ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ದಿಷ್ಟ ಸಮುದಾಯದ ಪ್ರಯಾಣಿಕರಿಗೆ ಕಿರುಕುಳದ ಆರೋಪ

Update: 2017-04-04 15:56 GMT

ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಇರುವ ಆರೋಪಗಳೇನು ? 
ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ 
ಫೇಸ್‌ಬುಕ್‌ನಲ್ಲಿ 'ಹೊಸ ಖಾತೆ' ಗೆ ಚಾಲನೆ
►ಏನು ಹೇಳುತ್ತಾರೆ ವಿಮಾನ ನಿಲ್ದಾಣದ ನಿರ್ದೇಶಕರು ?
 

                                                            

ಮಂಗಳೂರು,ಎ.4: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ವಿಚಾರಣೆ ಹಾಗೂ ಪರಿಶೀಲನೆಯ ನೆಪದಲ್ಲಿ ನಿರ್ದಿಷ್ಟ ಸಮುದಾಯದ ವ್ಯಕ್ತಿಗಳಿಗೆ ಕಳೆದ ಐದಾರು ತಿಂಗಳಿನಿಂದ ಕಿರುಕುಳ ನೀಡುತ್ತಿದೆ ಎಂಬ ಆರೋಪವು ವಿಮಾನ ಯಾನಿಗಳು ಮತ್ತವರ ಕುಟುಂಬಸ್ಥರು ಹಾಗು ಸಂಘಟನೆಗಳಿಂದ ಕೇಳಿ ಬಂದಿದೆ.

ಗಡ್ಡ ಬಿಟ್ಟ, ಟೋಪಿ ಧರಿಸಿದ, ಬುರ್ಖಾ ತೊಟ್ಟ ವಿಮಾನ ಯಾನಿಗಳ ಪಾಸ್‌ಪೋರ್ಟ್ ಮತ್ತಿತ್ಯಾದಿ ದಾಖಲೆಗಳ ಪರಿಶೀಲನೆಯ ನೆಪದಲ್ಲಿ ವೀಸಾ-ಪಾಸ್‌ಪೋರ್ಟ್‌ನ ಪುಟಗಳನ್ನು ಹರಿಯುವುದು, ಪೆನ್ನಿನಿಂದ ಗೆರೆ ಎಳೆಯುವುದು, ಯಾವ ಉದ್ದೇಶಕ್ಕಾಗಿ ವಿದೇಶಕ್ಕೆ ತೆರಳುವುದು ಎಂದು ಕ್ಷುಲ್ಲಕವಾಗಿ ಪ್ರಶ್ನಿಸುವುದು ಇತ್ಯಾದಿಯಾಗಿ ಮಾನಸಿಕವಾಗಿ ಹಿಂಸಿಸಿ ವಿದೇಶಕ್ಕೆ ಪ್ರಯಾಣಿಸದಂತೆ ತಡೆ ಹಿಡಿಯುತ್ತಿದ್ದಾರೆ ಎಂಬ ಆರೋಪವಿದೆ.

ವಿಮಾನ ನಿಲ್ದಾಣದ ಕೆಲವು ಸಿಬ್ಬಂದಿ ಮತ್ತು ಅಧಿಕಾರಿಗಳು ಅದರಲ್ಲೂ ಇಮಿಗ್ರೇಶನ್‌ನ ಅಧಿಕಾರಿಗಳಿಂದ ವಿದೇಶಕ್ಕೆ ತೆರಳುವ ಮುಸ್ಲಿಮ್ ಪ್ರಯಾಣಿಕರಿಗೆ ನಿರಂತರ ಕಿರುಕುಳ ನಡೆಯುತ್ತಲೇ ಇದೆ. ಈ ಬಗ್ಗೆ ಕೆಲವರು ತಮಗಾದ ಅನುಭವವನ್ನು ಹಂಚಿಕೊಂಡರೆ, ಇನ್ನು ಕೆಲವರು ಭವಿಷ್ಯದಲ್ಲಿ ತೊಂದರೆಯಾಗಬಹುದು ಎಂಬ ಕಾರಣಕ್ಕೆ ನೋವನ್ನು ಬಹಿರಂಗಪಡಿಸದೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲಾ ಎಸ್‌ಡಿಪಿಐ ಪಕ್ಷದ ಮುಖಂಡರು ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿಮಾನ ನಿಲ್ದಾಣದಲ್ಲಿ ನಡೆದ ಕಿರುಕುಳಕ್ಕೆ ಸಂಬಂಧಿಸಿದ ಆರೋಪಗಳು: 

