ಮಗು ಮೊಗದವನ ವೇಗ ದಾಹ !
ಈ ಅಶ್ವಿನ್ ‘‘ನನಗೆ ಬೈಕು-ಕಾರ್ ಎರಡೂ ಇಷ್ಟ. ಸ್ಪೀಡ್ ಇನ್ನೂ ಇಷ್ಟ’’ ಅನ್ನುತ್ತಿದ್ದ. ಆದರೆ ರೇಸ್ ಟ್ರ್ಯಾಕ್‌ನಲ್ಲಿರಬೇಕಾದ ಪೈಪೋಟಿಯ ಉನ್ಮತ್ತ ಮನಸ್ಥಿತಿಯನ್ನು ಸಾಧಾರಣ ಮನುಷ್ಯರಂತೆ ರಸ್ತೆಯಲ್ಲಿ ಪ್ರಯಾಣಿಸುವಾಗಲೂ ತೋರಿಸಿದರೆ ಅನಾಹುತ ಆಗದಿದ್ದೀತೆ?
ವರ್ಷ ಮುವತ್ತೊಂದು ಆಗಿದ್ದಾಗಲೂನೂ ಅಶ್ವಿನ್ ಸುಂದರ್ ಮಗು ಮಗದ ನಗೆಮಗದವನಂತೆಯೇ ಕಾಣುತ್ತಿದ್ದ. ರೇಸ್ ಕಾರ್ ಮತ್ತು ಬೈಕ್‌ಗಳನ್ನು ಓಡಿಸುತ್ತಿದ್ದ. ತನ್ನ ಹದಿನೈದನೆ ವಯಸ್ಸಿನಲ್ಲೇ ಚಾಂಪಿಯನ್ ರೇಸರ್ ಎನಿಸಿಕೊಂಡಿದ್ದ ಅಶ್ವಿನ್ ಸುಂದರ್ ಕಳೆದ ಶನಿವಾರ ನಡುರಾತ್ರಿಯಲ್ಲಿ ಚೆನ್ನೈನ ಶ್ರೀಮಂತ ಬಡಾವಣೆಯ ನಿರ್ಜನ ರಸ್ತೆಯಲ್ಲಿ ಆಕ್ಸಿಡೆಂಟ್ ಮಾಡಿಕೊಂಡು ತನ್ನ ಕಾರ್‌ನೊಳಗೇ ಸಿಲುಕಿ ಜೀವಂತವಾಗಿ ದಹಿಸಿಹೋದ. ಅಶ್ವಿನ್‌ನ ಜೀವನಶೈಲಿ, ಕಾರ್ ರೇಸ್ ಹಾಗೂ ಸ್ಪೀಡಿನ ಕಾರಣಕ್ಕೆ ಮೆಚ್ಚಿ ಮದುವೆಯಾಗಿದ್ದ ಡಾ. ನಿವೇದಿತಾಗೆ ತನ್ನ ಆ ಮೆಚ್ಚುಗೆಯೇ ಒಂದೇ ವರ್ಷದಲ್ಲಿ ಹೀಗೆ ಭೀಕರ ರೀತಿಯಲ್ಲಿ ತನಗೂ ಸಾವು ತರಲಿದೆ ಎಂಬುದು ಹೇಗೆ ತಾನೆ ತಿಳಿಯಲು ಸಾಧ್ಯವಿತ್ತು ?
