ಆಧಾರ್ ಕಾನೂನು ಬದ್ಧ ಹಕ್ಕು ಆದರೆ...?

Update: 2017-03-26 18:39 GMT

ಆಧಾರ್ ಕಾಯ್ದೆ ನಿಬಂಧನೆ 28ರಲ್ಲಿ ಈ ಕೆಳಗಿನ ಐದು ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಆಧಾರ್ ಸಂಖ್ಯೆಯನ್ನು ಖಾಯಂ ಆಗಿ ನಿಷ್ಕ್ರಿಯಗೊಳಿಸಲು ಅಧಿಕಾರವಿದೆ.

♦ 5-15 ವರ್ಷ ವಯಸ್ಸಿನ ಮಕ್ಕಳು ಈ ವಯಸ್ಸು ಕಳೆದು ಎರಡು ವರ್ಷದ ಒಳಗಾಗಿ ಬಯೋಮೆಟ್ರಿಕ್ ಅಂಶಗಳನ್ನು ಪರಿಷ್ಕರಿಸದಿದ್ದರೆ.

♦ ನಿವಾಸಿಯೊಬ್ಬ ಬಯೋಮೆಟ್ರಿಕ್ ಮಾಹಿತಿ ನೀಡಲು ಶಕ್ತನಿದ್ದರೂ ಅದನ್ನು ನೀಡದಿದ್ದರೆ.

♦ ಸೂಕ್ತ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಿಲ್ಲ ಎನ್ನುವುದು ಬಳಿಕ ಕಂಡುಬಂದರೆ.

♦ ಹೊಸದಾಗಿ ಭಾವಚಿತ್ರ ಸೆರೆ ಹಿಡಿಯುವ ಬದಲು ಹಳೆಯ ಭಾವಚಿತ್ರವನ್ನೇ ನೀಡಿದರೆ.

♦ ಸೆರೆ ಹಿಡಿದ ಮಾಹಿತಿಗಳನ್ನು ತಪ್ಪುಮಾಹಿತಿ ಎಂದು ತೋರಿಸಿದರೆ ಈ ಐದು ಅಂಶಗಳಲ್ಲದೇ, ನಿಷ್ಕ್ರಿಯಗೊಳಿಸಲು ಸಕಾರಣ ಎಂದು ಪ್ರಾಧಿಕಾರಕ್ಕೆ ಅನಿಸುವ ಇತರ ಯಾವುದೇ ಕಾರಣಗಳಿಗೆ ಹೀಗೆ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲು ಅವಕಾಶವಿದೆ.

ಯೋಮೆಟ್ರಿಕ್ ಆಧರಿತ ವಿಶಿಷ್ಟ ಗುರುತಿನ ಸಂಖ್ಯೆ- ಆಧಾರ್ ಎಲ್ಲ ಭಾರತೀಯ ನಾಗರಿಕರ ಹಕ್ಕು. ಆದರೆ ಬಹಳಷ್ಟು ಸರಕಾರಿ ಸೇವೆಗಳ ಪ್ರಯೋಜನವನ್ನು ಪಡೆಯಬೇಕಾದರೆ ಇದೀಗ ಆಧಾರ್ ಕಡ್ಡಾಯ ಮಾಡಲಾಗಿದೆ. ಮುಂಬರುವ ಜುಲೈನಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್ ಕಡ್ಡಾಯ ಮಾಡಲು ಸರಕಾರ ನಿರ್ಧರಿಸಿದೆ. ಕಳ್ಳಸಾಗಣೆಯಿಂದ ರಕ್ಷಿಸಿದ ಮಹಿಳೆಗೆ, ಜೀತ ಕಾರ್ಮಿಕರು, ಆರರಿಂದ 14 ವರ್ಷ ವಯಸ್ಸಿನ ಶಾಲಾ ವಿದ್ಯಾರ್ಥಿಗಳು ಹೀಗೆ ದುರ್ಬಲ ವರ್ಗದವರು ಸರಕಾರಿ ಪ್ರಯೋಜನವನ್ನು ಪಡೆಯಬೇಕಾದರೆ ಆಧಾರ್ ಅಥವಾ ಕನಿಷ್ಠ ಆಧಾರ್ ನೋಂದಣಿ ದಾಖಲೆ ಸಲ್ಲಿಸುವುದು ಕಡ್ಡಾಯ ಎಂದು ಪ್ರಕಟಿಸಿದೆ. ಉದಾಹರಣೆಗೆ ಶಾಲಾಮಕ್ಕಳ ವಿಚಾರದಲ್ಲಿ ಆಧಾರ್ ದಾಖಲೆ ಸಲ್ಲಿಸದ ವಿದ್ಯಾರ್ಥಿಗಳಿಗೆ ಜೂನ್‌ನಿಂದ ಮಧ್ಯಾಹ್ನದ ಬಿಸಿಯೂಟ ಕೂಡಾ ಲಭಿಸುವುದಿಲ್ಲ.