 2015ರ ಜುಲೈಯಲ್ಲಿ ಹಸನ್ ಎಂಬವರು ದುಬೈಗೆ ತೆರಳುವವರಿದ್ದರು. ಪಾಸ್‌ಪೋರ್ಟ್ ನಿಂದ ವೀಸಾ ಇರುವ ಪುಟವು ಹರಿದು ಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಹಸನ್ ತನ್ನ ಮನೆಯಿಂದ ಹೊರಟು ವಿಮಾನ ನಿಲ್ದಾಣಕ್ಕೆ ತಲುಪಿದ ನಂತರವೂ ಪಾಸ್‌ಪೋರ್ಟ್‌ನಲ್ಲಿ ವೀಸಾದ ಪುಟ ಇತ್ತು. ಆದರೆ, ಅಧಿಕಾರಿಗಳಿಗೆ ನೀಡಿದ ಬಳಿಕ ಆ ಪುಟ ಕಾಣೆಯಾಗಿತ್ತು.

--------------------------------------------------------------------------------------------------------------------

 20016ರ ನವೆಂಬರ್ 16ರಂದು ಮಂಗಳೂರು ಅಸುಪಾಸಿನ ಕುಟುಂಬವೊಂದಕ್ಕೆ ಪಾಸ್‌ಪೋರ್ಟ್ ವಿಷಯದಲ್ಲಿ ವಿನಾಃ ಕಾರಣ ಎಮಿಗ್ರೇಶನ್ ಅಧಿಕಾರಿಗಳು ಸೆಕ್ಯುರಿಟಿ ಮತ್ತು ಬೋರ್ಡಿಂಗ್ ಪಾಸ್ ಆಗಿ, ಎಮಿಗ್ರೇಶನ್ ತಲುಪುವಾಗ ನಿಮ್ಮ ಪಾಸ್‌ಪೋರ್ಟ್ ಹರಿದಿದೆ ಎಂದು ಕಿರುಕುಳ ನೀಡಿ ವಾಪಸ್ ಕಳುಹಿಸಿದರು.

-------------------------------------------------------------------------------------------------------------------

2017ರ ಮಾ.26ರಂದು ದುಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ತಲುಪಿದ 8 ಮಂದಿಯನ್ನು ಒಳಗೊಂಡ ಕುಟುಂಬವು ಎಮಿಗ್ರೇಶನ್ ಅಧಿಕಾರಿಗಳಿಂದ ಕ್ರೂರವಾದ ಕಿರುಕಳವನ್ನು ಎದುರಿಸಬೇಕಾಗಿ ಬಂತು. ಈ ಕುಟುಂಬದ ಸದಸ್ಯರು ಪಾಸ್‌ಪೋರ್ಟ್‌ಗಳನ್ನು ನೀಡಿದ್ದರೂ ಅಧಿಕಾರಿಗಳು 1 ಮಗುವಿಗೆ ಹೋಗಲು ಸಾಧ್ಯವಿಲ್ಲ. ದಾಖಲೆಗಳು ಸರಿ ಇಲ್ಲ. ಮಗುವನ್ನು ಬಿಟ್ಟು ಉಳಿದವರು ಹೋಗಿ ಎಂದು ಅಧಿಕಾರಿಗಳು ಗದರಿಸಿದ್ದರು.

ಈ ಬಗ್ಗೆ ಕುಟುಂಬವು ಪಟ್ಟು ಹಿಡಿದಾಗ ಮಗುವನ್ನು ಕರೆದುಕೊಂಡು ಹೋಗಲು ಅನುಮತಿಸಿದರು. ಅಲ್ಲದೆ, ಪಾಸ್‌ಪೋರ್ಟ್‌ಗಳನ್ನು ಹಿಂದಿರುಗಿಸುವಾಗ ಕೇವಲ ಏಳು ಪಾಸ್‌ಪೋರ್ಟ್‌ಗಳು ನೀಡಿದರು. ಅಂದರೆ ಈ ತಂಡದಲ್ಲಿದ್ದ ಮಗುವಿನ ಪಾಸ್‌ಪೋರ್ಟ್ ತಡೆ ಹಿಡಿದರು. ಕುಟುಂಬಸ್ಥರು 8 ಪಾಸ್‌ಪೋರ್ಟ್ ನೀಡಿದ್ದೇವೆ ಎಂದದ್ದಕ್ಕೆ ಇಲ್ಲ ನೀವು 7 ಪಾಸ್‌ಪೋರ್ಟ್ ಮಾತ್ರ ನೀಡಿರುತ್ತೀರಿ ಎಂದು ಮತ್ತೆಯೂ ಕಿರುಕುಳ ನೀಡಿದರು. ನಂತರ ಅಲ್ಲಿರುವ ಇತರ ಪ್ರಯಾಣಿಕರು ಅಧಿಕಾರಿಗಳಿಂದ ಪಾಸ್‌ಪೋರ್ಟನ್ನು ಹಿಂಪಡೆಯಲು ಸಹಾಯ ಮಾಡಿದರು.

