×
Ad

ಕೆಲಸ ಖಾಯಂ : 2,700 ಪೌರಕಾರ್ಮಿಕರಿಗೆ ನೆಮ್ಮದಿಯ ನಿಟ್ಟುಸಿರು

Update: 2017-04-14 23:58 IST

ಅಲ್ಪಾವಧಿ ಗುತ್ತಿಗೆಯಲ್ಲಿ ಈ 2,700 ಮಂದಿ ಪೌರಕಾರ್ಮಿಕರು, 10-20 ವರ್ಷಗಳಿಂದ ದುಡಿಯುತ್ತಾ ಬಂದಿದ್ದರು. ಇದೀಗ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಖಾಯಂ ಕೆಲಸದ ಕನಸು ನನಸಾದಂತಾಗಿದೆ. ಅಷ್ಟೇ ಅಲ್ಲದೇ ಎರಡು ವರ್ಷಗಳ ವೇತನವನ್ನು ಹಿಂಬಾಕಿ ರೂಪದಲ್ಲೂ ಪಡೆಯಲಿದ್ದಾರೆ.

ಖಾಯಂ ಉದ್ಯೋಗಕ್ಕಾಗಿ ಮುಂಬೈನ ಪೌರಕಾರ್ಮಿಕರು ನಡೆಸಿದ ಹತ್ತು ವರ್ಷಗಳ ಸುದೀರ್ಘ ಕಾನೂನು ಹೋರಾಟ ಕೊನೆಗೂ ಫಲ ನೀಡಿದೆ. ಎಪ್ರಿಲ್ 7ರಂದು ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಮುಂಬೈ ಪಾಲಿಕೆಯ ಸುಮಾರು 2,700 ಮಂದಿ ಪೌರಕಾರ್ಮಿಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಅಲ್ಪಾವಧಿ ಗುತ್ತಿಗೆಯಲ್ಲಿ ಈ ಕಾರ್ಮಿಕರು, 10-20 ವರ್ಷಗಳಿಂದ ದುಡಿಯುತ್ತಾ ಬಂದಿದ್ದರು. ಇದೀಗ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಖಾಯಂ ಕೆಲಸದ ಕನಸು ನನಸಾದಂತಾಗಿದೆ. ಅಷ್ಟೇ ಅಲ್ಲದೇ ಎರಡು ವರ್ಷಗಳ ವೇತನವನ್ನು ಹಿಂಬಾಕಿ ರೂಪದಲ್ಲೂ ಪಡೆಯಲಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕ ಹುದ್ದೆಯನ್ನು ಖಾಯಂ ಆಗಿ ಪಡೆಯುವುದು ಎಂದರೆ, ಇವರಿಗೆ ವಾರದ ರಜೆ ಪಡೆಯುವ ಹಕ್ಕಿನ ಪ್ರತಿಪಾದನೆಯನ್ನೂ ಒಳಗೊಳ್ಳುತ್ತದೆ. ಇದರ ಜತೆಗೆ ವೇತನ ಕಡಿತ ಇಲ್ಲದೆ ವೈದ್ಯಕೀಯ ರಜೆ ಮತ್ತು ಇತರ ರಜೆಗಳನ್ನು ಪಡೆಯಲು ಕೂಡ ಅನುಕೂಲವಾಗಲಿದೆ.

