×
Ad

ಮಹಾರಾಷ್ಟ್ರ: ಸರಕಾರಿ ವೈದ್ಯರ ಮುಷ್ಕರ ಅಂತ್ಯ

Update: 2017-03-25 22:17 IST

ಮುಂಬೈ, ಮಾ.25: ಬಾಂಬೆ ಹೈಕೋರ್ಟ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿರುವ ಅಂತಿಮ ಎಚ್ಚರಿಕೆಗೆ ಮಣಿದಿರುವ ಮಹಾರಾಷ್ಟ್ರದ ಸರಕಾರಿ ವೈದ್ಯರು ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೈಬಿಟ್ಟಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ವೈದ್ಯರೊಬ್ಬರನ್ನು ರೋಗಿಯ ಬಂಧುವೊಬ್ಬರು ಥಳಿಸಿದ ಘಟನೆಯನ್ನು ಪ್ರತಿಭಟಿಸಿ ಮಹಾರಾಷ್ಟ್ರ ದಾದ್ಯಂತ ಸರಕಾರಿ ಆಸ್ಪತ್ರೆಗಳ 4,500ಕ್ಕೂ ಹೆಚ್ಚು ವೈದ್ಯರು ಕಳೆದ ಐದು ದಿನದಿಂದ ಮುಷ್ಕರ ನಡೆಸುತ್ತಿದ್ದರು. ವೈದ್ಯರು ಸಾಮೂಹಿಕ ರಜೆಯಲ್ಲಿ ತೆರಳಿದ್ದ ಕಾರಣ ಸರಕಾರಿ ಆಸ್ಪತ್ರೆ ಮತ್ತು ಪುರಸಭೆ ಅಧೀನದ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗೆ ಅಡ್ಡಿಯಾಗಿತ್ತು. ವೈದ್ಯರ ಬೇಡಿಕೆಯ ಬಗ್ಗೆ ಗಮನ ಹರಿಸಲಾಗುವುದು ಎಂದು ರಾಜ್ಯ ಸರಕಾರ ಭರವಸೆ ನೀಡಿದೆ. ಬಹುತೇಕ ವೈದ್ಯರು ಕರ್ತವ್ಯಕ್ಕೆ ಮರಳಿದ್ದಾರೆ. ಆಸ್ಪತ್ರೆಗಳ ಹೊರರೋಗಿ ವಿಭಾಗವೂ ನಿಗದಿಯಂತೆ ಕಾರ್ಯ ನಿರ್ವಹಿಸುತ್ತಿದ್ದು ವೈದ್ಯರು ಜನರಲ್ ವಾರ್ಡ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಸಿಯೊನ್ ಮತ್ತು ನಾಯರ್ ಆಸ್ಪತ್ರೆಗಳಲ್ಲೂ ವೈದ್ಯರು ಕರ್ತವ್ಯಕ್ಕೆ ಮರಳಿದ್ದಾರೆ. ಶೀಘ್ರವೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತದೆ ಎಂಬ ವಿಶ್ವಾಸವಿದೆ ಎಂದು ಕೆಇಎಂ ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಸುಪೆ ತಿಳಿಸಿದ್ದಾರೆ. ಮಹಾರಾಷ್ಟ್ರ ಸರಕಾರಿ ವೈದ್ಯರ ಸಂಘಟನೆ ವೈದ್ಯರ ಮುಷ್ಕರವನ್ನು ಬೆಂಬಲಿಸದಿದ್ದರೂ, ವೈದ್ಯರ ಪರವಾಗಿ ಸರಕಾರದೊಂದಿಗೆ ಸಂಧಾನ ಮಾತುಕತೆಯಲ್ಲಿ ಭಾಗಿಯಾಗಿತ್ತು. ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ವೈದ್ಯರ ಬೇಡಿಕೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಸರಕಾರ ಲಿಖಿತ ರೂಪದಲ್ಲಿ ಭರವಸೆ ನೀಡಿದೆ. ಶನಿವಾರ ಬೆಳಗ್ಗಿನಿಂದ ಕರ್ತವ್ಯಕ್ಕೆ ಹಾಜರಾಗುವಂತೆ ವೈದ್ಯರಿಗೆ ತಿಳಿಸಲಾಗಿದೆ ಎಂದು ಸಂಘದ ವಕ್ತಾರರು ತಿಳಿಸಿದ್ದಾರೆ. ಪೊಲೀಸ್ ಭದ್ರತಾ ನಿಗಮದಿಂದ ಒಟ್ಟು 1,500 ಪೊಲೀಸ್ ಸಿಬ್ಬಂದಿಯನ್ನು ಒದಗಿಸಲಾಗುವುದು. ಇದರಲ್ಲಿ 500 ಪೊಲೀಸ್ ಸಿಬ್ಬಂದಿಯನ್ನು ಮುಂಬೈಯ ಸರಕಾರಿ ಆಸ್ಪತ್ರೆಗಳಲ್ಲಿ ಎಪ್ರಿಲ್ 5ರಿಂದ ನಿಯೋಜಿಸಲಾಗುವುದು. ಅಲ್ಲದೆ ಎಪ್ರಿಲ್ ತಿಂಗಳ ಅಂತ್ಯದ ವೇಳೆ ಪುಣೆ, ನಾಗ್ಪುರ ಮತ್ತು ಔರಂಗಾಬಾದ್ ನಗರಗಳಲ್ಲಿ ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ರಾಜ್ಯ ಸರಕಾರ ಮಾ.22ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News