×
Ad

ಗಾಂಧೀಜಿ ವಿರುದ್ಧ ಅವಹೇಳನಕಾರಿ ಪದ ಬಳಸಿದ ನ್ಯಾ.ಮಾರ್ಕಂಡೇಯ ಕಾಟ್ಜು

Update: 2017-04-20 13:35 IST

ಹೊಸದಿಲ್ಲಿ, ಎ. 20: ಸದಾ ವಿವಾದದ ಸುಳಿಯಲ್ಲಿಯೇ ಇರುವ ಅಲಹಾಬಾದ್ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಇದೀಗ ಮಹಾತ್ಮ ಗಾಂಧಿಯನ್ನು ‘ಬ್ರಿಟಿಷ್ ಏಜೆಂಟ್’ ಎಂದು ಸಾಮಾಜಿಕ ಜಾಲತಾಣದಲ್ಲಿ ಬಣ್ಣಿಸುವ ಮೂಲಕ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.

ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರೂ ಆಗಿರುವ  ಕಾಟ್ಜು, ರಾಷ್ಟ್ರಪಿತನನ್ನು ‘ರಾಸ್ಕಲ್’ ಎಂದು ಸಂಬೋಧಿಸುವ ಮೂಲಕ ಎಲ್ಲಾ ಎಲ್ಲೆಯನ್ನೂ ಮೀರಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ವಿವಿಧ ಟ್ವೀಟುಗಳಿಗೆ ಸ್ಪಂದಿಸಿದ ಕಾಟ್ಜು  ದೇಶ ವಿಭಜನೆ ಬ್ರಿಟಿಷ್ ಆಡಳಿತದ ಕುತಂತ್ರವಾಗಿದ್ದು ಹಾಗೂ ಇದನ್ನು ‘ಅವರ ಏಜೆಂಟರು’ ಮತ್ತು ‘ರಾಸ್ಕಲ್’ಗಳು (ಮಹಾತ್ಮ ಗಾಂಧಿ ಮತ್ತು ಮೊಹಮ್ಮದ್ ಅಲಿ ಜಿನ್ನಾ) ಅನುಮೋದಿಸಿದ್ದರು ಎಂದಿದ್ದರು.

ದೇಶ ವಿಭಜನೆಯ ವಿರುದ್ಧ ತಮ್ಮ ಆಕ್ರೋಶ ತೋಡಿಕೊಂಡ ನ್ಯಾಯಮೂರ್ತಿ ಕಾಟ್ಜು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಾಗರಿಕರು ಒಂದಾಗಬೇಕೆಂದು ಹೇಳಿದರು.‘‘1947ರ ವಿಭಜನೆ ಬ್ರಿಟಿಷರ ಐತಿಹಾಸಿಕ ಮೋಸವಾಗಿತ್ತು ಇದನ್ನು ಸರಿಪಡಿಸಬೇಕು’’ ಎಂದು ಟ್ವೀಟ್ ಮಾಡಿದ್ದರು.

 ಕಾಟ್ಜು ಅವರ ಮೊದಲ ಟ್ವೀಟಿಗೆ ಪ್ರತಿಕ್ರಿಯಿಸಿದ್ದ ಹಿರಿಯ ಪತ್ರಕರ್ತ ಆರ್ ಜಗನ್ನಾಥ್, ‘‘ದೇಶ ವಿಭಜನೆಯಾಗದೇ ಇರುತ್ತಿದ್ದರೆ ಭಾರತದ ಆಡಳಿತ ಅಸಾಧ್ಯವಾಗುತ್ತಿತ್ತು. ಜಿನ್ನಾ ಅವರು ಬೇಡಿಕೆಯಿರಿಸಿದ್ದ ವೀಟೋ ಅಧಿಕಾರಗಳನ್ನು ಗಮನಿಸಿ,’’ ಎಂದಿದ್ದರು. ಆದರೆ ಇದು ಖಟ್ಜು ಅವರಿಗೆ ಹಿಡಿಸಲಿಲ್ಲ. ‘‘ನೀವು ಅಸಂಬದ್ಧ ಮಾತನಾಡುತ್ತಿದ್ದೀರಿ,’’ ಎಂದು ಟ್ವೀಟ್ ಮಾಡಿ ವಿಭಜನೆ ಬ್ರಿಟಿಷರು ಮಾಡಿದ ದೊಡ್ಡ ಮೋಸ ಎಂದಿದ್ದಾರೆ.

ಜಗನ್ನಾಥ್ ತಮ್ಮ ಒಂದು ಟ್ವೀಟಿನಲ್ಲಿ ‘ಅಖಂಡ ಭಾರತ’ ಪದವನ್ನು ಉಪಯೋಗಿಸಿದರೆ, ಇದನ್ನು ವಿರೋಧಿಸಿದ ಖಟ್ಜು ಅಖಂಡ ಭಾರತ ಒಂದು ಆರೆಸ್ಸೆಸ್ ಪರಿಕಲ್ಪನೆ. ಇಲ್ಲಿ ಹಿಂದುತ್ವಕ್ಕೆ ಎಲ್ಲದಕ್ಕಿಂತಲೂ ಉನ್ನತ ಸ್ಥಾನ ನೀಡಲಾಗುತ್ತಿದೆ. ನನ್ನದು ಜಾತ್ಯತೀತ ಭಾರತ. ಇಲ್ಲಿ ಧಾರ್ಮಿಕ ತೀವ್ರಗಾಮಿತ್ವ, ಅದು ಹಿಂದೂ ಅಥವಾ ಮುಸ್ಲಿಮರು, ಯಾರಿಂದಲೇ ಆಗಿರಲಿ, ಅದನ್ನು ಸಹಿಸುವ ಪ್ರಶ್ನೆಯಿಲ್ಲ,’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News