ಭಾರತದ ಜೊತೆಗಿನ ಒಪ್ಪಂದಗಳ ಬಗ್ಗೆ ನಾನು ಏನೂ ಅಡಗಿಸಿಟ್ಟಿಲ್ಲ : ಬಾಂಗ್ಲಾದೇಶ ಪ್ರತಿಪಕ್ಷ ನಾಯಕಿಗೆ ಪ್ರಧಾನಿ ತಿರುಗೇಟು

Update: 2017-04-13 13:55 GMT

ಢಾಕಾ, ಎ. 13: ಭಾರತದೊಂದಿಗೆ ಮಾಡಿಕೊಂಡಿರುವ ನೂತನ ಒಪ್ಪಂದಗಳ ಬಗ್ಗೆ ಪ್ರತಿಪಕ್ಷದ ನಾಯಕಿ ಖಾಲಿದಾ ಝಿಯಾ ಮಾಡುತ್ತಿರುವ ಟೀಕೆಗಳಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಿರುಗೇಟು ನೀಡಿದ್ದಾರೆ. ಝಿಯಾ ಪ್ರಧಾನಿಯಾಗಿದ್ದಾಗ ಮಾಡಿದ್ದಂತೆ, ಭಾರತ ಭೇಟಿಯ ವೇಳೆ ತಾನು ಏನನ್ನೂ ಮುಚ್ಚಿಟ್ಟಿಲ್ಲ ಎಂದು ಹಸೀನಾ ಹೇಳಿದ್ದಾರೆ.

ಪ್ರಧಾನಿ ಭಾರತದಿಂದ ಭರವಸೆಗಳನ್ನಲ್ಲದೆ ಬೇರೇನನ್ನೂ ತಂದಿಲ್ಲ ಎಂದು ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಅಧ್ಯಕ್ಷೆ ಝಿಯಾ ಬುಧವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ತನ್ನ ಪ್ರಬಲ ನೆರೆ ರಾಷ್ಟ್ರದಿಂದ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿಯೂ ಬಾಂಗ್ಲಾದೇಶ ಸರಕಾರ ವಿಫಲವಾಗಿರುವುದನ್ನು ಈ ಭೇಟಿಯ ವೇಳೆ ಜನರು ನೋಡಿದ್ದಾರೆ ಎಂಬುದಾಗಿಯೂ ಅವರು ಹೇಳಿದ್ದರು.

ಭಾರತದೊಂದಿಗೆ ಮಾಡಿಕೊಂಡಿರುವ ರಕ್ಷಣಾ ಒಪ್ಪಂದಗಳ ಬಗ್ಗೆಯೂ ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಇಂಥ ಒಪ್ಪಂದಗಳನ್ನು ಮಾಡಿಕೊಳ್ಳದಂತೆ ಹಲವು ರಾಜಕೀಯ ಗುಂಪುಗಳು ಮತ್ತು ನಾಗರಿಕ ಸಮಾಜದ ಸದಸ್ಯರು ಅವಾಮಿ ಲೀಗ್ ಸರಕಾರಕ್ಕೆ ಮನವಿ ಮಾಡಿದ್ದರು ಎಂದರು.

ಪ್ರತಿಪಕ್ಷ ನಾಯಕಿಯ ಟೀಕೆಗಳಿಗೆ ಉತ್ತರಿಸಿದ ಹಸೀನಾ, ‘‘ಭಾರತದೊಂದಿಗೆ ತಿಳುವಳಿಕೆ ಪತ್ರಗಳಿಗೆ ಸಹಿ ಹಾಕುವಾಗ ಜನರನ್ನು ನಾವು ಕತ್ತಲೆಯಲ್ಲಿಟ್ಟಿದ್ದೆವು ಎಂಬುದಾಗಿ ಪ್ರತಿಪಕ್ಷ ನಾಯಕಿ ಹೇಳಿದ್ದಾರೆ. ನಾನು ಅವರಿಗೆ ಒಂದು ಪ್ರಶ್ನೆಯನ್ನು ಕೇಳಬೇಕಾಗಿದೆ: ಚೀನಾದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದಾಗ ಅವರು ಯಾರೊಂದಿಗೆ ಸಮಾಲೋಚನೆ ನಡೆಸಿದ್ದರು? ಅದರಲ್ಲಿ ಏನಿದೆ ಎನ್ನುವುದನ್ನು ಯಾರೂ ನೋಡಿಲ್ಲ’’ ಎಂದರು.

‘‘ಏನಿಲ್ಲದಿದ್ದರೂ, ಅವರು ಮಾಡಿದಂತೆ ನಾನು ಏನನ್ನೂ ಅಡಗಿಸಿಟ್ಟಿಲ್ಲ’’ ಎಂದು ಗಣಭಬನ್‌ನಲ್ಲಿ ನಡೆದ ಅವಾಮಿ ಲೀಗ್ ಕ್ರಿಯಾ ಸಮಿತಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಶೇಖ್ ಹಸೀನಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News