‘ಕಚಾರ ವಹ್ತುಕ್ ಶ್ರಮಿಕ್ ಸಂಘ’ ಎಂಬ ಮಹಾರಾಷ್ಟ್ರದ ನೈರ್ಮಲ್ಯ ಕಾರ್ಮಿಕರ ಸಂಘಟನೆ, ಮೊಟ್ಟಮೊದಲ ಬಾರಿಗೆ 2007ರಲ್ಲಿ ಮುಂಬೈನಲ್ಲಿ ಕೈಗಾರಿಕಾ ಟ್ರಿಬ್ಯೂನಲ್‌ನಲ್ಲಿ ತನ್ನ 2,700 ಮಂದಿ ಪೌರಕಾರ್ಮಿಕರ ಪರವಾಗಿ ದಾವೆ ಹೂಡಿತು. ನ್ಯಾಯಮಂಡಳಿ ಏಳು ವರ್ಷಗಳ ಕಾಲ ಇದನ್ನು ಮುಂದೂಡಿ ಕೊಂಡು ಕೊನೆಗೆ ಕಾರ್ಮಿಕರ ಪರವಾಗಿ ತೀರ್ಪು ನೀಡಿತು. 2014ರಲ್ಲಿ ನ್ಯಾಯಮಂಡಳಿ, ಈ ನೈರ್ಮಲ್ಯ ಕಾರ್ಮಿಕರಿಗೆ ಖಾಯಂ ಉದ್ಯೋಗದ ಸ್ಥಾನಮಾನ ನೀಡಿತು. ಆದಾಗ್ಯೂ ಮುಂಬೈ ಮಹಾನಗರ ಪಾಲಿಕೆ, ಈ ನ್ಯಾಯಮಂಡಳಿ ತೀರ್ಮಾನ ವನ್ನು ಮುಂಬೈ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. 2016ರ ಡಿಸೆಂಬರ್‌ನಲ್ಲಿ ಗುತ್ತಿಗೆ ಕಾರ್ಮಿಕರ ಪರವಾಗಿ ತೀರ್ಪು ನೀಡಿತು.

ಮಹಾನಗರಪಾಲಿಕೆ ಮತ್ತೊಮ್ಮೆ ಮೇಲ್ಮನವಿ ನೀಡಿದರೂ ಪ್ರಯೋಜನವಾಗಲಿಲ್ಲ. ಸುಪ್ರೀಂಕೋರ್ಟ್ ಕಳೆದ ಶುಕ್ರವಾರ ಈ ಅರ್ಜಿಯನ್ನು ವಜಾ ಮಾಡಿದೆ.

‘‘ಇದು ನಮ್ಮ ದುಪ್ಪಟ್ಟು ವಿಜಯ; ಕೇವಲ 2700 ಮಂದಿ ಪೌರಕಾರ್ಮಿಕರಿಗೆ ಮಾತ್ರವಲ್ಲದೆ, ಎಲ್ಲ ಗುತ್ತಿಗೆ ಕಾರ್ಮಿಕರಿಗೂ ಪ್ರಯೋಜನ ತರುವ ವಿಚಾರ’’ ಎಂದು ಕಚಾರ ವಹ್ತುಕ್ ಶ್ರಮಿಕ್ ಸಂಘದ ಪ್ರಧಾನ ಕಾರ್ಯದರ್ಶಿ ಮಿಲಿಂದ್ ರಾನಡೆ ಹೇಳುತ್ತಾರೆ. ‘‘ದೇಶದಲ್ಲಿ ಬಹುತೇಕ ಕಾರ್ಮಿಕ ಕಾನೂನುಗಳು ಅಪಾಯದ ಅಂಚಿನಲ್ಲಿರುವ ಸಂದರ್ಭದಲ್ಲಿ, ಕಾರ್ಮಿಕ ಸಂಘಕ್ಕೆ ಸೇರಿದ್ದನ್ನೇ ನೆಪ ಮಾಡಿಕೊಂಡು ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡುವ ಅಧಿಕಾರ ಉದ್ಯೋಗದಾತರಿಗೆ ಇರುತ್ತದೆ. ಆದರೆ ಈ ತೀರ್ಪು ಗುತ್ತಿಗೆ ಕಾರ್ಮಿಕರ ಪಾಲಿಗೆ ಆಶಾಕಿರಣ’’ ಎಂದು ಅವರು ಹೇಳುತ್ತಾರೆ.

