ಈಶಾನ್ಯ ಭಾರತದ ಗೋವುಗಳಲ್ಲಿ 33 ಕೋಟಿ ದೇವತೆಗಳಿಲ್ಲವೇ?

Update: 2017-03-27 19:03 GMT

ಒಂದೆಡೆ ಉತ್ತರ ಪ್ರದೇಶದಲ್ಲಿ ಕಸಾಯಿಖಾನೆಗಳನ್ನು ಮುಚ್ಚಿಸುವ ಕೆಲಸಗಳು ಭರದಿಂದ ಸಾಗುತ್ತಿರುವಾಗಲೇ, ಇತ್ತ ಈಶಾನ್ಯ ರಾಜ್ಯಗಳಲ್ಲಿ ‘‘ಗೋಮಾಂಸ ನಿಷೇಧದ ಪ್ರಶ್ನೆಯೇ ಇಲ್ಲ’’ ಎಂದು ಬಿಜೆಪಿ ಘೋಷಿಸಿದೆ. ಈಶಾನ್ಯ ಭಾರತದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಬಿಜೆಪಿ ಈ ಹೇಳಿಕೆಯನ್ನು ನೀಡಿದೆ. ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗೋಮಾಂಸವನ್ನು ನಿಷೇಧಿಸುತ್ತದೆ ಎಂಬ ವದಂತಿ ಹರಡಿರುವುದರಿಂದ ಖುದ್ದಾಗಿ ಬಿಜೆಪಿಯ ಮುಖಂಡರೇ ಈ ಸ್ಪಷ್ಟನೆಯನ್ನು ನೀಡಿದ್ದಾರೆ.

ಇದು ಅನಿರೀಕ್ಷಿತವೇನೂ ಅಲ್ಲ. ಈಗಾಗಲೇ ಮಣಿಪುರವನ್ನು ತನ್ನದಾಗಿಸಿಕೊಂಡಿರುವ ಬಿಜೆಪಿ, ಈಶಾನ್ಯದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈಶಾನ್ಯದಲ್ಲಿ ಗೋಮಾಂಸ ರಾಜಕೀಯ ಅದಕ್ಕೆ ತಿರುಗು ಬಾಣವಾಗುವ ಸಾಧ್ಯತೆ ಇದೆ. ಆದುದರಿಂದ, ಈಶಾನ್ಯ ಭಾರತದ ಗೋವುಗಳಲ್ಲಿ 33 ಕೋಟಿ ದೇವರುಗಳು ಇಲ್ಲ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಂತಿದೆ. ನಾಗಾಲ್ಯಾಂಡ್, ಮಿರೆರಾಂ, ಮೇಘಾಲಯ ಭಾಗಗಳಲ್ಲಿ ಗೋಮಾಂಸ ಪ್ರಧಾನ ಆಹಾರವಾಗಿರುವುದರಿಂದಲೇ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ.

ಇವು ಕ್ರೈಸ್ತರು ಪ್ರಾಬಲ್ಯವನ್ನು ಹೊಂದಿರುವ ರಾಜ್ಯವಾಗಿವೆ. ಗೋಮಾಂಸವನ್ನೇನಾದರೂ ನಿಷೇಧಿಸಲು ಮುಂದಾದರೆ ಬಿಜೆಪಿ ಇಲ್ಲಿ ದೈನೇಸಿ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ ಎಂದು ಹೆದರಿಯೇ ತಮ್ಮ ಅಜೆಂಡಾದಿಂದ ಗೋಹತ್ಯೆ ನಿಷೇಧವನ್ನು ಕೈ ಬಿಟ್ಟಿದೆ. ಬದಲಿಗೆ ಪ್ರೋತ್ಸಾಹಕ ಸಂದೇಶವನ್ನು ತಮ್ಮ ಸ್ಪಷ್ಟನೆಯಲ್ಲಿ ತಿಳಿಸಿದೆ. ಈ ಹಿಂದೆ ಅರುಣಾಚಲದಲ್ಲಿ ಗೋಮಾಂಸ ನಿಷೇಧ ಮಾಡಲು ಮುಂದಾಗಿ ಬಿಜೆಪಿ ಮುಜುಗರವನ್ನು ಅನುಭವಿಸಿತ್ತು. ಅರುಣಾಚಲದ ಆರೆಸ್ಸೆಸ್ ಕಾರ್ಯಕರ್ತರೇ ಯಾವ ಮುಜುಗರವೂ ಇಲ್ಲದೆ ಗೋಮಾಂಸ ಸೇವಿಸುವುದರಿಂದ ಬಿಜೆಪಿಯ ಸಂಚು ವಿಫಲವಾಯಿತು. ಸ್ವತಃ ಬಿಜೆಪಿಯ ಸಚಿವರೇ ಗೋಮಾಂಸದ ಪರವಾಗಿ ಮಾತನಾಡಿದರು.

