×
Ad

ಬಿ. ಆರ್. ಶೆಟ್ಟಿಯಿಂದ ದೇಶದ ಇತಿಹಾಸದಲ್ಲೇ ಅತ್ಯಂತ ದುಬಾರಿ ಸಿನೆಮಾ ನಿರ್ಮಾಣ !

Update: 2017-04-17 17:42 IST

# ಸಾವಿರ ಕೋಟಿ ಬಜೆಟ್ ಚಿತ್ರದ ಕತೆ ಏನು ಗೊತ್ತೇ ?
# ಯಾವಾಗ ಸೆಟ್ಟೇರಲಿದೆ ಈ ಮಹಾ ಚಿತ್ರ ? ಯಾವತ್ತು ಬಿಡುಗಡೆ ? 
# 100 ಭಾಷೆಗಳಲ್ಲಿ ರಿಮೇಕ್ ಆಗಲಿದೆ ಈ ಚಿತ್ರ 
#  ಚಿತ್ರ ತಂಡದಲ್ಲಿ ಆಸ್ಕರ್ ಪುರಸ್ಕೃತರು , ದೇಶದ ದಿಗ್ಗಜರು


ಮುಂಬೈ, ಎ. 17 : ದೇಶದ ಇತಿಹಾಸದಲ್ಲೇ ಅತ್ಯಂತ ದುಬಾರಿ ಎಂಬ ಖ್ಯಾತಿಯ ಬಾಹುಬಲಿ ಎರಡನೇ ಭಾಗ ಬಿಡುಗಡೆಯ ಸಿದ್ದತೆಯಲ್ಲಿರುವಾಗಲೇ ಕನ್ನಡಿಗರಿಗೆ ಶುಭ ಸುದ್ದಿಯೊಂದು ಬಂದಿದೆ. ಕನ್ನಡಿಗ, ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಅಬುಧಾಬಿಯ ಪ್ರತಿಷ್ಠಿತ ಎನ್ ಎಂ ಸಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ. ಆರ್. ಶೆಟ್ಟಿ ಸಾವಿರ ಕೋಟಿ ರೂಪಾಯಿ ಬಜೆಟ್ ನ ' ಮಹಾ ' ಚಿತ್ರವೊಂದನ್ನು ನಿರ್ಮಿಸಲಿದ್ದಾರೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.

ಮಹಾಭಾರತದ ಚಿತ್ರಕತೆಯಿರುವ ಈ ಮಹಾಚಿತ್ರವನ್ನು ಎರಡು ಭಾಗಗಳಲ್ಲಿ ಖ್ಯಾತ ಜಾಹೀರಾತು ಚಿತ್ರ ನಿರ್ದೇಶಕ ವಿ ಎ ಶ್ರೀಕುಮಾರ್ ಮೆನನ್ ನಿರ್ದೇಶಿಸಲಿದ್ದಾರೆ. ಸೆಪ್ಟೆಂಬರ್ 2017 ರಲ್ಲಿ ಮೊದಲ ಭಾಗ ಸೆಟ್ಟೇರಲಿದ್ದು 2020 ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಮೊದಲ ಭಾಗ ಬಿಡುಗಡೆಯ ಮೂರ್ ತಿಂಗಳೊಳಗೆ ಎರಡನೇ ಭಾಗ ಬಿಡುಗಡೆ ಮಾಡುವ ಯೋಜನೆ ನಿರ್ಮಾಪಕರದ್ದು.

ಚಿತ್ರ ಇಂಗ್ಲಿಷ್ , ಹಿಂದಿ , ಮಲಯಾಳಂ , ಕನ್ನಡ , ತಮಿಳು ಹಾಗು ತೆಲುಗುಗಳಲ್ಲಿ ನಿರ್ಮಾಣವಾಗಲಿದ್ದು ಬಳಿಕ ಹಲವಾರು ಭಾರತೀಯ ಹಾಗು ವಿದೇಶಿ ಭಾಷೆಗಳಲ್ಲಿ  ಡಬ್ ಆಗಲಿದೆ ಎಂದು ಶೆಟ್ಟಿ ಅವರ ಸಂಸ್ಥೆ ಪಿಟಿಐ ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಈ ಚಿತ್ರ ಎಲ್ಲ ವಿಭಾಗಳಲ್ಲೂ ಈವರೆಗಿನ ಎಲ್ಲ ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ. ಬಾಲಿವುಡ್ ಹಾಗು ಹಾಲಿವುಡ್ ನ ಅತ್ಯಂತ ಖ್ಯಾತನಾಮ ನಟರು, ತಂತ್ರಜ್ಞರು ಈ ಚಿತ್ರ ತಂಡಕ್ಕೆ ಸೇರಲಿದ್ದಾರೆ. ವಿದೇಶಿ ವೀಕ್ಷಕರನ್ನು ಸೆಳೆಯಲು ಬೇರೆ ಬೇರೆ ದೇಶಗಳ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಚಿತ್ರ ನಿರ್ಮಾಣ ಸಂಸ್ಥೆ ಹೇಳಿದೆ.

" ಈ ಚಿತ್ರ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ರಿಮೇಕ್ ಆಗಿ ಜಗತ್ತಿನಾದ್ಯಂತ ಮೂರು ಬಿಲಿಯನ್ ಗೂ ಹೆಚ್ಚು ಜನರನ್ನು ತಲುಪಲಿದೆ ಎಂದು ನನಗೆ ನಂಬಿಕೆ ಇದೆ " ಬಿ ಆರ್ ಶೆಟ್ಟಿ ಹೇಳಿದ್ದಾರೆ.

" ಚಿತ್ರಕ್ಕಾಗಿ ತಮ್ಮ ತಂಡ ಕೆಲವು ವರ್ಷಗಳಿಂದ  ಕೆಲಸ ಮಾಡುತ್ತಿದೆ. ಚಿತ್ರ ನಿರ್ಮಾಣದ ಪ್ರತಿಯೊಂದು ವಿಭಾಗಗಳಲ್ಲೂ ಉತ್ಕೃಷ್ಟ ಗುಣಮಟ್ಟ ನೀಡುವುದು ನಮ್ಮ ಗುರಿ. ಅದಕ್ಕಾಗಿ ನಮ್ಮ ಚಿತ್ರ ತಂಡ ಸಂಪೂರ್ಣ ಸನ್ನದ್ಧವಾಗಿದೆ "  ಎಂದು  ನಿರ್ದೇಶಕ ಶ್ರೀಕುಮಾರ್ ಮೆನನ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News