ಬರೆಯುವುದು, ಒರೆಸುವುದು ಇದುವೇ ಚಿತ್ತವೃತ್ತಿ

Update: 2023-06-30 06:16 GMT

ವಿಶ್ವಪ್ರಸಿದ್ಧ ಫುಟ್‌ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಪ್ರತಿಮೆಯೊಂದು ಇತ್ತೀಚೆಗೆ ಅನಾವರಣಗೊಂಡಿತು ಅಥವಾ ನಮ್ಮ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಹೇಳುವಂತೆ ಲೋಕಾರ್ಪಣೆಗೊಂಡಿತು. ಅಸಲು ವಿಷಯ ಅದಲ್ಲ; ಬದಲಾಗಿ, ರೊನಾಲ್ಡೊ ಹುಟ್ಟೂರು ಮ್ಯಾಡ್ರಿಯ ದ್ವೀಪದಲ್ಲಿನ ಒಂದು ವಿಮಾನ ನಿಲ್ದಾಣವನ್ನು ಆತನ ಹೆಸರಲ್ಲಿ ಮರುನಾಮಕರಣ ಮಾಡಿದ ಸಂದರ್ಭದಲ್ಲಿ ಮುಸುಕು ತೆರೆಸಿಕೊಂಡ ಕಂಚಿನ ಎದೆಮಟ್ಟದ ಶಿಲ್ಪ, ‘ಮೂಲಮೂರ್ತಿ’ಯ ಯಥಾವತ್ ನಕಲಲ್ಲ ಎಂಬುದರ ಕುರಿತು ಎದ್ದಿರುವ ಕೀಟಲೆ-ಕೋಲಾಹಲ. ಇದೊಂಥರಾ ತಮಾಷೆಯ ಸನ್ನಿವೇಶ. ದೊಡ್ಡದಾಗಿ ರಾಜಕುಮಾರ್, ಅಮಿತಾಭ್ ಬಚ್ಚನ್ ಇಲ್ಲವೇ ರಜನಿಯವರದೋ ಮಿಮಿಕ್ರಿ ಮಾಡುತ್ತೇನೆಂದು ಬಂದು ವಿಫಲಗೊಳ್ಳುವವರು ನಯಾಪೈಸೆಯ ಕರುಣೆ(?!) ಅಥವಾ ಅಡ್ಜಸ್ಟ್ ಮೆಂಟ್ ಇಲ್ಲದೆ ಲೇವಡಿ-ತಿರಸ್ಕಾರಕ್ಕೆ ಒಳಗಾಗುವಂತೆ. ಕಿವಿ ಕೊರೆವ ಶಿಳ್ಳೆಗಳಿಗೆ ಮಣಿದು ಸ್ಟೇಜ್‌ನಿಂದ ಕೆಳಗೆ ಇಳಿಯುವಂತೆ.

ಸ್ಟಾರ್ ಆಟಗಾರ ಹೆಚ್ಚಿಗೆ ಏನೂ ಹೇಳದೆ ಸುಮ್ಮನಿದ್ದದ್ದು (ಪ್ರತಿಮೆಗೆ ಹೆಚ್ಚು ಹತ್ತಿರವೂ ಹೋಗದಿದ್ದುದು), ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲೆಬ್ಬಿಸಿದ್ದು, ಶಿಲ್ಪಿಯನ್ನು ‘‘ಏನು ಪೀಕೆ ಕೆಲಸ ಮಾಡಿದೆಯ?’’ ಎಂದು ತರಾಟೆಗೆ ತೆಗೆದುಕೊಂಡಿದ್ದು, ಅವನು ‘‘ಹೇ ಬಿಡ್ರಪಾ, ಎಲ್ಲರನ್ನೂ ಎಲ್ಲಿ ಮೆಚ್ಚಿಸೋಕಾಗತ್ತೆ?’’ ಎಂದು ಗೊಣಗಿ ಕೈತೊಳೆದುಕೊಂಡಿದ್ದು...ಎಲ್ಲವೂ ಢಾಣಾಡಂಗುರ ಹೊಡೆಯುವುದು ಒಂದು ವಿಲಕ್ಷಣತೆಯನ್ನು. ಇಂಗ್ಲಿಷ್‌ನಲ್ಲಿ ‘ಪಾಲಿಮ್‌ಸೆಸ್ಟ್’ ಎಂದು ಕರೆಯಲಾಗುವ (ಸುಮಾರಾಗಿ, ಕಲಸುಫಲಕ ಎಂದು ಅನುವಾದಿಸಿಕೊಳ್ಳಬಹುದು) ಒಂದು ರೂಪಕಾತ್ಮಕ ಸಿದ್ಧಾಂತ ಇದರಿಂದ ನೆನಪಿಗೆ ಬಂತು. ಕವಿ ಗೋಪಾಲಕೃಷ್ಣ ಅಡಿಗರು ಬಳಸಿದ ‘ಮಣ್ಣಿನ ವಾಸನೆ’, ಟಿ.ಎಸ್. ಎಲಿಯಟ್ ವಿವರಿಸಿದ ಆಬ್ಜೆಕ್ಟಿವ್ ರಿಯಾಲಿಟಿ-ವಸ್ತು ಪ್ರತಿರೂಪ, ಅನಂತಮೂರ್ತಿ ಹುಟ್ಟುಹಾಕಿದ ‘ಹಿತ್ತಿಲು-ಜಗುಲಿ’ಯಂತೆಯೇ ಇದೂ ಒಂದು ಮನಸ್ಸಿನಲ್ಲಿಯೇ ಮುಳುಗಿ, ಕಷ್ಟಪಟ್ಟು ಅರ್ಥಮಾಡಿಕೊಳ್ಳಬೇಕಾದ ಸಂಗತಿ. ಹೆದರಿಕೆ ಬೇಡ, ಸಾವಕಾಶ ಮುಂದುವರಿಯೋಣ!

