ಮರಳು ಮಾಫಿಯಾದ ಪುಂಡಾಟಿಕೆ

Update: 2017-04-06 18:54 GMT

ದೇಶದಲ್ಲಿ ಜಾಗತೀಕರಣದ ಶಕೆ ಆರಂಭವಾದ ನಂತರ ಸಾರ್ವಜನಿಕ ಸಂಪತ್ತಿನ ಲೂಟಿ ಅವ್ಯಾಹತವಾಗಿ ನಡೆದಿದೆ. ಖನಿಜ ಸಂಪತ್ತು, ಕಲ್ಲು ಗಣಿಗಾರಿಕೆ, ಟಿಂಬರ್ ಮಾಫಿಯಾ ಹೀಗೆ ನೂರಾರು ಮಾಫಿಯಾಗಳು ಸಾರ್ವಜನಿಕ ಸಂಪತ್ತಿನ ಕೊಳ್ಳೆಯಲ್ಲಿ ತೊಡಗಿವೆ. ಮುಂದಿನ ನೂರಾರು ತಲೆಮಾರುಗಳಿಗೆ ಉಪಯೋಗವಾಗಬಲ್ಲ ಸಂಪತ್ತನ್ನು ಒಂದೇ ತಲೆಮಾರಿನಲ್ಲಿ ನುಂಗಿ ಹಾಕಲು ಈ ಶಕ್ತಿಗಳು ಯತ್ನಿಸುತ್ತಿವೆ. ಈ ಎಲ್ಲ ದಂಧೆಗಳಂತೆ ಮರಳು ಗಣಿಗಾರಿಕೆ ಕೂಡಾ ಈ ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ಉತ್ತರ ಭಾರತದ ರಾಜ್ಯಗಳಲ್ಲಂತೂ ಮರಳು ಮಾಫಿಯಾ ಅತ್ಯಂತ ಪ್ರಭಾವಶಾಲಿಯಾಗಿದೆ. ಈ ಮಾಫಿಯಾವನ್ನು ಎದುರಿಸಲು ಹೋದ ಅಧಿಕಾರಿಗಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಈ ಮರಳು ಗಣಿಗಾರಿಕೆ ಕರ್ನಾಟಕದಲ್ಲೂ ವ್ಯಾಪಕವಾಗಿ ನಡೆದಿದೆ. ಇದರ ಪರಿಣಾಮವಾಗಿ ನಮ್ಮ ನದಿ ತೀರಗಳು, ಕೆರೆ ಕಟ್ಟೆಗಳು ನಾಶವಾಗಿ ಹೋಗಿವೆ. ನೈಸರ್ಗಿಕ ಸಮತೋಲನದ ಮೇಲೂ ಇದು ಪರಿಣಾಮ ಬೀರಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಎಷ್ಟು ಅಟ್ಟಹಾಸದಿಂದ ಮೆರೆಯುತ್ತಿದೆಯೆಂದರೆ ಅಕ್ರಮ ಗಣಿಗಾರಿಕೆ ವಿರುದ್ಧ ದಾಳಿ ನಡೆಸಲು ತೆರಳಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಸಹಾಯಕ ಕಮಿಷನರ್ ಶಿಲ್ಪಾ ನಾಗ್ ಮತ್ತಿತರ ಅಧಿಕಾರಿಗಳ ಮೇಲೆ ಮರಳು ಮಾಫಿಯಾ ಹಲ್ಲೆ ನಡೆಸಿದ್ದು ಖಂಡನಾರ್ಹವಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಮರಳು ಲೂಟಿಯನ್ನು ತಡೆಯಲು ಪ್ರಾಮಾಣಿಕ ಅಧಿಕಾರಿಗಳು ಮುಂದಾದಾಗ ಅವರು ಇಂತಹ ದಾಳಿಯನ್ನು ಎದುರಿಸಿದ್ದಾರೆ. ಹೂವಿನ ಹಡಗಲಿ, ಹಾಸನ, ಕಲಬುರಗಿ ಮುಂತಾದ ಕಡೆ ಮರಳು ಗಣಿಗಾರಿಕೆ ತಡೆಯಲು ಯತ್ನಿಸಿದ್ದ ತಹಶೀಲ್ದಾರ್ ಮತ್ತು ಇತರ ಅಧಿಕಾರಿಗಳ ಮೇಲೆ ಲಾರಿ ಹರಿಯ ಬಿಟ್ಟು ಕೊಲ್ಲುವ ಯತ್ನ ನಡೆದಿದೆ. ಕಲಬುರಗಿ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಮಂಡ್ಯ ಡಿವೈಎಸ್ಪಿ ಕವಿತಾ ಹೂಗಾರ್ ಹಾಗೂ ಅಫ್ಝಲ್‌ಪುರದ ತಹಶೀಲ್ದಾರ್ ಅಕ್ರಮ ಮರಳುಗಾರಿಕೆಯನ್ನು ತಡೆಯಲು ಯತ್ನಿಸಿದಾಗ ಅವರ ಮೇಲೂ ದಾಳಿ ನಡೆದಿತ್ತು.

