ಪ್ರಜಾಸತ್ತೆಯ ತಲೆಗೆ ಬೆಲೆ ಘೋಷಿಸುತ್ತಿರುವವರು!

Update: 2017-04-16 18:56 GMT

ಆರೋಗ್ಯಕರ ಮನಸ್ಥಿತಿಯಿರುವ ಸಮಾಜವೊಂದರಲ್ಲಿ ಬಹುಮಾನಗಳೆನ್ನುವುದು ಕೊಡುವವರಿಗೂ, ಪಡೆದುಕೊಳ್ಳುವವರಿಗೂ ಗೌರವ, ಘನತೆಗಳನ್ನು ತಂದು ಕೊಡುತ್ತದೆ. ಯಾವ ಸಮಾಜ ಒಳಿತನ್ನು ಗೌರವಿಸುತ್ತದೆಯೋ, ಆ ಸಮಾಜವನ್ನು ಒಳಿತು ಆಳುತ್ತಿದೆ ಎಂದು ಅರ್ಥ. ಆದರೆ ಇತ್ತೀಚೆಗೆ ಕೊಡುಗೆಗಳು, ಬಹುಮಾನಗಳು ದ್ವೇಷ ರೂಪವನ್ನು ಪಡೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಒಂದೆಡೆ ಪ್ರಾಣಿಗಳ ಮೇಲಿನ ಪ್ರೀತಿಯನ್ನು ಪ್ರಕಟ ಪಡಿಸುತ್ತಾ ಮನುಷ್ಯನನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದ್ದರೆ, ಮಗದೊಂದೆಡೆ ಹಲವರ ತಲೆಗಳನ್ನು ಕತ್ತರಿಸುವುದಕ್ಕಾಗಿ ಬಹುಮಾನವನ್ನು ಘೋಷಿಸಲಾಗುತ್ತಿದೆ.

ಸಾಧಾರಣವಾಗಿ ಇಂತಹ ಕೃತ್ಯಗಳು ಯಾವುದಾದರೂ ಮುಸ್ಲಿಮ್ ಆಡಳಿತವಿರುವ ರಾಷ್ಟ್ರಗಳಲ್ಲಿ ನಡೆದರೆ, ಅದರ ಹೆಸರಲ್ಲಿ ಆ ಧರ್ಮದ ಮೂಲಭೂತವಾದ ವರ್ಷಗಟ್ಟಳೆ ಚರ್ಚೆಗೊಳಗಾಗುತ್ತದೆ. ಆದರೆ ಪ್ರಜಾಸತ್ತೆಯೇ ಆತ್ಮವಾಗಿರುವ ಭಾರತದಲ್ಲಿ, ಕಳೆದ ಎರಡು ತಿಂಗಳಲ್ಲಿ ಮೂರು ತಲೆಗಳಿಗಾಗಿ ಬಹುಮಾನವನ್ನು ಘೋಷಿಸಲಾಗಿದೆ. ಆ ಮೂವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು. ಅವರಲ್ಲಿ ಇಬ್ಬರು ಮುಖ್ಯಮಂತ್ರಿಗಳು. ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸುವುದನ್ನು ತಡೆಯಲು ಸಂಘಪರಿವಾರ ಬಹಿರಂಗ ಪ್ರತಿಭಟನೆ ನಡೆಸಿತು. ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಇನ್ನೊಂದು ರಾಜ್ಯಕ್ಕೆ ಆಗಮಿಸದಂತೆ ತಡೆಯಲು ದುಷ್ಕರ್ಮಿಗಳು ಬಹಿರಂಗವಾಗಿ ಬೀದಿಗಿಳಿದರೆ, ಆ ಪ್ರತಿಭಟನೆಗೆ ಕಾನೂನು ವ್ಯವಸ್ಥೆಯೇ ರಾಜಹಾಸನ್ನು ಹಾಸಿಕೊಟ್ಟಿತು. ಇದರ ಬೆನ್ನಿಗೇ, ಉಜ್ಜೈನಿಯ ಸಂಘಪರಿವಾರ ನಾಯಕ ಕುಂದನ್ ಚಂದ್ರಾವತ್ ಎಂಬಾತ ಕೇರಳ ಮುಖ್ಯಮಂತ್ರಿಯ ತಲೆಯನ್ನು ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ಉಡುಗೊರೆ ಕೊಡುತ್ತೇನೆ ಎಂದು ಘೋಷಿಸಿದ.

