ಗೋರಕ್ಷಕರ ಅಟ್ಟಹಾಸ: ಇದು ಕಗ್ಗೊಲೆ, ಬೇರೇನೂ ಅಲ್ಲ -ಬರ್ಖಾ ದತ್
ಪೆಹ್ಲೂಖಾನ್‌ರನ್ನು ರಾಜಸ್ಥಾನದ ಅಲ್ವಾರ್ ಹೆದ್ದಾರಿಯಲ್ಲಿ ವಾಹನದಿಂದ ಹೊರಗೆ ಎಳೆದುಹಾಕಿ, ರಸ್ತೆ ಪಕ್ಕಕ್ಕೆ ಎಳೆದೊಯ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿ, ನಾಲ್ಕು ದಿನಗಳ ಬಳಿಕ ಆತನ ಸಾವಿಗೆ ಕಾರಣರಾದ ವ್ಯಕ್ತಿಗಳು ಖಂಡಿತಾ ರಕ್ಷಕರಲ್ಲ; ಸ್ವಯಂನಿಯುಕ್ತಿಗೊಂಡ ಅಥವಾ ಬೇರೆಯವರಿಂದ ನಿಯುಕ್ತಿಗೊಂಡ ಇವರು ಸಾಮಾನ್ಯ ಅಪರಾಧಿಗಳಿಗಿಂತಲೂ ಕೀಳು. ಅಮಾಯಕನ ಹತ್ಯೆಯಾದಾಗ ಸಂತ್ರಸ್ತರ ಪರವಾಗಿ ನಿಲ್ಲುವ ಬದಲು ಘಟನೆಯನ್ನು ಸಮರ್ಥಿಸಿಕೊಳ್ಳುವವರ ನಡುವೆ ಇರುವ ಅಂಧ ಧಾರ್ಮಿಕ ಪೂರ್ವಾಗ್ರಹ ಹೊಂದಿದ ಕೊಲೆಗಡುಕರು.
ಸೌಮ್ಯೋಕ್ತಿ ನಿಲ್ಲಲಿ. ಇದನ್ನು ಕಗ್ಗೊಲೆ ಎಂದೇ ಕರೆಯಿರಿ. ಇದು ಥಳಿತ ಅಲ್ಲ. ಜಾಗೃತಿಯೂ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಗೋರಕ್ಷಕರೆಂದು ಹೇಳಿಕೊಳ್ಳುವುದು ನಿಲ್ಲಿಸಿ.
ಪೆಹ್ಲೂಖಾನ್‌ರನ್ನು ರಾಜಸ್ಥಾನದ ಅಲ್ವಾರ್ ಹೆದ್ದಾರಿಯಲ್ಲಿ ವಾಹನದಿಂದ ಹೊರಗೆ ಎಳೆದುಹಾಕಿ, ರಸ್ತೆ ಪಕ್ಕಕ್ಕೆ ಎಳೆದೊಯ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿ, ನಾಲ್ಕು ದಿನಗಳ ಬಳಿಕ ಆತನ ಸಾವಿಗೆ ಕಾರಣರಾದ ವ್ಯಕ್ತಿಗಳು ಖಂಡಿತಾ ರಕ್ಷಕರಲ್ಲ; ಸ್ವಯಂನಿಯುಕ್ತಿಗೊಂಡ ಅಥವಾ ಬೇರೆಯವರಿಂದ ನಿಯುಕ್ತಿಗೊಂಡ ಇವರು ಸಾಮಾನ್ಯ ಅಪರಾಧಿಗಳಿಗಿಂತಲೂ ಕೀಳು. ಅಮಾಯಕನ ಹತ್ಯೆಯಾದಾಗ ಸಂತ್ರಸ್ತರ ಪರವಾಗಿ ನಿಲ್ಲುವ ಬದಲು ಘಟನೆಯನ್ನು ಸಮರ್ಥಿಸಿಕೊಳ್ಳುವವರ ನಡುವೆ ಇರುವ ಅಂಧ ಧಾರ್ಮಿಕ ಪೂರ್ವಾಗ್ರಹ ಹೊಂದಿದ ಕೊಲೆಗಡುಕರು.
