ಈ ಕಲಬೆರಕೆ ತಡೆಗೆ ಬೇಕಿದೆ ಒಂದು ಕಾನೂನು

Update: 2017-04-13 03:27 GMT

ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ. ಕಾಳಿದೇವಿಯನ್ನು ಒಲಿಸಿ ಕೊಳ್ಳುವುದಕ್ಕಾಗಿ ಮಗನೊಬ್ಬ ತನ್ನ ತಾಯಿಯ ರುಂಡವನ್ನೇ ಕತ್ತರಿಸಿ ಹಾಕಿದ್ದಾನೆ. ಕಾಳಿ ದೇವಸ್ಥಾನದಲ್ಲಿ ತಾಯಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾಗ ಇದು ನಡೆದಿದೆ. ತನ್ನ ತಾಯಿಯನ್ನು ಕೊಂದರೆ ದೇವತೆ ಒಲಿಯುತ್ತಾಳೆ ಎಂದು ಆತನಿಗೆ ತಿಳಿಸಿದ ಧರ್ಮಗುರುವಾದರೂ ಯಾರು? ತಾಯಿಯ ಸೇವೆಗೈದು ದೇವರನ್ನು ಒಲಿಸಿಕೊಂಡ ಮಕ್ಕಳಿದ್ದಾರೆ. ತಾಯಿಯ ಪಾದ ಬುಡದಲ್ಲಿ ಸ್ವರ್ಗವಿದೆ ಎಂದು ನಂಬುವ ಜನರಿದ್ದಾರೆ. ಇಂತಹ ಸಂದರ್ಭದಲ್ಲಿ ತಾಯಿಯನ್ನು ಕೊಂದು ದೇವರನ್ನು ಒಲಿಸಿಕೊಳ್ಳಲು ಹೊರಟ ಈತನ ಕ್ರೌರ್ಯದ ಹಿಂದೆ ಇರುವ ವೌಢ್ಯ ನಿಜಕ್ಕೂ ಆಘಾತಕಾರಿಯಾದುದು ಮಾತ್ರವಲ್ಲ, ಸಮಾಜಕ್ಕೆ ಅಪಾಯಕಾರಿಯಾದುದು ಕೂಡ. ಪಶ್ಚಿಮಬಂಗಾಳದಲ್ಲಿ ಇಂತಹ ಬಲಿ ಪ್ರಕರಣಗಳು ಆಗಾಗ ಬಹಿರಂಗವಾಗುತ್ತಿರುತ್ತವೆ.

ಸಾಕ್ಷರತೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಕೇರಳದಲ್ಲಿ ಇದಕ್ಕಿಂತಲೂ ಭೀಕರವಾದ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಅತ್ಯಂತ ವಿದ್ಯಾವಂತನಾಗಿರುವ ವ್ಯಕ್ತಿಯೊಬ್ಬ ಆತ್ಮ ಮತ್ತು ದೇಹವನ್ನು ಪ್ರತ್ಯೇಕಿಸುವ ತನ್ನ ಪ್ರಯೋಗಕ್ಕಾಗಿ ತಂದೆ, ತಾಯಿ ಮತ್ತು ತಂಗಿಯನ್ನು ಕೊಂದು ಹಾಕಿದ ಬರ್ಬರ ಕೃತ್ಯ ತಿರುವನಂತಪುರದಲ್ಲಿ ನಡೆದಿದೆ. ಈ ಮೂಲಕ ತನ್ನ ಸಂಬಂಧಿಕರಿಗೆ ಮೋಕ್ಷವನ್ನು ನೀಡಿದ್ದೇನೆ ಎಂದು ಈತ ನಂಬಿದ್ದಾನೆ. ಇಂದು ಟಿವಿಗಳಲ್ಲೂ ನಾವು ಕೆಲವು ಕಪಟ ಸ್ವಾಮೀಜಿಗಳು ವ್ಯಕ್ತಿಯ ಆತ್ಮದ ಜೊತೆಗೆ ಮಾತನಾಡುವ ಪ್ರಹಸನಗಳನ್ನು ನೋಡುತ್ತಿದ್ದೇವೆ. ಇಂತಹ ಟಿವಿಗಳು ಅಥವಾ ಇಂತಹ ಕಪಟ ಸ್ವಾಮೀಜಿಗಳ ಪ್ರಭಾವಗಳು ಕೆಲವೊಮ್ಮೆ ವ್ಯಕ್ತಿಯನ್ನು ಎಂತಹ ಸ್ಥಿತಿಗೆ ತಲುಪಿಸಬಹುದು ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಅಷ್ಟೇ ಅಲ್ಲ, ವೌಢ್ಯಗಳಿಗೆ ಅನಕ್ಷರಸ್ಥರಷ್ಟೇ ಅಲ್ಲ, ವಿದ್ಯಾವಂತರೂ ಬಲಿಯಾಗುತ್ತಾರೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಬಲಿಯಾದವರಲ್ಲಿ ಓರ್ವ ವೈದ್ಯರಾಗಿದ್ದಾರೆ.