ನಿವೇದಿತಾ ಅಶ್ವಿನ್‌ನನ್ನು ಮೆಚ್ಚಿ ಮದುವೆಯಾಗಿ ಕೇವಲ ಒಂದು ವರ್ಷವಾಗಿತ್ತಷ್ಟೆ. ಇಂಡಿಯಾದ ಸೆಲೆಬ್ರಿಟಿ ಕ್ರೀಡಾ ಜೋಡಿಯಾಗಿದ್ದ ಇವರಿಬ್ಬರು ಕಳೆದ ವಾರ ಚೆನ್ನೈನಲ್ಲಿ ಅಪಘಾತ ಮಾಡಿಕೊಂಡು ತಮ್ಮ ಬಿಎಂಡಬ್ಲ್ಯು ಕಾರ್‌ನೊಳಗೆ ಬೆಂಕಿಗೆ ಸಿಲುಕಿ ಜೀವ ತೊರೆದರು. ಇಂಡಿಯಾದ ಕಾರ್-ಬೈಕ್ ರೇಸ್ ಜಗತ್ತಿನಲ್ಲಿ ಅನೇಕ ಸ್ಟಾರ್ ಡ್ರೈವರ್‌ಗಳಿದ್ದಾರೆ. ಕರುಣ್ ಚಂದೋಕ್, ಅರ್ಮನ್ ಇಬ್ರಾಹೀಂ, ಆದಿತ್ಯ ಪಟೇಲ್ ಹಾಗೂ ಇತ್ತೀಚಿಗಿನ ಖ್ಯಾತ ರೇಸರ್ ನಾರಾಯಣ್ ಕಾರ್ತಿಕೇಯನ್ ಮುಂತಾದವರ ಹೆಸರುಗಳು ಅನೇಕರಿಗೆ ಗೊತ್ತಿರುತ್ತದೆ. ಹಾಗೆಯೇ ಆಲಿಷಾ ಅಬ್ದುಲ್ಲಾ ಎಂಬ ಹುಡುಗಿಯ ರೇಸಿಂಗ್ ಸಾಹಸಗಳಿವೆ. ಆಸಕ್ತರು ಇವರ ರೇಸಿಂಗ್ ಸ್ಕಿಲ್, ಸ್ಪೀಡ್, ಸಾಧನೆ ಹಾಗೂ ವ್ಯಕ್ತಿತ್ವಗಳನ್ನು ಗಮನಿಸಿರುತ್ತಾರೆ. ಹದಿಮೂರು ವರ್ಷಗಳ ಹಿಂದೆ ಇವರ ಗದ್ದಲಗಳನ್ನು ದಾಟಿ ಕಾರ್ ರೇಸ್‌ನ ಅಖಾಡಕ್ಕೆ ನುಗ್ಗಿ ಬಂದವನೇ ಈ ಅಶ್ವಿನ್ ಸುಂದರ್. ಆಗ ಅವನಿಗೆ ಕೇವಲ ಹದಿನೇಳು ವರ್ಷವಷ್ಟೆ. 2006ರ ವೇಳೆಗೆ ಮೋಟಾರ್ ಬೈಕ್ ರೇಸ್‌ನಲ್ಲಿ ನ್ಯಾಷನಲ್ ಚಾಂಪಿಯನ್ ಆದ ಅಶ್ವಿನ್ ನಂತರ ಕಾರ್ ರೇಸಿಂಗ್‌ನತ್ತಲೂ ನುಗ್ಗಿ ಹೋದ. ಎಂಆರ್‌ಎಫ್ ಫಾರ್ಮುಲ 1600 ಸಿಸಿ ರೇಸ್‌ಗಳಲ್ಲಿ 2010 ರಿಂದ 2013ರ ವರೆಗೆ ಇವನದೇ ಕಾರುಬಾರು. ಅದೇ ವೇಗದಲ್ಲಿ ಅಶ್ವಿನ್ ಯುರೋಪ್‌ಗೂ ಹೋದ. ಜರ್ಮನಿಯ ರೇಸಿಂಗ್ ಟೀಂ ಞ..್ಚಟ್ಞನಲ್ಲಿ ಸೇರಿದನಾದರೂ ಅವೆಲ್ಲಾ ಬಲು ದುಬಾರಿ ಅನಿಸಿ ಚೆನ್ನೈಗೆ ವಾಪಸ್ ಬಂದಿದ್ದ. ಇಂಡಿಯಾದಲ್ಲಿ ಇವತ್ತಿಗೂ ಕಾರ್ ರೇಸ್, ಟೆನಿಸ್, ಶೂಟಿಂಗ್, ಈಜು, ಗಾಲ್ಫ್ ಕ್ರೀಡೆಗಳು ಕಡಿಮೆ ಹಣ ಇರುವವರಿಗೆ ಎಟುಕುವುದಿಲ್ಲ. ಭಾರತದ ಶ್ರೀಮಂತರ ಕುಡಿಯಾಗಿದ್ದ ಅಶ್ವಿನ್ ಸುಂದರ್‌ಗೆ ಯೂರೋಪ್‌ನ ಕಾರ್ ರೇಸ್ ಖರ್ಚು ನಿಭಾಯಿಸಲು ಆಗಲಿಲ್ಲ ಅಂದರೆ ಈ ಆಟಗಳೆಲ್ಲಾ ಯಾವ-ಯಾರ ಜೈಲಿನಲ್ಲಿವೆ ಎಂದು ತಿಳಿಯುತ್ತದೆ.