ಪೆಹ್ಲೂಖಾನ್ ಹರ್ಯಾಣ ಮೂಲದ ವ್ಯಾಪಾರಿಯಾಗಿದ್ದರೂ, ಹಲ್ಲೆಕೋರರಿಗೆ ಪರಿಪರಿಯಾಗಿ ಭಿನ್ನವಿಸಿಕೊಂಡಂತೆ ಅವರು ಹಸುಗಳನ್ನು ಸಾಗಿಸಲು ಸೂಕ್ತ ಕಾನೂನಾತ್ಮಕ ದಾಖಲೆಗಳನ್ನು ಹೊಂದಿದ್ದರು. ಇವುಗಳನ್ನು ಜೈಪುರ ಸಂತೆಯಲ್ಲಿ ಖರೀದಿಸಲಾಗಿತ್ತು. ಮುಕ್ತವಾಗಿ ಹೇಳಬೇಕೆಂದರೆ ಅವರು ದನ ಕಳ್ಳಸಾಗಣೆದಾರನಾಗಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ರಾಜ್ಯ ಪೊಲೀಸರ ಕರ್ತವ್ಯವೇ ವಿನಃ ಕಾನೂನು ಕೈಗೆತ್ತಿಕೊಳ್ಳಲು ಬೇರೆ ಯಾರಿಗೂ ಅಧಿಕಾರ ಇಲ್ಲ. ಕಾನೂನನ್ನು ಎತ್ತಿಹಿಡಿಯಬೇಕಾದ ರಾಜಸ್ಥಾನದ ಗೃಹ ಸಚಿವರು ಎರಡೂ ಮಗ್ಗುಲುಗಳನ್ನು ನೋಡದೆ ಏಕಪಕ್ಷೀಯವಾಗಿ ಹೇಳಿಕೆ ನೀಡಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.
2017ರ ಭಾರತದಲ್ಲಿ ನಾವು ಇಂಥ ಮಾರಕ ಗುಂಪುಗಳ ಜನರು ನೀಚ ಕೃತ್ಯ ಎಸಗಿದರೂ ಅವರ ಉದ್ದೇಶ ‘ಪರಿಶುದ್ಧ’ ಹಾಗೂ ‘ಪವಿತ್ರ’ ಎಂದು ಪರಿಗಣಿಸಬೇಕಾಗಿದೆ. ಗೋ ಸಂರಕ್ಷಣೆ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿದ್ದು, ದೇಶದಲ್ಲಿ ಮುಸ್ಲಿಮರು ಹಾಗೂ ಕೆಲವೆಡೆ ದಲಿತರನ್ನು ಗುರಿ ಮಾಡಲಾಗುತ್ತಿದೆ. ಧರ್ಮಾಂಧರು ಸಂಘಟಿತರಾಗಿ ಇಂಥ ಕೃತ್ಯ ಎಸಗುತ್ತಿದ್ದಾರೆ. ಇಂಥ ಹಲ್ಲೆಕೋರ ಗುಂಪುಗಳು ಎರಡು ಅಂಶಗಳನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ರಾಜಸ್ಥಾನ ಸಚಿವರ ಸಮರ್ಥನೆ ಹೇಳಿಕೆಯಂಥ ಆದರೆ, ಹೋದರೆ ಎಂಬ ಸರಕಾರದ ಗೊಂದಲಕಾರಿ ಸ್ಪಂದನೆ ಹಾಗೂ ನಮ್ಮ ಅಲ್ಪ, ಅಸ್ಥಿರ ನೆನಪು ನಮ್ಮನ್ನು ಪ್ರಕರಣದಿಂದ ದೂರ ಇರುವಂತೆ ಮಾಡುತ್ತದೆ ಎನ್ನುವುದು.