ಒಂದೇ ಒಂದು ಕಲ್ಲಿನ ಸ್ಲೇಟಲ್ಲಿ ನಾವೆಲ್ಲ ವರ್ಷಪೂರ್ತಿ, ಅಕ್ಷರ, ಕಾಗುಣಿತ, ಮಗ್ಗಿ, ಲೆಕ್ಕ...ಎಲ್ಲ ಬರೆದದ್ದು, ಅಳಿಸಿದ್ದು ಈ ಕಂಪ್ಯೂಟರ್ ಜನಿತ ಪ್ರಾಜೆಕ್ಟ್‌ಗಳ ಕಾಲದಲ್ಲಿ ಪುರಾಣ ಕತೆಯೇನೋ ಎಂಬಂತೆ ಕೇಳಿಸುತ್ತದೆ. ಪಾಲಿಮ್‌ಸೆಸ್ಟ್ ಪದಕ್ಕಿರುವ ಶಬ್ದಶಃ ಅರ್ಥ ಇದುವೇ, ಬರೆದು-ಒರೆಸಿದ-ಮತ್ತೆಬರೆದ- ಮತ್ತೆ ಒರೆಸಿದ-ಮತ್ತೆ ಮತ್ತೆ ಬರೆದ...ಫಲಕ. ಹದಮಾಡಿ, ಕೆರೆದು ತೆಳುಗೊಳಿಸಿದ ಪ್ರಾಣಿಚರ್ಮದ ಸ್ಲೇಟದು ಎಂಬುದಷ್ಟೇ ವ್ಯತ್ಯಾಸ. ಒರೆಸಿ ತೆಗೆದ ಬರಹಗಳು ಸ್ಲೇಟಲ್ಲಿ ಇನ್ನೂ ತುಣುಕುಗಳಲ್ಲಿ ಇವೆ ಎಂದು ಕಣ್ಣುಮುಚ್ಚಿ ಊಹಿಸಿಕೊಂಡರೆ? ಹಳೆಯ-ಹೊಸ ಅಕ್ಷರ ಗೀಚುಗಳೆಲ್ಲ ಹೇಗೋ ಹೊಂದಿಕೊಂಡು ಒಂದು ಸಮನ್ವಯ ಸಾಧಿಸಿವೆ ಎಂಬುದರ ಕಲ್ಪನೆ ಎಟಕಿದರೆ ಹೊಳೆಯುವುದೇ ಕಲಸುಫಲಕದ ರೂಪಕಾತ್ಮಕ ಅರ್ಥ; ಅದನ್ನು ನಾನಾ ಕ್ಷೇತ್ರಗಳಲ್ಲಿ ವಿಧವಿಧವಾಗಿ ಅನ್ವಯಿಸಿ ಕೊಳ್ಳಬಹುದಾದ ಸಾಧ್ಯತೆ.