ಶೋಷಣೆಯೇ ನೀತಿ

ಬೃಹನ್ಮುಂಬೈ ಮಹಾನಗರ ಪಾಲಿಕೆ ಸುಮಾರು 35 ಸಾವಿರ ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡಿದೆ. ಇವರು ಬೀದಿ ಗುಡಿಸುವುದು, ಚರಂಡಿ ಸ್ವಚ್ಛಗೊಳಿಸುವುದು, ಕಸ ಸಂಗ್ರಹ ಹಾಗೂ ಇದನ್ನು ಡಂಪಿಂಗ್ ಪ್ರದೇಶಕ್ಕೆ ಸಾಗಾಟ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಪೈಕಿ ಬಹುತೇಕ ಮಂದಿ ಪಾಲಿಕೆಯ ಖಾಯಂ ಕಾರ್ಮಿಕರಲ್ಲ. ಇವರು ಸಂಕೀರ್ಣ ಗುತ್ತಿಗೆ ಜಾಲದ ಮೂಲಕ ಗುತ್ತಿಗೆದಾರ, ಉಪ ಗುತ್ತಿಗೆದಾರ ಅಥವಾ ಇತರರ ಮೂಲಕ ನೇಮಕಗೊಂಡವರು. ಈ ಪೈಕಿ ಬಹುತೇಕ ಲಾಭರಹಿತ ಸಂಸ್ಥೆಗಳು ಎಂದು ಹೇಳಿಕೊಳ್ಳುತ್ತಿವೆ.

ಆದರೆ ಕಾರ್ಮಿಕ ಸಂಘದ ಪ್ರಕಾರ, ಸಕಾಲಿಕವಾಗಿ ಕಾರ್ಮಿಕರಿಗೆ ವೇತನ ನೀಡಲು ಗುತ್ತಿಗೆದಾರರು ನಿರಾಕರಿಸುತ್ತಾರೆ. ಜತೆಗೆ ಸುರಕ್ಷಾ ಕೈಗವಸುಗಳು ಹಾಗೂ ಮಾಸ್ಕ್‌ಗಳನ್ನು ಕೂಡಾ ನೀಡುವುದಿಲ್ಲ. ಪಾವತಿ ಸಹಿತ ರಜೆ, ಕೆಲಸದ ವೇಳೆ ಆಗುವ ಗಾಯಗಳಿಗೆ ವೈದ್ಯಕೀಯ ವೆಚ್ಚ ನೀಡುವ ಪದ್ಧತಿ ಕೂಡಾ ಇಲ್ಲ. ಇಂತಹ ಕಳಪೆ ಕೆಲಸದ ಸ್ಥಿತಿಗತಿ ಹಲವು ಮಂದಿ ಬಡವರ ಜೀವವನ್ನೇ ಬಲಿ ತೆಗೆದುಕೊಂಡ ನಿದರ್ಶನಗಳಿವೆ. 2015ರಲ್ಲಿ, ಮುಂಬೈನ ನಾಗರಿಕ ಸ್ಥಳೀಯ ಸಂಸ್ಥೆ ನಡೆಸಿದ ಅಧ್ಯಯನ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಮುಂಬೈ ಪಾಲಿಕೆ ವ್ಯಾಪ್ತಿಯಲ್ಲೇ 1,386 ಮಂದಿ ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ಈ ಶೋಷಣಾತ್ಮಕ ಗುತ್ತಿಗೆ ವ್ಯವಸ್ಥೆಯಲ್ಲಿ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಗುತ್ತಿಗೆದಾರರು ಕಾನೂನನ್ನು ಉಲ್ಲಂಘಿಸಿರುತ್ತಾರೆ.

ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ- 1947ರ ಅನ್ವಯ, ಎಲ್ಲ ಗುತ್ತಿಗೆ ಕಾರ್ಮಿಕರು ಖಾಯಂ ಕೆಲಸಕ್ಕೆ ಆಗ್ರಹ ಮಂಡಿಸಲು ಅಧಿಕಾರ ಇರುತ್ತದೆ. ನಿರಂತರವಾಗಿ 249 ದಿನ ಕೆಲಸ ಮಾಡಿದ ಎಲ್ಲ ಗುತ್ತಿಗೆಕಾರ್ಮಿಕರೂ ಖಾಯಂ ಕೆಲಸಕ್ಕೆ ಅರ್ಹರಾಗಿರುತ್ತಾರೆ. ಕಾನೂನು ಪ್ರಕಾರ, ಗುತ್ತಿಗೆಗೆ ನೇಮಕ ಮಾಡಿಕೊಳ್ಳುವುದು ಕಾರ್ಮಿಕರ ಪಾಲಿಗೆ ಮಾರಕವಾಗಿರಬಾರದು. ಈ ಕಾನೂನನ್ನು ಮೊಟಕುಗೊಳಿಸುವ ಸಲುವಾಗಿ, ಅಲ್ಪಕಾಲದ ಗುತ್ತಿಗೆಯಡಿ ಗುತ್ತಿಗೆದಾರರು ಕಾರ್ಮಿಕರನ್ನು ಕೇವಲ 210 ದಿನಗಳಿಗಷ್ಟೇ ನೇಮಕ ಮಾಡಿಕೊಳ್ಳುತ್ತಾರೆ. ಆ ಬಳಿಕ ಕಾರ್ಮಿಕರು ಹೊಸ ಗುತ್ತಿಗೆ ಕರಾರಿಗೆ ಸಹಿ ಮಾಡಬೇಕಾಗುತ್ತದೆ.

ಇದೇ ವೇಳೆ, 1970ರ ಗುತ್ತಿಗೆ ಕಾರ್ಮಿಕ ಕಾಯ್ದೆಯ ಅನ್ವಯ, ಗುತ್ತಿಗೆ ಕಾರ್ಮಿಕರಿಗೆ ಕಾರ್ಮಿಕ ಹಕ್ಕುಗಳ ಪ್ರತಿಪಾದನೆಗೆ ಅವಕಾಶ ಇದೆ. ಆದರೆ ಇದು 20ಕ್ಕಿಂತ ಅಧಿಕ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಮುಂಬೈ ಮಹಾನಗರ ಪಾಲಿಕೆ ತನ್ನ ನೈರ್ಮಲ್ಯ ಕೆಲಸವನ್ನು ಸುಮಾರು 200ಕ್ಕೂ ಹೆಚ್ಚು ಸಣ್ಣ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಿದೆ. ಆದ್ದರಿಂದ ಇವು ಗುತ್ತಿಗೆ ಕಾರ್ಮಿಕ ಪದ್ಧತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ 20ಕ್ಕಿಂತ ಕಡಿಮೆ ಸಂಖ್ಯೆಯ ಜನರನ್ನು ನೇಮಕ ಮಾಡಿಕೊಳ್ಳುತ್ತವೆ ಎನ್ನುವುದು ಗಮನಾರ್ಹ.

ಕಚಾರ ವಹ್ತುಕ್ ಶ್ರಮಿಕ್ ಸಂಘದಂಥ ಕಾರ್ಮಿಕ ಸಂಘಟನೆಗಳು, ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ಬಹಿರಂಗ ಹೇಳಿಕೆ ನೀಡಲು ಹಿಂಜರಿಯುತ್ತಿವೆ. ಇದರಿಂದಾಗಿ ಸಾವಿರಾರು ಮಂದಿಗೆ ಉದ್ಯೋಗಾವಕಾಶ ತಪ್ಪಿಹೋಗುತ್ತದೆ ಎಂಬ ಭೀತಿ ಅವರದು. ಇದರ ಬದಲಾಗಿ ಯೂನಿಯನ್‌ಗಳು ಕಾರ್ಮಿಕ ಕೋರ್ಟ್‌ಗೆ ಸಂಪರ್ಕಿಸಿ, ಸರಣಿ ದಾವೆಗಳನ್ನು ಹೂಡುತ್ತಿವೆ. ಗುತ್ತಿಗೆ ಕಾರ್ಮಿಕರಿಗೆ ಖಾಯಂ ಉದ್ಯೋಗ ನೀಡಬೇಕು ಎನ್ನುವುದು ಅವರ ಅಭಿಪ್ರಾಯ.