ಉತ್ತರ ಪ್ರದೇಶದಲ್ಲಿ ಮನೆಯಲ್ಲಿ ಗೋಮಾಂಸ ಹೊಂದಿದ್ದ ಎಂಬ ವದಂತಿಯ ಮೇರೆಗೆ ಮುಹಮ್ಮದ್ ಅಖ್ಲ್ಲಾಕ್ ಎಂಬವರನ್ನು ಹತ್ಯೆ ಮಾಡಿದ್ದು ಹಾಗೂ ವಾಯು ಪಡೆಯ ಕರ್ತವ್ಯದಲ್ಲಿರುವ ಅವರ ಮಗ, ಈ ದೇಶದಲ್ಲಿ ತಮಗೆ ಇನ್ನೂ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಇರುವುದನ್ನು ನಾವು ನೋಡಿದ್ದೇವೆ. ಮಜ್ಲೂಮ್ ಅನ್ಸಾರಿ ಹಾಗೂ ಇನಾಯತುಲ್ಲಾ ಖಾನ್ ಅವರನ್ನು 2016ರಲ್ಲಿ ಜಾರ್ಖಂಡ್‌ನ ಗ್ರಾಮವೊಂದರಲ್ಲಿ ಹತ್ಯೆ ಮಾಡಿ, ಹಸು ಕಟ್ಟುವ ಹಗ್ಗದಿಂದ ಅವರ ಕೈ ಕಟ್ಟಿಹಾಕಿ ಮರಕ್ಕೆ ನೇತುಹಾಕಿದ ಪ್ರಕರಣದ ನೆನಪಿಡುವುದು ಬಿಡಿ; ಬಹಳಷ್ಟು ಮಂದಿಯ ಗಮನಕ್ಕೇ ಈ ಘಟನೆ ಬರಲಿಲ್ಲ ಎನ್ನಬಹುದು. ಇಮ್ತಿಯಾಝ್ ಎಂಬ 12 ವರ್ಷದ ಬಾಲಕ; ಶಾಲಾ ವಿದ್ಯಾರ್ಥಿ, ಕುಟುಂಬಕ್ಕೆ ನೆರವಾಗುವ ಸಲುವಾಗಿ ಜಾನುವಾರು ಜಾತ್ರೆಗೆ ತಂದೆಯ ಜತೆ ಹೋಗಿದ್ದ. ಅನ್ಸಾರಿ ಹಸುವನ್ನು ಸಾಗಾಟ ಮಾಡಲು 20 ಸಾವಿರ ರೂಪಾಯಿ ಲಂಚ ನೀಡುವಂತೆ ಒಂದು ಗುಂಪು ಆಗ್ರಹಿಸಿತ್ತು ಎನ್ನುವುದು ಬಹಳ ಸಮಯದ ಬಳಿಕ ಬೆಳಕಿಗೆ ಬಂತು. ಹತ್ಯೆ ಘಟನೆಯ ಬಗ್ಗೆ ತನಿಖೆ ನಡೆಸಿದ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಈ ಘಟನೆಯನ್ನು ಈ ಹತ್ಯೆ ಪ್ರಕರಣ ನಿರ್ವಹಿಸುವಲ್ಲಿ ಪೊಲೀಸರ ಕೋಮು ಪೂರ್ವಾಗ್ರಹ ಎದ್ದುಕಾಣುತ್ತಿದೆ ಹಾಗೂ ಗೋರಕ್ಷಕರ ವಿರುದ್ಧ ಮುಸ್ಲಿಂ ವ್ಯಾಪಾರಿಗಳು ನೀಡಿದ ದೂರನ್ನು ನಿರ್ಲಕ್ಷಿಸಲಾಗಿದೆ ಎಂದು ವರದಿ ಮಾಡಿತ್ತು. ಈ ಘಟನೆ ನಡೆದ ಸ್ವಲ್ಪ ಸಮಯದ ಬಳಿಕ ಜಾರ್ಖಂಡ್ ಮುಖ್ಯಮಂತ್ರಿ, ‘‘ಭಾರತ ನಿಮ್ಮ ದೇಶವಾಗಿದ್ದರೆ, ಗೋವು ನಿಮ್ಮ ತಾಯಿ’’ ಎಂದು ಘೋಷಿಸಿದರು. ಆದರೆ ಯಾವ ತಾಯಿಯೂ ತನ್ನ ಹೆಸರಿನಲ್ಲಿ ಹತ್ಯೆ ನಡೆಯುವುದನ್ನು ಇಚ್ಛಿಸಲಾರಳು.