ನಾವು ಆರಂಭಿಸಿದ ಉದಾಹರಣೆಯನ್ನೇ ನೋಡುವುದಾದರೆ, ಸ್ವತಃ, ಕೆತ್ತಿದ ಶಿಲ್ಪದಂತೆ ಚೆಲುವನಾಗಿರುವ ಆ ಕ್ರೀಡಾತಾರೆಯ ಮೂಲ ಚಹರೆ ಒರೆಸಿ, (ಅಜ್ಞಾನದಿಂದಲೇ ಆಗಲಿ) ತನ್ನದೊಂದು ಪ್ರತ್ಯೇಕ ಸೃಷ್ಟಿಯನ್ನು ಆ ಕಲಾಕಾರ ಮಾಡಿಬಿಟ್ಟ. ಈ ಪ್ರಯತ್ನದಲ್ಲಿ ಕುಪ್ರಸಿದ್ಧಗೊಂಡ ಎಂಬುದು ಅವನ ದುರದೃಷ್ಟ. ಆದರೆ, ಯಥಾವತ್ ಚಹರೆ ಹೊಂದಿಲ್ಲದಿದ್ದರೂ ಮಹಾತ್ಮಾ ಗಾಂಧಿ ಪಾತ್ರವನ್ನು ರಿಚರ್ಡ್ ಆಟೆನ್‌ಬರೊ ನಿರ್ದೇಶಿಸಿದ ‘ಗಾಂಧಿ’ ಚಿತ್ರದಲ್ಲಿ ಸಂಪೂರ್ಣ ನಿವೇದನೆಯಿಂದ ನಿರ್ವಹಿಸಿದ ಬ್ರಿಟಿಷ್ ನಟ, ಬೆನ್ ಕಿಂಗ್‌ಸ್ಲೇಗೆ ಪ್ರಸಿದ್ಧಿ ಹುಡುಕಿಕೊಂಡು ಬಂತು. ಈ ವಿದ್ಯಮಾನದಲ್ಲಿ ಭಾರತೀಯರೆಲ್ಲರ ಮನದಲ್ಲಿ ಸ್ಥಾಪಿತವಾಗಿದ್ದ ಮೋಹನದಾಸ ಕರಮಚಂದ ಗಾಂಧಿಯವರ ಮೂಲಚಹರೆ ಹಾಗೂ ತೆರೆಯ ಮೇಲಿನ ಕಿಂಗ್‌ಸ್ಲೇ ಚಹರೆಯ ಒಂದು ಕಲಸು ಫಲಕ ಅಸ್ತಿತ್ವಕ್ಕೆ ಬಂತು ಎಂದುಕೊಳ್ಳಬಹುದು.

ಆ ನಂತರ, ‘ಮೇಕಿಂಗ್ ಆಫ್ ದಿ ಮಹಾತ್ಮಾ’ದಲ್ಲಿ (ಶ್ಯಾಮ್ ಬೆನಗಲ್ ನಿರ್ದೇಶನ) ಗಾಂಧಿಯಾದ ರಜಿತ್ ಕಪೂರ್, ‘ಮುನ್ನಾಭಾಯಿ’ಯ ಬಾಪೂ ಆಗಿ ದಿಲೀಪ್ ಪ್ರಭಾವಲ್ಕರ್ ಬೆನಗಲ್‌ರದೇ ಸಂವಿಧಾನ ಸರಣಿಯಲ್ಲಿ ನೀರಜ್ ಕಾಬಿ, ಕನ್ನಡ ಸಿನೆಮಾ ‘ಕೂರ್ಮಾವತಾರ’ದಲ್ಲಿ ಶಿಕಾರಿಪುರ ಕೃಷ್ಣಮೂರ್ತಿ ಹಲವು ಗಾಂಧಿ ಚಿತ್ರ ನೀಡಿದರು...ಈಗ, (ಎಷ್ಟೇ ತಲೆ ಕೊಡವಿದರೂ) ಪದರ ಪದರವಾಗಿ ಒಂದರ ಮೇಲೊಂದು ಕೆನೆಗಟ್ಟಿರುವ ಈ ಬಿಂಬಗಳ ಒತ್ತುವರಿಯಲ್ಲಿ ಮೂಲಚಿತ್ರ ಬೆರಕೆಯಾಗದೆ ಉಳಿದಿದೆಯೆ? ಹೇಳುವುದು ಕಷ್ಟ. ಹಾಗೆಯೇ, ಸಂವಿಧಾನ ಸರಣಿಯಲ್ಲಿ ಅಂಬೇಡ್ಕರ್ ಪಾತ್ರ ನಿರ್ವಹಿಸಿದ ಖ್ಯಾತ ಕಲಾವಿದ ಸಚಿನ್ ಖೇಡೇಕರ್ ಸ್ವಲ್ಪದೊಡ್ಡ ಕಣ್ಣುಗಳ ಬಾಬಾ ಸಾಹೇಬರ ಮೂರ್ತಿ ಪ್ರೇಕ್ಷಕರ ಮನದಲ್ಲಿ ಸ್ಥಾಪಿಸಿದರೆ, ಮೇರು ನಟ ಮಮ್ಮುಟ್ಟಿ ನೀಳ ಮೂಗಿನ ಆವೃತ್ತಿ ಕೊಟ್ಟರು ಎಂದು ತಮಾಷೆಯಾಗಿ ಯೋಚಿಸಬಹುದು.