----------------------------------------------------------------------------------------------------------------

ಮಂಗಳೂರಿನ ವ್ಯಕ್ತಿಯೊಬ್ಬರು ಕೆಲವು ತಿಂಗಳ ಹಿಂದೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಮಂಗಳೂರು ವಿಮಾನ ನಿಲ್ದಾಣದಿಂದ ದಮಾಮ್‌ಗೆ ಯಾತ್ರೆ ಹೊರಟಿದ್ದರು. ಅವರೊಂದಿಗೆ ಸೌದಿ ಅರೇಬಿಯಾಗೆ ಮೊದಲ ಬಾರಿಗೆ ಉದ್ಯೋಗಕ್ಕಾಗಿ ಹೊರಟ ಒಬ್ಬ ಯುವಕನೂ ಇದ್ದನು. ವಿಮಾನ ನಿಲ್ದಾಣಕ್ಕೆ ತಲುಪಿದ ಈ 4 ಮಂದಿಯೂ ಬೋರ್ಡಿಂಗ್ ಪಾಸ್ ಆಗಿ ಸೌದಿ ಅರೇಬಿಯಾಗೆ ಹೊರಡುವಷ್ಟರಲ್ಲಿ ಇವರೊಂದಿಗೆ ಇದ್ದ ಯುವಕ 10 ನಿಮಿಷವಾಗಿಯೂ ಹೊರಗೆ ಬರಲಿಲ್ಲ.

ನಂತರ ವ್ಯಕ್ತಿ ಎಮಿಗ್ರೇಶನ್ ಕೌಂಟರ್ ಬಳಿ ತೆರಳಿ ಎಮಿಗ್ರೇಶನ್ ಅಧಿಕಾರಿಯ ಬಳಿ ಮಾತನಾಡಿದರು. ಈ ಸಂದರ್ಭ ಆ ಅಧಿಕಾರಿ ಱಹೊಸ ಹುಡುಗ ಡ್ರೈವರ್ ಉದ್ಯೋಗ ಎಂದು ನಮೂದಿಸಿದ್ದಾನೆ. ಅವನಲ್ಲಿ ಭಾರತದ ಲೈಸೆನ್ಸ್ ಇಲ್ಲ. ಇಲ್ಲಿನ ಲೈಸೆನ್ಸ್ ಇಲ್ಲದೆ ಸೌದಿಯಲ್ಲಿ ಹೇಗೆ ಕೆಲಸ ಮಾಡುತ್ತಾನೆ ಎಂದು ಪ್ರಸ್ನಿಸಿದರು. ಅದಕ್ಕೆ ವ್ಯಕ್ತಿ ಭಾರತದ ಲೈಸನ್ಸ್ ಬಳಸಿ ಸೌದಿಯಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಅಲ್ಲಿ ಬೇರೆಯೇ ಲೈಸೆನ್ಸ್ ಮಾಡಬೇಕು. ದಯವಿಟ್ಟು ಆತನನ್ನು ಕಳುಹಿಸಿ ಕೊಡಿ ಎಂದರು.

ಅದಕ್ಕೆ ಆ ಅಧಿಕಾರಿ ಱನೀನು ಹೊರಗೆ ನಡಿ. ಇಲ್ಲವಾದರೆ ನಿನ್ನ ಪಾಸ್‌ಪೋರ್ಟ್ ಕೊಡು. ನಿನ್ನ ವಿರುದ್ಧ ಕೇಸ್ ಹಾಕ್ತೇನೆ ಹುಷಾರ್ ಎಂದರು. ಈ ಸಂದರ್ಭ ಅಧಿಕಾರಿ 10 ಸಾವಿರ ರೂ. ಕೊಡಬೇಕು ಎಂದು ಕೇಳಿಕೊಂಡಾಗ ವ್ಯಕ್ತಿ 1,000 ರೂ. ಕೊಟ್ಟ ಬಳಿಕ ಬಿಟ್ಟರು.

