×
Ad

ವೃತ್ತಿಯಿಂದ ನಿವೃತ್ತಿ :ಈ ಹಿರಿ ಜೀವಗಳಿಗೆ ಕನ್ನಡಿಯ ಗಂಟು

Update: 2017-04-23 23:34 IST

ಕಿಂಜಲ್ ಸಂಪತ್ ನಂದಿನಿ ಡೇ
ಕಮಲಾದೇವಿ (ಹೆಸರು ಬದಲಿಸಲಾಗಿದೆ), ರಾಜಸ್ಥಾನದ ಉದಯ ಪುರದಲ್ಲಿರುವ ವನ್ಯಧಾಮದ ಒಳಗಿನ ಬುಡಕಟ್ಟು ಪ್ರದೇಶದ ಲೊಹಾರಿ ಎಂಬಲ್ಲಿ ವಾಸಿಸುವ ಹಿರಿಯ ಜೀವ. 2016ರ ಬೇಸಿಗೆಯಲ್ಲಿಮೇಕೆಗಳ ಹಿಂಡು ಬೆನ್ನಟ್ಟುತ್ತಿದ್ದ ಅವರನ್ನು ‘ಇಂಡಿಯಾಸ್ಪೆಂಡ್’ ಸಂಪರ್ಕಿಸಿತು. ಮುಪ್ಪು, ಉದ್ಯೋಗ ಹಾಗೂ ಪಿಂಚಣಿ ಸಂಬಂಧದ ಅಧ್ಯಯನಕ್ಕೆ ಪ್ರಶ್ನೆ ಕೇಳುವ ಸಲುವಾಗಿ ಅವರನ್ನು ಮಾತಿಗೆಳೆಯಿತು.

ಸರಕಾರ ನೀಡುವ ವೃದ್ಧಾಪ್ಯ ಪಿಂಚಣಿಯ ಲಾಭ ಅವರಿಗೆ ಸಿಕ್ಕಿದೆಯೇ ಎನ್ನುವುದು ನಮ್ಮ ಮೊದಲ ಪ್ರಶ್ನೆಯಾಗಿತ್ತು. ಇದು ಅವರಿಗೆ ಕಿರಿಕಿರಿ ಎನಿಸಿತು. ಅದರ ಫಲಾನುಭವಿಯಾಗಿದ್ದರೂ, ಫಲಾನುಭವಿಯಾಗುವ ಇಚ್ಛೆ ಇರಲಿಲ್ಲ ಎಂದು ವಿವರಿಸಿದರು. ಏಕೆಂದರೆ ಈಕೆ 500 ರೂ. ಮಾಸಾಶನ ಪಡೆಯುತ್ತಾರೆ ಎಂಬ ಕಾರಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಲು ಸ್ಥಳೀಯ ಅಧಿಕಾರಿ ನಿರಾಕರಿಸಿದ್ದರು.

ಪಿಂಚಣಿ ಪಡೆಯುತ್ತಿರುವ ಕಾರಣಕ್ಕೆ ಉದ್ಯೋಗಖಾತ್ರಿ ಯೋಜನೆ ಯಡಿ ಕೆಲಸ ನೀಡಲು ಸಾಧ್ಯವಿಲ್ಲ ಎಂದು ಆಕೆಗೆ ಹೇಳಿರುವುದು ಯೋಜನೆಯ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ. ಪಿಂಚಣಿ ಮೊತ್ತ ಕಡಿಮೆ ಎಂಬ ಕಾರಣಕ್ಕಾಗಿ ಮಾತ್ರವಲ್ಲ; ಕೂಲಿಯಾಗಿ ದುಡಿಯುವ ಶಕ್ತಿ ಇನ್ನೂ ತನ್ನಲ್ಲಿ ಇದೆ ಎಂಬ ಕಾರಣಕ್ಕಾಗಿ ಜೀವನ ಗಳಿಕೆಗಾಗಿ ದುಡಿಯಲು ಬಯಸಿದ್ದಾಗಿ ಅವರು ಸ್ಪಷ್ಟಪಡಿಸಿದರು.