 ಇತ್ತೀಚೆಗೆ ಬೆಂಗಳೂರು ಸಮೀಪ, 9 ವರ್ಷದ ಹೆಣ್ಣು ಮಗುವೊಂದನ್ನು ಬಲಿ ಅರ್ಪಿಸಿದ ಘಟನೆ ನಡೆದಿದೆ. ಕೂಲಿಕಾರ್ಮಿಕನ ಮಗಳು ಈಕೆ. ಮರುದಿನ ಈ ಮಗುವಿನ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಯಿತು. ಕಲಬುರಗಿ ಸಹಿತ ಉತ್ತರ ಕರ್ನಾಟಕದಲ್ಲಿ ನಿಧಿಗಾಗಿ ಬಲಿ, ದೇವರನ್ನು ಒಲಿಸುವುದಕ್ಕಾಗಿ ಬಲಿ ಅರ್ಪಿಸುವ ಘಟನೆಗಳು ಪದೇ ಪದೇ ಬಹಿರಂಗವಾಗುತ್ತಿವೆ. ಅಸ್ಸಾಂನಲ್ಲಿ ಇನ್ನೊಂದು ವಿಭಿನ್ನ ಘಟನೆ ನಡೆದಿದೆ. ಮಾಟ ಮಂತ್ರ ಮಾಡುತ್ತಿದ್ದಾರೆ ಎಂದು ಆರೋಪಿ ದಂಪತಿಗೆ ಸಾರ್ವಜನಿಕರು ಬರ್ಬರವಾಗಿ ಥಳಿಸಿರುವುದಲ್ಲದೆ, ಅವರನ್ನು ಜೀವಂತ ದಫನ ಮಾಡುವುದಕ್ಕೆ ಯತ್ನಿಸಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.

ಈಶಾನ್ಯ ಭಾರತದಲ್ಲಿ ಮಾಟಗಾತಿ ಎಂಬ ಆರೋಪದಲ್ಲಿ ಮಹಿಳೆಯರನ್ನು ಥಳಿಸುವುದು, ಜೀವಂತ ದಹಿಸುವುದು, ಕೊಂದು ಹಾಕುವುದು ನಿರಂತರವಾಗಿ ನಡೆಯುತ್ತಲೇ ಬರುತ್ತಿವೆ. ಕಳೆದ 14 ವರ್ಷಗಳಲ್ಲಿ ಭಾರತಾದ್ಯಂತ ಮಾಟ ಮಂತ್ರದ ಹೆಸರಲ್ಲಿ 2000ಕ್ಕೂ ಅಧಿಕ ಮಹಿಳೆಯರನ್ನು ಕೊಂದು ಹಾಕಲಾಗಿದೆ ಎನ್ನುವ ವರದಿಯೇ ಈ ದೇಶ ಎಂತಹ ವೌಢ್ಯದ ಕೂಪದಲ್ಲಿ ನರಳುತ್ತಿದೆ ಎನ್ನುವುದನ್ನು ಹೇಳುತ್ತಿದೆ. ದುರಂತವೆಂದರೆ, ದಲಿತ ಮಹಿಳೆಯರನ್ನು ಶೋಷಿಸುವುದಕ್ಕೂ ಈ ‘ಮಾಟಗಾತಿ’ ಪದವನ್ನು ಬಳಸುತ್ತಾರೆ. ಮಾಟಗಾತಿಯೆಂಬ ವದಂತಿಯನ್ನು ಹಬ್ಬಿಸಿ, ಬಳಿಕ ಸಾರ್ವಜನಿಕರ ಕೈಯಿಂದಲೇ ಆ ಮಹಿಳೆಯರನ್ನು ಕೊಲ್ಲಿಸಿರುವ ಪ್ರಕರಣಗಳು ಅದೆಷ್ಟೋ ನಡೆದಿವೆ.