ಬೇಕೋ ಬೇಡವೋ ಎಂಬಂತೆ ಎರಡು ದಿನಗಳ ಬಳಿಕ ಆತನ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದರು. ಇದಾದ ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿರುದ್ಧ ಬಿಜೆಪಿಯ ಯುವ ವಿಭಾಗದ ನಾಯಕನೊಬ್ಬ ತಲೆಕತ್ತರಿಸುವ ಬೆದರಿಕೆಯನ್ನು ಒಡ್ಡಿದ. ಅವರ ತಲೆಯನ್ನು ಕತ್ತರಿಸಿ ತಂದವರಿಗೆ 11 ಲಕ್ಷ ರೂಪಾಯಿ ಉಡುಗೊರೆಯನ್ನು ನೀಡುವುದಾಗಿ ಕರೆ ನೀಡಿದ. ಸಂಸತ್ತಿನಲ್ಲೂ ಇದು ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಇದೀಗ ಕಾಶ್ಮೀರದ ಕೊಡುಗೈ ದಾನಿಯೊಬ್ಬ ರಾಜಕೀಯ ಮುಖಂಡ ಫಾರೂಕ್ ಅಬ್ದುಲ್ಲಾ ಅವರ ತಲೆ ಕತ್ತರಿಸಿದರೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ನೀಡಲಿದ್ದಾನಂತೆ. ಇನ್ನೊಬ್ಬರ ಮನೆಗೆ ಬೆಂಕಿ ಹಚ್ಚಿಯೇ ಬದುಕು ಕಟ್ಟಿಕೊಂಡು ಬಂದಿರುವ ಈ ಪುಡಿ ನಾಯಕರ ಬಳಿ ತಪಾಸಣೆ ಮಾಡಿದರೆ ಹತ್ತು ಪೈಸೆ ಸಿಗುವುದೂ ಕಷ್ಟ. ಆದರೂ ಅವರ ತಲೆ ಕತ್ತರಿಸಿ, ಇವರ ತಲೆಕತ್ತರಿಸಿ, ಬಹುಮಾನ ಕೊಡುತ್ತೇವೆ ಎಂದು ನಡುಬೀದಿಯಲ್ಲಿ ಯಾವ ಭಯವೂ ಇಲ್ಲದೆ ಅರಚುತ್ತಿರುವುದು ಈ ದೇಶದ ಕಾನೂನು ವ್ಯವಸ್ಥೆಯ ನರಗಳು ದುರ್ಬಲಗೊಳ್ಳುತ್ತಿರುವುದರ ಪರಿಣಾಮವಲ್ಲದೆ ಇನ್ನೇನೂ ಅಲ್ಲ.

ಒಂದು ಕಾಲವಿತ್ತು. ಒಬ್ಬ ರಾಜಕೀಯ ನಾಯಕನಾಗಿ ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದರೆ ಆತ ತಳಮಟ್ಟದಿಂದ ನೂರಾರು ಚಳವಳಿಗಳನ್ನು ರೂಪಿಸಿಕೊಳ್ಳುತ್ತಾ ಬೆಳೆಯಬೇಕಾಗಿತ್ತು. ರಾಜ್ಯ ಮಟ್ಟದ ಅಥವಾ ರಾಷ್ಟ್ರಮಟ್ಟದ ನಾಯಕನಾಗುವಷ್ಟರಲ್ಲಿ ಅವರು ತಮ್ಮ ಬಹುತೇಕ ಆಯುಷ್ಯವನ್ನು ಸವೆಸಿರುತ್ತಾರೆ. ಆ ನಾಯಕತ್ವದ ಹಿಂದೆ ಸಾಕಷ್ಟು ದುಡಿಮೆ, ಅನುಭವ, ಹೋರಾಟಗಳಿರುತ್ತವೆ. ಇಂದು ಬಿಜೆಪಿಯ ಯಡಿಯೂರಪ್ಪ, ಕಾಂಗ್ರೆಸ್‌ನ ಸಿದ್ದರಾಮಯ್ಯ, ಜೆಡಿಎಸ್‌ನ ದೇವಗೌಡರಂತಹ ನಾಯಕರು ರೂಪುಗೊಂಡದ್ದು ಈ ದಾರಿಯಲ್ಲೇ ಹೊರತು, ವಿಷದ್ವೇಷ ಭಾಷಣಗಳ ಮೂಲಕವಲ್ಲ.