ಸರಕಾರದ ಅಧಿಸೂಚನೆಯ ಪ್ರಕಾರ, ಆಧಾರ್ ದಾಖಲೆಯ ಮೂಲಕ ಗುರುತು ಹಿಡಿಯುವುದರಿಂದ ಪಾರದರ್ಶಕತೆ ಮತ್ತು ದಕ್ಷತೆಗೆ ಕಾರಣವಾಗಲಿದೆ. ಆದರೆ ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಿದರೆ ಅಂಥ ಕ್ರಮದಿಂದ ನಾಗರಿಕರಿಗೆ ಯಾವ ಸುರಕ್ಷೆ ಇದೆ ಎಂಬ ಬಗ್ಗೆ ಈ ಅಧಿಸೂಚನೆಯಾಗಲೀ, ಆಧಾರ್ ಕಾಯ್ದೆ- 2016 ಆಗಲೀ ಏನನ್ನೂ ಹೇಳುವುದಿಲ್ಲ. ಭಾರತದ ವಿಶಿಷ್ಟ ಗುರುತಿಸುವಿಕೆ ಪ್ರಾಧಿಕಾರ ಹೀಗೆ ಸಂಖ್ಯೆ ನಿಷ್ಕ್ರಿಯಗೊಳಿಸುವ ಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಅವಕಾಶವಿದೆ.

12 ಅಂಕಿಗಳ ಸಂಖ್ಯೆಗಳನ್ನು ಬಹುತೇಕ ಮೂಲಭೂತ ಸೇವೆಗಳಿಗೆ ಸಂಪರ್ಕಿಸಲಾಗಿದ್ದು, ಇದನ್ನು ನಿಷ್ಕ್ರಿಯಗೊಳಿಸುವುದರಿಂದ ನಾಗರಿಕರ ಮೇಲೆ ಗಂಭೀರ ಪರಿಣಾಮ ಎದುರಾಗುತ್ತದೆ ಹಾಗೂ ಮೂಲಭೂತ ಸೌಕರ್ಯಗಳಿಂದ ಅವರು ವಂಚಿತರಾಗುತ್ತಾರೆ.

ಪ್ರಾಧಿಕಾರದ ಅಧಿಕಾರ

ಆಧಾರ್ ಕಾಯ್ದೆ ನಿಬಂಧನೆಗಳು ಇದೀಗ ಸಂಸತ್ತಿನ ಮುಂದಿದ್ದು, ಇದರ ಪ್ರಕಾರ, ಆಧಾರ್ ಸಂಖ್ಯೆಯನ್ನು ನೀಡುವ ಮತ್ತು ಮಾಹಿತಿಗಳನ್ನು ನಿರ್ವಹಿಸುವ ಭಾರತದ ವಿಶಿಷ್ಟ ಗುರುತಿಸುವಿಕೆ ಪ್ರಾಧಿಕಾರ (ಯುಐಡಿಎಐ)ಗೆ ಖಾಯಂ ಆಗಿ ಕಿತ್ತುಹಾಕಲು ಅಥವಾ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ಅಧಿಕಾರವಿದೆ. ಈ ನಿಬಂಧನೆಗಳು ಪ್ರಾಧಿಕಾರಕ್ಕೆ, ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವ ಅಧಿಕಾರ ಇದೆ. ಹೀಗೆ ಆಧಾರ್ ಅಮಾನತುಗೊಂಡ ನಾಗರಿಕರು ಈ ಬಗ್ಗೆ ವ್ಯಾಜ್ಯ ಸಲ್ಲಿಸಲು ಸೂಕ್ತ ವ್ಯಾಜ್ಯ ಪರಿಹಾರ ವ್ಯವಸ್ಥೆ ಇಲ್ಲ.

