×
Ad

ಅಡ್ವಾಣಿ ಮತ್ತು ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಸುಪ್ರೀಂ ಆದೇಶ

Update: 2017-04-19 21:03 IST

ಹೊಸದಿಲ್ಲಿ, ಎ.19: 1992ರ ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಲ್.ಕೆ.ಅಡ್ವಾಣಿ, ಉಮಾ ಭಾರತಿ ಮತ್ತು ಮನೋಹರ ಜೋಷಿ ವಿರುದ್ಧದ ಒಳಸಂಚು ಆರೋಪವನ್ನು ಸುಪ್ರೀಂಕೋರ್ಟ್ ಪುನರೂರ್ಜಿತಗೊಳಿಸಿದೆ.16ನೇ ಶತಮಾನದ ಈ ಮಸೀದಿಯನ್ನು ದ್ವಂಸಗೊಳಿಸಿದ ಬಳಿಕ ದೇಶದಾದ್ಯಂತ ನಡೆದ ಗಲಭೆಯಲ್ಲಿ ಸುಮಾರು 2000 ಮಂದಿ ಪ್ರಾಣಕಳೆದುಕೊಂಡಿದ್ದರು. ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಒಳಸಂಚು ಆರೋಪವನ್ನು ಪುನರೂರ್ಜಿತಗೊಳಿಸಿ ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಮತ್ತು ಆರ್.ಎಫ್.ನಾರಿಮನ್ ಅವರನ್ನೊಳಗೊಂಡ ನ್ಯಾಯಾಲಯದ ಪೀಠವೊಂದು ತಿಳಿಸಿದೆ. ಆದೇಶದ ಪ್ರಮುಖ ಹತ್ತು ಅಂಶಗಳು ಈ ಕೆಳಗಿನಂತಿವೆ. 

1. 1992ರ ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಲ್.ಕೆ.ಅಡ್ವಾಣಿ, ಉಮಾ ಭಾರತಿ ಮತ್ತು ಮನೋಹರ ಜೋಷಿ ವಿರುದ್ಧದ ಒಳಸಂಚು ಆರೋಪ ಪುನರೂರ್ಜಿತ.

2.ಈ ಮೂವರು ನಾಯಕರು ಹಾಗೂ ಇತರ ಕರಸೇವಕರ ವಿರುದ್ಧದ ಈ ಪ್ರಕರಣದ ವಿಚಾರಣೆಯನ್ನು ಪ್ರತೀ ದಿನ ನಡೆಸಿ ಎರಡು ವರ್ಷಗಳೊಳಗೆ ಪೂರ್ಣಗೊಳಿಸಬೇಕು.

3. ಪ್ರಕರಣಕ್ಕೆ ಸಂಬಂಧಿಸಿ ಇದೀಗ ಎರಡು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಹೆಸರು ಉಲ್ಲೇಖಿಸದ ‘ಕರಸೇವಕರ’ ವಿರುದ್ದದ ಪ್ರಕರಣ ಲಕ್ನೊ ನ್ಯಾಯಾಲಯದಲ್ಲಿ ಮತ್ತು ಮುಖಂಡರ ವಿರುದ್ಧದ ಪ್ರಕರಣದ ವಿಚಾರಣೆ ರಾಯ್‌ಬರೇಲಿ ನ್ಯಾಯಾಲಯದಲ್ಲಿ ನಡೆಯುತ್ತಿದೆ. 

4. ರಾಯ್‌ಬರೇಲಿ ಮತ್ತು ಲಕ್ನೋದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಒಗ್ಗೂಡಿಸಿ, ಲಕ್ನೋದಲ್ಲಿ ಮಾತ್ರ ವಿಚಾರಣೆ ಮುಂದುವರಿಸಬೇಕು .

 5. ವಿಚಾರಣೆ ಮುಂದೂಡಬೇಕು ಎಂದು ಸಲ್ಲಿಸಲಾಗುವ ಮನವಿ ಪುರಸ್ಕರಿಸಲು ಅರ್ಹ ಎಂದು ನ್ಯಾಯಾಧೀಶರಿಗೆ ಮನವರಿಕೆ ಆದರೆ ಮಾತ್ರ ಮುಂದೂಡಬಹುದು.

 6. ಅಲ್ಲದೆ ವಿಚಾರಣೆ ಮುಗಿದು ತೀರ್ಪು ಘೋಷಣೆಯಾಗುವವರೆಗೆ ನ್ಯಾಯಾಧೀಶರನ್ನು ವರ್ಗಾಯಿಸುವಂತಿಲ್ಲ . 7. ಆದರೆ ಇದೀಗ ರಾಜಸ್ತಾನದ ರಾಜ್ಯಪಾಲರಾಗಿರುವ ಕಲ್ಯಾಣ್ ಸಿಂಗ್ ಅವರು ಸಾಂವಿಧಾನಿಕ ವಿನಾಯಿತಿಯ ಕಾರಣ ಸದ್ಯಕ್ಕೆ ವಿಚಾರಣೆಯಿಂದ ಹೊರಗುಳಿಯಲಿದ್ದಾರೆ. ರಾಜ್ಯಪಾಲ ಹುದ್ದೆಯ ಅವಧಿ ಕಳೆದ ಬಳಿಕ ಅವರ ವಿರುದ್ಧದ ವಿಚಾರಣೆ ನಡೆಸಬಹುದು . 1992ರಲ್ಲಿ ಕಲ್ಯಾಣ್ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

8. ಎ.19ರಿಂದ ನಾಲ್ಕು ವಾರಗಳೊಳಗೆ ವಿಚಾರಣೆ ಆರಂಭಿಸಬೇಕು. ಪ್ರಕರಣದಲ್ಲಿ ಹೊಸ ವಿಚಾರಣೆ ಅಗತ್ಯವಿಲ್ಲ.

9. ಫಿರ್ಯಾದಿ ಪಕ್ಷದ ಸಾಕ್ಷಿದಾರರು ಪ್ರತೀ ದಿನದ ವಿಚಾರಣೆಗೆ ಹಾಜರಾಗಿ ಪುರಾವೆಗಳನ್ನು ದಾಖಲಿಸಿಕೊಳ್ಳುವುದನ್ನು ಖಾತರಿಪಡಿಸಿಕೊಳ್ಳಬೇಕು.

10. ಆದೇಶವನ್ನು ಅಕ್ಷರಶಃ ಪಾಲಿಸಬೇಕು ಮತ್ತು ಆದೇಶದ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಸುಪ್ರೀಂಕೋರ್ಟ್‌ಗೆ ದೂರು ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News