-------------------------------------------------------------------------------------------------------------

 ಜೋಕಟ್ಟೆಯ ನಿವಾಸಿಯೊಬ್ಬರು ಇಬ್ಬರು ಮಕ್ಕಳ ಜೊತೆ 2017ರ ಮಾ.27ರಂದು ಸಂಜೆ 6:20ಕ್ಕೆ ದಮಾಮ್‌ಗೆ ಹೊರಡುವ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಲು ಸಂಜೆ 4 ಗಂಟೆಗೆ ವಿಮಾನ ನಿಲ್ದಾಣಕ್ಕೆ ತೆರಳಿ ಎಮಿಗ್ರೇಶನ್ ಅಧಿಕಾರಿಯೊಬ್ಬರಿಗೆ ತನ್ನ ಪಾಸ್‌ಪೋರ್ಟ್ ಮತ್ತು ವೀಸಾದ ಪ್ರತಿಯನ್ನು ನೀಡಿದರು. ಇನ್ನೇನು ಬೋರ್ಡಿಂಗ್ ಪಾಸ್ ನೀಡುತ್ತಾರೆ ಎನ್ನುವಷ್ಟರಲ್ಲಿ ಮಹಿಳಾ ಅಧಿಕಾರಿಯೊಬ್ಬರು ನಿಮ್ಮ ವೀಸಾದ ಅವಧಿ ಇವತ್ತು ರಾತ್ರಿ ಕೊನೆಗೊಳ್ಳುತ್ತದೆ. ನಿಮಗೆ ಪ್ರಯಾಣಿಸಬೇಕಾದರೆ ಉನ್ನತ ಅಧಿಕಾರಿಗಳ ಜೊತೆ ಮಾತನಾಡಬೇಕು ಎಂದರು.

ಅದಕ್ಕೆ ಜೋಕಟ್ಟೆ ನಿವಾಸಿ ನಾನು ಸೌದಿ ಕಾಲಮಾನ ರಾತ್ರಿ 8 ಗಂಟೆಗೆ ಸೌದಿ ತಲುಪುತ್ತೇನೆ. ಆದ್ದರಿಂದ ವೀಸಾದ ಕುರಿತು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು. ಱಅಲ್ಲಾ ಸಾರ್ ಒಂದು ವೇಳೆ ವಿಮಾನ ತಡವಾದರೆ ಸಮಸ್ಯೆಯಾಗುತ್ತೆ ಅದಕ್ಕಾಗಿ ಹೇಳಿದೆೞ ಎಂದು ಆ ಅಧಿಕಾರಿ ಸಮಜಾಯಿಸಿ ನೀಡಿದರು.

'ಒಂದು ವೇಳೆ ವಿಮಾನ ತಡವಾದರೆ ಸೌದಿ ವಿಮಾನ ನಿಲ್ದಾಣದಿಂದ ನನ್ನನ್ನು ಭಾರತಕ್ಕೆ ಕಳುಹಿಸುತ್ತಾರೆ. ಈ ವಿಷಯದಲ್ಲಿ ನಾನು ಮತ್ತು ಸೌದಿ ಎಮಿಗ್ರೇಶನ್ ಅಧಿಕಾರಿಗಳು ತಲೆಕೆಡಿಸಬೇಕೇ ಹೊರತು ನೀವಲ್ಲ' ಎಂದು ಜೋಕಟ್ಟೆಯ ನಿವಾಸಿ ಉತ್ತರಿಸಿದರು. ಅದಕ್ಕೆ ಆ ಅಧಿಕಾರಿ, ಇಲ್ಲ. ಸಾರ್... ನಿಮಗೆ ತೊಂದರೆ ಆಗುತ್ತೆ. ನೀವು ಉನ್ನತ ಅಧಿಕಾರಿ ಜೊತೆ ಮಾತನಾಡಿ ಎಂದರು.

ನಾನು ಯಾಕೆ ಮಾತನಾಡಬೇಕು? ಬೇಕಾದರೆ ಅವರನ್ನೇ ಇಲ್ಲಿಗೆ ಕರೆಸಿ, ನಿಮಗೆ ಪ್ರಯಾಣಿಕರನ್ನು ಆ ಕಡೆ ಈ ಕಡೆ ಅಲೆದಾಡಿಸಿ ಗೌಪ್ಯವಾಗಿ ಪಾಸ್‌ಪೋರ್ಟ್ ಹರಿದು ಹಾಕುವ, ತಮಗೆ ಕೊಟ್ಟ ಪಾಸ್‌ಪೋರ್ಟ್ ನೀಡಿಯೇ ಇಲ್ಲ ಎಂದು ಸುಳ್ಳು ಹೇಳುವ ನಿಮ್ಮ ಬುದ್ಧಿಯನ್ನು ನನ್ನಲ್ಲಿ ತೋರಿಸಬೇಡಿ ಎಂದು ಜೋಕಟ್ಟೆ ನಿವಾಸಿ ಖಾರವಾಗಿ ಪ್ರತಿಕ್ರಿಯಿಸಿದರು.