ಹಿಂದೆ ಪಟಗಳಿದ್ದ ಚೌಕ-ಆಯತಗಳು, ಖಾಲಿ ಮಾಡಿದ ಮನೆಯ ಮಾಸಲು ಗೋಡೆಯ ಮೇಲೆ ಬಿಳುಪಾಗಿ ಉಳಿದುಕೊಂಡಿರುವುದು, ಮಳೆಯಲ್ಲಿ ತೊಯ್ದ ಕಾರಿನ ಅಡಿ ಒಂದಷ್ಟು ಒಣ ಜಾಗ ಇರುವುದು ಕಲಸು ಫಲಕಕ್ಕೆ ಕೊಡಬಹುದಾದ ಕಚಗುಳಿಯ ಉದಾಹರಣೆಗಳು. ವಾಸ್ತುಶಿಲ್ಪ ವಿಜ್ಞಾನದಲ್ಲಿ ಪಾಲಿಮ್‌ಸೆಸ್ಟ್ ಆರ್ಕಿಯಾಲಜಿ ಎಂಬ ವಿಭಾಗವೇ ಇದೆಯಂತೆ. ಉದಾಹರಣೆಗೆ, ಪಾಳುಗುಡಿಯ ಉಳಿದಿರುವ ಕಟ್ಟಡ ಹಾಗೂ ಹಾಳುಗೆಡವಲಾದ ಅದೃಶ್ಯ ಕಟ್ಟಡ ಎರಡೂ ಸೇರಿದರೇನೇ ಸಂಪೂರ್ಣ ಚಿತ್ರ. ತಂದೆಯ ಕಾಲದ ಪುರಾತನ ಶೈಲಿಯ ಮನೆ ಹಾಗೂ ಅದರ ಒಳ ಅಲಂಕಾರ, ಮಗ-ಮೊಮ್ಮಗ-ಮರಿಮಕ್ಕಳ ಕಾಲದಲ್ಲಿ ಪೇರಿಸಿಕೊಂಡ ಬೇರೆ ಬೇರೆ ಭಿನ್ನ ಅಭಿರುಚಿಗಳ ಅಲಂಕರಣ ಸೇರಿ ಅಲ್ಲಿಯೂ ಕಲಸುಫಲಕಕ್ಕೆ ಒಂದು ನಿದರ್ಶನ ನಿರ್ಮಾಣವಾಗುತ್ತದೆ.