ಇತ್ತೀಚೆಗೆ ಕೇರಳದಲ್ಲೂ ಗೋಮಾಂಸದ ವಿಷಯದಲ್ಲಿ ಬಿಜೆಪಿ ಗೊಂದಲದ ನಿಲುವನ್ನು ತಳೆಯಿತು. ಯಾಕೆಂದರೆ ಕೇರಳದಲ್ಲಿ ಹಿಂದೂಗಳ ಸಹಿತ ಬಹುದೊಡ್ಡ ಜನವರ್ಗ ಗೋಮಾಂಸ ಆಹಾರವನ್ನು ಬದುಕಿನ ಅನಿವಾರ್ಯ ಅಂಗವೆಂದು ತಿಳಿದುಕೊಂಡಿದೆ. ಆದುದರಿಂದಲೇ, ಗೋ ಹತ್ಯೆಯಂತಹ ವಿಷಯಕ್ಕೆ ಕೇರಳದಲ್ಲಿ ಬಿಜೆಪಿ ಮಹತ್ವವನ್ನು ನೀಡಲಿಲ್ಲ. ಕೇರಳದಲ್ಲೇನಾದರೂ ಗೋಮಾಂಸದ ತಂಟೆಗೆ ಇಳಿದರೆ, ಅಳಿದುಳಿದ ಬಿಜೆಪಿಯೂ ಕಸಾಯಿಖಾನೆ ಸೇರಬೇಕಾದಂತಹ ಸ್ಥಿತಿ ನಿರ್ಮಾಣವಾದೀತು. ಗೋವಾದಲ್ಲೂ ಗೋಮಾಂಸದ ಕುರಿತಂತೆ ಅಲ್ಲಿನ ಸರಕಾರ ಇದೇ ನಿಲುವಿಗೆ ಬದ್ಧವಾಗಿದೆ.

ಇದೀಗ ಬಿಜೆಪಿ ಒಂದು ಪ್ರಶ್ನೆಗೆ ಉತ್ತರಿಸಲೇ ಬೇಕಾಗುತ್ತದೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಈಶಾನ್ಯ ಭಾರತ, ಕೇರಳ, ಗೋವಾದಲ್ಲಿ ಗೋಮಾಂಸಕ್ಕೆ ಬಿಜೆಪಿ ಬೆಂಬಲ ನೀಡುತ್ತದೆಯಾದರೆ, ಗೋಮಾತೆಯ ಹೆಸರಿನಲ್ಲಿ ಬಿಜೆಪಿ ಮಂಡಿಸುತ್ತಿರುವ ನಿಲುವು ಅಪ್ರಾಮಾಣಿಕವಾದುದು ಎಂದಾಗಲಿಲ್ಲವೇ? ಗೋವಿನ ಕುರಿತಂತೆ ಬಿಜೆಪಿ ಕಾಳಜಿ ಹೊಂದಿದೆಯಾದರೆ, ಆ ಕಾಳಜಿ ದೇಶದ ಎಲ್ಲ ಪ್ರದೇಶಗಳಿಗೂ ಒಂದೇ ಆಗಿರಬೇಕು. ಉತ್ತರ ಪ್ರದೇಶದ ಗೋವುಗಳಲ್ಲಿ ಮುಕ್ಕೋಟಿ ದೇವತೆಗಳಿರುವುದು ನಿಜವೇ ಆದರೆ, ಕೇರಳ ಮತ್ತು ಈಶಾನ್ಯ ಭಾರತದ ಗೋವುಗಳಲ್ಲೂ ಮುಕ್ಕೋಟಿ ದೇವತೆಗಳು ಇರುತ್ತಾರೆ. ಆದರೆ ಆ ಮೂವತ್ತಮೂರು ಕೋಟಿ ದೇವತೆಗಳು ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಅವನ್ನು ಹತ್ಯೆ ಮಾಡಲು ಸಮ್ಮತಿಸುವುದು ಗೋವಿನ ಕುರಿತಂತೆ ಬಿಜೆಪಿಯ ಆಷಾಢಭೂತಿತನವಾಗುತ್ತದೆ. ಅಂದರೆ, ರಾಜಕೀಯ ಉದ್ದೇಶದಿಂದ ಈ ವಿಷಯವನ್ನು ಭಾವನಾತ್ಮಕ ಗೊಳಿಸಿದೆ ಎನ್ನುವುದನ್ನು ಬಿಜೆಪಿಯೇ ಸ್ಪಷ್ಟಪಡಿಸಿದಂತಾಗಿದೆ.

