ಡಿಜಿಟಲ್ ವಹಿವಾಟುಗಳನ್ನು ನಡೆಸುವ ಗುಜರಾತಿನ ಈ 53 ಗ್ರಾಮಗಳು ಡಿಜಿಟಲ್ ಇಂಡಿಯಾಕ್ಕೆ ಮಾದರಿ

Update: 2017-04-13 14:10 GMT

ಗಾಂಧಿನಗರ,ಎ.13: ಗುಜರಾತ್‌ನ ರಾಜಧಾನಿ ಗಾಂಧಿನಗರದಿಂದ ಸುಮಾರು 180 ಕಿ.ಮೀ.ದೂರದಲ್ಲಿರುವ ಮೂಲಧರಾಯಿ ಗ್ರಾಮದ ನಿವಾಸಿ ಭರತ್ ಪಟೇಲ್ ಸ್ಥಳೀಯ ನ್ಯಾಯಬೆಲೆ ಅಂಗಡಿಗೆ ಹೋಗುವಾಗ ನಗದು ಹಣವನ್ನು ಒಯ್ಯುವುದಿಲ್ಲ. ಅಲ್ಲಿರುವ ಬಯೊಮೆಟ್ರಿಕ್ ಯಂತ್ರದಲ್ಲಿ ಹೆಬ್ಬೆಟ್ಟನ್ನು ಒತ್ತಿದರೆ ಸಾಕು, ಪಡಿತರ ಸಾಮಗ್ರಿಗಳ ಖರೀದಿಗಾಗಿ ಆತ ಪಾವತಿಸಬೇಕಾದ ಹಣ ಆತನ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಈಗ ಈ ಡಿಜಿಟಲ್ ವ್ಯವಸ್ಥೆ ತನ್ನ ಹಣ ಪಾವತಿಯನ್ನು ನೋಡಿಕೊಳ್ಳುತ್ತದೆ ಎನ್ನುತ್ತಾನೆ ಪಟೇಲ್.

ಈ ಗ್ರಾಮದ ಹೆಚ್ಚಿನ ಜನರು ಅಂಗಡಿಗಳಲ್ಲಿ ಖರೀದಿಗಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದೂ ಸೇರಿದಂತೆ ಭಾವನಗರ ಜಿಲ್ಲೆಯ ವಲ್ಲಭಿಪುರ ತಾಲೂಕಿನ 53 ಗ್ರಾಮಗಳಲ್ಲಿ ಪ್ರತಿಯೊಂದು ಕುಟುಂಬವೂ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಗೊಂಡಿರುವ ಬ್ಯಾಂಕ್ ಖಾತೆಯನ್ನು ಹೊಂದಿದೆ.

 ಇಂತಹ ಸಾಧನೆ ಮಾಡಿದ ದೇಶದ ಮೊದಲ ತಾಲೂಕು ಎಂಬ ಹೆಗ್ಗಳಿಕೆಗೆ ವಲ್ಲಭಿಪುರ ಪಾತ್ರವಾಗಿದೆ. ಪ್ರತಿಯೊಂದೂ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಜೋಡಣೆಗೊಳಿಸುವಂತೆ ಬ್ಯಾಂಕುಗಳಿಗೆ ಆದಾಯ ತೆರಿಗೆ ಇಲಾಖೆಯು ತಾಕೀತು ಮಾಡುವುದಕ್ಕಿಂತ ಎಷ್ಟೋ ಮೊದಲು ವಲ್ಲಭಿಪುರ ತಾಲೂಕು ಈ ಕೆಲಸವನ್ನು ಮಾಡಿ ಮುಗಿಸಿತ್ತು.

 ತಾಲೂಕಿನಲ್ಲಿಯ ಎಲ್ಲ 18,500 ಕುಟುಂಬಗಳು ಬ್ಯಾಂಕ್ ಖಾತೆ ಹೊಂದುವಂತೆ ಮತ್ತು ಆ ಖಾತೆಗಳಿಗೆ ಆಧಾರ ಜೋಡಣೆಯಾಗುವಂತೆ ಮಾಡಲು ಕಳೆದ ವರ್ಷ ಜಿಲ್ಲಾಡಳಿತದ 300 ಅಧಿಕಾರಿಗಳು ಬರೋಬ್ಬರಿ ಮೂರು ತಿಂಗಳ ಕಾಲ ಶ್ರಮಿಸಿದ್ದರು. ಈ ತಾಲೂಕಿನಲ್ಲಿ ಕಳೆದ ಜವರಿಯಲ್ಲಿ 500 ರಷ್ಟಿದ್ದ ಮಾಸಿಕ ಡಿಜಿಟಲ್ ವಹಿವಾಟುಗಳ ಸಂಖ್ಯೆ ಮಾರ್ಚ್‌ನಲ್ಲಿ 6,000ಕ್ಕೇರಿದೆ.

 ಪಟಣ ಗ್ರಾಮದ 38 ಹರೆಯದ ವಿಧವೆ ಭಾವನಾಬೆನ್ ರಾಥೋಡ್ ಸಮೀಪದ ಬ್ಯಾಂಕಿನಿಂದ 1,000 ರೂ.ಗಳ ತನ್ನ ವಿಧವಾ ವೇತನವನ್ನು ಪಡೆಯಲು ತೀರ ಇತ್ತೀಚಿನವರೆಗೂ 10 ಕಿ.ಮೀ.ಗಳಷ್ಟು ಪ್ರಯಾಣಿಸಬೇಕಾಗಿತ್ತು. ಇದಕ್ಕಾಗಿ ರಿಕ್ಷಾಕ್ಕೆ ಹಣ ತೆರಬೇಕಾಗಿತ್ತು. ತನ್ನ ಪುಟ್ಟ ಮಕ್ಕಳಿಬ್ಬರನ್ನು ನೆರಕರೆಯವರಲ್ಲಿ ಬಿಡಬೇಕಾಗುತ್ತಿತ್ತು. ಆದರೆ ಆಕೆಯ ಬ್ಯಾಂಕ್ ಖಾತೆಯು ಆಧಾರ್‌ನೊಂದಿಗೆ ಜೋಡಣೆಗೊಳ್ಳುವುದರೊಂದಿಗೆ ಗ್ರಾಮದ ಪಂಚಾಯತ್ ಕಚೇರಿಯಲ್ಲಿರುವ ಮೈಕ್ರೋ ಎಟಿಎಂ ಆಕೆಗೆ ಹಣಪಾವತಿಯ ಹೊಣೆಯನ್ನು ಹೊತ್ತುಕೊಂಡಿದೆ.

ಎಲ್ಲ ನ್ಯಾಯಬೆಲೆ ಅಂಗಡಿಗಳು, ಗ್ರಾಮ ಪಂಚಾಯತ್‌ಗಳು ಮತ್ತು ಸಹಕಾರಿ ಸಂಘಗಳು ಆಧಾರ ಬೆಂಬಲಿತ ವ್ಯವಸ್ಥೆಯೊಂದಿಗೆ ಸಜ್ಜಾಗಿದ್ದು, ಗ್ರಾಮಸ್ಥರು ಡಿಜಿಟಲ್ ವಹಿವಾಟು ನಡೆಸಲು ಅನುಕೂಲವಾಗಿದೆ ಎಂದು ಭಾವನಗರ ಜಿಲ್ಲಾಧಿಕಾರಿ ಹರ್ಷದ್ ಪಟೇಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News