ಉತ್ತರ ಪ್ರದೇಶದ ಯಸ್ಮಾದ್‌ಪುರ ವಿಭಾಗೀಯ ಮ್ಯಾಜಿಸ್ಟ್ರೇಟ್ ಜೆ.ಪಿ. ಸಿಂಗ್ ಅವರ ಮೇಲೂ ದಾಳಿ ನಡೆದಿದೆ. ಉತ್ತರಾಖಂಡದಲ್ಲಿ ಅರಣ್ಯ ಇಲಾಖೆ ಉದ್ಯೋಗಿಯನ್ನು ಕೊಲೆ ಮಾಡಲಾಗಿದೆ. ಮೊರೇನಾದಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿರುವುದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಹೀಗೆ ಸರಕಾರಕ್ಕೆ ಸವಾಲು ಹಾಕುವ ರೀತಿಯಲ್ಲಿ ಮರಳು ಮಾಫಿಯಾ ಪ್ರಭಾವಶಾಲಿಯಾಗಿದೆ. ಉಡುಪಿಯ ಹಿಂದಿನ ಜಿಲ್ಲಾಧಿಕಾರಿಯ ವರ್ಗಾವಣೆಯಲ್ಲೂ ಮರಳು ಮಾಫಿಯಾ ಕೈವಾಡವಿದೆಯೆಂದು ಹೇಳಲಾಗುತ್ತಿದೆ. ಮರಳು ಗಣಿಗಾರಿಕೆ ಅತ್ಯಂತ ಲಾಭದಾಯಕ ದಂಧೆಯಾಗಿದೆ. ಈ ದಂಧೆಯಲ್ಲಿ ಪ್ರಭಾವಶಾಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕೈವಾಡವಿದೆಯೆಂದು ಹೇಳಲಾಗುತ್ತದೆ. ಮರಳಿಗೆ ಬಂಗಾರದ ಬೆಲೆ ಇರುವುದರಿಂದ ಇದನ್ನು ನಿಯಂತ್ರಿಸುವುದು ಸುಲಭದ ಸಂಗತಿಯಲ್ಲ. ಅಧಿಕಾರಿಗಳು ಮತ್ತು ರಾಜಕಾರಣಿಗಳ ಶಾಮೀಲಿನಿಂದಲೇ ಈ ದಂಧೆ ನಡೆಯುತ್ತಿದೆ. ಯಾರೋ ಒಬ್ಬಿಬ್ಬರು ಪ್ರಾಮಾಣಿಕ ಅಧಿಕಾರಿಗಳು ಇದನ್ನು ನಿಯಂತ್ರಿಸಲು ಮುಂದಾದರೆ ತೀವ್ರ ಸ್ವರೂಪದ ಹಲ್ಲೆಗೆ ಗುರಿಯಾಗಬೇಕಾಗುತ್ತದೆ.