ಈಶಾನ್ಯ ಭಾರತದಲ್ಲಿ ಬಿಜೆಪಿಯ ಈ ನಿಲುವಿನಿಂದ ಒಂದಂತೂ ಸಾಬೀತಾಗಿದೆ. ಗೋಮಾಂಸದ ಪರವಾಗಿ ಬಹುಸಂಖ್ಯಾತರ ನಿಲುವು ಸ್ಪಷ್ಟವಾಗಿದ್ದರೆ ಅದರ ತಂಟೆಗೆ ಹೋಗುವ ಧೈರ್ಯವನ್ನು ನಾಯಕರು ಮಾಡುವುದಿಲ್ಲ. ಹಾಗೆ ನೋಡಿದರೆ ಉತ್ತರ ಪ್ರದೇಶದಲ್ಲಿ ಬಹುಸಂಖ್ಯಾತ ಜನರು ಗೋಮಾಂಸಾಹಾರಿಗಳು. ಬರೇ ಅಲ್ಲೆಂದಲ್ಲ, ಇಡೀ ದೇಶದಲ್ಲೇ ಬಹುಸಂಖ್ಯೆಯ ಜನರು ಗೋಮಾಂಸವನ್ನು ಸೇವಿಸುತ್ತಾರೆ. ಬಡವರಿಗೆ ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಪೌಷ್ಟಿಕ ಆಹಾರ ಗೋಮಾಂಸವಾಗಿದೆ. ಹೀಗಿದ್ದರೂ, ಉತ್ತರ ಪ್ರದೇಶದಲ್ಲಿ ಮಾಂಸಾಹಾರದ ವಿರುದ್ಧ ತನ್ನ ಅಜೆಂಡಾವನ್ನು ಸಾಧಿಸುವಲ್ಲಿ ಸಂಘಪರಿವಾರ ಹೇಗೆ ಯಶಸ್ವಿಯಾಯಿತು? ಉತ್ತರ ಸ್ಪಷ್ಟವಿದೆ. ಮಾಂಸಾಹಾರಿಗಳನ್ನು ಮೊದಲು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸಿ ಬಳಿಕ ತನ್ನ ಕಾರ್ಯ ಸಾಧಿಸಿಕೊಂಡಿತು.

ದೇಶಾದ್ಯಂತ ಇದೇ ತಂತ್ರವನ್ನು ಬಳಸಿಕೊಂಡು ಗೋವನ್ನು ದ್ವೇಷ ರಾಜಕಾರಣಕ್ಕೆ ಬಳಸಿಕೊಂಡಿತು ಬಿಜೆಪಿ. ಇತ್ತೀಚೆಗೆ ಹಲವು ಮಾಂಸದ ಅಂಗಡಿಗಳಿಗೆ ಉತ್ತರ ಪ್ರದೇಶದಲ್ಲಿ ಸಂಘಪರಿವಾರ ನಾಯಕರು ಬೆಂಕಿ ಹಚ್ಚಿದರು. ಆದರೆ ಆ ಕೃತ್ಯ ಎಸಗಲು ಬಳಸಿಕೊಂಡ ಶೂದ್ರವರ್ಗ ಗೋಮಾಂಸಾಹಾರಿಗಳೇ ಆಗಿದ್ದಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಮಾಂಸಾಹಾರಿಗಳು ಒಂದಾಗಿ ನಿಂತು ಪ್ರತಿಭಟಿಸದೇ ಇರುವ ಒಂದೇ ಕಾರಣದಿಂದ, ಅಲ್ಲಿನ ಮಾಂಸಾಹಾರವನ್ನು ಅವಲಂಬಿಸಿದ ಲಕ್ಷಾಂತರ ಕಾರ್ಮಿಕರು, ಶ್ರೀಸಾಮಾನ್ಯರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವಂತಾಗಿದೆ. ಎಲ್ಲರೂ ಒಂದಾಗಿ ತಮ್ಮ ಆಹಾರದ ಹಕ್ಕಿಗಾಗಿ ಬೀದಿಗಿಳಿದರೆ ಯೋಗಿಯಂತಹ ನೂರಾರು ಯೋಗಿಗಳು ಬಂದರೂ ಮಾಂಸಾಹಾರವನ್ನಾಗಲಿ, ಗೋಮಾಂಸಾಹಾರವನ್ನಾಗಲಿ ನಿಷೇಧಿಸಲು ಬಿಜೆಪಿಗೆ ಸಾಧ್ಯವಿಲ್ಲ. ಆದುದರಿಂದ ಇಂದು ಮಾಂಸಾಹಾರ ಬಿಕ್ಕಟ್ಟಿಗೆ ಸಿಕ್ಕಿರುವುದು ಸಂಘಪರಿವಾರದ ಕಾರಣದಿಂದಲ್ಲ, ಬದಲಿಗೆ ಮಾಂಸಾಹಾರಿಗಳ ದೌರ್ಬಲ್ಯಗಳ ಕಾರಣದಿಂದ.