ಅದಿರಲಿ,
ಈ ಮೋಟಾರ್ ರೇಸ್‌ಗಳಲ್ಲಿ ಮೆಶೀನ್ ಹಾಗೂ ಸ್ಪೀಡ್ - ಇವೆರಡೂ ಒಂದು ಡೆಡ್ಲಿ ಕಾಂಬಿನೇಷನ್ ಅಂತಲೇ ಹೇಳಬೇಕು. ರೇಸ್ ಟ್ರ್ಯಾಕ್‌ಗಳಲ್ಲಿ ಚಾಲಕರು ಗಂಟೆಗೆ ಇನ್ನೂರು ಚಿಲ್ಲರೆ ಕಿಲೋಮೀಟರ್ ವೇಗದಲ್ಲಿ ಧಾವಿಸುವುದು ಸರ್ವೇ ಸಾಮಾನ್ಯ.
ಈ ಅಶ್ವಿನ್ ‘‘ನನಗೆ ಬೈಕು-ಕಾರ್ ಎರಡೂ ಇಷ್ಟ. ಸ್ಪೀಡ್ ಇನ್ನೂ ಇಷ್ಟ’’ ಅನ್ನುತ್ತಿದ್ದ. ಆದರೆ ರೇಸ್ ಟ್ರ್ಯಾಕ್‌ನಲ್ಲಿರಬೇಕಾದ ಪೈಪೋಟಿಯ ಉನ್ಮತ್ತ ಮನಸ್ಥಿತಿಯನ್ನು ಸಾಧಾರಣ ಮನುಷ್ಯರಂತೆ ರಸ್ತೆಯಲ್ಲಿ ಪ್ರಯಾಣಿಸುವಾಗಲೂ ತೋರಿಸಿದರೆ ಅನಾಹುತ ಆಗದಿದ್ದೀತೆ?
ಅಪಘಾತ ನಡೆದ ರಾತ್ರಿ ಚೆನ್ನೈ ನಗರದ ಒಂದು ವಸತಿ ಪ್ರದೇಶದ ರಸ್ತೆಯಲ್ಲಿ ಗಂಟೆಗೆ ನೂರಾ ಮೂವತ್ತು ಕಿ.ಮೀ. ಸ್ಪೀಡಿನಲ್ಲಿ ಅಶ್ವಿನ್ ಕಾರ್ ಓಡಿಸಿಕೊಂಡು ಬಂದ ಎನ್ನುವ ವಿಚಾರವೇ ಈ ವೇಗದಾಹಿಗೆ ವಿವೇಕ-ವಿವೇಚನಾ ಶಕ್ತಿ ಎರಡೂ ಇರಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ರಸ್ತೆಯಿಂದ ಹಾರಿ ಒಂದು ಮರ ಹಾಗೂ ಕಾಂಪೌಂಡ್ ಗೋಡೆಗೆ ಗುದ್ದಿ ನಡುವೆ ನುಗ್ಗಿ ಸಿಕ್ಕಿಕೊಂಡ ಅಶ್ವಿನ್‌ನ ಬಿಎಂಡಬ್ಲ್ಯು ಕಾರ್‌ಗೆ ಬೆಂಕಿ ಹತ್ತಿಕೊಂಡಿತು. ಕಾರ್‌ನ ಬಾಗಿಲುಗಳು ನುಜ್ಜುನುಜ್ಜಾಗಿ ತೆರೆದುಕೊಳ್ಳದೆ ಹೋದವು. ಅಲ್ಲಿಗೆ ಆ ಯುವ ದಂಪತಿ ಕುಳಿತಿದ್ದ ಕಾರೇ ಸಾವಿನ ಚೇಂಬರ್ ಆಗಿ ಬದಲಾಯಿತು. ಅವರ ಕೊನೆಯ ನಿಮಿಷಗಳು ಬಹಳ ದಾರುಣವಾಗಿದ್ದಿರಬಹುದು.