ಹೀಗೆ ಆಧಾರ್ ಸಂಖ್ಯೆ ರದ್ದುಪಡಿಸಿದ ಬಳಿಕ ಅಥವಾ ನಿಷ್ಕ್ರಿಯಗೊಳಿಸಿದ ಬಳಿಕ ಯುಐಡಿಎಐ ನೇಮಕ ಮಾಡಿದ ಒಂದು ಸಂಸ್ಥೆಯು ಕ್ಷೇತ್ರ ವಿಚಾರಣೆಯನ್ನು ನಡೆಸಿ, ತೊಂದರೆಗೀಡಾದ ವ್ಯಕ್ತಿಯನ್ನು ವಿಚಾರಣೆ ಮಾಡುತ್ತದೆ. ಆದರೆ ಇದನ್ನು ಆಧಾರ್ ಸಂಖ್ಯೆ ಹೊಂದಿರುವ ವ್ಯಕ್ತಿಯ ಹಕ್ಕು ಎಂದು ಪರಿಗಣಿಸುವುದಿಲ್ಲ ಎಂದು ನಿಬಂಧನೆ ಹೇಳುತ್ತದೆ.

ಕಳೆದ ಸೆಪ್ಟಂಬರ್‌ನಲ್ಲಿ ಈ ನಿಬಂಧನೆಗಳನ್ನು ಪ್ರಕಟಿಸಿದ ಬಳಿಕ, ಯುಐಡಿಎಐಗೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸರಣಿಯಾಗಿ ಪ್ರಶ್ನೆಗಳನ್ನು ಮುಂದಿಟ್ಟು, ನೂರು ಕೋಟಿಗೂ ಅಧಿಕ ಮಂದಿ ನೋಂದಾಯಿಸಿರುವ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ, ವಿಧಿವಿಧಾನ ಹಾಗೂ ಪ್ರಾಧಿಕಾರದ ಅಧಿಕಾರವನ್ನು ಪ್ರಶ್ನಿಸಲಾಗಿತ್ತು.

2010ರ ಸೆಪ್ಟಂಬರ್‌ನಿಂದ 2016ರ ಅಕ್ಟೋಬರ್ 31ರವರೆಗೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಪ್ರಾಧಿಕಾರದ ಪ್ರಾದೇಶಿಕ ಕಚೇರಿಗಳಿಂದ ಬಹುತೇಕ ಪ್ರಶ್ನೆಗಳಿಗೆ ಕಳೆದ ಡಿಸೆಂಬರ್ ಹಾಗೂ ಜನವರಿಯಲ್ಲಿ ಉತ್ತರ ನೀಡಲಾಗಿತ್ತು. ಅಂತಿಮವಾಗಿ ಮಾರ್ಚ್ 1ರಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಿತ್ತು.

ದಾಖಲೆ ನಿರ್ವಹಣೆ ಕಳಪೆ

ಇದುವರೆಗೆ ಪ್ರಾಧಿಕಾರ 2010ರ ಸೆಪ್ಟಂಬರ್‌ನಿಂದ 2016ರ ಆಗಸ್ಟ್‌ವರೆಗೆ 85,67,177 ಆಧಾರ್ ಸಂಖ್ಯೆಗಳನ್ನು ಬಯೋಮೆಟ್ರಿಕ್ ಪರಿಷ್ಕರಣೆಗಾಗಿ ನಿಷ್ಕ್ರಿಯಗೊಳಿಸಿದೆ. ಇತರ 408 ಸಂಖ್ಯೆಗಳನ್ನು ಜನರ ಇತರ ಮಾಹಿತಿ ಪರಿಷ್ಕರಣೆ ಉದ್ದೇಶಕ್ಕಾಗಿ ನಿಷ್ಕ್ರಿಯಗೊಳಿಸಿದೆ ಎಂದು ಮಾಹಿತಿ ನೀಡಿದೆ.

ಪ್ರಾಧಿಕಾರದ ಮಾಹಿತಿ ಪರಿಷ್ಕರಣೆ ನೀತಿಯ ಅನ್ವಯ, ಶಿಶುಗಳು ಹಾಗೂ ಮಕ್ಕಳ ಬೆರಳಚ್ಚು ಹಾಗೂ ಐರಿಸ್ ಸ್ಕ್ಯಾನ್‌ಗಳನ್ನು ಐದು ವರ್ಷ ಪೂರ್ಣಗೊಂಡು ಎರಡು ವರ್ಷಗಳ ಒಳಗಾಗಿ ಪರಿಷ್ಕರಿಸಬೇಕು. ಬಳಿಕ 15 ವರ್ಷ ತುಂಬಿದ ನಂತರ ಪರಿಷ್ಕರಿಸಬೇಕು. ಹಾಗೆ ಮಾಡುವಲ್ಲಿ ವಿಫಲವಾದಲ್ಲಿ, ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಇತರ ಮಾಹಿತಿಗಳಲ್ಲಿ ಮುಖ್ಯವಾಗಿ ಸಾವು, ವಿಳಾಸ ಬದಲಾವಣೆ, ದೋಷ ಸರಿಪಡಿಸುವುದು ಮತ್ತಿತರ ಅಂಶಗಳು ಸೇರುತ್ತವೆ.