ಅನ್ಸಾರಿ ಹಾಗೂ ಖಾನ್ ಹತ್ಯೆಯನ್ನು ನಾವು ಅಷ್ಟಿಷ್ಟು ನೆನಪಿಟ್ಟುಕೊಂಡರೂ, ಝಾಯಿದ್ ಅಹ್ಮದ್ ಭಟ್ ಹತ್ಯೆ ಬಗ್ಗೆ ನಾವು ಗಮನವನ್ನೇ ಹರಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ಉಧಂಪುರದ ಹೆದ್ದಾರಿಯಲ್ಲಿ ಪೆಟ್ರೋಲ್ ಬಾಂಬ್ ದಾಳಿಯಿಂದ ತೀವ್ರ ಗಾಯಗೊಂಡು ದಿಲ್ಲಿ ಆಸ್ಪತ್ರೆಯಲ್ಲಿ ಈತ ಮೃತಪಟ್ಟಿದ್ದರು. ಶೇ. 60ರಷ್ಟು ಸುಟ್ಟಗಾಯಗಳಿಂದ ಆತ ಗುರುತು ಹಿಡಿಯದಷ್ಟು ವಿರೂಪಗೊಂಡಿದ್ದರು. ಮತ್ತೆ ಗೋಹತ್ಯೆಯ ಬಗೆಗಿನ ವದಂತಿಯನ್ನು ದೃಢಪಡಿಸುವುದು ಸಾಧ್ಯವೇ ಆಗಲಿಲ್ಲ.
ಮರೆತ ಸಂತ್ರಸ್ತರ ಬೆಳೆಯುತ್ತಿರುವ ಪಟ್ಟಿಗೆ ಪೆಹ್ಲೂ ಖಾನ್ ಹೊಸ ಸೇರ್ಪಡೆ. ಮತ್ತೊಂದು ದೊಡ್ಡ ಘಟನೆ ಸಂಭವಿಸುವ ವರೆಗೂ ಆತನ ಸುದ್ದಿ ಒಂದಷ್ಟು ಚಾಲ್ತಿಯಲ್ಲಿರಬಹುದು. ಸರಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಪರಸ್ಪರ ಹೊಂದಾಣಿಕೆಯಾಗುವವರೆಗೂ ಸಂಸತ್ತಿನಲ್ಲಿ ಆತ ಚರ್ಚೆಯ ವಸ್ತುವಾಗಬಹುದು. ಒಂದಷ್ಟು ಸಿಟ್ಟು, ಆಕ್ರೋಶ, ವಿಶ್ಲೇಷಣೆಗಳು ನಡೆಯಬಹುದು; ಚರ್ಮದ ಉತ್ಪನ್ನಗಳಿಂದ ಹಿಡಿದು ಸಂಗೀತ ಪರಿಕರಗಳವರೆಗೆ ದನದ ಚರ್ಮವನ್ನು ನಮ್ಮ ಬದುಕಿನಲ್ಲಿ ಹೇಗೆ ಬಳಸಲಾಗುತ್ತದೆ ಎಂಬ ವಿಚಾರಗಳನ್ನು ಹೇಳುತ್ತೇನೆ ಕೇಳಿ. ‘‘ಪ್ರಧಾನಿ ಮೌನ ಮುರಿದು ಘಟನೆ ಬಗ್ಗೆ ಹೇಳಿಕೆ ನೀಡಬೇಕು’’ ಎಂದು ಆಗ್ರಹಿಸಬಹುದು. 2016ರಲ್ಲಿ ನಾಲ್ವರು ದಲಿತರ ಮೇಲೆ ಹಲ್ಲೆ ನಡೆದಾಗ ವರ್ತಿಸಿದಂತೆ ಅವರು ವರ್ತಿಸಬಹುದು. ‘‘ಗೋರಕ್ಷಣೆ ಎನ್ನುವುದು ದಂಧೆಯಾಗಿ ಬೆಳೆದಿದೆ’’ ಎಂದು ಬಣ್ಣಿಸಬಹುದು. ‘‘ಗೋರಕ್ಷಣೆಯ ಮುಖವಾಡ ಧರಿಸಿರುವ ಶೇ. 