ಮನೋವಿಜ್ಞಾನದಲ್ಲಿ ಬಳಸುವ ಸಮೂಹ ಸುಪ್ತಪ್ರಜ್ಞೆ (ಅಂದರೆ ಇಡೀ ಮನುಷ್ಯ ಜನಾಂಗದ ಪ್ರಜ್ಞೆಯಲ್ಲಿ ಸಂಗ್ರಹವಾಗಿರುವ ಪ್ರವೃತ್ತಿ -ಪ್ರೇರಣೆ-ಯೋಚನೆ-ಅಭ್ಯಾಸ-ನಂಬಿಕೆಗಳ ಸತ್ವಸಾರ)-ಕಲೆಕ್ಟಿವ್ ಅನ್‌ಕಾನ್ಷಿಯಸ್‌ಗೂ ಕಲಸುಫಲಕದ ಹೋಲಿಕೆ ಇದೆ. ಇನ್ನು ಮುನ್ನೂರು ಚಿಲ್ಲರೆ ರಾಮಾಯಣಗಳನ್ನು ದಟ್ಟೈಸಿಕೊಂಡಿರುವ ಪುರಾಣ, ಸಂಪ್ರದಾಯ, ಸಂಸ್ಕೃತಿ-ಆಚರಣೆಗಳಂತೂ ಸರಿಯೇ ಸರಿ: ಮೌಂಟ್‌ಕಾರ್ಮೆಲ್‌ನಲ್ಲಿ ಓದುವ ಮರಿಮಗಳು ಕಂಗ್ಲಿಷ್‌ನಲ್ಲಿ ವಿವರಿಸುವ ಯುಗಾದಿ ಆಚರಣೆಯಲ್ಲಿ ಅವಳ ಮುತ್ತಜ್ಜಿ ಕಾಲದವೂ ಹೊಳೆದು ತಮ್ಮ ಅಸ್ತಿತ್ವ ತೋರುತ್ತವೆ. ಅಷ್ಟೆಲ್ಲ ಏಕೆ? ನಿರಂತರವಾಗಿ ಹುಟ್ಟುತ್ತ, ಸಾಯುತ್ತ ಇರುವ ಕ್ಷಣಗಳೇ ಕಾಲ ಅನಿಸಿಕೊಂಡರೆ, ಇಡೀ ಮಾನವತೆಯ ಅಸ್ತಿತ್ವಕ್ಕೆ ಆಧಾರ, ವಾಸ್ತವ ಎಂಬ ಕಲಸುಫಲಕದ ಸದಾ ಮುಂದೆ ಸಾಗುವ ವಿಸ್ತರಣೆ.

ಕನ್ವೆಯರ್ ಬೆಲ್ಟ್‌ನಂತೆ ಬಿಡುವಿಲ್ಲದೆ ಉರುಳುತ್ತಲೇ ಇರುವ ಕಾಲ ಸುರುಳಿಯಲ್ಲಿ ಕೆಲ ಮೂಲ ಚಹರೆಗಳು ಮಸುಕಾಗಿಯೂ ಸಿಗದೆ ಜಾರಿಬಿಡುತ್ತವೆ. ಆಗ ಒಂದು ಊಹಾತ್ಮಕವಾದುದನ್ನೇ ಮೂಲ ಎಂದು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ಆದಿ ಶಂಕರ, ಬಸವಣ್ಣ, ಅಲ್ಲಮಪ್ರಭು, ಮಹಾದೇವಿಯಕ್ಕ ನಮಗೆ ದೊರೆತಿರುವುದು ಕಲಾ ರಚನೆಗಳಲ್ಲಿಯೇ. ಹಾಗಾಗಿ, ಜಗಜ್ಯೋತಿ ಬಸವೇಶ್ವರ ಅಂದಾಕ್ಷಣ ಮನದಲ್ಲಿ ಮೂಡುವುದು, ಮಣಿಸರಗಳ ಕುಚ್ಚು ಕಿರೀಟದಿಂದ ಕಿವಿಯ ಬದಿ ತೂಗಾಡುತ್ತಿರುವ ಆಢ್ಯತೆಯ ಮೂರ್ತಿ. ಚಿತ್ರಪಟಗಳಲ್ಲಿರುವ ದೇವತೆಯನ್ನು ಯಥಾವತ್ತಾಗಿ ಅನುಕರಿಸಿ ಅಲಂಕರಿಸಿಕೊಂಡು, ಅದೇ ಹಿನ್ನೆಲೆ ಸೃಷ್ಟಿಸಿ ತೆಗೆಸಿಕೊಂಡ ಛಾಯಾಚಿತ್ರಗಳನ್ನು ವಿಶ್ವಮಟ್ಟದಲ್ಲಿ ಗುರುತಿಸಲ್ಪಡುವ ಕನ್ನಡ ಕಲಾವಿದೆ ಪುಷ್ಪಮಾಲಾ, ತಮ್ಮ ಅಭಿವ್ಯಕ್ತಿ ಕ್ರಮವಾಗಿ ಬಳಸಿದರು.