ಬಹುಶಃ ಕಳೆದ ಒಂದು ನೂರು ವರ್ಷಗಳಲ್ಲಿ ಸಂಭವಿಸಿರುವ ರೇಸರ್‌ಗಳ ಸಾವಿರ ಆಕ್ಸಿಡೆಂಟ್‌ಗಳಲ್ಲಿ ಇದೂ ಒಂದು. ಇವುಗಳಲ್ಲಿ ಸತ್ತವರ ಸಂಖ್ಯೆಯೂ ಅಷ್ಟೇ ಇದೆ. ರೇಸ್ ಟ್ರ್ಯಾಕ್‌ನಲ್ಲಾದರೆ ಡ್ರೈವರ್, ಟೆಕ್ನೀಶಿಯನ್ಸ್ ಹಾಗೂ ಕೆಲವೊಮ್ಮೆ ಪ್ರೇಕ್ಷಕರು ಸಾವಿಗೀಡಾಗುತ್ತಾರೆ. ಆದರೆ ಇದೇ ರೇಸರ್‌ಗಳು ಜನಸಾಮಾನ್ಯರು ಓಡಾಡುವ ರಸ್ತೆಗಳಲ್ಲಿ ಆಕ್ಸಿಡೆಂಟ್ ಮಾಡಿದರೆ ಅವರೊಂದಿಗೆ ಕುಟುಂಬದವರು, ಆಪ್ತರೇ ಮೊದಲು ಬಲಿಯಾಗುವುದು.
ಈಗ ಅಶ್ವಿನ್ ಸುಂದರ್ ವಿಚಾರದಲ್ಲೂ ಅದೇ ಘಟಿಸಿದೆ.
ಈ ಭೀಕರ ಆಕ್ಸಿಡೆಂಟ್ ನಂತರ ಕೆಲವರು ಹಾಗೂ ಪೊಲೀಸರೂ ಸಹ ಬಿಎಂಡಬ್ಲ್ಯು ಕಾರ್‌ನ ತಾಂತ್ರಿಕ ಮಿತಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಸೆಕೆಂಡ್ ಹ್ಯಾಂಡ್ ಕಾರ್ ರೇಸರ್ ಅಶ್ವಿನ್ ಕೈಗೆ ಬಂದ ಮೇಲೆ ಮರು ವಿನ್ಯಾಸಗೊಂಡಿತ್ತು. ಅದರ ಇಂಜಿನ್‌ನ ಎತ್ತರ ಇಳಿಸಿ, ವೈರಿಂಗ್‌ಗಳನ್ನು ಮರು ಜೋಡಿಸಲಾಗುತ್ತಂತೆ, ಬೆಂಕಿಯ ಕಿಡಿಗೆ ಬಹುಶಃ ಇದು ಕಾರಣವಾಗಿರಬೇಕು. ಜರ್ಮನಿಯ ಬೊವೇರಿಯನ್ ಮೋಟಾರ್ ವರ್ಕ್ಸ್(ಬಿಎಂಡಬ್ಲ್ಯು) ಎಂಬ ಜಗತ್ಪ್ರಸಿದ್ಧ ಅಟೊಮೊಬೈಲ್ ಕಂಪೆನಿ ಇದರ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿಲ್ಲ. ಜಗತ್ತಿನ ಕಾರ್ ತಯಾರಿಕಾ ದೈತ್ಯ ಕಂಪೆನಿಯ ಬ್ರಾಂಡ್ ಹೆಸರಿಗೆ ಅಶ್ವಿನ್ ಸಾವು ಯಾವ ಹಾನಿಯನ್ನು ಮಾಡಲಾರದು. ವರ್ಷಕ್ಕೆ ಇಪ್ಪತ್ತೈದು ಲಕ್ಷ ಕಾರ್ ತಯಾರಿಸಿ ಮಾರುವ ಬಿಎಂಡಬ್ಲ್ಯುನ ಒಟ್ಟಾರೆ ಆಸ್ತಿ ಮೌಲ್ಯ ಇಂಡಿಯಾದ ಒಟ್ಟು ವಾರ್ಷಿಕ ಬಜೆಟ್‌ನ ಶೇ. 70ರಷ್ಟಿದೆ ಅಂದರೆ ಅದರ ದೈತ್ಯ ಆಕಾರ ನಿಮ್ಮರಿವಿಗೆ ಬರಬಹುದೆನಿಸುತ್ತದೆ. ಮೊದಲ ವಿಶ್ವಸಮರದಲ್ಲಿ ಜರ್ಮನಿ ಸೇನೆಗೆ ಯುದ್ಧ ವಿಮಾನ ತಯಾರಿಸಿ ಕೊಡಲು ತಯಾರಾಗಿದ್ದ ಬಿಎಂಡಬ್ಲ್ಯು ಆ ಯುದ್ಧದಲ್ಲಿ ಜರ್ಮನಿ ಸೋತಾಗ ಗೆದ್ದ ದೇಶಗಳು ವಿಧಿಸಿದ ಶರತ್ತಿಗನುಗುಣವಾಗಿ ವಿಮಾನ ತಯಾರಿಕೆ ನಿಲ್ಲಿಸಿ ಕಾರ್ ಹಾಗೂ ಬೈಕ್ ತಯಾರಿಕೆ ಆರಂಭಿಸಿತ್ತು. 2ನೆ ವಿಶ್ವಯುದ್ಧದಲ್ಲಿ ಹಿಟ್ಲರ್‌ನ ನಾಝಿ ಸೇನೆಗೆ ಬಾಂಬರ್ ವಿಮಾನ ನಿರ್ಮಿಸಿ ಕೊಟ್ಟವರೂ ಇದೇ ಬಿಎಂಡಬ್ಲ್ಯು ಮಾಲಕರೆ. ಈಗದು ಜಗತ್ತಿನ ಅತೀ ಪ್ರತಿಷ್ಠಿತ ಆಟೋಮೋಕರ್, ರೋಲ್ಸ್ ರಾಯ್ಸ್, ಲ್ಯಾಂಡ್ ರೋವರ್, ಬಿಎಂಡಬ್ಲ್ಯು ಸೇರಿದಂತೆ ಡಜನ್‌ಗೂ ಹೆಚ್ಚು ಬ್ರಾಂಡ್‌ಗಳಿವೆ.