ಕೊನೆಗೆ ಮಹಿಳಾ ಅಧಿಕಾರಿಯೊಬ್ಬರು ಕ್ಷಮಿಸಿ ಸಾರ್, ನೀವು ಉನ್ನತ ಅಧಿಕಾರಿ ಜೊತೆ ಮಾತನಾಡುವುದು ಬೇಡ, ನಾವು ಯಾರ ಪಾಸ್‌ಪೋರ್ಟ್ ಕೂಡ ತೆಗೆದಿಟ್ಟಿಲ್ಲ. ನನಗೆ ಆ ವಿಚಾರ ಗೊತ್ತಿಲ್ಲ. ಆ ರೀತಿ ಯಾರು ಮಾಡಿದ್ದಾರೋ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ನಿಮ್ಮ ಪ್ರಯಾಣ ಮುಂದುವರಿಸಿ ಎನ್ನುತ್ತಾ ಬೋರ್ಡಿಂಗ್ ಪಾಸ್ ನೀಡಿದರು.

--------------------------------------------------------------------------------------------------------------------------

2017ರ ಮಾರ್ಚ್ 10ರಂದು ಸಂಜೆ 5:30ಕ್ಕೆ ತನ್ನ ಪತ್ನಿ ಆಯಿಶಾ ಮೂವರು ಮಕ್ಕಳ ಜೊತೆ ಕತಾರ್‌ಗೆ ತೆರಳಲು ಮೂವರು ಮಕ್ಕಳ ಜೊತೆ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಪರಿಶೀಲನೆಗಾಗಿ ಪಾಸ್‌ಪೋರ್ಟ್ ಪಡೆದು ಅರ್ಧ ಗಂಟೆಯಾದರೂ ಅದನ್ನು ಮರಳಿಸಲಿಲ್ಲ. ವಿಚಾರಿಸಿದಾಗ ಪಾಸ್‌ಪೋರ್ಟ್ ಹಾನಿಯಾಗಿದೆ. ಇದರಲ್ಲಿ ಹೋಗಲು ಅಸಾಧ್ಯ ಎಂದರು. ಅಲ್ಲದೆ ಪಾಸ್‌ಪೋರ್ಟ್ ಹರಿದು ಹಿಂದಿರುಗಿಸಿದರು.

ವೀಸಾದ ಅವಧಿ ಈವತ್ತಿಗೆ ಕೊನೆಯಾಗುತ್ತದೆ. ನಾವು ಹೋಗಲೇಬೇಕು ಎಂದರೂ ಅವಕಾಶ ನೀಡಲಿಲ್ಲ. ಮಾ.12ರಂದು ರಾತ್ರಿ 11:30ಕ್ಕೆ ಅದೇ ಪಾಸ್‌ಪೋರ್ಟ್ ಮೂಲಕ ಕಲ್ಲಿಕೋಟೆ ನಿಲ್ದಾಣದ ಮೂಲಕ ಕತರ್‌ಗೆ ಆಗಮಿಸಿದರು. ಇದು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವಾಗಿದೆ. ಇದರಿಂದ ನನ್ನ ಕುಟುಂಬದ ನಾಲ್ಕು ಟಿಕೆಟ್ ದುರ್ವ್ಯಯವಾಯಿತಲ್ಲದೆ ಸುಮಾರು 1.50 ಲಕ್ಷ ರೂ. ನಷ್ಟವಾಯಿತು. ಭವಿಷ್ಯದಲ್ಲಿ ಯಾರಿಗೂ ಇಂತಹ ಅನ್ಯಾಯವಾಗಬಾರದು. ಈ ಬಗ್ಗೆ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಕ್ರಮ ಜರಗಿಸಬೇಕು.

- ಅಬ್ದುಲ್ ಖಾದರ್, ಕುಂಜತ್ತೂರು, ಮಂಜೇಶ್ವರ (ಕತರ್‌ನಿಂದ ಮೊಬೈಲ್ ಮೂಲಕ)

---------------------------------------------------------------------------------------------------------------------------

ಐದಾರು ತಿಂಗಳ ಹಿಂದೆ ನಾನು ಮತ್ತು ಕೇರಳದ ನ್ಯಾಯವಾದಿ ಹನೀಫ್ ಹುದವಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಿರುಕುಳಕ್ಕೊಳಗಾಗಿದ್ದೆವು. ಅಂದರೆ ದುಬೈಗೆ ಹೊರಟಿದ್ದ ನನ್ನನ್ನು ಮೊದಲು ತಪಾಸಣೆ ಮಾಡಿದ ಅಧಿಕಾರಿಗಳು ಒಳಗೆ ಬಿಟ್ಟು 15 ನಿಮಿಷವಾದರೂ ಕೂಡ ಹನೀಫ್ ಹುದವಿಯನ್ನು ಒಳಗೆ ಬಿಡಲಿಲ್ಲ.