ಉದಯಪುರ ಜಿಲ್ಲೆಯ ತಾಲೂಕು ಕೇಂದ್ರವಾದ ಕೊಟ್ಡಾದಲ್ಲಿ ಈ ಅಧ್ಯಯನ ನಮ್ಮನ್ನು ಇರ್ಫಾನ್ ಅವರ ಮನೆಯತ್ತ ಸೆಳೆಯಿತು. 60ರ ಆಸುಪಾಸಿನ ಅವರು ತಮ್ಮ ಬದುಕಿನ ಬಹುತೇಕ ಭಾಗವನ್ನು ತಲೆಹೊರೆ ಕೂಲಿಯಾಗಿ ನಿರ್ವಹಿಸಿದ್ದರು. ಇಳಿ ವಯಸ್ಸಿನಲ್ಲಿ ಮರು ವಿವಾಹವಾಗಿದ್ದ ಅವರು ಯುವತಿ ಪತ್ನಿ ಹಾಗೂ 10 ವರ್ಷದ ಮಗನನ್ನು ಹೊಂದಿದ್ದರು. ತೀವ್ರ ಬೆನ್ನುನೋವು ಹಾಗೂ ಸ್ನಾಯುಸೆಳೆತ ದಿಂದಾಗಿ ಕೆಲಸ ಬಿಡುವುದು ಅನಿವಾರ್ಯವಾಯಿತು ಎಂದು ವಿವರಿಸಿದರು. ಆದಾಗ್ಯೂ ಮಗನ ಶಾಲಾ ಶುಲ್ಕ ಹಾಗೂ ಸ್ವಂತ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸುವ ಸಲುವಾಗಿ, ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಈ ಹೊರೆ ಕಡಿಮೆ ಮಾಡುವ ಸಲುವಾಗಿ ಪತ್ನಿ ಕೂಡಾ ಕೆಲಸದ ಹುಡುಕಾಟದಲ್ಲಿದ್ದಾರೆ.

ಅಲ್ಪ ಪಿಂಚಣಿ

ರಾಜಸ್ಥಾನದಲ್ಲಿ 55 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರು ಹಾಗೂ 58 ದಾಟಿದ ಪುರುಷರಿಗೆ ಇಂದಿರಾಗಾಂಧಿ ರಾಷ್ಟ್ರೀಯ ವೃಧಾಪ್ಯ ಪಿಂಚಣಿ ಯೋಜನೆಯಡಿ ಮಾಸಿಕ 500 ರೂ. ಸಾಮಾಜಿಕ ಪಿಂಚಣಿ ಸೌಲಭ್ಯ ಇದೆ. ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ದಾಟಿದವರಿಗೆ 200 ರೂ. ಹಾಗೂ 80 ವರ್ಷ ಮೀರಿದವರಿಗೆ 500 ರೂ. ಹೆಚ್ಚುವರಿ ಪಿಂಚಣಿಯನ್ನು ಕೇಂದ್ರ ನೀಡುತ್ತದೆ.

ರಾಜಸ್ಥಾನ ರಾಜ್ಯ ಸರಕಾರ ಈ ಯೋಜನೆಯಡಿ ಎಲ್ಲ ಅರ್ಹ ರನ್ನೂ ತಲುಪಿದ್ದು, ಕನಿಷ್ಠ 500 ರೂ. ಪಿಂಚಣಿ ಒದಗಿಸಿ ಕೊಡುತ್ತಿದೆ. ಆದರೆ ದಿನಕ್ಕೆ 16 ರೂ.ಯ ಅಲ್ಪಮೊತ್ತ ಇವರ ಜೀವನ ನಿರ್ವಹಣೆಗೆ ಸಾಲದು. ಹೆಚ್ಚೆಂದರೆ ಅರ್ಧ ಲೀಟರ್ ಹಾಲು ಖರೀದಿಸಲೂ ಸಾಧ್ಯ ವಿಲ್ಲ. ಇದರಿಂದಾಗಿ ವೃದ್ಧರು ಅನ್ಯಮಾರ್ಗವಿಲ್ಲದೇ ಮುದಿ ವಯಸ್ಸಿ ನಲ್ಲೂ ದುಡಿಯುವುದು ಅನಿವಾರ್ಯ.

