ಮಮ್ಮುಟ್ಟಿ ಹಾಗು ಕಂಪೆನಿಯ ಬೆವರಿಳಿಸಿದ 67 ವರ್ಷದ ವೃದ್ಧ

Update: 2017-04-15 09:28 GMT

ಖ್ಯಾತ ನಟ-ನಟಿಯರು ದುಡ್ಡಿನ ಆಸೆಗೆ ಬಿದ್ದು ಸೋಪ್, ಶಾಂಪೂ, ತಂಪುಪಾನೀಯ ಇತ್ಯಾದಿಗಳ ಜಾಹೀರಾತುಗಳಲ್ಲಿ ನಟಿಸುತ್ತಿದ್ದರೆ, ಈ ಜಾಹೀರಾತುಗಳಿಗೆ ಮರುಳಾಗುವ ಜನಸಾಮಾನ್ಯರು ಅವುಗಳನ್ನು ಖರೀದಿಸುವ ಮೂಲಕ ಕಂಪನಿಗಳು ಎರಡೂ ಕೈಗಳಿಂದ ಲಾಭ ಬಾಚಿಕೊಳ್ಳುತ್ತಿವೆ. ಆದರೆ ಕೇರಳದಲ್ಲಿ 67ರ ಪ್ರಾಯದ ವೃದ್ಧರೋರ್ವರು ಇಂತಹ ಜಾಹೀರಾತುಗಳ ವಿರುದ್ಧ ಯುದ್ಧಕ್ಕೆ ಇಳಿದಿದ್ದಲ್ಲದೆ, ಖ್ಯಾತ ಮಲಯಾಳಂ ನಟ ಮಮ್ಮುಟ್ಟಿಯನ್ನು ನ್ಯಾಯಾಲಯಕ್ಕೆ ಎಳೆದಿದ್ದಾರೆ. ಕೆ.ಚಾತು ಎಂಬ ಹೆಸರಿನ ವೃದ್ಧ ನ್ಯಾಯಾಲಯದ ಹೊರಗೆ ರಾಜಿಗೆ ಅಸ್ತು ಎನ್ನುವ ಮೂಲಕ ಕಂಪನಿಯಿಂದ 30,000 ರೂ.ವಸೂಲು ಮಾಡಿರುವ ಕಥೆ ಇಲ್ಲಿದೆ.

ಚಾತು ಅವರದು ಸರಳ ಪ್ರಶ್ನೆ. ಯಾವುದೇ ವ್ಯಕ್ತಿ ನಿರಂತರವಾಗಿ ಹೇಗೆ ಸುಳ್ಳು ಹೇಳಬಲ್ಲ? ಇದೇ ಪ್ರಶ್ನೆ ದಾರಿ ತಪ್ಪಿಸುವ ಜಾಹೀರಾತುಗಳ ಕುರಿತಂತೆ ಸೌಂದರ್ಯ ಸಾಧನಗಳ ತಯಾರಿಕೆ ಕಂಪನಿ ಇಂದುಲೇಖಾ ಮತ್ತು ಅದರ ಬ್ರಾಂಡ್ ಅಂಬಾಸಡರ್ ಮಮ್ಮುಟ್ಟಿಯನ್ನು ಅವರು ನ್ಯಾಯಾಲಯಕ್ಕೆಳೆಯುವಂತೆ ಮಾಡಿದ್ದು. ಕೇರಳದ ವಯನಾಡ ಜಿಲ್ಲೆಯ ಮಾನಂತವಾಡಿಯ ಕೆ.ಚಾತು ಅವರು 2015, ಆಗಸ್ಟ್‌ನಲ್ಲಿ ಇಂದುಲೇಖಾ ಕಂಪನಿ ಮತ್ತು ಮಮ್ಮುಟ್ಟಿ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದರು.

  ಇಂದುಲೇಖಾ ಕಂಪನಿಯ ಸೋಪಿನ ಜಾಹೀರಾತು ಮಮ್ಮುಟ್ಟಿಯ ‘ಸೌಂದರ್ಯಂ ನಿಂಞಲೆ ಥೇಡಿ ವರುಂ(ಸೌಂದರ್ಯ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ)’ಎಂಬ ಟ್ಯಾಗ್‌ಲೈನ್ ಹೊಂದಿತ್ತು ಮತ್ತು ಅದನ್ನು ನೋಡಿ ತಾನು ಸೋಪನ್ನು ಖರೀದಿಸಿದ್ದೆ. ಆದರೆ ಆ ಸೋಪನ್ನು ಎಷ್ಟು ಬಳಸಿದರೂ ತಾನು ಸುಂದರನೂ ಆಗಿಲ್ಲ, ತನ್ನ ಚರ್ಮವು ಬಿಳಿಯೂ ಆಗಿಲ್ಲ ಎಂದು ಚಾತು ದೂರಿನಲ್ಲಿ ತಿಳಿಸಿದ್ದರು.