ಅಚ್ಚರಿಗೊಂಡ ನಾನು ಹೊರಗೆ ಬಂದಾಗ ಹನೀಫ್‌ರ ವೇಷ-ಭೂಷಣ ನೋಡಿಯೋ ಏನೋ, ಹನೀಫ್‌ರ ಬಳಿ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹನೀಫ್ ಕೂಡ ಅದಕ್ಕೆ ಪ್ರತ್ಯುತ್ತರ ನೀಡುತ್ತಿದ್ದರು. ನಾನು ಹೋಗಿ ವಿಚಾರಿಸಿದಾಗ ಮಂಗಳೂರಿನಲ್ಲಿ ಉಗ್ರರ ಹಾವಳಿ ಇದೆ. ಇದಕ್ಕೆ ತಪಾಸಣೆ ಬಿಗುಗೊಳಿಸುತ್ತಿದ್ದೇವೆ ಎಂದು ಸಮಜಾಯಿಸಿಕೆ ನೀಡಿದರು. 

ಅಲ್ಲದೆ ನೀವು ದುಬೈಗೆ ಯಾಕೆ ಹೋಗಬೇಕು ಎಂದು ಅಸಂಬದ್ಧವಾಗಿ ಪ್ರಶ್ನಿಸಿದರು. ಅಂತೂ ನಾವು ಅಧಿಕಾರಿ ಮತ್ತು ಸಿಬ್ಬಂದಿಯನ್ನು ಈ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡೆವು. ಬಳಿಕ ಅವರು ಕ್ಷಮೆ ಕೇಳಿ ಒಳಬಿಟ್ಟರು. ಸುಮಾರು 45 ನಿಮಿಷ ನಮ್ಮನ್ನು ತಪಾಸಣೆಯ ನೆಪದಲ್ಲಿ ಅವರು ಮಾನಸಿಕ ಕಿರುಕುಳ ನೀಡಿದ್ದಾರೆ. ನಾವು ಸ್ವಲ್ಪ ಬೇಗ ಹೋದ ಕಾರಣ ಕ್ಲಪ್ತ ಸಮಯಕ್ಕೆ ವಿಮಾನ ಏರುವಂತಾಯಿತು. ಇಲ್ಲದಿದ್ದರೆ ನಮಗೆ ಕೂಡ ಆವತ್ತು ವಿಮಾನ ಯಾನ ತಪ್ಪುತ್ತಿತ್ತು.

- ಮುಸ್ತಫಾ ಕೆಂಪಿ, ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಂ ಐಕ್ಯತಾ ವೇದಿಕೆ

-------------------------------------------------------------------------------------------------------------------------

ನನ್ನ ಕುಟುಂಬಕ್ಕೂ ಕೆಲವು ತಿಂಗಳ ಹಿಂದೆ ಇಂತಹ ಅನುಭವವಾಗಿದೆ. ವಿಮಾನ ನಿಲ್ದಾಣದ ಭದ್ರತೆಯ ಏಜೆನ್ಸಿಯನ್ನು ಸಂಘಪರಿವಾರ ವಹಿಸಿಕೊಂಡಿದೆಯೋ ಎಂಬ ಅನುಮಾನ ಕಾಡುತ್ತಿದೆ. ಉದ್ದೇಶಪೂರ್ವಕವಾಗಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂಸಿಸಲಾಗುತ್ತಿದೆ. ಮುಸ್ಲಿಮರನ್ನು ಉಗ್ರಗಾಮಿಗಳು ಎಂಬಂತೆ ಇಲ್ಲಿ ನೋಡಲಾಗುತ್ತದೆ. ಈ ಬಗ್ಗೆ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು. ಇಲ್ಲದಿದ್ದರೆ ವಿಮಾನ ನಿಲ್ದಾಣದ ಮುಂದೆ ಧರಣಿ ನಡೆಸುವುದು ಅನಿವಾರ್ಯ.

- ಹಾರೂನ್ ರಶೀದ್, ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಮುಖಂಡ

-------------------------------------------------------------------------------------------------------------------------------

ಪಾಸ್‌ಪೋರ್ಟ್‌ನ ಹಾಳೆ ಹರಿಯುವುದು, ವೀಸಾ ಲಗತ್ತಿಸಿದ ಪುಟವನ್ನು ಹರಿಯುವುದು, ಜಾಸ್ತಿ ಬಂಗಾರವಿದೆ ಎಂದು ಮಹಿಳೆಯರನ್ನು ಹಿಂಸಿಸುವುದು, ಲಗೇಜ್ ಹೆಚ್ಚಾಗಿದೆ ಎನ್ನುತ್ತಾ ಹಣ ನೀಡುವಂತೆ ಒತ್ತಡ ಹೇರುವುದು, ಅನಾವಶ್ಯಕ ಪ್ರಶ್ನೆಗಳನ್ನು ಕೇಳಿ ವಿಚಾರಣೆ ಮಾಡಿ ಹೆದರಿಸುವುದು, ಇಲ್ಲ ಸಲ್ಲದ ಆರೋಪವನ್ನು ಅನಿವಾಸಿಗಳ ಹೆಗಲಿಗೆ ಕಟ್ಟುವುದು, ತಪಾಸಣೆಯ ಹೆಸರಿನಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದು, ಅಲ್ಪಸಂಖ್ಯಾತ ಪ್ರಯಾಣಿಕರನ್ನು ಕಳ್ಳರಂತೆ ಕಾಣುವುದು ಈ ರೀತಿಯ ಪ್ರಕರಣದ ಪಟ್ಟಿಗಳು ದಿನ ಕಳೆದಂತೆ ಬೆಳೆಯುತ್ತಾ ಹೋಗುತ್ತಿದೆ. ಉನ್ನತ ಅಧಿಕಾರಿಗಳ ವೌನ ಸಮ್ಮತಿಯಿಂದ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ.