ಅಕ್ರಮ ಮರಳು ಗಣಿಗಾರಿಕೆ ತಡೆಯುವ ದೃಷ್ಟಿಯಿಂದ ನೂತನ ಮರಳು ನೀತಿಯನ್ನು ಜಾರಿ ಮಾಡುವುದಾಗಿ ಸರಕಾರ ಹೇಳಿಕೊಳ್ಳುತ್ತಿದೆ. ಈ ಹೊಸ ನೀತಿಯಲ್ಲೂ ಅನೇಕ ಲೋಪಗಳಿವೆ ಎಂಬ ಆರೋಪಗಳಿವೆ. ಇ-ಟೆಂಡರ್ ಮೂಲಕ ಮರಳು ಬ್ಲಾಕ್‌ಗಳನ್ನು ಗುರುತಿಸಿ ವಿಲೇವಾರಿ ಮಾಡಬೇಕಾಗುತ್ತದೆ. ಬ್ಲಾಕ್ ಹಾಗೂ ಯಾರ್ಡ್‌ಗಳಲ್ಲಿ ಸಿಸಿಟಿವಿಯನ್ನು ಅಳವಡಿಸಬೇಕಾಗುತ್ತದೆ. ಬ್ಲಾಕ್‌ಗಳಿಂದ ಮರಳನ್ನು ಎತ್ತಿ ನೇರವಾಗಿ ಗ್ರಾಹಕರಿಗೆ ಪೂರೈಕೆ ಮಾಡುವಂತಿಲ್ಲ. ಬದಲಾಗಿ ಯಾರ್ಡ್‌ಗಳಲ್ಲಿ ರಾಶಿ ಹಾಕಿಕೊಂಡು ಅಲ್ಲಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡುವ ಪರ್ಮಿಟ್ ಪಡೆದುಕೊಂಡು ಮರಳು ವಿತರಿಸಬೇಕಾಗುತ್ತದೆ. ಇ-ಟೆಂಡರ್ ವ್ಯವಸ್ಥೆ ಜಾರಿಯಾದ ಆನಂತರ ರಾಜ್ಯದ ಯಾವುದೇ ಮೂಲೆಯಲ್ಲಿ ರುವವರು ಕೂಡಾ ಟೆಂಡರ್‌ನಲ್ಲಿ ಭಾಗವಹಿಸಿ ಮರಳು ಎತ್ತಬಹುದಾಗಿದೆ. ಹೀಗಾಗಿ ಪ್ರಭಾವಶಾಲಿ ರಾಜಕಾರಣಿಗಳು ಟೆಂಡರ್‌ನಲ್ಲಿ ಭಾಗವಹಿಸಿ ಮರಳು ಗುತ್ತಿಗೆ ಪಡೆಯುತ್ತಿದ್ದಾರೆ.