70-80ರ ದಶಕದಲ್ಲಿ ತಮಿಳು ನಟಿ ಕೆ.ಆರ್.ವಿಜಯ ಕಳೆಕಳೆಯ ಶಕ್ತಿದೇವತೆಯ ಪ್ರತಿರೂಪವಾಗಿ ದೇಶದ ದಕ್ಷಿಣಾದಿ ಪ್ರೇಕ್ಷಕರ ಮನದಲ್ಲಿ ನೆಲೆಗೊಂಡರು. ಕಿರುತೆರೆಯಲ್ಲಿ ರಾಮಾಯಣ, ಮಹಾಭಾರತಗಳ ಅವತರಣಿಕೆ ಪ್ರಸಾರವಾದಾಗ ನಮ್ಮ ಮುಖ್ಯ ದೇವ-ದೇವತೆಗಳೆಲ್ಲರಿಗೆ ಒಂದು ಚಹರೆ ದೊರಕಿತು...ಇವನ್ನೆಲ್ಲ ಕಲಸುಫಲಕ ರೂಪಕದ ಅಡಿ ಇಟ್ಟು ನೋಡುವುದು ಕುತೂಹಲಕರ. ಹತ್ಹತ್ತು ವರ್ಷ ಕಳೆಯುತ್ತಿದ್ದಂತೆ ನಮ್ಮ ಬಿಂಬಗಳೂ ನವೀಕರಣಗೊಂಡು ಕಲಸುಫಲಕಕ್ಕೆ ಕಾಣಿಕೆ ನೀಡುತ್ತಿರುವುದನ್ನು ಗಮನಿಸಿಯೂ ಗಮನಿಸದಂತೆ ಓಡಾಡಿಕೊಂಡಿರುತ್ತೇವೆ. ಕಣ್ಣ ಮೂಲೆಯಲ್ಲಿ ನೆರಿಗೆ ಗುಚ್ಛ ಚಿಮ್ಮುವುದು, ಹಣೆಯಲ್ಲಿ ಗೆರೆ ಕೊರೆಯುವುದು ಕಾಲಕಾಲಕ್ಕೆ ಆಗಲೇಬೇಕಾದ ಬದಲಾವಣೆಯೇ ಆದರೂ ಹಣವಂತರು ಅವನ್ನು ಪ್ರಸಾಧನ ಚಿಕಿತ್ಸೆಗಳಿಂದ ಧಿಕ್ಕರಿಸಲು ನೋಡುತ್ತಾರೆ. ಕೆಲ ಬಾರಿ ಯಶಸ್ಸು, ಕೆಲ ಬಾರಿ ಇನ್ನೂ ಕೆಟ್ಟದಾಗಿ ಆಗುವ ಪರಿಣಾಮಗಳಿಗೆ ಸಿದ್ಧರಿರಬೇಕಾದದ್ದು ಇದಕ್ಕೆ ತೆರಬೇಕಾದ ಬೆಲೆ. ತಲೆತುಂಬ ಕೂದಲಿದ್ದ ತಮ್ಮ ಭಾವಚಿತ್ರವನ್ನು ಆಗಾಗ ಭಾವತುಂಬಿ ನೋಡುತ್ತಾ ಸವಿನೆನಪಿಗೆ ಜಾರುವುದು ಕೆಲ ಪುರುಷರ ಪ್ರಿಯ ಹವ್ಯಾಸ!

ಸಾಫಾದ ಮುಖ ಇರುವ ಸೊಂಪು ತಾರುಣ್ಯದಲ್ಲಿಯೂ ನಿಗದಿತ ಮುಖ ಮುದ್ರೆಯ ಹಿಂದೆ, ಹಲವು ಓರೆಕೋರೆ, ಗೀಚು, ಗಚ್ಚು, ಮೆಳ್ಳೆಗಣ್ಣ ನೋಟ, ಅವಡುಚ್ಚು ಪೂರೈಕೆಯಾದ ಹಲವು ಮುಖಗಳು ಇರುತ್ತವೆಯೆ? ಖಂಡಿತ, ಕೋಪ-ತಾಪ, ಈರ್ಷ್ಯೆ-ದ್ವೇಷಗಳ ಶತ್ರುಸಮೂಹದ ದಾಳಿಗೆ ನಾವು ಒಳಗಾದಾಗ. ಇವನ್ನು ನೋಡಿರುವ ಜನ ತಮ್ಮ ಕಲಸುಫಲಕದಲ್ಲಿ ಈ ಅಕರಾಳ-ವಿಕರಾಳ ಚಿತ್ರಗಳನ್ನೂ ಶೀಘ್ರವಾಗಿ ಸೇರಿಸಿಕೊಳ್ಳುತ್ತಾರೆ ಎಂಬ ಎಚ್ಚರಿಕೆ ನಮ್ಮೆಲ್ಲರಿಗೂ ಇರಲಿ!

Writer - ವೆಂಕಟಲಕ್ಷ್ಮೀ ವಿ.ಎನ್.

contributor

Editor - ವೆಂಕಟಲಕ್ಷ್ಮೀ ವಿ.ಎನ್.

contributor

Similar News