ಪ್ರಾಧಿಕಾರದ ತಂತ್ರಜ್ಞಾನ ಕೇಂದ್ರ ಹೇಳುವಂತೆ, ನೋಂದಣಿ ಏಜೆನ್ಸಿ ಅಥವಾ ನೋಂದಣಿ ಮಾಡಿಕೊಂಡ ರಿಜಿಸ್ಟ್ರಾರ್ ಅಥವಾ ನಿಷ್ಕ್ರಿಯಗೊಳಿಸಿದ ಅಧಿಕಾರಿಯ ವಿವರಗಳನ್ನು ಅದು ಇಟ್ಟುಕೊಳ್ಳುವುದಿಲ್ಲ. ನೋಂದಣಿ ಸಂಸ್ಕರಣಾ ವ್ಯವಸ್ಥೆ ಅಗತ್ಯ ಎಂದು ತೋರಿಸುವ ಎಲ್ಲ ಸಂಖ್ಯೆಗಳನ್ನೂ ನಿಷ್ಕ್ರಿಯಗೊಳಿಸಲಾಗುತ್ತದೆ. ಇದರಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಇಲ್ಲ.

ಆದರೆ ಸರಕಾರಿ ಮಾಹಿತಿ ಹಾಗೂ ಫಲಾನುಭವಿಗಳ ಜತೆ ನಡೆಸಿದ ಸಂದರ್ಶನದ ಪ್ರಕಾರ, ರಾಜಸ್ಥಾನದಂಥ ಕೆಲ ರಾಜ್ಯಗಳಲ್ಲಿ ನಾಗರಿಕರು ದೊಡ್ಡ ಪ್ರಮಾಣದಲ್ಲಿ ಇಂಥ ತೊಂದರೆ ಅನುಭವಿಸಿದ್ದಾರೆ. ಆಹಾರ ಪಡಿತರ ವ್ಯವಸ್ಥೆ ಹಾಗೂ ಸಾಮಾಜಿಕ ಪಿಂಚಣಿ ಯೋಜನೆಗೆ 2015-16ರಲ್ಲಿ ಆಧಾರ್ ಸಂಖ್ಯೆ ಸಂಪರ್ಕಿಸುವ ವೇಳೆ ಇಂಥ ದೋಷಗಳು ಕಂಡುಬಂದಿವೆ. ಈ ಕಾರಣದಿಂದಾಗಿಯೇ ಸಾವಿರಾರು ಕುಟುಂಬಗಳು ತಮ್ಮ ಆಹಾರ ಪಡೆಯುವ ಕಾನೂನುಬದ್ಧ ಹಕ್ಕಿನಿಂದ ವಂಚಿತರಾಗಿದ್ದಾರೆ.

ಹೀಗೆ ನಿಷ್ಕ್ರಿಯಗೊಳಿಸಿದ ಪ್ರಕರಣಗಳ ಬಗ್ಗೆ ರಾಜ್ಯವಾರು, ಜಿಲ್ಲಾವಾರು ಮಾಹಿತಿಗಳನ್ನು ನಿರ್ವಹಿಸಲಾಗಿದೆಯೇ ಎಂಬ ಮಾಹಿತಿಹಕ್ಕು ಪ್ರಶ್ನೆಗೆ, ಅಂಥ ಮಾಹಿತಿ ನಿರ್ವಹಿಸಿಲ್ಲ ಎಂದು ಉತ್ತರ ದೊರಕಿದೆ.