67ರ ಹರೆಯದ ವೃದ್ಧ ಕಂಪನಿಯ ವಿರುದ್ಧ ದಾವೆ ಹೂಡಿದ್ದು ಆಗ ಹಲವರಿಗೆ ತಮಾಷೆ ಎನ್ನಿಸಿರಬೇಕು. ಆದರೆ ಕೊನೆಗೂ ಕಂಪನಿಯು ಅವರಿಗೆ ಪರಿಹಾರವನ್ನು ಪಾವತಿಸಿದೆ.

ಚಾತು 50,000 ರೂ.ಗಳ ಪರಿಹಾರ ಕೇಳಿದ್ದರಾದರೂ, ಈ ವರ್ಷದ ಜನವರಿಯಲ್ಲಿ ನ್ಯಾಯಾಲಯದ ಹೊರಗೆ 30,000 ರೂ.ಗೆ ರಾಜಿ ಸಂಧಾನವನ್ನು ಮಾಡಿಕೊಳ್ಳುವಲ್ಲಿ ಇಂದುಲೇಖಾ ಸಫಲವಾಗಿದೆ.

ತಾನು ದುಡ್ಡಿಗಾಗಿ ಕಾನೂನು ಸಮರ ನಡೆಸಿರಲಿಲ್ಲ. ಆದರೆ ಗ್ರಾಹಕರು ಕಂಪನಿಯೊಂದರಲ್ಲಿ ಹೊಂದಿರುವ ವಿಶ್ವಾಸ ಮತ್ತು ಮಮ್ಮುಟ್ಟಿಯಂತಹ ಗಣ್ಯರ ಸಾಮಾಜಿಕ ಜವಾಬ್ದಾರಿಯ ಕುರಿತಾಗಿತ್ತು ಎನ್ನುತ್ತಾರೆ ಚಾತು. ಮೈಬಣ್ಣವನ್ನು ಬಿಳಿಯಾಗಿಸುವ ಸೋಪಿನ ಕುರಿತ ಇಂದುಲೇಖಾ ಕಂಪನಿಯ ಜಾಹೀರಾತನ್ನು ಎಲ್ಲರೂ ನೋಡಿದ್ದಾರೆ,ಅವರ ಹೇಳಿಕೆ ನಿಜ ಎಂಬ ವಿಶ್ವಾಸ ಹುಟ್ಟಿತ್ತು ಹಾಗೂ ಮಮ್ಮುಟ್ಟಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಸೋಪಿನ ಕುರಿತು ಆ ವಿಶ್ವಾಸವನು ಹೆಚ್ಚಿಸಿತ್ತು. ಆದರೆ ಅವರ ಹೇಳಿಕೆಯಲ್ಲಿ ಏನೇನೂ ಸತ್ಯಾಂಶವಿಲ್ಲ. ಇದು ನನ್ನ ಅನುಭವ ಎಂದು ಚಾತು ಹೇಳಿದರು.

ಅಂದ ಹಾಗೆ 75 ಗ್ರಾಂ ತೂಕದ ಈ ಸೋಪನ್ನು ಇಂದುಲೇಖಾ 35 ರೂ.ಗೆ ಮಾರಾಟ ಮಾಡುತ್ತಿತ್ತು.

ಈ ಸೋಪಿನಲ್ಲಿ ವಿಶೇಷವೇನೂ ಇಲ್ಲ. ಮಾರುಕಟ್ಟೆಯಲ್ಲಿರುವ, ಗ್ರಾಹಕರನ್ನು ವಂಚಿಸುವ ಇಂತಹ ಎಲ್ಲ ಉತ್ಪನ್ನಗಳಿಗೂ ಇದು ಎಚ್ಚರಿಕೆಯ ಗಂಟೆಯಾಗಬೇಕು. ಗಣ್ಯವ್ಯಕ್ತಿಗಳು ಇಂತಹ ವಂಚಕ ಕಂಪನಿಗಳನ್ನೇಕೆ ಬೆಂಬಲಿಸುತ್ತಾರೋ ಅರ್ಥವಾಗುತ್ತಿಲ್ಲ ಎಂದರು ಚಾತು.

ಇಂತಹ ಸುಳ್ಳು ಜಾಹೀರಾತುಗಳ ವಿರುದ್ಧ ಹೋರಾಡಲು ಹೆಚ್ಚೆಚ್ಚು ಜನರು ಮುಂದೆ ಬರಬೇಕು. ಇಂದುಲೇಖಾ ಒಂದು ಉದಾದಹರಣೆಯಷ್ಟೇ. ಇಂತಹ ನೂರಾರು ಬೋಗಸ್ ಉತ್ಪನ್ನಗಳಿವೆ. ಜನರು ಎಚ್ಚೆತ್ತುಕೊಳ್ಳಬೇಕು ಎಂದು ಚಾತು ಕಿವಿಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News