಿಯಾದರು. ಅಲ್ಲಿಂದ ಕಾರ್ಯಕರ್ತರ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿದ್ದಾರೆ.
ಉಪಚುನಾವಣೆಯಲ್ಲಿ ಯುಡಿಎಫ್ ಭಾರೀ ಬಹುಮತದಿಂದ ಗೆಲ್ಲಲು ಸಾಧ್ಯವಿದೆ ಎಂದು ನಾಮಪತ್ರ ಸಲ್ಲಿಸಿದ ಬಳಿಕ ಪಿ.ಕೆ. ಕುಞಾಲಿಕುಟ್ಟಿ ಹೇಳಿದರು. ಸಂಸದ ಪಿ.ವಿ. ಅಬ್ದುಲ್ ವಹಾಬ್, ಶಾಸಕರಾದ ಪಿ.ಉಬೈದುಲ್ಲಾ, ಎಂ.ಉಮ್ಮರ್, ಪಿ.ಕೆ. ಬಶೀರ್,ಟಿ.ವಿ. ಇಬ್ರಾಹೀಂ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಪಿ. ಉಣ್ಣಿಕೃಷ್ಣನ್,ನಾಲಗತ್ ಸೂಫಿ ಮುಂತಾದವರು ಅವರ ಜೊತೆಯಿದ್ದರು.