80ರಷ್ಟು ಮಂದಿ ಸಮಾಜಘಾತುಕರು’’ ಎಂದು ಹೇಳಿಕೆ ನೀಡಬಹುದು. ಇಷ್ಟಾಗಿಯೂ ಉತ್ತರ ಪ್ರದೇಶದ ಹಲವು ಮಂದಿ ಬಿಜೆಪಿ ಮುಖಂಡರು ದಾದ್ರಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪರವಾಗಿಯೇ ನಿಂತರು. ಗೋಮಾಂಸ ಸೇವನೆಗಾಗಿ ಅಖ್ಲಾಕ್ ಕುಟುಂಬಕ್ಕೆ ಶಿಕ್ಷೆಯಾಗಬೇಕು ಎಂದೇ ಆಗ್ರಹಿಸಿದರು. ವಿರೋಧ ಪಕ್ಷಗಳ ಆಕ್ರೋಶ ಕೂಡಾ ಬೂಟಾಟಿಕೆ ಎನಿಸಬಹುದು. ದಾದ್ರಿ ಹತ್ಯೆ ಬಳಿಕ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್, ಕಾಂಗ್ರೆಸ್ ಪಕ್ಷ ಕೂಡಾ 24 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಿತ್ತು ಎಂದು ಹೇಳಿಕೆ ನೀಡಿದರು. ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧವಾಗಬೇಕು ಎಂಬ ಬಗ್ಗೆ ಮುಕ್ತ ಚರ್ಚೆಗೂ ಸಿದ್ಧ ಎಂದು ಘೋಷಿಸಿದರು. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ಗೋಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತಂದಿರುವುದರಿಂದ ಬಿಜೆಪಿ ಗುಡುಗಬಹುದು. ಆದರೆ ತನ್ನ ರಾಜಕೀಯ ಅಸ್ತಿತ್ವ ವಿಸ್ತರಿಸಿಕೊಳ್ಳಲು ಹೆಣಗುತ್ತಿರುವ ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಆ ಬಗ್ಗೆ ಚಕಾರವನ್ನೂ ಎತ್ತಲಾರದು.
ಪತ್ರಿಕೆಗಳ ಮುಖಪುಟಗಳಲ್ಲಿ ದೊಡ್ಡ ಚರ್ಚೆಯಾಗಿ, ನ್ಯೂಸ್ ಚಾನಲ್‌ಗಳ ಪ್ರೈಮ್ ಟೈಂನಲ್ಲಿ ಚರ್ಚೆಗಳು ಆದ ಬಳಿಕ ನಾವು ನಮ್ಮ ಮಾಮೂಲಿ ಜೀವನದತ್ತ ಹೊರಳುತ್ತೇವೆ. ಮುಂದಿನ ಹತ್ಯೆಯ ವರೆಗೆ ಕೂಡಾ. ಈ ಮಧ್ಯೆ ಗೋರಕ್ಷಕರು ಬೆಳೆಯುತ್ತಾರೆ. ಇದು ಹೊಸ ಮಾಮೂಲಿಯಾಗುತ್ತದೆ.
(ಬರ್ಖಾದತ್ ಪ್ರಶಸ್ತಿ ವಿಜೇತ ಪತ್ರಕರ್ತೆ ಮತ್ತು ಲೇಖಕಿ)