ರಸ್ತೆ ಅಪಘಾತದ ಗಾಯಾಳುಗಳ ಆಪತ್ಭಾಂಧವ ಈ ಬೈಕ್ ಅಂಬುಲೆನ್ಸ್ ನಡೆಸುವ ಕಾಲೇಜು ವಿದ್ಯಾರ್ಥಿ

Update: 2017-04-18 11:10 GMT

ವಾರಣಾಸಿ,ಎ.18 : ವಾರಣಾಸಿಯ ರಸ್ತೆಗಳಲ್ಲಿ ತನ್ನ ಬೈಕಿನಲ್ಲಿ ಅತ್ತಿತ್ತ ಸಾಗುವ ಈ ಕಾಲೇಜು ವಿದ್ಯಾರ್ಥಿ ನಿಜಾರ್ಥದಲ್ಲಿ ಒಬ್ಬ ಆಪತ್ಭಾಂಧವ. ಅಂದ ಹಾಗೆ ಈತನ ಬೈಕ್ ಇತರರ ಬೈಕಿನಂತಿಲ್ಲ. ಅದೊಂದು ಬೈಕ್ ಅಂಬುಲೆನ್ಸ್.

ರಸ್ತೆ ಅಪಘಾತದ ಗಾಯಾಳುಗಳಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡುವ ಅಂಬುಲೆನ್ಸ್. ಈತನ ಸೇವೆ ಪಡೆಯಲು ಯಾರೂ ಈತನಿಗೆ ಕರೆ ಮಾಡಬೇಕೆಂದಿಲ್ಲ. ತನ್ನ ಸ್ನೇಹಿತರಿಂದ ರಸ್ತೆ ಅಪಘಾತದ ಬಗ್ಗೆ ಮಾಹಿತಿ ಪಡೆಯುವ ಈತ ತಕ್ಷಣ ಅಲ್ಲಿಗೆ ತನ್ನ ಬೈಕಿನಲ್ಲಿ ಔಷಧಿ, ಬಿಸ್ಕತ್ತು, ನೀರಿನೊಂದಿಗೆ ಧಾವಿಸುತ್ತಾನೆ. ಈ ಆಪತ್ಭಾಂಧವನ ಹೆಸರು ಅಮನ್ ಯಾದವ್. ಈತ ಚೌಬೇಪುರದ ಸಂಕಟಮೋಚನ್ ಪದವಿ ಕಾಲೇಜಿನ ಎರಡನೇ ಬಿಎ ವಿದ್ಯಾರ್ಥಿ. ಅಗತ್ಯ ವಸ್ತುಗಳನ್ನು ಖರೀದಿಸಲು ಆತನಿಗೆ ಸ್ಥಳೀಯರು ಸಹಾಯ ಮಾಡುತ್ತಾರೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಆತ ರಸ್ತೆಯಲ್ಲಿ ಸಾಗುವಾಗ ಬಸವಳಿದವರನ್ನು ಕಂಡರೆ ವಾಹನ ನಿಲ್ಲಿಸಿ ಅವರಿಗೆ ಬಿಸ್ಕತ್ತು ನೀರು ನೀಡುತ್ತಾನೆ.

ಪಾಂಡೇಪುರ ನಿವಾಸಿಯಾಗಿರುವ ಅಮನ್ ಕಳೆದ ಆರು ವರ್ಷಗಳಿಂದ ತನ್ನ ಸೈಕಲ್ಲಿನಲ್ಲಿ ಸಂಚರಿಸಿ ರಸ್ತೆ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡುತ್ತಿದ್ದರೂ ಆತನಿಗೆ ಈ ಬೈಕನ್ನು ಚಿನ್ನದ ವ್ಯಾಪಾರಿ ರಾಜೀವ್ ವರ್ಮ ಹದಿನೈದು ದಿನಗಳ ಹಿಂದೆಯಷ್ಡೇ ಒದಗಿಸಿದ್ದರು. ಅದನ್ನು ಅಮನ್ ಅಂಬುಲೆನ್ಸ್ ಆಗಿ ಪರಿವರ್ತಿಸಿದ್ದನು. ಕಳೆದೊಂದು ವಾರದಲ್ಲಿ ಆತ ಕನಿಷ್ಠ ಒಂದು ಡಜನ್ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಿದ್ದಾನೆ.

ಕಬಿರ್ ಚೌರಾದ ಆಸ್ಪತೆಯೆದುರು ರಸ್ತೆ ಅಪಘಾತದ ಗಾಯಾಳುವೊಬ್ಬ ನೋವಿನಿಂದ ನರಳುತ್ತಿರುವುದನ್ನು ಆರು ವರ್ಷಗಳ ಹಿಂದೆ ನೋಡಿದ ನಂತರ ಈ ಸೇವಾ ಕೈಂಕರ್ಯವನ್ನು ಕೈಗೆತ್ತಿಕೊಳ್ಳಲು ಅಮನ್ ನಿರ್ಧರಿಸಿದ್ದನು. ಈ ಹಿಂದೆ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡಿದ ಅನುಭವವೂ ಆತನಿಗಿರುವುದರಿಂದ ರೋಗಿಗಳಿಗೆ ಸಹಾಯ ಮಾಡುವ ಕಾರ್ಯ ಸುಲಭವಾಗಿದೆ.

ಅಮನ್ ಯಾದವ್ ಒಂದು ಫೇಸ್ ಬುಕ್ ಪೇಜ್ ಕೂಡ ನಡೆಸುತ್ತಿದ್ದು ಆತನಿಗೆ 4400 ಗೆಳೆಯರಿದ್ದಾರೆ. ದೀಪಾವಳಿ, ಹೋಳಿ ಹಬ್ಬಗಳನ್ನು ಬಡವರ ಜತೆಗೆ ಆಚರಿಸುವ ಈತ ಇಂದಿನ ಯುವಜನತೆಗೆ ನಿಜವಾಗಿಯೂ ಮಾದರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News