ಬ್ಲಾಕ್‌ನಿಂದ ಯಾರ್ಡ್‌ಗೆ ಹೋಗಬೇಕಾದ ಮರಳು ನೇರವಾಗಿ ಗ್ರಾಹಕನ ಕೈಗೆ ಹೋಗುತ್ತದೆ. ಇದರಿಂದಾಗಿ ಸರಕಾರಕ್ಕೆ ಬರುವ ಆದಾಯ ನಷ್ಟವಾಗುತ್ತದೆ. ಇನ್ನೊಂದೆಡೆ ಮಹಾನಗರಗಳಲ್ಲಿ ದುಬಾರಿ ಮೊತ್ತಕ್ಕೆ ಮರಳು ಮಾರಾಟವಾಗುತ್ತಿದೆ. ಮರಳು ಗಣಿಗಾರಿಕೆಗೆ ಅಂತಾರಾಜ್ಯ ನಿರ್ಬಂಧವಿದೆ. ಆದರೆ, ಅಂತರ್‌ಜಿಲ್ಲಾ ನಿರ್ಬಂಧವಿಲ್ಲ. ನದಿ ಹರಿಯುವ ಆಯಾ ಜಿಲ್ಲೆಗಳಲ್ಲಿ ಬೇಡಿಕೆಯನ್ನು ಪೂರೈಕೆ ಮಾಡಿದ ಆನಂತರವಷ್ಟೇ ಉಳಿದ ಮರಳನ್ನು ಬೇರೆಡೆ ಸಾಗಿಸಬೇಕೆಂಬ ನಿಬಂಧನೆಯನ್ನು ವಿಧಿಸಿದಲ್ಲಿ ಮರಳು ಮಾಫಿಯಾವನ್ನು ತಡೆಗಟ್ಟಲು ಸಾಧ್ಯವಿದೆ. ಆದರೆ, ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ಸರಕಾರದಲ್ಲೂ ಮರಳು ಮಾಫಿಯಾದ ಮೇಲೆ ನಿಯಂತ್ರಣ ಹೊಂದಿದ ಪ್ರಭಾವಶಾಲಿಗಳು ಇದ್ದಾರೆಂದು ಹೇಳಲಾಗುತ್ತಿದೆ.

ವಾಸ್ತವಾಂಶ ಹೀಗಿರುವಾಗ ಪ್ರಾಮಾಣಿಕ ಅಧಿಕಾರಿಗಳು ಮರಳು ಗಣಿಗಾರಿಕೆಯನ್ನು ನಿಯಂತ್ರಿಸಲು ಹೋದರೆ ತೀವ್ರ ಸ್ವರೂಪದ ದಾಳಿಗೆ ಗುರಿಯಾಗಬೇಕಾಗುತ್ತದೆ. ಉಡುಪಿ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮತ್ತು ಅವರ ತಂಡ ಪೊಲೀಸರಿಗೆ ಮಾಹಿತಿ ಕೊಡದೆ ಮಧ್ಯರಾತ್ರಿಯಲ್ಲಿ ಖಾಸಗಿ ವಾಹನದಲ್ಲಿ ಹೋಗಿದ್ದು ಸರಿಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ, ಮರಳು ಗಣಿಗಾರಿಕೆ ಮೇಲೆ ದಾಳಿ ನಡೆಯುವ ಸೂಚನೆ ದೊರೆತರೆ ಈ ದಗಾಕೋರರು ತಪ್ಪಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಜಿಲ್ಲಾಧಿಕಾರಿಗಳು ಯಾರಿಗೂ ಹೇಳದೆ ರಹಸ್ಯ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಕೆಲ ಅಧಿಕಾರಿಗಳು ಸರಕಾರದಿಂದ ಸಂಬಳ ಪಡೆದು ಕಾನೂನು ಪ್ರಕಾರ ಕೆಲಸ ಮಾಡದೆ ಮರಳು ಮಾಫಿಯಾಕ್ಕೆ ನೆರವಾಗುತ್ತಿರುವುದರಿಂದ ಪ್ರಾಮಾಣಿಕ ಅಧಿಕಾರಿಗಳು ಗೂಂಡಾಗಿರಿಗೆ ಬಲಿಯಾಗಬೇಕಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಸರಕಾರಿ ಇಲಾಖೆಗಳ ನಡುವೆ ಸಮನ್ವಯ ಇರುವುದು ಅಗತ್ಯವಾಗಿದೆ. ಮರಳು ಕೊರತೆಯಿಂದಾಗಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ಬೆಳೆಯುತ್ತಿದೆ. ಕಟ್ಟಡ ನಿರ್ಮಾಣ ಚಟುವಟಿಕೆಗಳು ತೀವ್ರಗೊಂಡಿರುವುದರಿಂದ ಅದಕ್ಕೆ ಸಾಕಷ್ಟು ಮರಳನ್ನು ಸರಕಾರ ಪೂರೈಸಬೇಕಾಗಿದೆ. ಮರಳಿಗೆ ಪರ್ಯಾಯವಾಗಿ ಎಂ.ಸ್ಯಾಂಡ್ ಬಳಕೆಯನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಾಗಿದೆ.

