×
Ad

ರಾಜಸ್ಥಾನ: ಗೋರಕ್ಷಣೆ ಹೆಸರಲ್ಲಿ ಅಟ್ಟಹಾಸ

Update: 2017-04-05 09:21 IST

ಜೈಪುರ, ಎ.5: ಹಸು ಸಾಗಾಟ ಮಾಡುತ್ತಿದ್ದ ಐದು ಮಂದಿಯ ಮೇಲೆ ಅಲ್ವಾರ್‌ನಲ್ಲಿ ಗೋರಕ್ಷಕರು ನಡೆಸಿದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೆಹ್ಲೂ ಖಾನ್ (55) ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.

ಹಸುವನ್ನು ಸಾಕುವ ಸಲುವಾಗಿ ಖರೀದಿಸಿದ ದಾಖಲೆಯನ್ನು ಹಾಜರುಪಡಿಸಿದರೂ ಖಾನ್ ಹಾಗೂ ಇತರ ನಾಲ್ವರ ಮೇಲೆ ಗೋರಕ್ಷಕರ ತಂಡದಿಂದ ದಾಳಿ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ. "ರಾಷ್ಟ್ರೀಯ ಹೆದ್ದಾರಿ-8ರ ಜಗುವಾಸ್ ಕ್ರಾಸಿಂಗ್ ಬಳಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಬೆಂಬಲಿತ ಗೋರಕ್ಷಕರ ಗುಂಪು, ಅಕ್ರಮವಾಗಿ ಜಾನುವಾರು ಸಾಗಿಸಲಾಗುತ್ತಿದೆ ಎಂಬ ಆರೋಪದಲ್ಲಿ ನಾಲ್ಕು ವಾಹನಗಳನ್ನು ಶನಿವಾರ ಸಂಜೆ ತಡೆಯಿತು. ಜೈಪುರದಿಂದ ಹರ್ಯಾಣ ರಾಜ್ಯದ ನುಹ್ ಜಿಲ್ಲೆಗೆ ಇದನ್ನು ಸಾಗಿಸಲಾಗುತ್ತಿತ್ತು" ಎಂದು ಬೆಹ್ರಾರ್ ಠಾಣಾಧಿಕಾರಿ ರಮೇಶ್ ಚಂದ್ ಸಿನ್ಸಿನ್ವಾರ್ ವಿವರಿಸಿದ್ದಾರೆ.

ವಾಹನದಲ್ಲಿದ್ದವರ ಮೇಲೆ ಹಲ್ಲೆ ಮಾಡಿದ ಈ ತಂಡ ಅರ್ಜುನ್ ಎಂಬ ಒಬ್ಬ ಚಾಲಕನನ್ನು ಬಿಟ್ಟುಬಿಟ್ಟಿತು ಎಂದು ಹೇಳಲಾಗಿದೆ. ಐದು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ಪೈಕಿ ಖಾನ್ ಸೋಮವಾರ ರಾತ್ರಿ ಮೃತಪಟ್ಟರು. ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಮೃತದೇಹವನ್ನು ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

"ಜೈಪುರದ ಸಂತೆಯಿಂದ 75 ಸಾವಿರಕ್ಕೆ ಎರಡು ಹಸುಗಳನ್ನು ಹೈನುಗಾರಿಕೆಗಾಗಿ ಖರೀದಿಸಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಇದ್ದವು. ಹಸುಗಳನ್ನು ನಾವು ಕದ್ದುಮುಚ್ಚಿ ಸಾಗಿಸುತ್ತಿರಲಿಲ್ಲ. ಪಿಕ್‌ಅಪ್ ಟ್ರಕ್‌ನಲ್ಲಿ ಸಾಗಿಸುತ್ತಿದ್ದೆವು. ಶನಿವಾರ ಸಂಜೆ 6ರ ಸುಮಾರಿಗೆ ವಾಹನ ತಡೆದ ಗೋರಕ್ಷಕರು ಹೆಸರು ಕೇಳಿದರು. ನಮ್ಮ ಚಾಲಕ ಅರ್ಜುನ್‌ನನ್ನು ಬಿಟ್ಟರು" ಎಂದು ಖಾನ್ ಅವರ ಪಿಕಪ್‌ನಲ್ಲಿದ್ದ ಅಜ್ಮತ್ ಘಟನೆ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News