ಕ್ರೀಡಾ ಜಗತ್ತಿನಲ್ಲಿ ರೇಸ್, ಬಾಕ್ಸಿಂಗ್, ಬುಲ್ ಫೈಟಿಂಗ್‌ಗಳಲ್ಲಿ ಕ್ರೀಡಾಳುಗಳು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಬ್ರೆಝಿಲ್‌ನ ಜಗದ್ವಿಖ್ಯಾತ ಕಾರ್ ರೇಸರ್ ಅಯರ್ಟ್‌ನ ಸೆನ್ನಾ ಆಕ್ಸಿಡೆಂಟ್‌ನಲ್ಲೇ ಪ್ರಾಣತೆತ್ತ. ಲಾರೆನ್ಸ್ ಆಫ್ ಅರೇಬಿಯಾ ಖ್ಯಾತಿಯ ಥಾಮಸ್ ಎಡ್ವರ್ಡ್ ಲಾರೆನ್ಸ್ ಬೈಕ್ ಪ್ರಿಯನಾಗಿದ್ದ. ಅವನು ಒಂದು ಬೈಕ್ ಆಕ್ಸಿಡೆಂಟ್‌ನಲ್ಲಿ ಪ್ರಾಣಾಂತಿಕ ಪೆಟ್ಟು ತಿಂದು ಮೃತಪಟ್ಟ. ಆಗ ಅವನಿಗೆ ಚಿಕಿತ್ಸೆ ನೀಡುತ್ತಿದ್ದ ನರರೋಗ ತಜ್ಞ ಡಾ.ಹ್ಯೂಗ್ ಕೇರ್ನ್ಸ್ ಬೈಕ್ ಚಾಲಕರ ಸುರಕ್ಷತೆಗಾಗಿ ಮೊದಲ ಬಾರಿಗೆ ಹೆಲ್ಮೆಟ್ ಸಾಧನವನ್ನು ರೂಪಿಸಿ ಪರಿಚಯಿಸಿದ. ಸಿರಿಯಾದ ಈಗಿನ ಅಧ್ಯಕ್ಷ ಬಶರ್ ಅಲ್ ಅಸದ್‌ನ ಹಿರಿಯ ಸೋದರ ಬಸಲ್ ಅಸಾದ್ ಕೂಡ ರೇಸರ್ ಆಗಿದ್ದ. ಆಕ್ಸಿಡೆಂಟ್‌ನಲ್ಲೇ ಹತನಾದ. ಇನ್ನು ಜಗದ್ವಿಖ್ಯಾತ ರೇಸ್‌ಕಾರ್ ಚಾಲಕ ಜರ್ಮನಿಯ ಮೈಕಲ್ ಷೂಮಾಚರ್ ಹಿಮ ಪ್ರದೇಶದಲ್ಲಿ ಸ್ಕೀಯಿಂಗ್ ಮಾಡುವಾಗ ತಲೆಗೆ ಪೆಟ್ಟು ಬಿರ್ದ ಮಲಗಿ ನಾಲ್ಕು ವರ್ಷವಾಗುತ್ತಾ ಬಂದಿದೆ. ಅವನ ಕುಟುಂಬ ಚಿಕಿತ್ಸೆಗಾಗಿ ಎಂಬತ್ತು ಕೋಟಿ ರೂಪಾಯಿ ಖರ್ಚು ಮಾಡಿದರೂ ಷೂಮಾಚರ್ ಮೊದಲಿನಂತಾಗಿಲ್ಲ. ಆದರೆ ರೇಸ್ ಕಾರ್ ಚಾಲಕರಿಗೆ ಅಪಾಯದ ನೆರಳಲ್ಲೇ ಸೆಣೆಸಾಡುವ ಸ್ಥಿತಿ ಈಗಲೂ ಇದೆ. ಆದರೆ ಇವೆಲ್ಲಾ ರೇಸ್ ಟ್ರ್ಯಾಕ್‌ಗೆ ಸಂಬಂಧಿಸಿರುವ ವಿಚಾರಗಳು.
