×
Ad

ಪುತ್ರಿಯರ ಮದುವೆಗೆ 1.51 ಕೋಟಿ ರೂ. ವರದಕ್ಷಿಣೆ ನೀಡಿದ ಚಾಯ್‌ವಾಲಾ!

Update: 2017-04-14 00:01 IST

 ಎ.4ರಂದು ನಡೆದ ತನ್ನ ಆರು ಪುತ್ರಿಯರ ವಿವಾಹ ಸಂದರ್ಭದಲ್ಲಿ 1.51 ಕೋ.ರೂ.ಗಳ ವರದಕ್ಷಿಣೆಯನ್ನು ನೀಡಿದ್ದ ರಾಜಸ್ತಾನದ ಜೈಪುರದ ಚಾಯ್‌ವಾಲಾನೋರ್ವ ಆದಾಯ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಬಿದ್ದಿದ್ದಾನೆ.

ಕೋಥ್‌ಪುತ್ಲಿ ಸಮೀಪದ ಹದುವಾತಾದಲ್ಲಿ ಚಹಾದ ಅಂಗಡಿಯನ್ನು ನಡೆಸುತ್ತಿರುವ ಲೀಲಾರಾಮ ಗುಜ್ಜರ್ ಸ್ಥಳೀಯ ಗ್ರಾಮಸ್ಥರು ಮತ್ತು ಸಮುದಾಯದ ಧುರೀಣರ ಉಪಸ್ಥಿತಿಯಲ್ಲಿ ಗಟ್ಟಿಧ್ವನಿಯಲ್ಲಿ ನೋಟುಗಳನ್ನು ಎಣಿಸುತ್ತಿರುವ ಮತ್ತು ನೋಟುಗಳ ಕಟ್ಟುಗಳನ್ನು ವರರ ಕುಟುಂಬಗಳಿಗೆ ಹಸ್ತಾಂತರಿಸುತ್ತಿರುವ ವೀಡಿಯೊ ವೈರಲ್ ಆಗಿದೆ.

 ಬುಧವಾರ ತನ್ನ ಕಚೇರಿಗೆ ಖುದ್ದಾಗಿ ಹಾಜರಾಗಿ ಗಳಿಕೆಯ ಮೂಲವನ್ನು ವಿವರಿಸುವಂತೆ ಆದಾಯ ತೆರಿಗೆ ಇಲಾಖೆಯು ಮಂಗಳವಾರ ಗುಜ್ಜರ್‌ಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ ಗುಜ್ಜರ್ ಹಾಜರಾಗಿರಲಿಲ್ಲ.

ನಾವು ಗುರುವಾರದವರೆಗೆ ಆತನಿಗಾಗಿ ಕಾಯುತ್ತೇವೆ. ಆತ ತನ್ನ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಿದ್ದಾನೆಯೇ ಎನ್ನುವುದನ್ನು ಪರಿಶೀಲಿಸಲಿದ್ದೇವೆ ಎಂದು ಹಿರಿಯ ಆದಾಯ ತೆರಿಗೆ ಅಧಿಕಾರಿಯೋರ್ವರು ತಿಳಿಸಿದರು.

ಎ.4ರಂದು ಸಪ್ತಪದಿ ತುಳಿದಿರುವ ಗುಜ್ಜರ್‌ನ ಆರು ಪುತ್ರಿಯರ ಪೈಕಿ ನಾಲ್ವರು ಅಪ್ರಾಪ್ತ ವಯಸ್ಕರಾಗಿದ್ದಾರೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಕಾನೂನು ಕ್ರಮದ ಸಂಕಷ್ಟವನ್ನೂ ಆತ ಎದುರಿಸುತ್ತಿದ್ದಾನೆ.

ಗುಜ್ಜರ್ ತನ್ನಿಬ್ಬರು ಹಿರಿಯ ಪುತ್ರಿಯರ ಮದುವೆ ಆಮಂತ್ರಣಗಳನ್ನು ಮಾತ್ರ ಮುದ್ರಿಸಿದ್ದ. ಆದರೆ ಅವರ ಜೊತೆಗೆ ನಾಲ್ವರು ಅಪ್ರಾಪ್ತ ವಯಸ್ಕ ಪುತ್ರಿಯರ ಮದುವೆಗಳನ್ನೂ ಮಾಡಿ ಮುಗಿಸಿದ್ದಾನೆ.

ಪೊಲೀಸರೀಗ ಗುಜ್ಜರ್ ಮತ್ತು ಆತನ ಕುಟುಂಬಕ್ಕಾಗಿ ಹುಡುಕಾಡುತ್ತಿದ್ದಾರೆ. ಅವರು ಆತನ ಮನೆಗೆ ತೆರಳಿದ್ದರಾದರೂ ಅದಕ್ಕೆ ಬೀಗ ಹಾಕಲಾಗಿದೆ. ಅವರೀಗ ಠಾಣೆಗೆ ಬಂದು ಹಾಜರಾಗುವಂತೆ ಗುಜ್ಜರ್‌ನ ಸಂಬಂಧಿಕರಿಗೆ ಸೂಚಿಸಿದ್ದಾರೆ. ಅವರ ಮೂಲಕವಾದರೂ ಗುಜ್ಜರ್ ಕುಟುಂಬ ಎಲ್ಲಿದೆ ಎಂಬ ಮಾಹಿತಿ ದೊರೆಯಬಹುದೇನೋ ಎಂಬ ಆಶಯ ಅವರದು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