ಖಾಲಿ ಬಿದ್ದಿದೆ ಅಲ್ಪಸಂಖ್ಯಾತ ಆಯೋಗ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಆಕ್ರೋಶ

Update: 2017-03-27 13:58 GMT

ಹೇಳಿಕೆಗಳು....

ಸರಕಾರವು ಅಲ್ಪಸಂಖ್ಯಾತರ ಆಯೋಗವನ್ನು ಮುಚ್ಚಲು ಬಯಸಿದೆಯೇ

ಮಾಯಾವತಿ, ಬಿಎಸ್ಪಿ ನಾಯಕಿ

ಅಲ್ಪಸಂಖ್ಯಾತ ಆಯೋಗ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳನ್ನು ವ್ಯವಸ್ಥಿತವಾದ ಕಾರ್ಯತಂತ್ರದ ಮೂಲಕ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದು ದೇಶದ ಪ್ರಜಾತಂತ್ರಕ್ಕೆ ಅಪಾಯಕಾರಿಯಾಗಿದೆ.

ನರೇಂದ್ರ ಬುದಾನಿಯಾ, ಕಾಂಗ್ರೆಸ್ ಸಂಸದ

ರಾ ಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಮಾತ್ರವಲ್ಲದೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಕೂಡಾ ಸಂಪೂರ್ಣವಾಗಿ ರಚನೆಯಾಗಿಲ್ಲ.

ಸೀತಾರಾಂ ಯಚೂರಿ, ಸಿಪಿಎಂ ನಾಯಕ

ಹೊಸದಿಲ್ಲಿ,ಮಾ.27: ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ/ಪಂಗಡಗಳು ಹಾಗೂ ಒಬಿಸಿ ಪಂಗಡಗಳಿಗಾಗಿನ ಸಾಂವಿಧಾನಿಕ ಆಯೋಗಗಳ ಹುದ್ದೆಗಳನ್ನು ಭರ್ತಿ ಮಾಲು ಸರಕಾರ ವಿಳಂಬಿಸುತ್ತಿದೆಯೆಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಸೋಮವಾರ ಭಾರೀ ಕೋಲಾಹಲವೆಬ್ಬಿಸಿದ ಪರಿಣಾಮವಾಗಿ ರಾಜ್ಯಸಭಾ ಕಲಾಪಗಳು ಅಸ್ತವ್ಯಸ್ತಗೊಂಡವು.

 ಬೆಳಗ್ಗೆ ಸದನವು ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಎಸ್‌ಪಿ,ಜೆಡಿಯು ಹಾಗೂ ಬಿಎಸ್‌ಪಿ ಸದಸ್ಯರೊಂದಿಗೆ ಸದನದ ಅಂಗಣಕ್ಕೆ ಧುಮುಕಿ ಸರಕಾರಿ ವಿರೋಧಿ ಘೋಷಣೆಗಳನ್ನು ಕೂಗಿದಾಗ ಉಪಸ್ಪೀಕರ್ ಪಿ.ಜೆ. ಕುರಿಯನ್ ಸುಮಾರು 10 ನಿಮಿಷಗಳವರೆಗೆ ಸದನವನ್ನು ಮುಂದೂಡಿದರು.

ಕಾಂಗ್ರೆಸ್‌ನ ನರೇಂದ್ರ ಬುದಾನಿಯಾ ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸುತ್ತಾ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋದ ಅಧ್ಯಕ್ಷ ಹಾಗೂ ಇತರ ಐವರು ಸದಸ್ಯರ ಸ್ಥಾನಗಳು ಖಾಲಿ ಬಿದ್ದಿರುವುದಾಗಿ ಹೇಳಿದರು.

ಸಂವಿಧಾನಿಕ ಸಂಸ್ಥೆಗಳನ್ನು ವ್ಯವಸ್ಥಿತವಾದ ಕಾರ್ಯತಂತ್ರದ ಮೂಲಕ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದು ದೇಶದ ಪ್ರಜಾತಂತ್ರಕ್ಕೆ ಅಪಾಯಕಾರಿಯೆಂದವರು ಆಪಾದಿಸಿದರು.

  ಬಿಜೆಪಿಯು ಆಯೋಗದ ಭವಿಷ್ಯದ ಬಗ್ಗೆ ಸೂಕ್ಷ್ಮವಾದ ಸಂದೇಶವನ್ನು ನೀಡುತ್ತಿದೆಯೆಂದು ಹೇಳಿದ ಅವರು ಸರಕಾರಕ್ಕೆ ಆಯೋಗದ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆಯಿದೆಯೇ ಎಂಬುದಾಗಿ ಪ್ರಶ್ನಿಸಿದರು.