ಬೇಡಿಕೆ ಮತ್ತು ಪೂರೈಕೆಯ ಮಧ್ಯೆ ಅಂತರ ಇರುವವರೆಗೆ ಅಕ್ರಮ ಮರಳು ದಂಧೆ ನಿಯಂತ್ರಿಸುವುದು ಕಷ್ಟ ಸಾಧ್ಯ. ಆದರೆ, ನಮ್ಮ ಅಕ್ಕಪಕ್ಕದ ರಾಜ್ಯಗಳು ನಮ್ಮ ರಾಜ್ಯದಲ್ಲಿರುವಷ್ಟು ಸಮಸ್ಯೆಯನ್ನು ಎದುರಿಸುತ್ತಿಲ್ಲ. ಆ ರಾಜ್ಯಗಳು ಈ ಸಮಸ್ಯೆಯನ್ನು ಹೇಗೆ ನಿಭಾಯಿಸಿವೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಮರಳು ಗಣಿಗಾರಿಕೆಯಿಂದ ಉಂಟಾಗುವ ಪರಿಸರಹಾನಿಯಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಳ್ಳುವ ಜೊತೆಗೆ ಈ ದಂಧೆ ಅಕ್ರಮ ರೂಪ ತಾಳುತ್ತಿರುವುದು ಆತಂಕದ ವಿಷಯವಾಗಿದೆ.

ಇದನ್ನು ನಿಗ್ರಹಿಸಲು ಉಡುಪಿಯ ಜಿಲ್ಲಾಧಿಕಾರಿ ಮತ್ತು ಸಹಾಯಕ ಕಮಿಷನರ್ ತೋರಿಸಿದ ಧೈರ್ಯ ಮತ್ತು ದಿಟ್ಟತನವನ್ನು ಮೆಚ್ಚಬೇಕಾಗಿದೆ. ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳ ಮೇಲೂ ಆಕ್ರಮಣ ನಡೆಸುವ ಮಟ್ಟಕ್ಕೆ ಈ ಮರಳು ಮಾಫಿಯಾ ಬೆಳೆದು ನಿಂತಿರುವುದು ಆಘಾತಕಾರಿಯಾಗಿದೆ. ಇನ್ನಾದರೂ ಅಕ್ರಮ ಮರಳುಗಾರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ. ಕಾರ್ಯಾಚರಣೆಗಿಳಿಯುವ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ.

ಉಡುಪಿ ಪ್ರಕರಣ ಸರಕಾರಕ್ಕೊಂದು ಎಚ್ಚರಿಕೆಯ ಗಂಟೆಯಾಗಿದೆ. ಮರಳು ಮಾಫಿಯಾ ಎಂತಹ ಭಯಾನಕ ಶಕ್ತಿಯಾಗಿದ್ದರೂ ಅದನ್ನು ಹತ್ತಿಕ್ಕಲು ಸರಕಾರ ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ. ಸರಕಾರ ಮನಸು ಮಾಡಿದಲ್ಲಿ ಇದೇನು ದೊಡ್ಡದಲ್ಲ. ಆದರೆ, ಮರಳು ಮಾಫಿಯಾ ಪರ ಪ್ರಭಾವಶಾಲಿ ರಾಜಕಾರಣಿಗಳಿಗೆ ಅದು ಕಿವಿಹಿಂಡಿ ಬುದ್ಧಿ ಹೇಳಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನಾದರೂ ಕರ್ನಾಟಕ ಸರಕಾರ ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News