ನಂಬಲರ್ಹ ಸಾಕ್ಷಾಧಾರದ ಮೇಲೆ ಜಾಧವ್‌ಗೆ ಮರಣ ದಂಡನೆ: ಪಾಕ್
Update: 2017-04-14 23:53 IST
ಇಸ್ಲಾಮಾಬಾದ್,ಎ.14: ಬೇಹುಗಾರಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಕುಲಭೂಷಣ್ ಜಾಧವ್ ಪಾತ್ರವನ್ನು ಸಾಬೀತುಗೊಳಿಸಿರುವ ‘ನಂಬಲರ್ಹ ’ಮತ್ತು ‘ನಿರ್ದಿಷ್ಟ ’ಸಾಕ್ಷಗಳ ಆಧಾರದಲ್ಲಿ ಅವರಿಗೆ ಮರಣ ದಂಡನೆಯನ್ನು ವಿಧಿಸಲಾಗಿದೆ ಎಂದು ಶುಕ್ರವಾರ ಸಮರ್ಥಿಸಿಕೊಂಡ ವಿದೇಶಾಂಗ ವ್ಯವಹಾರಗಳ ಕುರಿತು ಪಾಕಿಸ್ತಾನದ ಪ್ರಧಾನ ಮಂತ್ರಿಗಳ ಸಲಹೆಗಾರರಾಗಿರುವ ಸರ್ತಾಜ್ ಅಝೀಝ್ ಅವರು, ಭಾರತ-ಪಾಕ್ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟನ್ನು ತಡೆಯಲು ಹೆಚ್ಚು ಕ್ರಿಯಾಶೀಲ ರಾಜತಾಂತ್ರಿಕತೆಯ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಜಾಧವ್ ವಿಚಾರಣೆ ವೇಳೆ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು, ಭಾರತವು ತನ್ನ ಪ್ರತಿಕ್ರಿಯೆಯ ಮೂಲಕ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸುತ್ತಿದೆ ಎಂದರು.
ಜಾಧವ್ ವಿಚಾರಣೆ ನ್ಯಾಯಯುತವಾಗಿ ನಡೆದಿರಲಿಲ್ಲ ಎಂಬ ಭಾರತದ ಆರೋಪವನ್ನು ಅವರು ತಿರಸ್ಕರಿಸಿದರು.