‘ಮೋಗ್ಲಿ’ ಹುಡುಗಿ ತಮ್ಮ ನಾಪತ್ತೆಯಾದ ಮಗಳು ಎಂದು ಪೊಲೀಸರ ಮೊರೆ ಹೊಕ್ಕ ದಂಪತಿ
ಲಕ್ನೊ, ಎ.21: ಇತ್ತೀಚೆಗೆ ಲಖೀಂಪುರ್ ಖೇರಿಯ ಕತರ್ನಿಘಾಟ್ ಅರಣ್ಯ ಪ್ರದೇಶದಲ್ಲಿ ಕೋತಿಗಳ ಜತೆ ಪತ್ತೆಯಾಗಿದ್ದ ಎಂಟು ವರ್ಷದ 'ಮೋಗ್ಲಿ ಹುಡುಗಿ' ಎಂದೇ ಖ್ಯಾತಳಾಗಿರುವ ಎಹ್ಸಾಸ್ ಎಂಬ ಬಾಲಕಿ ತಮ್ಮ ನಾಪತ್ತೆಯಾಗಿರುವ ಮಗಳು ಲಕ್ಷ್ಮಿ ಎಂದು ಹೇಳಿಕೊಂಡು ದಂಪತಿಯೊಂದು ಸಿಂಗಹಿ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದೆ.
ಈ ದಂಪತಿ ಪ್ರಕಾರ ಅವರ ಪುತ್ರಿ ನವೆಂಬರ್ 25ರ 2012ರಲ್ಲಿ ನಾಪತ್ತೆಯಾಗಿದ್ದಳು. ಡಿಎನ್‌ಎ ಟೆಸ್ಟ್ ಮುಖಾಂತರ ಆಕೆ ತಮ್ಮ ಮಗಳು ಹೌದೇ ಅಥವಾ ಅಲ್ಲವೇ ಎಂಬುದನ್ನು ಪತ್ತೆ ಹಚ್ಚಬೇಕೆಂದೂ ಅವರು ಆಗ್ರಹಿಸಿದ್ದಾರೆ. ಆದರೆ ತಮ್ಮ ಪುತ್ರಿ ನಾಪತ್ತೆಯಾದಾಗ ಮಾತ್ರ ಪುಖ್ರಿ ಗ್ರಾಮದ ಈ ದಂಪತಿ ಮಖಾನ ದೇವಿ ಮತ್ತು ರಾಮ್ ಆಧಾರ್ ಯಾವುದೇ ದೂರು ದಾಖಲಿಸಿರಲಿಲ್ಲ.
ಈ ಬಾಲಕಿ ಪತ್ತೆಯಾದಾಗ ಆಕೆ ಹಲವು ವರ್ಷಗಳಿಂದ ಕೋತಿಗಳ ಜತೆಗೇ ವಾಸವಾಗಿರಬೇಕೆಂದು ಅಂದಾಜಿಸಲಾಗಿದ್ದರೂ, ಆ ಪ್ರದೇಶದಲ್ಲಿರುವ ಕ್ಯಾಮರಾಗಳಲ್ಲಿ ಆಕೆ ಯಾವತ್ತೂ ಕಂಡು ಬಂದಿಲ್ಲವಾದುದರಿಂದ ಈ ಸಾಧ್ಯತೆಯನ್ನು ನಂತರ ಅಲ್ಲಗಳೆಯಲಾಗಿತ್ತು.
ಪತ್ತೆಯಾದ ಸ್ವಲ್ಪ ದಿನಗಳ ಕಾಲ ಲಕ್ನೋದ ಆರ್.ಎಂ.ಎಲ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದರೆ ನಂತರ ಆಕೆಯನ್ನು ಅನಾಥ ಮಕ್ಕಳ ಆಶ್ರಯತಾಣವೊಂದರಲ್ಲಿರಿಸಲಾಗಿದೆ.
ಸಿಂಗಹಿ ಪೊಲೀಸ್ ಠಾಣಾಧಿಕಾರಿ ಸತ್ಯೇಂದ್ರ ಕುಮಾರ್ ಸಿಂಗ್ ಅವರು ಬಾಲಕಿಯ ಹೆತ್ತವರು ತಾವೆಂದು ಮುಂದೆ ಬಂದಿರುವ ದಂಪತಿಯನ್ನು ಬಾಲಕಿ ಪತ್ತೆಯಾದ ಸ್ಥಳದಲ್ಲಿ ಬರುವ ಬಹ್ರೈಚ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಹೇಳಲಾಗಿದೆ ಎಂದಿದ್ದಾರೆ. ಈ ದಂಪತಿಯ ಮಗಳು ನಾಪತ್ತೆಯಾಗಿದ್ದಾಗ ಅವರೇನಾದರೂ ದೂರು ದಾಖಲಿಸಿದ್ದೇ ಆಗಿದ್ದರೆ ಈ ಪ್ರಕರಣವನ್ನು ಇತ್ಯರ್ಥಗೊಳಿಸಬಹುದಾಗಿತ್ತು’’ ಎಂದು ಅವರು ಹೇಳಿದ್ದಾರೆ.