ನಾನೇನು ತಪ್ಪು ಮಾಡಿದ್ದೇನೆ ಎಂದು ಸಂಸತ್ತಿನಲ್ಲಿ ಪ್ರಶ್ನಿಸಿದ ಶಿವಸೇನೆ ಸಂಸದ ಗಾಯಕವಾಡ್

Update: 2017-04-06 14:32 GMT

ಹೊಸದಿಲ್ಲಿ,ಎ.6: ಏರ್ ಇಂಡಿಯಾದ ಹಿರಿಯ ಅಧಿಕಾರಿಯೋರ್ವರ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಹೊತ್ತಿರುವ ಶಿವಸೇನೆ ಸಂಸದ ರವೀಂದ್ರ ಗಾಯಕವಾಡ್ ಅವರು ಘಟನೆಯ ಬಳಿಕ ಮೊದಲ ಬಾರಿಗೆ ಗುರುವಾರ ಲೋಕಸಭೆಯಲ್ಲಿ ಹಾಜರಾಗಿ ತಾನು ಯಾವುದೇ ತಪ್ಪು ಮಾಡಿಲ್ಲವೆಂದು ಸಮರ್ಥಿಸಿಕೊಂಡರು. ಗಾಯಕವಾಡ್‌ರ ಹಿರಿಯ ಸಹೋದ್ಯೋಗಿಗಳು ಅವರ ಪರವಾಗಿ ವಾದ ಮಾಡಿದರಾದರೂ ಜಗ್ಗದ ನಾಗರಿಕ ವಾಯುಯಾನ ಸಚಿವ ಅಶೋಕ ಗಜಪಪತಿ ರಾಜು ಅವರು ‘ಅನುಚಿತ ವರ್ತನೆ ’ಗಾಗಿ ಸಂಸದನ ವಿರುದ್ಧ ದೇಶಿಯ ವಿಮಾನಯಾನ ಸಂಸ್ಥೆಗಳು ವಿಧಿಸಿರುವ ನಿಷೇಧವನ್ನು ತಾನು ಬೆಂಬಲಿಸುವುದಾಗಿ ಸುಳಿವು ನೀಡಿದರು.

ವಿಮಾನಗಳು ಜನರ ಸುರಕ್ಷಿತ ಪ್ರಯಾಣಕ್ಕಾಗಿವೆ ಮತ್ತು ಯಾವುದೇ ಕಾರಣಕ್ಕೂ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜು ಹೇಳಿದರು.

ಘಟನೆಯ ಕುರಿತಂತೆ ಗಾಯಕವಾಡ್ ಸಂಸತ್ತಿನ ಕ್ಷಮೆ ಕೋರಿದರಾದರೂ ಪಶ್ಚಾತ್ತಾಪದ ಯಾವುದೇ ಭಾವನೆಗಳು ಅವರಲ್ಲಿ ಕಂಡು ಬರಲಿಲ್ಲ.

ತಾನೇನಾದರೂ ನೋವನ್ನುಂಟು ಮಾಡಿದ್ದಿದ್ದರೆ ಸಂಸತ್ತಿನ ಕ್ಷಮೆಯನ್ನು ಕೋರುತ್ತೇನೆ, ಆದರೆ ಏರ್ ಇಂಡಿಯಾ ಅಧಿಕಾರಿಯದ್ದಲ್ಲ ಎಂದು ಗಾಯಕವಾಡ್ ಹೇಳಿದರು.

ಮಾ.23ರಂದು ಬಿಸಿನೆಸ್ ಕ್ಲಾಸ್ ಇಲ್ಲದ ವಿಮಾನದಲ್ಲಿ ಯಾನಕ್ಕೆ ತನಗೆ ಇಕಾನಮಿ ಕ್ಲಾಸ್‌ನಲ್ಲಿ ಸೀಟ್ ನೀಡಿದ್ದಕ್ಕೆ ಗಾಯಕವಾಡ್ ಏರ್ ಇಂಡಿಯಾದ ಹಿರಿಯ ಅಧಿಕಾರಿಯೋರ್ವರ ಮೇಲೆ ಹಲ್ಲೆ ನಡೆಸಿದ್ದರು. ಅಧಿಕಾರಿಯನ್ನು ಚಪ್ಪಲಿಯಿಂದ 25 ಬಾರಿ ಥಳಿಸಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು. ಈ ಘಟನೆಯ ಬಳಿಕ ವಿಮಾನಯಾನ ಸಂಸ್ಥೆಗಳು ಒಂದಾಗಿ ಗಾಯಕವಾಡ್ ಯಾವುದೇ ವಿಮಾನದಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಿದ್ದವು.