ಸುದೀರ್ಘ ಹೋರಾಟ

ಮುಂಬೈ ಕೈಗಾರಿಕಾ ನ್ಯಾಯಮಂಡಳಿ, ನೈರ್ಮಲ್ಯ ವಿಚಾರದಲ್ಲಿ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗದು ಎಂದು 2014ರಲ್ಲಿ ತೀರ್ಪು ನೀಡಿದೆ. 2700 ಮಂದಿಗೆ ಖಾಯಂ ಉದ್ಯೋಗ ಮಂಜೂರು ಮಾಡುವ ಅವಧಿಯಲ್ಲಿ ನ್ಯಾಯಮಂಡಳಿ ಈ ಆದೇಶ ನೀಡಿದೆ. ಜತೆಗೆ ನಗರಗಳಲ್ಲಿ ನೈರ್ಮಲ್ಯ ವಿಚಾರ ಪಾಲಿಕೆಯ ಸ್ವಂತ ಜವಾಬ್ದಾರಿಯಲ್ಲಿ ಒಂದು ಎನ್ನುವುದು ನ್ಯಾಯಾಲಯದ ಸ್ಪಷ್ಟ ಅಭಿಪ್ರಾಯ. ಇದನ್ನು ಗುತ್ತಿಗೆದಾರರು ಅಥವಾ ಉಪ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಈ ತೀರ್ಪಿನ ವಿರುದ್ಧ ಪಾಲಿಕೆ ಮೇಲ್ಮನವಿ ಸಲ್ಲಿಸಿದಾಗ, ಹೈಕೋರ್ಟ್ ಕೂಡಾ ನ್ಯಾಯಮಂಡಳಿಯ ಅಭಿಪ್ರಾಯವನ್ನೇ ಎತ್ತಿಹಿಡಿದಿದೆ. ನೈರ್ಮಲ್ಯ ಕಾರ್ಮಿಕರಿಗೆ ಖಾಯಂ ಉದ್ಯೋಗದ ಲಾಭವನ್ನು ವಂಚಿಸುವ ಕ್ರಮ ಇದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಪ್ರಕರಣವನ್ನು ಮತ್ತಷ್ಟು ಎಳೆಯುವ ಉದ್ದೇಶದಿಂದ ಪಾಲಿಕೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ ಇದು ಕೂಡಾ ವಿಫಲವಾಗಿ ಸುಪ್ರೀಂಕೋರ್ಟ್, 2,700 ಮಂದಿ ಗುತ್ತಿಗೆ ಕಾರ್ಮಿಕರ ಕೆಲಸ ಖಾಯಂಗೊಳಿಸಿತು. ಅಂತೆಯೇ ಹತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಕೆಲಸ ಮಾಡುವ ವೇಳೆ ಮೃತಪಟ್ಟ ನೈರ್ಮಲ್ಯ ಕಾರ್ಮಿಕರ ಕುಟುಂಬಗಳಿಗೆ ಉದ್ಯೋಗ ನೀಡುವಂತೆಯೂ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಅಂತಿಮವಾಗಿ, ನ್ಯಾಯಮಂಡಳಿ 2014ರಲ್ಲಿ ನೀಡಿದ ತೀರ್ಪಿನ ವೇಳೆಯೇ ಕೆಲಸ ಖಾಯಂ ಆಗಿದ್ದರೆ, ನೈರ್ಮಲ್ಯ ಕಾರ್ಮಿಕರಿಗೆ ಎಷ್ಟು ಹಣಕಾಸು ಸೌಲಭ್ಯ ದೊರಕುತ್ತಿತ್ತೋ ಅಷ್ಟು ಹಣಕಾಸು ಪರಿಹಾರವನ್ನು ನೈರ್ಮಲ್ಯ ಕಾರ್ಮಿಕರಿಗೆ ನೀಡುವಂತೆಯೂ ಕೋರ್ಟ್ ಸೂಚಿಸಿದೆ. ಅಂದರೆ ಇದಕ್ಕೆ ಅನುಗುಣವಾಗಿ ಪ್ರತೀ ಕಾರ್ಮಿಕರಿಗೆ ವರ್ಷಕ್ಕೆ 2.5 ಲಕ್ಷ ರೂಪಾಯಿಯಂತೆ ಹೆಚ್ಚುವರಿ ಮೊತ್ತವನ್ನು ಎರಡು ವರ್ಷಗಳ ಅವಧಿಗೆ ಪಾಲಿಕೆ ನೀಡಬೇಕಾಗುತ್ತದೆ ಎಂದು ರಾನಡೆ ವಿವರಿಸುತ್ತಾರೆ.