 ವಿಪಕ್ಷಗಳ ಗದ್ದಲದ ನಡುವೆಯೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಪಾಸ್ ನಖ್ವಿ ಮಾತನಾಡಿ, ಜೈನ ಸಮುದಾಯದ ಪ್ರತಿನಿಧಿಗಳನ್ನು ಸೇರ್ಪಡೆಗೊಳಿಸುವ ಮೂಲಕ ಆಯೋಗವನ್ನು ಪುನಾರಚಿಸಲಾಗುವುದು ಎಂದರು. ಮುಸ್ಲಿಮರು, ಸಿಖ್ಖರು,ಜೈನರುಸ ಬೌದ್ಧರು, ಕ್ರೈಸ್ತರು, ಪಾರ್ಸಿ ಸಮುದಾಯಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲಾಗಿದೆ.

  ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗಳವರಿಗೆ ತಮ್ಮ ಮಕ್ಕನ್ನು ಶಾಲೆಗೆ ಸೇರಿಸಲು ಅಗತ್ಯವಿರುವ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧುರಿ ರಾಜ್ಯಸಭೆಯಲ್ಲಿ ಆಪಾದಿಸಿದರು. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನವನ್ನು ಕೂಡಲೇ ಭರ್ತಿ ಮಾಡಬೇಕೆಂದು ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಆಗ್ರಹಿಸಿದರು. ಆಯೋಗದ ಸದಸ್ಯರ ನೇಮಕದ ಸಂದರ್ಭದಲ್ಲಿ ಜೈನ ಸಮುದಾಯದ ಪ್ರತಿನಿಧಿಗಳನ್ನು ಸೇರ್ಪಡೆಗೊಳಿಸಬಹುದೆಂದು ಅವರು ಸಲಹೆ ನೀಡಿದರು.

   ಸೀತಾರಾಮ್ ಯಚೂರಿ ಮಾತನಾಡಿ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಮಾತ್ರವಲ್ಲದೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಗಳು ಕೂಡಾ ಸಂಪೂರ್ಣವಾಗಿ ರಚನೆಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಅದು ಭರವಸೆ ನೀಡಿದ್ದ ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ ಎಂದರೆ ಇದೇನಾ ಎಂದು ಯಚೂರಿ ಪ್ರಶ್ನಿಸಿದರು.

  ಈ ಸಂದರ್ಭದಲ್ಲಿ ಎಸ್, ಬಿಎಸ್‌ಪಿ ಹಾಗೂ ಸಿಪಿಎಂ ಸದಸ್ಯರೂ ಕೂಡಾ ಸಾಂವಿಧಾನಿಕ ಆಯೋಗಗಳ ಹುದ್ದೆಗಳು ಭರ್ತಿಯಾಗದೆ ಇರುವ ಬಗ್ಗೆ ಪ್ರಬಲವಾದ ಪ್ರತಿಭಟನೆ ವ್ಯಕ್ತಪಡಿಸಿದರು. ಉದ್ರಿಕ್ತ ಸದಸ್ಯರನ್ನು ಸ್ಪೀಕರ್ ಕುರಿಯನ್ ಸಮಾ ಧಾನಪಡಿಸಲು ಯತ್ನಿಸುತ್ತಾ, ಸಚಿವರು ಭರವಸೆ ನೀಡಿದ ಬಳಿಕ ಗದ್ದಲವೆಬ್ಬಿಸುವುದರಲ್ಲಿ ಯಾವ ತರ್ಕವಿದೆಯೆಂದು ಪ್ರಶ್ನಿಸಿದರು. ಆದರೆ ಇದರಿಂದ ಸಮಾಧಾನಗೊಳ್ಳದಉದ್ರಿಕ್ತ ಸದಸ್ಯರು ಘೋಷಣೆಗಳನ್ನು ಕೂಗಿದಾಗ ಸ್ಪೀಕರ್ 10 ನಿಮಿಷಗಳವರೆಗೆ ಸದನವನ್ನು ಮುಂದೂಡಿದರು. ಸದನವು ಮತ್ತೆ ಸೇರಿದಾಗಲೂ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿ, ಸರಕಾರದಿಂದ ಸ್ಪಷ್ಟವಾದ ಉತ್ತರವನ್ನು ಕೋರಿದರು.‘‘ನೀವು ಜನರ ಹಕ್ಕುಗಳನ್ನು ಉಲ್ಲಂಘಿಸುತ್ತಿರುವಿರಿ? ಸರಕಾರವು ಅಲ್ಪಸಂಖ್ಯಾತರ ಆಯೋಗವನ್ನು ಮುಚ್ಚಲು ಬಯಸಿದೆಯೇ?’’ ಎಂದು ಬಿಎಸ್ಪಿಯ ಮಾಯಾವತಿ ಪ್ರಶ್ನಿಸಿದರು. ಅಲ್ಪಸಂಖ್ಯಾತರು ಸರಕಾರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಾರ್ಯಕ್ರಮದ ಭಾಗವಾಗಿದ್ದಾರೆಯೇ ಎಂದು ದಿಗ್ವಿಜಯ್‌ಸಿಂಗ್ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರು ಮತ್ತೆ ಸದನದ ಅಂಗಣಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಿದಾಗ ಸ್ಪೀಕರ್ ಮತ್ತೆ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News