ಯಾರ ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲಾಗಿದೆಯೋ ಅಂಥ ವ್ಯಕ್ತಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ ಎಂದು ಉತ್ತರಿಸಿದೆ. ಆದರೆ ಮುದ್ರಿತ ರೂಪದಲ್ಲಿ ನೀಡುವ ವ್ಯವಸ್ಥೆ ಇಲ್ಲ ಎಂದು ಲಾಜಿಸ್ಟಿಕ್ ವಿಭಾಗ ಉತ್ತರ ನೀಡಿದೆ. ಆದರೆ ಮೊಬೈಲ್ ಸಂಖ್ಯೆ ಇಲ್ಲದವರಿಗೆ ಹೇಗೆ ಮಾಹಿತಿ ನೀಡುತ್ತದೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

2013ರ ಮಾರ್ಚ್ 20ರಂದು ಕಾಂಗ್ರೆಸ್ ಸರಕಾರದಲ್ಲಿ ಸಂಸದೀಯ ವ್ಯವಹಾರ ಹಾಗೂ ಯೋಜನಾ ಸಚಿವ ರಾಜೀವ್ ಶುಕ್ಲಾ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ, ಯುಐಡಿಎಐ ಇದುವರೆಗೆ 3,84,237 ಆಧಾರ್ ಸಂಖ್ಯೆಗಳನ್ನು ಬಯೋಮೆಟ್ರಿಕ್ ವಿನಾಯಿತಿ ವಿಭಾಗದಡಿ ನಿಷ್ಕ್ರಿಯಗೊಳಿಸಿದೆ ಎಂದು ಹೇಳಿದ್ದರು. ವಿನಾಯಿತಿಗೆ ಅವಕಾಶ ಇಲ್ಲದವರೂ ಬಯೋಮೆಟ್ರಿಕ್ ವಿನಾಯಿತಿ ಪಡೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗಾಯಾಳುಗಳು ಮತ್ತು ಅಂಗವಿಕಲರಿಗಷ್ಟೇ ಈ ಸೌಲಭ್ಯ ಇದೆ. ಆದರೆ ಈ ಮಾಹಿತಿಯನ್ನು ಪ್ರಾಧಿಕಾರ ಬಹಿರಂಗಪಡಿಸಿಲ್ಲ. ಬಯೋಮೆಟ್ರಿಕ್ ಮತ್ತು ಭೌಗೋಳಿಕ ಮಾಹಿತಿ ಪರಿಷ್ಕರಣೆಗಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಹೇಳಿದೆ.

ಬಹುತೇಕ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಿದ ಮುಖ್ಯ ಕಾರಣಗಳೆಂದರೆ, 5 ಅಥವಾ 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ಮಾಹಿತಿ ಪರಿಷ್ಕರಿಸದೇ ಇದ್ದುದು ಎಂದು ಸಂವಹನ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ವ್ಯವಸ್ಥಾಪಕ ವಿಕಾಸ್ ಶುಕ್ಲಾ ಹೇಳಿದರು.

ಮಾರ್ಚ್ 17ರಂದು ಈ ಸಂಬಂಧ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಬಿಪಿ ಪಾಂಡೆ ಅವರಿಗೂ ಇ-ಮೇಲ್ ಪ್ರಶ್ನೆ ಕೇಳಲಾಗಿತ್ತು. ಪೂರ್ವಮಾಹಿತಿ ಇಲ್ಲದೇ ನಿಷ್ಕ್ರಿಯಗೊಳಿಸಿ, ಪ್ರಮುಖ ಸೇವೆಗಳಿಂದ ವಂಚಿತರನ್ನಾಗಿಸುವ ಬಗ್ಗೆ ಮತ್ತು ಅಂಚೆ ಮೂಲಕ ಈ ಮಾಹಿತಿ ನೀಡುವ ಉದ್ದೇಶವಿದೆಯೇ ಎಂದು ಪ್ರಶ್ನಿಸಲಾಗಿತ್ತು. ಆದರೆ ಇದಕ್ಕೆ ಉತ್ತರ ಬಂದಿಲ್ಲ.

ಮಕ್ಕಳು ಮತ್ತು ಆಧಾರ್

ಸರಕಾರ ಆಧಾರ್ ಕಡ್ಡಾಯಗೊಳಿಸಿದ ಯೋಜನೆಗಳಲ್ಲಿ ಹಲವು ಯೋಜನೆಗಳು ಮಕ್ಕಳಿಗೆ ಸಂಬಂಧಪಟ್ಟವು. ಇವುಗಳಲ್ಲಿ 14 ವರ್ಷವರೆಗಿನ ಮಕ್ಕಳಿಗೆ ಕಡ್ಡಾಯ ಶಾಲಾ ಶಿಕ್ಷಣ, ಮಧ್ಯಾಹ್ನದ ಬಿಸಿಯೂಟ ಹಾಗೂ ವಿದ್ಯಾರ್ಥಿ ವೇತನ ಯೋಜನೆಗಳು ಸೇರುತ್ತವೆ. ಮಕ್ಕಳಿಗೆ ಆಧಾರ್ ಕಡ್ಡಾಯಪಡಿಸಿರುವ ಹಿಂದಿನ ತಾರ್ಕಿಕತೆಯನ್ನು ತಜ್ಞರು ಪ್ರಶ್ನಿಸುತ್ತಾರೆ.