ಅಶ್ವಿನ್ ಸುಂದರ್ ಒಬ್ಬ ಛಲಗಾರನಾಗಿದ್ದ. ಕಾರ್ ರೇಸ್‌ಗಳ ಗೆಲುವು, ಕೀರ್ತಿ ಹಾಗೂ ಹಣ ಅವನ ತಲೆಯನ್ನು ಭುಜದಿಂದ ಇನ್ನೂ ಮೇಲಕ್ಕೇನೂ ಒಯ್ದಿರಲಿಲ್ಲ. ಹೊಸ ರೇಸ್ ಹುಡುಗರು ಕೆಲವೊಮ್ಮೆ ಪೋಷಾಕು ಇನ್ನಿತರ ವಸ್ತುಗಳನ್ನು ಎರವಲು ಕೇಳಿದಾಗ ಈ ಅಶ್ವಿನ್ ನಸುನಗುತ್ತಲೇ ಅವನ್ನೆಲ್ಲಾ ನೀಡುತ್ತಿದ್ದನಂತೆ. ಅಂತೆಯೇ ತನಗೆ ತಿಳಿದಿರುವ ರೇಸಿಂಗ್ ಕೌಶಲ್ಯಗಳನ್ನು ಚಿಕ್ಕವರೊಂದಿಗೆ ಹಂಚಿಕೊಳ್ಳಲು ಅಶ್ವಿನ್ ಎಂದೂ ಜಿಪುಣತನ ಮಾಡುತ್ತಿರಲಿಲ್ಲ ಎಂದು ಅವನ ಜೊತೆಗಾರರು ನೆನೆಯುತ್ತಿದ್ದಾರೆ.
ವಿವೇಕ ಸಮಾಧಾನ ಕಡಿಮೆಯಾದಾಗ ಮನುಷ್ಯ ಸಾವಿಗೋ ಇಲ್ಲಾ ಅನಾಹುತಕ್ಕೋ ಇನ್ನಷ್ಟು ಹತ್ತಿರಾಗುತ್ತಾನೆ. ಇನ್ನು ಸದಾ ಸಾವಿನ ನೆರಳಲ್ಲೇ ಚಲಿಸುವ ರೇಸ್ ಕಾರ್ ಡ್ರೈವರ್ ಸಹನೆ ಕಳೆದುಕೊಂಡರೆ ಅನಾಹುತ ಆಗದಿದ್ದೀತೆ?
ಅಶ್ವಿನ್ ಹಾಗೂ ನಿವೇದಿತಾರ ದಾರುಣ ಸಾವು ಅಪಘಾತದ ದೃಶ್ಯ ನೋಡಿದವರಲ್ಲಿ ಸಂಕಟ ಮೂಡಿಸಿದೆ.
ಅಶ್ವಿನ್ ರೇಸ್ ಕಾರ್ ಓಡಿಸುತ್ತಿದ್ದಾಗಲೂ ಜನ ನಿಂತು ನೋಡುತ್ತಿದ್ದರು. ಅದೇ ಅಶ್ವಿನ್ ಕಾರಿಗೆ ಅಪಘಾತವಾಗಿ ಬೆಂಕಿಯೊಳಗೆ ಸಿಲುಕಿದಾಗಲೂ ಜನ ನೋಡುವುದು, ವೀಡಿಯೊ ಶೂಟ್ ಮಾಡುವುದು ಬಿಟ್ಟು ಅವರನ್ನು ಉಳಿಸಲು ಬೇರೇನೂ ಪ್ರಯತ್ನ ಮಾಡಲಿಲ್ಲ ಅನ್ನುವುದು ನಮ್ಮ ಭಾರತ ಇನ್ನೂ ಪೂರ್ತಿ ನಾಗರಿಕ ದೇಶವಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.