ವೈಯಕ್ತಿಕ ದ್ವೇಷವನ್ನು ಅವರು ಈ ಮೂಲಕ ತೀರಿಸಿಕೊಳ್ಳುವುದಿದೆ. ದಾಭೋಲ್ಕರ್, ಕಲಬುರ್ಗಿ, ಪನ್ಸಾರೆ ಮೊದಲಾದವರ ಕೊಲೆಗಳ ಹಿಂದೆಯೂ ವೌಢ್ಯಗಳನ್ನು ಪೋಷಿಸುವ ಮಾಫಿಯಾಗಳು ಕೆಲಸ ಮಾಡಿವೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಇಂದು ವೌಢ್ಯ ಎನ್ನುವುದು ಒಂದು ದಂಧೆಯ ರೂಪವನ್ನು ಪಡೆದಿದೆ ಮತ್ತು ಧರ್ಮದ ಮರೆಯಲ್ಲಿ ಕುಳಿತು ಅದು ರಕ್ಷಣೆಯನ್ನು ಪಡೆಯುತ್ತಿದೆ. ವೌಢ್ಯದ ವಿರುದ್ಧ ಕಾನೂನನ್ನು ಜಾರಿಗೊಳಿಸಿದಾಕ್ಷಣ, ಧರ್ಮದ ಹೆಸರಿನಲ್ಲಿ ಅದನ್ನು ತಡೆಯುವ ಪ್ರಯತ್ನವನ್ನು ಕೆಲವು ಶಕ್ತಿಗಳು ಮಾಡುತ್ತಿವೆ. ಈ ದೇಶದಲ್ಲಿ ಆಹಾರ ಪದಾರ್ಥಗಳು ಕಲಬೆರಕೆಯಾದರೆ ಅದನ್ನು ಗುರುತಿಸುವುದಕ್ಕೆ, ಅದರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಇಲಾಖೆಗಳಿವೆ. ಬೇರೆ ಬೇರೆ ಉತ್ಪನ್ನಗಳು ನಕಲಿಯಾದರೆ ಅದನ್ನು ಗುರುತಿಸುವುದಕ್ಕೂ ಪ್ರತ್ಯೇಕ ಸಂಸ್ಥೆಗಳಿವೆ. ಇಲ್ಲಿ ಪ್ರತಿಯೊಂದೂ ಸ್ಥಾನಗಳೂ ಅರ್ಹತೆಯನ್ನು ಬೇಡುತ್ತವೆ. ಆದರೆ ಒಬ್ಬ ಸನ್ಯಾಸಿ, ಬಾಬಾ ಆಗುವುದಕ್ಕೆ ಯಾವ ಅರ್ಹತೆಯೂ ಬೇಕಾಗಿಲ್ಲ. ಆಹಾರ ಪದಾರ್ಥಗಳು ಕಲಬೆರಕೆಯಾದರೆ ಅದು ದೇಹದ ಆರೋಗ್ಯವನ್ನು ಕೆಡಿಸುತ್ತದೆ. ಇದೇ ಸಂದರ್ಭದಲ್ಲಿ ನಂಬಿಕೆಗಳು ಕಲಬೆರಕೆಯಾದಾಗ ಅದು ಮನಸ್ಸಿನ ಮೇಲೂ ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ.

ಮನುಷ್ಯನಿಗೆ ಧಾರ್ಮಿಕ ನಂಬಿಕೆಗಳು ಅಗತ್ಯ. ಅಧ್ಯಾತ್ಮ ಮನುಷ್ಯನ ಆಲೋಚನೆಗಳನ್ನು, ಬದುಕುವ ಕ್ರಮವನ್ನು ಕಾಲಕಾಲಕ್ಕೆ ತಿದ್ದುತ್ತಾ ಬಂದಿದೆ. ಅದು ಅವನ ಪಾಲಿಗೆ ಬದುಕುವ ಭರವಸೆಯನ್ನು ನೀಡಿದೆ. ಇದೇ ಸಂದರ್ಭದಲ್ಲಿ ಅಧ್ಯಾತ್ಮ ಕಲಬೆರಕೆಯಾದಾಗ, ಅದು ಆತನ ಮೇಲೆ ದುಷ್ಪರಿಣಾಮ ಉಂಟು ಮಾಡಬಹುದು. ಈ ಕಾರಣಕ್ಕೆ ವೌಢ್ಯಗಳನ್ನು ಧರ್ಮಗಳಿಂದ ಬೇರ್ಪಡಿಸುವುದು ಭಾರತದ ಪಾಲಿಗೆ ಅತ್ಯಗತ್ಯವಾಗಿದೆ. ಗಲ್ಲಿಗಲ್ಲಿಗಳಲ್ಲಿ ತಲೆಯೆತ್ತುತ್ತಿರುವ ಬಾಭಾಗಳು, ಮಂತ್ರವಾದಿಗಳು, ಕಪಟ ಸನ್ಯಾಸಿಗಳು, ವಾಸ್ತುಶಾಸ್ತ್ರಜ್ಞರು, ಜ್ಯೋತಿಷಿಗಳನ್ನು ಧರ್ಮ, ಅಧ್ಯಾತ್ಮದಿಂದ ಹೊರಗಿಡುವುದು ತುರ್ತಾಗಿ ನಡೆಯಬೇಕಾಗಿದೆ.