 ಏರ್ ಇಂಡಿಯಾದ ಸಿಬ್ಬಂದಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ ಮತ್ತು ತನ್ನ ಕಾಲರ್ ಹಿಡಿದೆಳೆದಿದ್ದ. ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ ಸಿಬ್ಬಂದಿ ಹಾಯಾಗಿ ಓಡಾಡಿಕೊಂಡಿದ್ದಾನೆ. ತನ್ನ ಮೇಲೆ ವಿಮಾನ ಯಾನ ನಿಷೇಧವನ್ನು ಹೇರಲಾಗಿದೆ ಎಂದು ಸದನದಲ್ಲಿ ಹೇಳಿದ ಗಾಯಕವಾಡ್,ಯಾವುದೇ ತನಿಖೆಯಿಲ್ಲದೆ ಮಾಧ್ಯಮಗಳು ತನ್ನ ವಿಚಾರಣೆಯನ್ನು ನಡೆಸುವಂತಹ ತಪ್ಪೇನನ್ನು ತಾನು ಮಾಡಿದ್ದೇನೆ ಎಂದು ಪ್ರಶ್ನಿಸಿದರು.

ಈ ವೇಳೆ ಗಾಯಕವಾಡ್ ವಿರುದ್ಧದ ನಿಷೇಧವನ್ನು ಹಿಂದೆಗೆದುಕೊಳ್ಳುವಂತೆ ಶಿವಸೇನೆ ಸದಸ್ಯರು ಒತ್ತಾಯಿಸಿದಾಗ ಕೋಲಾಹಲ ಸೃಷ್ಟಿಯಾಗಿತ್ತು.

ಮೂರು ಬಾರಿ ಕಲಾಪಗಳು ಮುಂದೂಡಲ್ಪಟು ಸದನವು ಮರುಸಮಾವೇಶ ಗೊಂಡಾಗ, ಏರ್ ಇಂಡಿಯಾಕ್ಕೆ ಸಂಬಂಧಿತ ಘಟನೆಯು ದುರದೃಷ್ಟಕರವಾಗಿದೆ ಮತ್ತು ಅದು ನಡೆಯದಿದ್ದರೆ ಒಳ್ಳೆಯದಿತ್ತು ಎಂದು ಗೃಹಸಚಿವ ರಾಜನಾಥ ಸಿಂಗ್ ಹೇಳಿದರು.

ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ವಾಯುಯಾನ ಸಚಿವರು ಶೀಘ್ರವೇ ಸಂಬಂಧಿತರೊಡನೆ ಮಾತುಕತೆ ನಡೆಸಲಿದ್ದಾರೆ ಎಂದರು.

 ಇದಕ್ಕೂ ಮುನ್ನ ಕೇಂದ್ರ ಸಚಿವ ಅನಂತ ಗೀತೆ ಸೇರಿದಂತೆ ಶಿವಸೇನೆ ಸದಸ್ಯರು ರಾಜು ಅವರಿಗೆ ಮುತ್ತಿಗೆ ಹಾಕಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಸಿಂಗ್ ಮತ್ತು ಇನ್ನೋರ್ವ ಸಚಿವ ಎಸ್.ಎಸ್.ಅಹ್ಲುವಾಲಿಯಾ ಅವರು ರಾಜು ಅವರಿಗೆ ರಕ್ಷಣೆ ನೀಡಿದರು. ಬಳಿಕ ಅಹ್ಲುವಾಲಿಯಾ ರಾಜು ಅವರನ್ನು ಅವರ ಚೇಂಬರ್‌ಗೆ ಕರೆದೊಯ್ದರು.

ಗಾಯಕವಾಡ್ ವಿರುದ್ಧದ ನಿಷೇಧವನ್ನು ಹಿಂದೆಗೆದುಕೊಳ್ಳದಿದ್ದರೆ ಮುಂಬೈನಿಂದ ಯಾವುದೇ ವಿಮಾನದ ಹಾರಾಟಕ್ಕೆ ತಾವು ಅವಕಾಶ ನೀಡುವುದಿಲ್ಲ ಎಂದು ಸೇನಾ ಸಂಸದರು ಬೆದರಿಕೆಯನ್ನೂ ಒಡ್ಡಿದ್ದರು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News