ದುರದೃಷ್ಟವಶಾತ್ ಇಂದು ನಾಯಕನಾಗುವುದಕ್ಕೆ ಸುಲಭ ದಾರಿಯೊಂದನ್ನು ಬಿಜೆಪಿಯ ಹೊಸ ತಲೆಮಾರು ಕಂಡುಕೊಂಡಿದೆ. ಬೀದಿಯಲ್ಲಿ ನಿಂತು, ಕಡಿ, ಕೊಚ್ಚು, ಕೊಲ್ಲು, ದ್ವೇಷಿಸು, ಬೆಂಕಿ ಹಚ್ಚು, ಪಾಕಿಸ್ತಾನಕ್ಕೆ ತೊಲಗು ಮೊದಲಾದ ಪದಗಳನ್ನು ಜೋಡಿಸಿ ಜನರನ್ನು ಪ್ರಚೋದಿಸಿದರೆ ಸಾಕು, ಮರುದಿನವೇ ಮಾಧ್ಯಮಗಳ ಮೂಲಕ ಆತ ನಾಯಕನಾಗಿ ಹೊರಹೊಮ್ಮಿ ಬಿಡುತ್ತಾನೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರಂತಹ ನಾಯಕರೇ ಇವರಿಗೆ ಸ್ಫೂರ್ತಿಯಾಗಿದ್ದಾರೆ. ರೈತರು, ನೀರು, ಕೃಷಿ, ಆಹಾರ, ಬಟ್ಟೆ, ವಸತಿ ಇವೆಲ್ಲವುಗಳ ಬಗ್ಗೆ ಮಾತನಾಡುತ್ತಾ ಆಯುಷ್ಯವನ್ನು ಕಳೆಯುವುದಕ್ಕಿಂತ ಒಂದೇ ಒಂದು ದಿನದಲ್ಲಿ ನಾಯಕನಾಗುವುದಕ್ಕೆ ಇರುವ ಸದ್ಯದ ಸುಲಭ ದಾರಿ ಸಾರ್ವಜನಿಕ ಪ್ರದೇಶದಲ್ಲಿ ನಿಂತು ದೇಶ ವಿರೋಧಿ, ಜನವಿರೋಧಿ, ದ್ವೇಷ ಭಾಷಣವನ್ನು ಮಾಡುವುದು. ಆತ ಒಂದೇ ದಿನದಲ್ಲಿ ಎಲ್ಲರ ದೃಷ್ಟಿಗೆ ಬೀಳುತ್ತಾನೆ. ಈ ಹಿಂದೆ ಮಾತಿನಲ್ಲಿ ಸಜ್ಜನಿಕೆ, ಮುತ್ಸದ್ದಿತನ, ಮಾನವೀಯತೆ, ಕರುಣೆಗಳಿದ್ದವರನ್ನು ನಾಯಕರೆಂದು ಗುರುತಿಸಲಾಗುತ್ತಿತ್ತು.