- ಹನೀಫ್ ಖಾನ್ ಕೊಡಾಜೆ ಅಧ್ಯಕ್ಷರು, ಎಸ್‌ಡಿಪಿಐ ದ.ಕ.ಜಿಲ್ಲೆ

------------------------------------------------------------------------------------------------------------------------------

ಇತ್ತೀಚೆಗೆ ಕತರ್‌ಗೆ ಭೇಟಿ ನೀಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಕತರ್‌ನ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ನಿಯೋಗ ಭೇಟಿ ಮಾಡಿ ಮಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣದ ಸಿಬ್ಬಂದಿ ವರ್ಗವು ತಪಾಸಣೆಯ ನೆಪದಲ್ಲಿ ಪ್ರಯಾಣಿಕರಿಗೆ ನೀಡುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದು ಗಮನಾರ್ಹ.

----------------------------------------------------------------------------------------------------------------------------

ಫೇಸ್‌ಬುಕ್‌ನಲ್ಲಿ ಹೊಸ ಖಾತೆ:

ಫೇಸ್‌ಬುಕ್‌ನಲ್ಲಿ ಹೊಸ ಖಾತೆ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದೆ ಎನ್ನಲಾದ ಈ ಘಟನೆಯ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ, ಫೇಸ್‌ಬುಕ್‌ನಲ್ಲಿ ಹೊಸ ಖಾತೆಯನ್ನು (https://www.facebook.com/Feedback-about-Mangalore-Airport- 1830208627230083/) ತೆರೆಯಲಾಗಿದೆ. ಈ ಖಾತೆಯಲ್ಲಿ ಕನ್ನಡ, ಮಲಯಾಳಂ, ಇಂಗ್ಲಿಷ್‌ನಲ್ಲಿ ಚರ್ಚೆಗೆ ಅವಕಾಶವಿದೆ. ಈಗಾಗಲೆ ಹಲವಾರು ಮಂದಿ ಇದರಲ್ಲಿ ತಮಗಾದ ನೋವನ್ನು ಹಂಚಿಕೊಳ್ಳುತ್ತಿದ್ದಾರೆ.

feedback.MIA@gmail.com ಈ ಖಾತೆಯಲ್ಲಿ "ಕೆಲವು ವರ್ಷಗಳಿಂದ ಒಂದು ಸಮುದಾಯವನ್ನು ಗುರಿಯಾಗಿಸಿ ಮಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ವರ್ಗವು ನಿರಂತರವಾಗಿ ಪೀಡಿಸುತ್ತಿದ್ದು, ಸಾಮಾಜಿಕ ತಾಣಗಳಿಂದ ಬೆಳಕಿಗೆ ಬಂದಿದೆ. ಇದರ ಸತ್ಯಾಸತ್ಯತೆ ಹಾಗೂ ಮಂಗಳೂರು ವಿಮಾನ ಸಿಬ್ಬಂದಿಯಿಂದ ತೊಂದರೆಗೊಳಗಾದವರ ನೈಜ ಅನುಭವಗಳನ್ನು ನಿಮ್ಮ ಮುಂದೆ ಇಡಲಿದ್ದೇವೆ, ನಿರೀಕ್ಷಿಸಿ. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ...ಮಂಗಳೂರು ವಿಮಾನ ಸಿಬ್ಬಂದಿಯಿಂದ ನಿಮ್ಮ ಪರಿಚಯಸ್ಥರು/ಕುಟುಂಬಸ್ಥರು/ಗೆಳೆಯರು ಕಿರುಕುಳದ ಯಾತನೆ ಅನುಭವಿಸಿದ್ದರೆ ಅವರ ಅನುಭವಗಳನ್ನು ನಮಗೆ ಕಳುಹಿಸಿಕೊಡಿ'' ಎಂದು ಬರೆದು ವಿಳಾಸ ಹಾಕಿದೆ.