ಮಕ್ಕಳ ಬಯೋಮೆಟ್ರಿಕ್ ಮಾಹಿತಿಗಳು ಪದೇ ಪದೇ ಬದಲಾಗುತ್ತಲೇ ಇರುತ್ತವೆ. ಅಂಥ ಮಕ್ಕಳ ಬಯೋಮೆಟ್ರಿಕ್ ಮಾಹಿತಿಯನ್ನು ಸರಕಾರ ಏಕೆ ಸಂಗ್ರಹಿಸುತ್ತದೆ ಎಂದು ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಹಾಗೂ ಆಹಾರ ಹಕ್ಕು ಆಂದೋಲನದ ಸದಸ್ಯೆ ಡಾ.ದೀಪಾ ಸಿನ್ಹಾ ಪ್ರಶ್ನಿಸುತ್ತಾರೆ. ಅವರ ಬಯೋಮೆಟ್ರಿಕ್ ಬದಲಾಗುತ್ತಿದ್ದರೆ, ಬಯೋಮೆಟ್ರಿಕ್ ಆಧರಿತ ಗುರುತಿಸುವಿಕೆ ಸಂಖ್ಯೆಯು ಮಧ್ಯಾಹ್ನದ ಬಿಸಿಯೂಟದಂಥ ಮಕ್ಕಳ ಯೋಜನೆಗಳ ಸೇವೆಗಳ ಗುಣಮಟ್ಟ ಹೆಚ್ಚುತ್ತದೆ ಎಂದು ಹೇಗೆ ಹೇಳುತ್ತದೆ? 14 ವರ್ಷ 11 ತಿಂಗಳವರೆಗೂ ಬಯೋಮೆಟ್ರಿಕ್ ರೂಪುಗೊಳ್ಳುವುದಿಲ್ಲ ಕೇವಲ 15 ವರ್ಷಕ್ಕಷ್ಟೇ ರೂಪುಗೊಳ್ಳುತ್ತದೆ ಎಂದು ಸರಕಾರ ಭಾವಿಸಿದೆಯೇ ಅಥವಾ ಪ್ರಯೋಗ ಮಾಡುತ್ತಿದೆಯೇ? ಎನ್ನುವುದು ಅವರ ಪ್ರಶ್ನೆ.

ಪೋಷಕರಿಗೆ ಮಾಹಿತಿ ನೀಡದೇ, ಮಕ್ಕಳ ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವುದು ಅಥವಾ ಕೇವಲ ಸಂದೇಶ ನೀಡಿ ನಿಷ್ಕ್ರಿಯಗೊಳಿಸುವುದು, ಮಕ್ಕಳ ಆರೋಗ್ಯ, ಪೌಷ್ಟಿಕತೆ ಹಾಗೂ ಶೈಕ್ಷಣಿಕ ಪ್ರಯೋಜನಗಳಿಗೆ ತೊಂದರೆಯಾಗುತ್ತದೆ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.

ವಕೀಲ ಹಾಗೂ ಸಂಶೋಧಕ ಪ್ರಶಾಂತ್ ರೆಡ್ಡಿ ತಿಕ್ಕವರಪು, ನಿಷ್ಕ್ರಿಯಗೊಳಿಸಲು ನಿರ್ದಿಷ್ಟ ವಿಧಿವಿಧಾನಗಳನ್ನು ಅನುಸರಿಸದಿರುವ ಕ್ರಮವನ್ನು ಪ್ರಶ್ನಿಸುತ್ತಾರೆ. ನಿಷ್ಕ್ರಿಯಗೊಳಿಸಲು ಯಾವ ಅಧಿಕಾರಿಗೆ ಅಧಿಕಾರ ಇದೆ ಎನ್ನುವುದನ್ನು ಕಾನೂನು ಹಾಗೂ ನಿಬಂಧನೆಗಳು ಸ್ಪಷ್ಟವಾಗಿ ಹೇಳಬೇಕು. ಕಾನೂನು ಪ್ರಕಾರ ಸೂಕ್ತ ನೋಟಿಸ್ ನೀಡಬೇಕು ಹಾಗೂ ವಿಚಾರಣೆ ನಡೆಸಬೇಕು. ಇದರ ಬದಲಾಗಿ ಪ್ರಾಧಿಕಾರ, ಯಾಂತ್ರಿಕ ವ್ಯವಸ್ಥೆಯೇ ಇದನ್ನು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳಿಸುತ್ತದೆ. ಇದರಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಇಲ್ಲ ಎಂದು ನುಣುಚಿಕೊಳ್ಳುತ್ತದೆ ಎನ್ನುವುದು ಅವರ ಆಕ್ಷೇಪ.

