×
Ad

ಮಗನ ಪಟ್ಟಾಭಿಷೇಕಕ್ಕೆ ನಾಯ್ಡು ತಯಾರಿ

Update: 2017-04-05 09:54 IST

ಹೈದರಾಬಾದ್,ಎ.5: ಕಾಂಗ್ರೆಸ್ ಪಕ್ಷದ ವಂಶಪಾರಂಪರ್ಯ ಆಡಳಿತ ವಿರುದ್ಧ ಟೀಕಿಸುತ್ತಲೇ ಬಂದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇದೀಗ ಮಗ ಲೋಕೇಶ್ (34) ಪಟ್ಟಾಭಿಷೇಕಕ್ಕೆ ಸದ್ದುಗದ್ದಲವಿಲ್ಲದೇ ತಯಾರಿ ನಡೆಸಿದ್ದಾರೆ.

ಲೋಕೇಶ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು, 2019ರ ಚುನಾವಣೆಯಲ್ಲಿ ಹೆಚ್ಚಿನ ಹೊಣೆಯನ್ನು ಅವರಿಗೆ ವಹಿಸಲು ನಾಯ್ಡು ನಿರ್ಧರಿಸಿದಂತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2014ರ ಚುನಾವಣೆಯಲ್ಲಿ ತೆಲುಗುದೇಶಂ ಜಯಭೇರಿ ಸಾಧಿಸಿದರೂ ತಕ್ಷಣಕ್ಕೆ ಲೋಕೇಶ್ ಅವರನ್ನು ಸಚಿವರಾಗಿ ನಾಯ್ಡು ನೇಮಕ ಮಾಡಿರಲಿಲ್ಲ. ಮಾರ್ಚ್ 7ರಂದು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಿದ ಬಳಿಕ ಕಳೆದ ರವಿವಾರ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಉತ್ತರಾಧಿಕಾರಿಯಾಗಿ ಲೋಕೇಶ್ ಅವರನ್ನು ಬಿಂಬಿಸಲಾಗುತ್ತಿದ್ದು, ವೈ.ಎಸ್.ಜಗನ್ಮೋಹನ ರೆಡ್ಡಿಗೆ ಎದುರಾಳಿಯಾಗಿ ಲೋಕೇಶ್ ಅವರನ್ನು ಬೆಳೆಸಲಾಗುತ್ತಿದೆ. 2019ರ ಚುನಾವಣೆ ವೇಳೆಗೆ ನಾಯ್ಡು ಅವರಿಗೆ 69 ವರ್ಷ ತುಂಬುವ ಹಿನ್ನೆಲೆಯಲ್ಲಿ 2024ರ ಚುನಾವಣೆ ವೇಳೆಗೆ ಲೋಕೇಶ್‌ಗೆ ಸಾರಥ್ಯ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

2013ರ ಮೇ ತಿಂಗಳವರೆಗೂ ಸಕ್ರಿಯ ರಾಜಕಾರಣದಿಂದ ದೂರ ಇದ್ದ ಲೋಕೇಶ್, ಕುಟುಂಬ ಮಾಲೀಕತ್ವದ ಹೆರಿಟೇಜ್ ಫುಡ್ಸ್ ಲಿಮಿಟೆಡ್‌ನ ಆಡಳಿತ ನಿರ್ದೇಶಕರಾಗಿದ್ದರು. ಕ್ರಮೇಣ ಬ್ಯಾಕ್‌ರೂಂ ಬಾಯ್ ಕೆಲಸ ಆರಂಭಿಸಿದ ಅವರು, ಪಕ್ಷದ ಮುಖಂಡರ ಪ್ರವಾಸದ ಯೋಜನೆ ರೂಪಿಸುವುದು, ಸಭೆ ಸಮಾರಂಭಗಳ ನಿಗದಿ, ತಂದೆಯ ಪ್ರಚಾರದ ಹೊಣೆಯನ್ನು ಹೊತ್ತುಕೊಂಡರು. ಚಂದ್ರಬಾಬು ನಾಯ್ಡು ಅವರ 2800 ಕಿಲೋಮೀಟರ್ ಪಾದಯಾತ್ರೆಯನ್ನು ರೂಪಿಸುವ ಮೂಲಕ ಬೆಳಕಿಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿನೀಡುವಂತೆ ಪಕ್ಷದ ಮುಖಂಡರು ಒತ್ತಾಯಿಸುತ್ತಾ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News