ನನ್ನ ತಾಯಿ ರಹಸ್ಯವಾಗಿ ನನಗೆ ಜನ್ಮ ನೀಡಿದ್ದರು : ಸುರಯ್ಯಾ

Update: 2017-04-11 06:38 GMT

ನನ್ನ ತಾಯಿಯನ್ನು ನಾನು ‘ಅಮ್ಮ’ ಎಂದು ಕರೆದಿರಲೇ ಇಲ್ಲ. ಆಕೆಯನ್ನು ಅಮ್ಮ ಎಂದು ಕರೆಯುವುದನ್ನು ನಿಷೇಧಿಸಲಾಗಿತ್ತು. ನನ್ನ ತಾಯಿ ರಹಸ್ಯವಾಗಿ ನನಗೆ ಜನ್ಮ ನೀಡಿದ್ದರು. ನನ್ನ ತಂದೆ ಆಕೆಯನ್ನು ಹಿಂದಕ್ಕೆ ಕರೆದುಕೊಂಡು ಹೋಗಲು ಬರಲೇ ಇಲ್ಲ ಎಂದು ನಾನು ಕೇಳಿದ್ದೇನೆ. ಅವರು ಎಲ್ಲಿಗೆ ಹೋದರು ಎಂದು ಯಾರಿಗೂ ತಿಳಿದಿಲ್ಲ. ನನ್ನ ತಾಯಿಯ ಮದುವೆಯ ದಿನದಂದು ಆಕೆ ನನ್ನನ್ನು ಎದೆಗವಚಿಕೊಂಡು ಜೋರಾಗಿ ಅತ್ತು ಬಿಟ್ಟಳು.

ನಾನು ಐದು ವರ್ಷದವಳಾಗಿದ್ದೆ ಹಾಗೂ ನನ್ನ ತಾಯಿಯನ್ನು ‘ಅಮ್ಮ’ ಎಂದು ಕರೆಯಲು ಯಾರೂ ನನಗೆ ಅವಕಾಶ ನೀಡಲಿಲ್ಲ. ಆಕೆಯ ಮೈಯಲ್ಲಿದ್ದ ಶ್ರೀಗಂಧದ ಪರಿಮಳ ನನ್ನನ್ನು ಮೋಡಿ ಮಾಡಿತ್ತು. ‘‘ಆಂಟಿ, ನಿಮ್ಮ ಪರಿಮಳ ಅದ್ಭುತ,’’ ಎಂದು ನಾನು ಆಕೆಗೆ ಹೇಳಿದ್ದೆ. ನಾನು ಆಕೆಯ ದಿವಂಗತ ಸಹೋದರಿಯ ಪುತ್ರಿಯೆಂದು ಎಲ್ಲರಂತೆ ನನ್ನ ಹೊಸ ತಂದೆಯೂ ತಿಳಿದಿದ್ದರು.

ಆತ ನನ್ನತ್ತು ಬೊಟ್ಟು ಮಾಡಿ ತೋರಿಸಿ ನಾನು ಅವರ ಹಳ್ಳಿಗೆ ಭೇಟಿ ನೀಡಲೇ ಬಾರದೆಂದು ನನ್ನ ಅಜ್ಜಿಯ ಬಳಿ ಹೇಳಿದರು. ನನ್ನ ಅಜ್ಜಿ ನಕ್ಕು ಬಿಟ್ಟರು ಹಾಗೂ ನನ್ನ ತಾಯಿಯ ಕೈಯ್ಯಿಂದ ನನ್ನನ್ನು ಸೆಳೆದು ನಾನು ಅಲ್ಲಿಗೆ ಯಾವತ್ತೂ ಭೇಟಿ ನೀಡುವುದಿಲ್ಲವೆಂದು ಹೇಳಿದರು. ನನ್ನ ತಾಯಿ ಹೊರಡುವಾಗ ನನ್ನನ್ನು ಅಡುಗೆ ಮನೆಯೊಳಗೆ ಕಟ್ಟಿ ಹಾಕಲಾಯಿತು. ನನ್ನ ಹೃದಯ ಆಕೆಯ ಹಿಂದೆ ಓಡುತ್ತಿತ್ತು. ’’ಆಂಟಿ, ಹಿಂದೆ ಬನ್ನಿ’’ ಎಂದು ನಾನು ಕೂಗಿದೆ.

ನನ್ನ ಅಜ್ಜಿ ನನ್ನ ತಾಯಿಗೆ ಜನ್ಮ ನೀಡಿದಾಗ ನನ್ನ ಅಜ್ಜ ಒಂದು ತೆಂಗಿನ ಮರ ನೆಟ್ಟಿದ್ದರು. ಆ ಮರಕ್ಕೆ ನನ್ನ ತಾಯಿಯದೇ ಪ್ರಾಯ. ಆ ಮರವನ್ನು ‘ಅಮ್ಮ’ ಎಂದು ಕರೆಯಲು ಆಕೆ ನನಗೆ ಕಲಿಸಿದ್ದಳು. ಇಪ್ಪತ್ತು ವರ್ಷಗಳ ತನಕ ನಾನು ಆ ಮರವನ್ನು ‘ಅಮ್ಮ’ ಎಂದು ಕರೆಯುತ್ತಿದ್ದೆ. ನಾನು ಆಕೆಯನ್ನು ನೋಡಲು ಹೋಗಲಿಲ್ಲ ಆಕೆಯೂ ನನ್ನನ್ನು ನೋಡಲು ಬರಲಿಲ್ಲ. ಕೆಲವೊಮ್ಮೆ ನಾನು ರಹಸ್ಯವಾಗಿ ಆ ಮರವನ್ನು ಅಪ್ಪಿ ಹಿಡಿದು ನಾನು ನನ್ನ ಅಮ್ಮನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪಿಸುಮಾತಿನಲ್ಲಿ ಹೇಳುತ್ತಿದ್ದೆ.