ಆದರೆ ಇಂದು, ನಾಯಕನಾಗಬೇಕಾದರೆ ಆತ ಮನುಷ್ಯತ್ವವನ್ನು ಕಳಚಿಟ್ಟು ಭಾಷಣ ಮಾಡಿದರೆ ಸಾಕು. ಜನರಿಗೆ ಕೇಳುವುದಕ್ಕೆ ರೋಚಕವಾಗಿರಬೇಕು. ಮನರಂಜಿಸಬೇಕು. ಅವರೊಳಗಿನ ಕ್ರೌರ್ಯಕ್ಕೆ ತುಪ್ಪ ಸುರಿಯುವಂತಿರಬೇಕು. ಮಧ್ಯಮ ವರ್ಗದ ಜನ ಅಂತಹ ಭಾಷಣಗಳಲ್ಲಿ ತಮ್ಮ ಭದ್ರತೆಯನ್ನು ಹುಡುಕತೊಡಗಿದ್ದಾರೆ. ಇದು ಪ್ರಜಾಸತ್ತೆಯ ಸತ್ವ, ಗುಣ ಮತ್ತು ಅದರ ಮಹತ್ವ ತಿಳಿಯದ ಹೊಸ ತಲೆಮಾರಿನ ದುರಂತ. ಜನ್ನ ಕವಿಯ ಯಶೋಧರ ಚರಿತೆಯಲ್ಲಿ ಬರುವ ಅಷ್ಟಾವಕ್ರ ಮತ್ತು ಅಮೃತ ಮತಿಯ ವಿಕೃತ ಸಂಬಂಧವನ್ನು ಇದು ನೆನಪಿಸುತ್ತದೆ. ಆ ಕಾವ್ಯದಲ್ಲಿ ಯಶೋಧರನ ಸಾತ್ವಿಕ ಪ್ರೀತಿಯನ್ನು ತೊರೆದು ಅಷ್ಟಾವಕ್ರನ ವಿಕೃತ ಪ್ರೀತಿಗೆ ಅಮೃತಮತಿ ಶರಣಾಗುತ್ತಾಳೆ. ಅರಮನೆಯನ್ನು ಬಿಟ್ಟು ಅಷ್ಟಾವಕ್ರನನ್ನು ಹುಡುಕುತ್ತಾ ಮಹಾರಾಣಿ ಕುದುರೆಯ ಲಾಯಕ್ಕೆ ಹೋಗುತ್ತಾಳೆ. ಅಲ್ಲಿ ವಿಕಾರ ರೂಪಿಯಾಗಿರುವ ಅಷ್ಟಾವಕ್ರ ಚಾಟಿ ಹಿಡಿದು ಆಕೆಗಾಗಿ ಕಾಯುತ್ತಿರುತ್ತಾನೆ. ಮತ್ತು ‘ತಡ ಯಾಕೆ ಮಾಡಿದೆ ?’ ಎಂದು ಥಳಿಸ ತೊಡಗುತ್ತಾನೆ. ಅವಳೋ ಆ ಚಾಟಿ ಏಟನ್ನು ಆಸ್ವಾದಿಸುತ್ತಾ, ಎಷ್ಟು ಬೇಕಾದರೂ ಥಳಿಸು, ಆದರೆ ನನ್ನನ್ನು ದೂರ ಮಾಡಬೇಡ ಎಂದು ಗೋಗರೆಯುತ್ತಾಳೆ.

ಸಂಘಪರಿವಾರದ ಹಿಂಸಾ ರಾಜಕೀಯಕ್ಕೆ ಒಲಿಯುತ್ತಿರುವ ಭಾರತದ ಮಧ್ಯಮ ವರ್ಗ, ಅಮೃತಮತಿಯ ಹಿಂಸಾರತಿಯ ಮನಸ್ಥಿತಿಯನ್ನು ನಿಧಾನಕ್ಕೆ ತನ್ನದಾಗಿಸಿಕೊಳ್ಳುತ್ತಿದೆ. ಸಂಘಪರಿವಾರದ ಈ ಅವಿವೇಕಿಗಳು ನಿರ್ದಿಷ್ಟ ನಾಯಕರ ತಲೆಕತ್ತರಿಸುವುದಕ್ಕೆ ಕರೆಕೊಡುತ್ತಿದ್ದರೂ ಅವರ ಅಂತಿಮ ಗುರಿ ಪ್ರಜಾಸತ್ತೆಯ ತಲೆಕತ್ತರಿಸುವುದೇ ಆಗಿದೆ. ಅವರ ಅಸಹನೆ ವೈಯಕ್ತಿಕವಾದುದಲ್ಲ. ಒಬ್ಬ ಮುಖ್ಯಮಂತ್ರಿ ಜಾತ್ಯತೀತ ವೌಲ್ಯಗಳನ್ನು ಉಳಿಸುವುದಕ್ಕೆ ಯತ್ನಿಸಿದ ಸಂದರ್ಭದಲ್ಲಿ ಈ ಘೋಷಣೆಗಳು ಹೊರ ಬೀಳುತ್ತವೆ. ಮುಂದಿನ ದಿನಗಳಲ್ಲಿ, ಸಂವಿಧಾನದ ಪರವಾಗಿ ಮಾತನಾಡಿದವರೆಲ್ಲರ ತಲೆಗಳಿಗೂ ಬೆಲೆ ಘೋಷಣೆ ಮಾಡುವ ಸ್ಥಿತಿ ನಿರ್ಮಾಣವಾಗಬಹುದು. ಸಂವಿಧಾನದ ತಲೆಯನ್ನು ಕಾಪಾಡಬೇಕಾದರೆ, ಅದಕ್ಕೆ ಬೆಲೆ ಘೋಷಿಸುವವರ ನಾಲಗೆಗಳನ್ನು ಕತ್ತರಿಸುವ ಕೆಲಸ ನಡೆಯಲೇಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವವರೆಲ್ಲ ಒಂದಾಗಿ ಕಾನೂನು ವ್ಯವಸ್ಥೆಯ ಮೇಲೆ ಒತ್ತಡಹೇರಬೇಕಾದ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News