ಆಧಾರ್ ಕಾಯ್ದೆಯು, ಆಧಾರ್ ಸಂಖ್ಯೆ ಪಡೆಯುವುದು ಪ್ರತಿಯೊಬ್ಬರ ಕಾನೂನುಬದ್ಧ ಹಕ್ಕು ಎಂದು ಹೇಳುತ್ತದೆಯಾದರೆ, ಇದರ ನಿಬಂಧನೆಯು ಯಾವ ನೋಟಿಸ್ ಕೂಡಾ ನೀಡದೇ ನಿಷ್ಕ್ರಿಯಗೊಳಿಸುವ ಆಡಳಿತಾತ್ಮಕ ವಿವೇಚನೆಯನ್ನು ಪ್ರಾಧಿಕಾರಕ್ಕೆ ಹೇಗೆ ನೀಡುತ್ತದೆ ಎಂದು ಪ್ರಶ್ನಿಸುತ್ತಾರೆ.

ಹಿಂದೆ ಯುಪಿಎ ಸರಕಾರ ರೂಪಿಸಿದ್ದ ಭಾರತದ ರಾಷ್ಟ್ರೀಯ ಗುರುತಿಸುವಿಕೆ ಪ್ರಾಧಿಕಾರ ಮಸೂದೆ- 2010ರಲ್ಲಿ ಗುರುತಿಸುವಿಕೆ ಪರಾಮರ್ಶೆ ಸಮಿತಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ಪ್ರಧಾನಿ ನೇಮಕ ಮಾಡುವ ವ್ಯಕ್ತಿ, ವಿರೋಧ ಪಕ್ಷದ ನಾಯಕ ಹಾಗೂ ಕೇಂದ್ರ ಸಂಪುಟ ಸಚಿವರನ್ನೊಳಗೊಂಡ ಸಮಿತಿ ಆಧಾರ್ ಬಳಕೆ ವಿಧಾನದ ಮೇಲ್ವಿಚಾರಣೆ ನಡೆಸಿ ವಾರ್ಷಿಕವಾಗಿ ಸಂಸತ್ತಿಗೆ ವರದಿ ನೀಡಬೇಕಿತ್ತು. ಆದರೆ ಈ ಅಗತ್ಯವನ್ನು ಆಧಾರ್ ಕಾಯ್ದೆ ದುರ್ಬಲಗೊಳಿಸಿದೆ. ಅಂಥ ಸಮಿತಿಯು ಯುಐಡಿಎಐ ನಿರ್ಧಾರದ ಮೇಲೆ ಸ್ವತಂತ್ರವಾಗಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಹೊಂದಿದ ಕಾರಣದಿಂದ ಆಧಾರ್ ಸಂಖ್ಯೆ ಬಳಕೆಯಲ್ಲಿ ಪಾರದರ್ಶಕತೆಗೆ ಅವಕಾಶವಿತ್ತು. ಆದರೆ ಈಗ ಅಂಥ ಯಾವ ಅವಕಾಶವೂ ಇಲ್ಲ ಎಂದು ರೆಡ್ಡಿ ಹೇಳುತ್ತಾರೆ. ಆಧಾರ್ ಸಂಖ್ಯೆ ನಿಷ್ಕ್ರಿಯಗೊಳಿಸಲು ಯಾವ ಅಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂಬ ಬಗ್ಗೆ ಯುಐಎಡಿಐ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಇನ್ನೊಂದು ಪ್ರಶ್ನೆಗೆ ಯುಐಡಿಎಐ ಉತ್ತರಿಸಿದೆ. ವ್ಯಾಜ್ಯ ಪರಿಹಾರಕ್ಕೆ ಯಾವ ವಿಧಿ ವಿಧಾನ ಅನುಸರಿಸಲಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದೆ.