ರಾತ್ರಿ ಮಲಗುವುದು ತುಂಬ ಕಷ್ಟವಾಗುತ್ತಿತ್ತು. ನನಗೆ ಆಕೆಯ ಸುವಾಸನ ಬೇಕೆನಿಸುತ್ತಿತ್ತು. ಆ ಶ್ರೀಗಂಧದ ಪರಿಮಳವಿಲ್ಲದೆ ನನಗೆ ನಿದ್ದೆಗೆ ಜಾರಲು ಸಾಧ್ಯವೇ ಇರಲಿಲ್ಲ. ಹಲವಾರು ರಾತ್ರಿ ನಾನು ಅತ್ತಿದ್ದೆ ಆದರೆ ‘ಅಮ್ಮ’ ಎಂದು ಮಾತ್ರ ನಾನು ಹೇಳಲಿಲ್ಲ.

ನನ್ನ ಎಲ್ಲಾ ಖರ್ಚುಗಳಿಗೆ ಅಮ್ಮ ಹಣ ಕಳುಹಿಸುತ್ತಿದ್ದಳು ಆದರೆ ನಾನು ಒಬ್ಬಂಟಿಯಾಗಿಯೇ ಬೆಳೆದು ಬಿಟ್ಟೆ. ನನ್ನ ಮದುವೆಯ ದಿನ ಎಲ್ಲಾ ವಸ್ತುಗಳ ಜತೆ ನನ್ನ ಅಮ್ಮ ನನ್ನ ಮದುವೆಯ ಸೀರೆಯನ್ನೂ ಕಳುಹಿಸಿಕೊಟ್ಟಿದ್ದರು. ನನ್ನ ತಂದೆ ಆಕೆಗೆ ಆಕೆಯ ಮದುವೆದಿನ ಕೊಟ್ಟ ಸೀರೆ ಅದಾಗಿತ್ತು. ನನ್ನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಆಕೆಗೆ ಅನುಮತಿಯಿರಲಿಲ್ಲ. ಆದರೆ ಈ ಬಾರಿ ನಾನು ಆಕೆಯನ್ನು ಮಿಸ್ ಮಾಡಿಕೊಳ್ಳಲಿಲ್ಲ. ಆಕೆಯ ಶ್ರೀಗಂಧದ ಸುವಾಸನೆಯಿದ್ದ ಆಕೆಯ ಮದುವೆ ಸೀರೆಯನ್ನು ನಾನು ಉಟ್ಟಿದ್ದೆ.

ಆಕೆ ನನ್ನನ್ನು ಮಿಸ್ ಮಾಡಿಕೊಂಡಿದ್ದಳೋ ಇಲ್ಲವೋ ನನಗೆ ತಿಳಿದಿಲ್ಲ. ನನ್ನಲ್ಲಿ ಏನಾದರೂ ಹೇಳಲು ಆಕೆಗೆ ಮನಸ್ಸಿತ್ತೇ ಎಂದೂ ನನಗೆ ತಿಳಿದಿಲ್ಲ. ನನ್ನ ತಾಯಿ ಮೃತಪಟ್ಟಾಗಿ ಆಕೆಯನ್ನು ಕೊನೆಯ ಬಾರಿಗೆ ಒಮ್ಮೆ ನೋಡುವ ಸಲುವಾಗಿ ಅವರು ನನ್ನನ್ನು ಕರೆದುಕೊಂಡು ಹೋಗಬೇಕೆಂದಿದ್ದರು. ಆದರೆ ನಾನು ಆಕೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ.

ಇಂದಿಗೂ ನನಗೆ ನನ್ನ ತಾಯಿ 18 ವರ್ಷದ ಒಬ್ಬಳು ಸುಂದರ ಹುಡುಗಿ, ಆಕೆಯ ಉದ್ದ ಕೂದಲು ಹಾಗೂ ಬೊಗಸೆ ಕಂಗಳೇ ಆಕೆಯ ಮೇಲೆ ಮೋಹಗೊಳ್ಳಲು ಸಾಕು. ನಾನು ಕಣ್ಣು ಮುಚ್ಚಿದಾಗಲೆಲ್ಲಾ ಆಕೆಯ ಕಣ್ಣೀರ ಸಾಗರವೇ ತುಂಬಿರುವ ಬೊಗಸೆ ಕಂಗಳನ್ನೇ ನೋಡುತ್ತೇನೆ. ನನ್ನ ಕನಸುಗಳಲ್ಲಿ ಚಿಂತೆ ಮಾಡದಂತೆ ನಾನು ಆಕೆಗೆ ಹೇಳುತ್ತೇನೆ. ಆಕೆಯಿಲ್ಲದೆ ನಾನು ಸಂತೋಷದಿಂದಿದ್ದೇನೆ ಎಂದು ಆಕೆಗೆ ಹೇಳುತ್ತೇನೆ. ಆದರೆ ಕೆಲವೊಮ್ಮೆ ಜೋರಾಗಿ ಬೊಬ್ಬೆ ಹೊಡೆದು ಆಕೆಯನ್ನು ‘ಅಮ್ಮಾ, ಅಮ್ಮಾ ಹಿಂದೆ ಬಾ’’ ಎಂದು ಹೇಳಬೇಕೆನಿಸುತ್ತದೆ.

- ಸುರಯ್ಯಾ

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News