ಆದಾಯವೂ ಇಲ್ಲ; ಭದ್ರತೆಯೂ ಇಲ್ಲ

ವಿಶ್ವಾದ್ಯಂತ ಸರಕಾರಗಳು ವಿವಿಧ ಕಾರಣಗಳಿಗೆ ಪಿಂಚಣಿ ನೀಡುತ್ತವೆ. ಇದರ ಮುಖ್ಯ ಉದ್ದೇಶವೆಂದರೆ, ಇಳಿ ವಯಸ್ಸಿನಲ್ಲಿ ದುಡಿಮೆಗೆ ಹಚ್ಚದೇ ಗುಣಮಟ್ಟದ ಜೀವನ ನಡೆಸಲು ನೆರವಾಗುವುದು. ಭಾರತದಲ್ಲಿ ಉದ್ಯೋಗದಿಂದ ನಿವೃತ್ತರಾದ ಬಳಿಕ ಪಿಂಚಣಿ ಸೌಲಭ್ಯ ಇದೆ. ಆದರೆ ಅನೌಪಚಾರಿಕ ವಲಯದ ಮಂದಿ ಮಾತ್ರ ನಿಗದಿತ ವಯಸ್ಸು ಕಳೆದರೂ ವೃತ್ತಿಯಿಂದ ನಿವೃತ್ತರಾಗುವುದೇ ಇಲ್ಲ.

ಶ್ರಮಶಕ್ತಿಯಲ್ಲಿ ಹಿರಿಯರನ್ನು ನಿಯೋಜಿಸಿಕೊಳ್ಳುವುದು ಭಾರತದಲ್ಲಿ ವ್ಯಾಪಕವಾಗಿದೆ. ಅದರಲ್ಲೂ ಮುಖ್ಯವಾಗಿ ಅಸಂಘಟಿತ ವಲಯ, ಪ್ರಮುಖವಾಗಿ ಯಾವ ಔಪಚಾರಿಕ ಉದ್ಯೋಗದ ಷರತ್ತುಗಳೂ ಇಲ್ಲದೇ ಇವರನ್ನು ನಿಯೋಜಿಸಿಕೊಳ್ಳುತ್ತಿದೆ. 2011-12ರಲ್ಲಿ ನ್ಯಾಶನಲ್ ಸ್ಯಾಂಪಲ್ ಸರ್ವೇ ಆಫೀಸ್ ನಡೆಸಿದ 68ನೆ ಸುತ್ತಿನ ಉದ್ಯೋಗ- ನಿರುದ್ಯೋಗ ಸಮೀಕ್ಷೆಯಂತೆ, ಭಾರತದಲ್ಲಿ ಶೇ.38ರಷ್ಟು ಹಿರಿಯ ನಾಗರಿಕರು ನಿವೃತ್ತಿ ವಯಸ್ಸಿನ ಬಳಿಕವೂ ಕೆಲಸ ಮುಂದುವರಿಸುತ್ತಾರೆ.

ಹೊಸದಿಲ್ಲಿ ಮೂಲದ ಸೆಂಟರ್ ಫಾರ್ ಈಕ್ವಿಟಿ, ರಾಜಸ್ಥಾನದ ಗ್ರಾಮೀಣ ಹಾಗೂ ನಗರ ಪ್ರದೇಶದ ಏಳು ಕಡೆಗಳಲ್ಲಿ 2016ರ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೂ ಅಧ್ಯಯನ ನಡೆಸಿತು. ಈ ವರದಿ ಇನ್ನೂ ಬಿಡುಗಡೆಯಾಗಬೇಕಿದ್ದು, ಇದರಲ್ಲಿ 55 ವರ್ಷ ಮೇಲ್ಪಟ್ಟ 791 ಮಂದಿಯನ್ನು ಸಂದರ್ಶಿಸಿ, ಮುಪ್ಪಿನಲ್ಲೂ ಆದಾಯ ಭದ್ರತೆ ಇಲ್ಲದಿರುವ ಅವರ ಅನುಭವ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಯಿತು. ಈ ಪೈಕಿ ಶೇ.57ರಷ್ಟು ಪುರುಷರು ಹಾಗೂ ಶೇ. 43 ಮಹಿಳೆಯರು. 791 ಮಂದಿಯ ಪೈಕಿ ಶೇ.59ರಷ್ಟು ಮಂದಿ ಒಂದಲ್ಲ ಒಂದು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಗುರುತಿಸಿದ ಪ್ರದೇಶದ ಪ್ರತೀ ಮನೆಗಳಿಗೆ ಭೇಟಿ ನೀಡಿದ ಸಮೀಕ್ಷಾ ತಂಡ ಎಲ್ಲ ವೃದ್ಧರನ್ನು ಸಂಪರ್ಕಿಸಿತು. ರಾಜಸ್ಥಾನದ ಪಿಂಚಣಿ ಮಾನದಂಡದಿಂದ ಹೊರಗುಳಿದವರ ಸಂಖ್ಯೆ ವಿರಳ.
ಈ ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಅಂಶವೆಂದರೆ, ಸಮರ್ಪಕ ಆದಾಯ ಹಾಗೂ ಸಾಮಾಜಿಕ ಭದ್ರತೆ ಇಲ್ಲದ ಕಾರಣದಿಂದಾಗಿ ಹಿರಿಜೀವಗಳು ತಮ್ಮ ಕೆಲಸದ ಅವಧಿ ಹಾಗೂ ಸ್ವರೂಪದಲ್ಲಿ ಹೆಚ್ಚಿನ ಆಯ್ಕೆ ಹೊಂದಲು ಸಾಧ್ಯವಾಗಿಲ್ಲ. ಇವರಿಗೆ ಸಿಕ್ಕಿದ ಕೆಲಸ ಮಾಡದೇ ಬೇರೆ ಮಾರ್ಗವಿಲ್ಲ.