---------------------------------------------------------------------------------------------------------------------
ಆರೋಪದಲ್ಲಿ ಹುರುಳಿಲ್ಲ: ಜೆ.ಟಿ.ರಾಧಾಕೃಷ್ಣ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಅಧಿಕಾರಿ-ಸಿಬ್ಬಂದಿ ವರ್ಗವು ಯಾವ ಪ್ರಯಾಣಿಕರಿಗೂ ಕಿರುಕುಳ ನೀಡುತ್ತಿಲ್ಲ. ನೀಡಿಯೂ ಇಲ್ಲ. ಪ್ರಯಾಣಿಕರು ಅಥವಾ ಸಂಘಟನೆಗಳು ಮಾಡುವ ಆರೋಪದಲ್ಲಿ ಹುರುಳಿಲ್ಲ. ಬೇಕಿದ್ದರೆ ಸಿಸಿ ಕ್ಯಾಮೆರಾದ ದೃಶ್ಯವನ್ನು ಪರಿಶೀಲಿಸಬಹುದು. ಸೋಮವಾರ ತನ್ನನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದ ಎಸ್‌ಡಿಪಿಐ ಪಕ್ಷದ ನಿಯೋಗಕ್ಕೂ ನಾನು ಈ ಅಂಶವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ.

 ದಿನಂಪ್ರತಿ ತಲಾ 8ರಂತೆ 16 ವಿಮಾನಗಳು ಈ ನಿಲ್ದಾಣದ ಮೂಲಕ ಹಾರಿಳಿಯುತ್ತಿವೆ. ಅಲ್ಲದೆ, ಸುಮಾರು 3 ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ. ಪರಿಶೀಲನೆ ಸಂದರ್ಭ ಸ್ವಲ್ಪ ವಿಳಂಬವಾಗಬಹುದೇ ವಿನ: ಕಿರುಕುಳವಂತೂ ಆಗುತ್ತಿಲ್ಲ. ಅದರಲ್ಲೂ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಪ್ರಯಾಣಿಕರನ್ನು ಗುರಿಯಾಗಿಸಿದೆ ಎಂಬ ಆರೋಪ ಕೂಡ ಸುಳ್ಳು. ನಮಗೆ ಎಲ್ಲ ಪ್ರಯಾಣಿಕರೂ ಒಂದೆ. ಇತ್ತೀಚಿನ ದಿನಗಳಲ್ಲಿ ತಪಾಸಣೆಯನ್ನು ಬಿಗುಗೊಳಿಸಿರುವುದಂತೂ ನಿಜ. ಆವಾಗ ಕೆಲವರ ವೀಸಾ-ಪಾಸ್‌ಪೋರ್ಟ್‌ನ ಸಂಖ್ಯೆಗಳು, ಜನನ ದಿನಾಂಕದ ಸಂಖ್ಯೆಗಳು ತಾಳೆಯಾಗುತ್ತಿಲ್ಲ. ಆವಾಗ ವಿಳಂಬವಾಗುವುದು ಸಹಜ.

ನಮ್ಮಲ್ಲಿ 'ಹೆಲ್ಪ್ ಡೆಸ್ಕ್‌'ಇದ್ದು ದಿನದ 24 ಗಂಟೆಯೂ ಕಾರ್ಯಾಚರಿಸುತ್ತಿವೆ. ಏನೇ ಸಮಸ್ಯೆಯಾದರೂ ಇದರ ಸಹಾಯಪಡೆಯಬಹುದು. ಈಗಾಗಲೆ ತನ್ನ ಅಧೀನದ ಎಲ್ಲ ಅಧಿಕಾರಿ-ಸಿಬ್ಬಂದಿ ವರ್ಗವನ್ನು ಕರೆದು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಗಳು ಹಾಗು ಪ್ರಯಾಣಿಕರ-ಸಂಘಟನೆಗಳ ಆರೋಪವನ್ನು ಗಮನ ಸೆಳೆದಿದ್ದೇನೆ. ಪ್ರಯಾಣಿಕರ ಜೊತೆ ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ಸೂಚನೆ ನೀಡಿದ್ದೇನೆ. ನಾಳೆ (ಬುಧವಾರ) ಇಮಿಗ್ರೇಶನ್ ಅಧಿಕಾರಿ ಸಹಿತ ಎಲ್ಲ ಸಿಬ್ಬಂದಿ ವರ್ಗಕ್ಕೆ ಈ ಬಗ್ಗೆ ತರಬೇತಿ ಶಿಬಿರ ಆಯೋಜಿಸಿದ್ದೇನೆ.

ಜೆ.ಟಿ.ರಾಧಾಕೃಷ್ಣ, ನಿರ್ದೇಶಕರು,ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News