ಮುಷ್ಕರ ಕೈಬಿಡದಿದ್ದರೆ ಕಾನೂನುಕ್ರಮ: ಮಹಾ ವೈದ್ಯರಿಗೆ ಫಡ್ನವೀಸ್ ಅಂತಿಮ ಎಚ್ಚರಿಕೆ

Update: 2017-03-24 16:22 GMT

 ಹೊಸದಿಲ್ಲಿ, ಮಾ.24: ಕಳೆದ ಐದು ದಿನಗಳಿಂದ ಮಹಾರಾಷ್ಟ್ರದಲ್ಲಿ ಮುಷ್ಕರಕ್ಕಿಳಿದಿರುವ ಸಾವಿರಾರು ವೈದ್ಯರಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ಅಂತಿಮ ಎಚ್ಚರಿಕೆಯನ್ನು ನೀಡಿದ್ದು, ವೈದ್ಯರು ಶೀಘ್ರದಲ್ಲೇ ಕರ್ತವ್ಯಕ್ಕೆ ಮರಳದಿದ್ದಲ್ಲಿ ಅವರು ಕಾನೂನು ಕ್ರಮವನ್ನು ಎದುರಿಸಬೇಕಾದೀತೆಂದು ಗುಡುಗಿದ್ದಾರೆ.

   ಮಹಾರಾಷ್ಟ್ರ ವಿಧಾನಸಭಾ ಕಲಾಪದ ವೇಳೆ ಮಾತನಾಡಿದ ಅವರು, ‘‘ವೈದ್ಯರ ಮುಷ್ಕರವನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ನನ್ನ ಸರಕಾರವು ವೈದ್ಯರುಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದೆ. ಒಂದು ವೇಳೆ ಅವರು ಕರ್ತವ್ಯಕ್ಕೆ ಮರಳದೆ ಇದ್ದಲ್ಲಿ, ಅವರ ವಿರುದ್ಧ ಸೂಕ್ತವಾದ ಕಾನೂನುಕ್ರಮಗಳನ್ನು ಕೈಗೊಳ್ಳಲಾಗುವುದು’’ ಎಂದು ತಿಳಿಸಿದರು. ವೈದ್ಯರೊಬ್ಬರನ್ನು ರೋಗಿಯ ಬಂಧುವೊಬ್ಬರು ಥಳಿಸಿದ ಘಟನೆಯನ್ನು ಪ್ರತಿಭಟಿಸಿ ಮಹಾರಾಷ್ಟ್ರದಾದ್ಯಂತ ಸರಕಾರಿ ಆಸ್ಪತ್ರೆಗಳ 3500ಕ್ಕೂ ಅಧಿಕ ವೈದ್ಯರುಗಳು ಮುಷ್ಕರಕ್ಕಿಳಿದಿದ್ದರಿಂದ ರಾಜ್ಯದಲ್ಲಿ ಬೃಹತ್ ವೈದ್ಯಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ವೈದ್ಯರು ಪ್ರಾರಂಭದಲ್ಲಿ ತಮಗೆ ಉತ್ತಮ ರೀತಿಯ ಭದ್ರತೆಗಾಗಿ ಬೇಡಿಕೆಯನ್ನಿಟ್ಟಿದ್ದರು. ತದನಂತರ ಅವರು ವೇತನ ಅರಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು.

 ವಾರದ ಆರಂಭದಲ್ಲಿ ಮುಷ್ಕರ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆಹೈಕೋರ್ಟ್ ಕೂಡಾ ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಒಂದು ವೇಳೆ ಕೆಲಸ ಮಾಡುವ ಬಯಕೆ ಇಲ್ಲದಿದ್ದಲ್ಲಿ ಅವರು ರಾಜೀನಾಮೆ ನೀಡಬೇಕೆಂದು ಖಾರವಾಗಿ ಹೇಳಿತ್ತು. ಇಂತಹ ಪ್ರತಿಭಟನೆಗಿಳಿಯಲು ನೀವೇನು ಕಾರ್ಖಾನೆ ಕೆಲಸಗಾರರಲ್ಲ. ನಿಮಗೆ ನಾಚಿಕೆಯಾಗಬೇಕು. ಈ ರೀತಿಯಾಗಿ ವೈದ್ಯರು ಹೇಗೆ ವರ್ತಿಸಲು ಸಾಧ್ಯ ಎಂದು ನ್ಯಾಯಾಲಯ ಕಿಡಿಕಾರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News