ಸಮೀಕ್ಷೆಯಲ್ಲಿ ಎಲ್ಲರಿಗೂ ಒಂದು ಪ್ರಶ್ನೆ ಕೇಳಲಾಯಿತು: ‘‘ನಿಮಗೆ ಸಾಕಷ್ಟು ಪಿಂಚಣಿ ಬರುತ್ತಿದೆ ಎಂದಾಗಿದ್ದಲ್ಲಿ, ಪಿಂಚಣಿ ಪಡೆಯು ವುದಕ್ಕಿಂತ ಮೊದಲು ಮಾಡುತ್ತಿದ್ದ ಕೆಲಸದಷ್ಟೇ ಕೆಲಸ ಮಾಡುವ ಸಾಧ್ಯತೆ ಇತ್ತೇ? ಕೆಲಸ ಮುಂದುವರಿಸಿದರೂ ಕಡಿಮೆ ಕೆಲಸ ಮಾಡುವ ಸಾಧ್ಯತೆ ಇತ್ತೇ ಅಥವಾ ಕೆಲಸ ಮಾಡುವ ಸಾಧ್ಯತೆ ಇರಲಿಲ್ಲವೇ?’’ ಎಂಬ ಮೂರು ಉಪಪ್ರಶ್ನೆಗಳನ್ನು ಕೇಳಿದಾಗ, ಶೇ.25ಕ್ಕಿಂತ ಅಧಿಕ ಮಂದಿ, ಸಾಕಷ್ಟು ಪಿಂಚಣಿ ಬಂದರೂ ಕೆಲಸ ಮಾಡುವ ಸಾಧ್ಯತೆ ಇತ್ತು ಎಂದು ಉತ್ತರಿಸಿದರೆ, ಶೇ.23ರಷ್ಟು ಮಂದಿ ಕಡಿಮೆ ಕೆಲಸ ಮಾಡುತ್ತಿದ್ದೆವು ಹಾಗೂ ಶೇ.25ರಷ್ಟು ಮಂದಿ ಕೆಲಸ ಮಾಡುವ ಸಾಧ್ಯತೆಯೇ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿನಂತೆಯೇ ಕೆಲಸ ಮಾಡುವ ಸಾಧ್ಯತೆ ಇತ್ತು ಎಂದು ಹೇಳಿದ ವರ ಪೈಕಿ ಶೇ.86ರಷ್ಟು ಮಂದಿ, ಈಗ ಉದ್ಯೋಗದಲ್ಲಿ ತೊಡಗಿಸಿಕೊಂಡಿ ದ್ದಾರೆ. ಇದಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಿದವರಲ್ಲೂ ಶೇ.32ರಷ್ಟು ಮಂದಿ ಆದಾಯ ಗಳಿಸುವ ಉದ್ಯೋಗ ನಿರ್ವಹಿಸುತ್ತಿದ್ದಾರೆ.