ಉತ್ತರ ಪ್ರದೇಶದಲ್ಲಿ ಮಾಂಸಾಹಾರವೇ ಅಲ್ಲಿನ ಜನರನ್ನು ಮತ್ತೆ ಒಂದಾಗಿಸಲಿದೆ. ಆದಿತ್ಯನಾಥ್ ಯಾವ ಮಾಂಸಾಹಾರವನ್ನು ಕೀಳಾಗಿಸಿ ಮಾತನಾಡಿದ್ದಾರೆಯೋ, ಅದೇ ಮಾಂಸಾಹಾರವನ್ನು ಮೇಲಿಟ್ಟು ಮತಯಾಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಅದಕ್ಕಾಗಿ ಬಹುಜನರು ಎಲ್ಲ ಪಕ್ಷ, ಜಾತಿ, ಧರ್ಮ ಭೇದಗಳನ್ನು ಮರೆತು ಒಂದಾಗಿ ನಿಲ್ಲಬೇಕು. ಈ ದೇಶದಲ್ಲಿ ನಾಶದ ಅಂಚಿನಲ್ಲಿರುವ ಹೈನೋದ್ಯಮ ಉಳಿಯಬೇಕಾದರೆ ಗೋಮಾಂಸ ಸೇವಿಸದ ರೈತರೂ ಈ ಹೋರಾಟಕ್ಕೆ ಜೊತೆಯಾಗಬೇಕು. ತಾವು ಸಾಕಿದ ಗೋವು ತಮ್ಮ ಆಸ್ತಿ. ಅದನ್ನು ಮಾರಬೇಕೋ, ಬೇಡವೋ, ಯಾರಿಗೆ ಮಾರಬೇಕು, ಯಾರಿಗೆ ಮಾರಬಾರದು ಎನ್ನುವುದನ್ನು ತೀರ್ಮಾನಿಸುವವರೂ ಗೋಸಾಕಣೆದಾರರೇ ಹೊರತು ನಕಲಿ ಗೋರಕ್ಷಕರಲ್ಲ. ಆದುದರಿಂದ ದೇಶಾದ್ಯಂತ ನಿಜವಾದ ಗೋರಕ್ಷಕರು ಮತ್ತು ಗೋಮಾಂಸ ಬಳಕೆದಾರರು ಒಂದಾಗುವ ಮೂಲಕ ಸಂಘಪರಿವಾರದ ವೈದಿಕ ಅಜೆಂಡಾವನ್ನು ವಿಫಲಗೊಳಿಸಬೇಕಾಗಿದೆ. ಬಹುಸಂಖ್ಯಾತರ ಆಹಾರ ಎನ್ನುವ ಕಾರಣಕ್ಕಾಗಿ ಈಶಾನ್ಯ ಭಾರತದಲ್ಲಿ ಗೋಮಾಂಸ ಬಳಕೆ ಮಾಡಬಹುದು ಎಂದಾದರೆ ಅದು ಉತ್ತರ ಪ್ರದೇಶ ಮಾತ್ರವಲ್ಲ, ಇಡೀ ಭಾರತಕ್ಕೆ ಅನ್ವಯವಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News