ಅಪಘಾತಕ್ಕೆ ಕಡಿವಾಣ, ರಸ್ತೆ ಸುರಕ್ಷತೆ: ಮೋಟಾರು ವಾಹನ ಕಾಯ್ದೆಯ ಆದ್ಯತೆ

Update: 2017-04-11 16:42 GMT

ಹೊಸದಿಲ್ಲಿ, ಎ.11: ಲೋಕಸಭೆಯಲ್ಲಿ ಸೋಮವಾರ ಅಂಗೀಕಾರಗೊಂಡ ಮೋಟಾರು ವಾಹನ ತಿದ್ದುಪಡಿ ವಿಧೇಯಕವು ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡದಲ್ಲಿ ಹಲವು ಪಟ್ಟು ಏರಿಕೆ, ರಸ್ತೆ ಸುರಕ್ಷತೆಗೆ ಒತ್ತು, ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುವ ದಂಡದಲ್ಲಿ 5 ಪಟ್ಟು ಹೆಚ್ಚಳ, ನಕಲಿ ಲೈಸೆನ್ಸ್ ಮತ್ತು ವಾಹನಕಳ್ಳತನ ತಡೆಗೆ ಕಠಿಣ ಕ್ರಮ ಸೇರಿದಂತೆ ಸಾರಿಗೆ ವಲಯದಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ತರುವ ಉದ್ದೇಶ ಹೊಂದಿದೆ.

 2016ರ ಮೋಟಾರು ವಾಹನ (ತಿದ್ದುಪಡಿ) ವಿಧೇಯಕವು, ಕಾಯ್ದೆಯಾಗಿ ಜಾರಿಗೆ ಬಂದಲ್ಲಿ, ವಾಹನಗಳ ನೋಂದಣಿ, ಲೈಸೆನ್ಸಿಂಗ್ ಸೇರಿದಂತೆ ಎಲ್ಲಾ ಸಾರಿಗೆ ಪ್ರಕ್ರಿಯೆಗಳನ್ನು ಇ-ಆಡಳಿತದ ವ್ಯಾಪ್ತಿಗೆ ಬರಲಿದೆ. ವಾಹನ ಅಪಘಾತದಲ್ಲಿ ಸಂಭವಿಸುವ ಸಾವಿಗೆ ಗರಿಷ್ಠ 10 ಲಕ್ಷ ರೂ.ವಿಮಾ ಪರಿಹಾರಯನ್ನು ವಿಧಿಸಲು ವಿಧೇಯಕವು ಬಯಸಿದೆ. 30 ವರ್ಷಗಳಷ್ಟು ಹಳೆಯದಾದ 1988ರ ಮೋಟಾರು ವಾಹನ ಕಾಯ್ದೆಗೆ ಈ ವಿಧೇಯಕದ ಮೂಲಕ ತಿದ್ದುಪಡಿ ತರಲಾಗುವುದು.

  ಸಾರಿಗೆ ಕ್ಷೇತ್ರದಲ್ಲಿ ಇ-ಆಡಳಿತ ವ್ಯವಸ್ಥೆ ಜಾರಿಗೊಂಡ ಬಳಿಕ ನಕಲಿ ಡ್ರೈವಿಂಗ್ ಲೈಸೆನ್ಸ್‌ಗಳಿಗಾಗಲಿ ಅಥವಾ ವಾಹನಗಳ ಕಳ್ಳತನಕ್ಕಾಗಿ ಅವಕಾಶವಿರುವುದಿಲ್ಲವೆಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಸದನದಲ್ಲಿ ವಿಧೇಯಕ ಮಂಡನೆ ವೇಳೆ ತಿಳಿಸಿದ್ದರು.

  ಅಪಘಾತಗಳಲ್ಲಿ ನಾಲ್ಕು ತಿಂಗಳೊಳಗೆ 5 ಲಕ್ಷ ರೂ. ಪರಿಹಾರ ನೀಡುವುದನ್ನು ಈ ವಿಧೇಯಕವು ಪ್ರಸ್ತಾಪಿಸಿದೆ. ಈ ಪರಿಹಾರ ಮೊತ್ತವು ಅಪಘಾತ ಪರಿಹಾರದ ಇಡೀ ಮೊತ್ತವನ್ನು ವಿಮಾ ಕಂಪೆನಿಗಳೇ ಭರಿಸಬೇಕೆಂಬ ನಿಯಮವನ್ನು ಕೂಡಾ ಅಳವಡಿಸಲಾಗಿದೆ.
  ಗುದ್ದೋಡು (ಹಿಟ್ ಆ್ಯಂಡ್ ರನ್) ಪ್ರಕರಣಗಳಲ್ಲಿ ಪರಿಹಾರದ ಮೊತ್ತವನ್ನು ಈಗ ಇರುವುದಕ್ಕಿಂತ ಎಂಟು ಪಟ್ಟು ಹೆಚ್ಚಿಸಲೂ ಈ ವಿಧೇಯಕವು ಅವಕಾಶ ನೀಡುತ್ತದೆ.

ವಿಧೇಯಕದ ಮುಖ್ಯಾಂಶಗಳು
► ಅಪಘಾತ ನಡೆದ ಐದು ತಿಂಗಳೊಳಗೆ ಸಂತ್ರಸ್ತ ಕುಟುಂಬಕ್ಕೆ ನಾಲ್ಕು ತಿಂಗಳೊಳಗೆ 5 ಲಕ್ಷ ರೂ.ವರೆಗೆ ವಿಮಾ ಪರಿಹಾರ ಪಾವತಿ. ಪ್ರಸ್ತುತ ಪರಿಹಾರ ಪಾವತಿಗೆ ನಾಲ್ಕರಿಂದ ಐದು ವರ್ಷಗಳವರೆಗೂ ಸಮಯ ತಗಲುತ್ತದೆ.

► 3 ದಿನಗಳೊಳಗೆ ಡ್ರೈವಿಂಗ್ ಲೈಸೆನ್ಸ್ ನೀಡದಿದ್ದರೆ ಆರ್‌ಟಿಓ ವಿರುದ್ಧ ಕ್ರಮ

► ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನ ನೋಂದಣಿಗೆ ಆಧಾರ್ ಲಿಂಕ್

► ಮದ್ಯ ಸೇವಿಸಿ ವಾಹನ ಚಾಲನೆ, ಅಪಾಯಕಾರಿ ಡ್ರೈವಿಂಗ್, ಓವರ್‌ಲೋಡಿಂಗ್, ಇತ್ಯಾದಿ ಸಂಚಾರಿ ನಿಯಮಗಳ ಉಲ್ಲಂಘನೆಗೆ ಭಾರೀ ದಂಡ

►ವಿಮಾ ಮೊತ್ತ ಪಾವತಿಗೆ ಕಾಲಮಿತಿ ನಿಗದಿ

►ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಸಹಿತ ಎಲ್ಲಾ ಸಾರಿಗೆ ಪ್ರಕ್ರಿಯೆಗಳು ಇ-ಆಡಳಿತದ ವ್ಯಾಪ್ತಿಗೆ

► ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನಡಿ ಅಪಘಾತ ಸಂತ್ರಸ್ತರಿಗೆ 10 ಲಕ್ಷ ರೂ.ವರೆಗೆ ಪರಿಹಾರ

 
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News