ವಾಟ್ಸ್ ಆ್ಯಪ್ ಎಡ್ಮಿನ್ ಗಳಿಗೆ ಎಚ್ಚರಿಕೆ : ಸುಳ್ಳು ಸುದ್ದಿ ಹರಡಿದರೆ ಕಾದಿದೆ ಶಿಕ್ಷೆ !
ಹೊಸದಿಲ್ಲಿ, ಎ.21: ವಾಟ್ಸ್ಆ್ಯಪ್ ಅಥವಾ ಫೇಸ್ ಬುಕ್ ನಲ್ಲಿ ಯಾವುದಾದರೂ ಗ್ರೂಪಿನ ಎಡ್ಮಿನ್ ಆಗುವ ಮೊದಲು ಒಂದಲ್ಲ ಎರಡು ಬಾರಿ ಯೋಚಿಸಿ. ಏಕೆಂದರೆ ನೀವು ಎಡ್ಮಿನ್ ಆಗಿರುವ ಗ್ರೂಪಿನಲ್ಲಿ ಯಾರಾದರೂ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದೇ ಆದಲ್ಲಿ ನೀವು ಕಾನೂನು ಕ್ರಮ ಎದುರಿಸಬೇಕಾಗಬಹುದು.
ತಪ್ಪು ತಪ್ಪಾದ ಮಾಹಿತಿ ಹಾಗೂ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದರೆ ಗ್ರೂಪ್ ಅಡ್ಮಿನ್ ವಿರುದ್ಧ ಎಫ್ ಐಆರ್ ದಾಖಲಿಸಬೇಕಾದೀತು ಎಂದು ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಯೋಗೇಶ್ವರ್ ರಾಮ್ ಮಿಶ್ರಾ ಹಾಗೂ ಎಸ್‌ಪಿ ನಿತಿನ್ ತಿವಾರಿ ಎಚ್ಚರಿಸಿದ್ದಾರೆ.
ಹಲವಾರು ಗ್ರೂಪ್ ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಇವುಗಳನ್ನು ಪರಿಶೀಲಿಸದೆ ಹಲವರು ಅವುಗಳನ್ನು ಫಾರ್ವರ್ಡ್ ಮಾಡಿ ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಗುರುವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿರುವ ಗ್ರೂಪ್ ಎಡ್ಮಿನ್ ಗಳು ತಮ್ಮ ಜವಾಬ್ದಾರಿಯನ್ನು ಹೊರಲು ಸಿದ್ಧರಿರಬೇಕು ಎಂದೂ ಹೇಳಲಾಗಿದೆ. ಎಡ್ಮಿನ್ ಒಬ್ಬ ತನಗೆ ಪರಿಚಯವಿರುವವರನ್ನು ಮಾತ್ರ ತನ್ನ ಗುಂಪಿನಲ್ಲಿ ಸೇರಿಸಬೇಕು ಎಂದೂ ಹೇಳಲಾಗಿದೆ. ಗ್ರೂಪಿನ ಯಾವುದೇ ಸದಸ್ಯ ತಪ್ಪು ಮಾಹಿತಿಯಿರುವ ಸಂದೇಶ ಕಳುಹಿಸಿದ್ದೇ ಆದಲ್ಲಿ ಎಡ್ಮಿನ್ ಆ ಸುದ್ದಿಯನ್ನು ನಿರಾಕರಿಸಬೇಕು ಹಾಗೂ ಆ ಸದಸ್ಯನ ನಂಬರ್ ಡಿಲೀಟ್ ಮಾಡುವ ಮೂಲಕ ಗುಂಪಿನಿಂದ ಹೊರ ಹಾಕಬೇಕು ಎಂದೂ ಹೇಳಲಾಗಿದೆ. ಒಂದು ವೇಳೆ ಎಡ್ಮಿನ್ ಹಾಗೆ ಮಾಡಲು ವಿಫಲನಾದಲ್ಲಿ ಆತನನ್ನು ತಪ್ಪಿತಸ್ಥನೆಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕಾದೀತೆಂದು ಎಚ್ಚರಿಸಲಾಗಿದೆ.
ಯಾವುದೇ ಧರ್ಮದವರ ಭಾವನೆಗಳನ್ನು ಅವಹೇಳನ ಮಾಡುವ ಹೇಳಿಕೆಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ನೀಡಬಾರದು, ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯವಾದರೂ ಅದರೊಂದಿಗೆ ಜವಾಬ್ದಾರಿಯೂ ಇರುತ್ತದೆ ಎಂದು ಹೇಳಲಾಗಿದೆ.
ವಾರಣಾಸಿ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವೆಂಬುದನ್ನು ಇಲ್ಲ ಸ್ಮರಿಸಬಹುದು.