‘‘ನನಗೀಗ ರಜೆ ಸೌಲಭ್ಯ’’

2004ರಲ್ಲಿ ಉಪನಗರದ ಹೌಸಿಂಗ್ ಸೊಸೈಟಿ ಪ್ರದೇಶಗಳಲ್ಲಿ ಘನ ತ್ಯಾಜ್ಯ ಸಂಗ್ರಹಿಸುವ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಕೈಲಾಶ್ ಕಾಳೆ, ಇದೀಗ ಉದ್ಯೋಗ ಖಾಯಂ ಆದ ಖುಷಿಯಲ್ಲಿದ್ದಾರೆ. ಅಂತಿಮವಾಗಿ ಮೂರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳುಹಿಸುವ ಕನಸೂ ನನಸಾಗುತ್ತಿದೆ.

 ‘‘ನಾನು 2004ರಲ್ಲಿ ಗುತ್ತಿಗೆದಾರರಡಿ ಕೆಲಸಕ್ಕೆ ಸೇರಿಕೊಂಡಾಗ ನನಗೆ ದಿನಕ್ಕೆ 60 ರೂಪಾಯಿ ಕೂಲಿ ಸಿಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಇದು 550 ರೂಪಾಯಿಗೆ ಹೆಚ್ಚಿದೆ’’ ಎಂದು ಹೇಳುತ್ತಾರೆ. ವಾರಕ್ಕೆ ಆರು ದಿನಗಳ ಕಾಲ ಕೆಲಸ ಮಾಡಿ ತಿಂಗಳಿಗೆ ಇದೀಗ 14 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರೆ. ಕಾಳೆಯ ಗುತ್ತಿಗೆದಾರರಲ್ಲಿ ‘ಪಾವತಿ ರಜೆ’ ಎಂಬ ಪರಿಕಲ್ಪನೆಯೇ ಇಲ್ಲ. ವಾರದಲ್ಲಿ ಒಂದು ದಿನ ಪಡೆಯುವ ರಜೆಗೂ ಅವರಿಗೆ ವೇತನ ಇಲ್ಲ. ‘‘ನಾನೀಗ ಖಾಯಂ ಉದ್ಯೋಗಿ. ನನಗೆ ಕನಿಷ್ಠ ಮಾಸಿಕ 25 ಸಾವಿರ ವೇತನ ಸಿಗುತ್ತದೆ. ವೇತನ ನಷ್ಟವಾಗದೆ ರಜೆ ಸೌಲಭ್ಯವೂ ಸಿಗುತ್ತದೆ’’

ಖಾಯಂ ಉದ್ಯೋಗಕ್ಕಾಗಿ ಕೈಗಾರಿಕಾ ನ್ಯಾಯಮಂಡಳಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಾವೆ ಹೂಡಿರುವ ಇತರ 2,980 ನೈರ್ಮಲ್ಯ ಕಾರ್ಮಿಕರಿಗೆ ಕೂಡಾ ಈ ಸೌಲಭ್ಯ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ರಾನಡೆ ಹೇಳುತ್ತಾರೆ. ‘‘ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ, ಇತರ ಬಾಕಿ ಪ್ರಕರಣಗಳಲ್ಲಿ ನಮಗೆ ಪೂರಕ ತೀರ್ಪು ಪಡೆಯಲು ಸುಲಭವಾಗಲಿದೆ’’ ಎಂದು ಹೇಳುತ್ತಾರೆ.

ಕೃಪೆ: scroll.in

Writer - ಆರಿಫಾ ಜೋಹಾರಿ

contributor

Editor - ಆರಿಫಾ ಜೋಹಾರಿ

contributor

Similar News

ಜಗದಗಲ

ಜಗ ದಗಲ