ಈ ಹಿನ್ನೆಲೆಯಲ್ಲಿಯೇ ಈ ಕಲಬೆರಕೆಗಳನ್ನು ಗುರುತಿಸಿ ಮಟ್ಟ ಹಾಕಲು ಕೇಂದ್ರ ಸರಕಾರ ವೌಢ್ಯ ವಿರೋಧಿ ಕಾನೂನೊಂದನ್ನು ಜಾರಿಗೆ ತರಬೇಕಾಗಿದೆ. ಮಂತ್ರವಾದಿಗಳು, ಜ್ಯೋತಿಷಿಗಳು, ದೆವ್ವ ಬಿಡಿಸುವ ಬಾಭಾಗಳ ಕುರಿತಂತೆ ದೂರುಗಳು ಬಂದರೆ ಅಥವಾ ಅವರ ಕುರಿತಂತೆ ಮಾಹಿತಿಗಳು ಸಿಕ್ಕಿದರೆ ತಕ್ಷಣ ಅವರನ್ನು ಜೈಲಿಗೆ ತಳ್ಳುವಂತಹ ಕಾಯ್ದೆ ಜಾರಿಗೊಳ್ಳಬೇಕು.

ವೌಢ್ಯ ವಿರೋಧಿ ಕಾನೂನು ಜಾರಿಗೆ ಬಂದರೆ ತಮ್ಮ ಧರ್ಮಕ್ಕೆ ಧಕ್ಕೆಯಾಗುತ್ತದೆ ಎನ್ನುವವರು ಪರೋಕ್ಷವಾಗಿ ತಮ್ಮ ಧರ್ಮವನ್ನೇ ಅಣಕಿಸುತ್ತಿದ್ದಾರೆ ಎನ್ನುವ ಎಚ್ಚರಿಕೆ ಅವರಿಗೆ ಬೇಕು. ಧರ್ಮ ನಮ್ಮನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯಬೇಕೇ ಹೊರತು, ಇನ್ನಷ್ಟು ಕತ್ತಲೆಗೆ ತಳ್ಳುವಂತಿರಬಾರದು. ಇಂದು ಮಾಟಮಂತ್ರಗಳ ಹೆಸರಿನಲ್ಲಿ, ವಾಸ್ತುಶಾಸ್ತ್ರದ ಹೆಸರಿನಲ್ಲಿ ಜನರ ಬದುಕನ್ನು ಅಂಧಕಾರಕ್ಕೆ ತಳ್ಳುತ್ತಿರುವ ಠಕ್ಕರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ, ಆ ಧರ್ಮವೇ ಅಪ್ರಸ್ತುತ ಎನ್ನುವ ಸ್ಥಿತಿಗೆ ಬಂದು ನಿಲ್ಲಬಹುದು. ವೌಢ್ಯ ವಿರೋಧಿ ಕಾನೂನು ಜಾರಿಗೆ ಬಂದರೆ, ಧರ್ಮ, ಅಧ್ಯಾತ್ಮದ ನಿಜವಾದ ಉದ್ದೇಶವನ್ನು ಎತ್ತಿ ಹಿಡಿಯಲ್ಪಡುತ್ತದೆ. ಆದುದರಿಂದ ವಿವಿಧ ಧರ್ಮಗಳ ಅಧ್ಯಾತ್ಮ ಮುಖಂಡರೂ ವೌಢ್ಯ ವಿರೋಧಿ ಕಾನೂನು ಜಾರಿಗೊಳಿಸಲು ಕೈ ಜೋಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News