ವ್ಯಾಜ್ಯ ಪರಿಹಾರ ಪ್ರಕ್ರಿಯೆ ಬಗ್ಗೆ ಕೇಳಿದ ಪ್ರಶ್ನೆಗೆ, ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ವ್ಯಾಜ್ಯ ಇಲಾಖೆಯ ಪೋರ್ಟೆಲ್ ಮೂಲಕ ಹಾಗೂ ಅಂಚೆ ಮೂಲಕ ದೂರುಗಳನ್ನು ಸ್ವೀಕರಿಸಲಾಗುತ್ತದೆ ಎಂದು ಪ್ರಾಧಿಕಾರ ಉತ್ತರಿಸಿದೆ. 2010ರಿಂದ 2016ರವರೆಗೆ ವರ್ಷವಾರು ಸಂಗ್ರಹಿಸಿದ ದೂರುಗಳ ಮಾಹಿತಿಯನ್ನು ಕೂಡಾ ಹಂಚಿಕೊಂಡಿದೆ. ಆದರೆ ಆಫ್‌ಲೈನ್ ದೂರುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಆಧಾರ್ ದೃಢೀಕರಣ ವೈಫಲ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆರಳಚ್ಚು ದೋಷ ಆಥವಾ ಸಮರ್ಪಕ ಮೂಲಸೌಕರ್ಯ ಮತ್ತಿತರ ಕಾರಣಗಳಿಂದ ನ್ಯಾಯಬದ್ಧ ಫಲಾನುಭವಿಗಳ ಅನುಕೂಲಕ್ಕಾಗಿ 32ನೆ ನಿಬಂಧನೆ ಅನ್ವಯ ಸಂಪರ್ಕ ಕೇಂದ್ರ ನಿರ್ಮಿಸಬೇಕು. ಇಲ್ಲವೇ ಕಾಲ್‌ಸೆಂಟರ್ ನಂಬರ್ 1947ರಲ್ಲಿ ಸಾರ್ವಜನಿಕರು ದೂರುಗಳಲ್ಲಿ ಸಲ್ಲಿಸಲು ಅವಕಾಶ ಇರಬೇಕು. ಇದರ ಜತೆಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನೂ ನೀಡಬೇಕು. ಇದು ವ್ಯಾಜ್ಯ ಪರಿಹಾರಕ್ಕೆ ಇರುವ ಮುಖ್ಯ ಮಾರ್ಗ. ಆದರೆ ಜಿಲ್ಲೆ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಲ್ಲಿ ದೂರುಗಳನ್ನು ದಾಖಲಿಸಲು ಅವಕಾಶವಿಲ್ಲ. ನಿಬಂಧನೆಯ ಅನ್ವಯ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗಳಿಗೆ ತೆರಳಿ ಅಹವಾಲು ಸಲ್ಲಿಸಬಹುದು. ಆದರೆ ಇಂಥ ಕಚೇರಿಗಳು ಕೇವಲ ಏಳು ರಾಜ್ಯಗಳಲ್ಲಷ್ಟೇ ಇವೆ.

ವ್ಯಾಜ್ಯ ಪರಿಹಾರದ ಹೊಣೆ ಹೊತ್ತಿರುವ ಅಧಿಕಾರಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಸಂಪರ್ಕ ಕೇಂದ್ರ ಹಾಗೂ ಕಾಲ್‌ಸೆಂಟರ್ ಸಂಖ್ಯೆ 1947ರ ನಿರ್ವಹಣೆಯನ್ನು ಟಿಸಿಎಸ್ ಮತ್ತು ಎಸ್‌ಎಂಪಿಎಲ್‌ಗೆ ಹೊರಗುತ್ತಿಗೆಗೆ ನೀಡಲಾಗಿದೆ ಎಂದು ಉತ್ತರಿಸಿದೆ. ಗ್ರಾಹಕ ಕಾಳಜಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಈ ಕಂಪೆನಿಗಳು ತಮ್ಮದೇ ನೀತಿಗಳನ್ನು ಹೊಂದಿವೆ. ಅದು ಅವುಗಳ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದೆ.

Writer - ಅನುಮೇಹ ಯಾದವ್

contributor

Editor - ಅನುಮೇಹ ಯಾದವ್

contributor

Similar News

ಜಗದಗಲ
ಜಗ ದಗಲ