ಸಮರ್ಪಕ ಪಿಂಚಣಿ ಎಂದರೆ ಎಷ್ಟು ಎನ್ನುವುದು ಸಮೀಕ್ಷೆಯ ಇನ್ನೊಂದು ಪ್ರಶ್ನೆ. ಹಾಲಿ ಇರುವ ಪಿಂಚಣಿಯ ಮೂರು ಪಟ್ಟು ಅಥವಾ 1,875 ರೂ. ಎಂಬ ಉತ್ತರ ವ್ಯಾಪಕವಾಗಿ ಕೇಳಿಬಂತು. ಅಗತ್ಯವನ್ನು ಸಂಪೂರ್ಣವಾಗಿ ಹಣದಿಂದ ಅಳೆಯಲು ಸಾಧ್ಯವಿಲ್ಲದಿದ್ದರೂ, ಜನ ಅದನ್ನು ಭಿನ್ನವಾಗಿ ಅರ್ಥೈಸಿಕೊಂಡರು. ನಿವೃತ್ತಿಯ ಬಳಿಕವೂ ಕೆಲಸ ಮಾಡುವ ಸಾಧ್ಯತೆ ಇತ್ತು ಎಂದು ಹೇಳಿದವರು ಸಮರ್ಪಕ ಪಿಂಚಣಿ ಎಂದರೆ 1,600 ರೂ. ಎಂದು ಅಭಿಪ್ರಾಯಪಟ್ಟರೆ, ಕಡಿಮೆ ಕೆಲಸ ಮಾಡುವ ಸಾಧ್ಯತೆ ಇತ್ತು ಎಂದು ಹೇಳಿದವರು 2,000 ರೂ. ಪಿಂಚಣಿ ಅಗತ್ಯ ಎಂದು ಪ್ರತಿಕ್ರಿಯಿಸಿದರು. ತಮ್ಮ ಕೆಲಸದ ಸಾಮರ್ಥ್ಯ ದ ಹಿನ್ನೆಲೆಯಲ್ಲಿ, ಅದಕ್ಕೆ ಪೂರಕವಾಗುವಂತೆ ಹಾಲಿ ಇರುವ ನಾಲ್ಕು ಪಟ್ಟು ಹೆಚ್ಚು ಪಿಂಚಣಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ, ಅತ್ಯಧಿಕ ನಿರೀಕ್ಷೆಯ ಮೊತ್ತವಾದ ಮಾಸಿಕ 2,000 ರೂ. ಪಿಂಚಣಿ, ಹಾಲಿ ಇರುವ ಕನಿಷ್ಠ ವೇತನದ ಅರ್ಧಕ್ಕಿಂತಲೂ ಕಡಿಮೆ ಹಾಗೂ ತಲಾದಾಯದ ನಾಲ್ಕನೆ ಒಂದು ಪಾಲಿಗಿಂತಲೂ ಕಡಿಮೆ.
ಸಮೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಿದ ಪುರುಷ ಹಾಗೂ ಮಹಿಳೆಯರ ಅಭಿಪ್ರಾಯಗಳಲ್ಲಿ ವ್ಯಾಪಕ ಭಿನ್ನತೆ ಕಂಡುಬಂತು. ಪುರುಷರಲ್ಲಿ ಶೇ.36ರಷ್ಟು ಮಂದಿ, ಕೆಲಸದ ಗಾತ್ರದ ವಿಚಾರದಲ್ಲಿ ಹೊಂದಾಣಿಕೆಗೆ ಸಿದ್ಧ ಎಂದು ಹೇಳಿದರೆ, ಮಹಿಳೆಯರಲ್ಲಿ ಶೇ.26 ಮಂದಿ ಮಾತ್ರ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಆದಾಗ್ಯೂ ಶೇ.33ರಷ್ಟು ಪುರುಷರು ಹಾಗೂ ಮಹಿಳೆಯರು, ಎಷ್ಟು ಪಿಂಚಣಿ ಬಂದರೂ ನಿವೃತ್ತಿ ವಯಸ್ಸಿನ ಬಳಿಕವೂ ಕೆಲಸ ಮುಂದು ವರಿಸುವ ಇಂಗಿತ ವ್ಯಕ್ತಪಡಿಸಿದರು. ಇತರ ಅಂಶಗಳ ಹೊರತಾಗಿಯೂ, ಮಹಿಳೆಯರು ಹಾಲಿ ಇರುವ ಕೆಲಸದ ಹೊರೆಯ ಪ್ರಮಾಣದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟ ಎಂಬ ಅಭಿಪ್ರಾಯ ಹೊಂದಿ ದ್ದಾರೆ. ಶೇ.28ರಷ್ಟು ಪುರುಷರು ಹಾಗೂ ಶೇ.36ರಷ್ಟು ಮಹಿಳೆಯರು, ಸಾಕಷ್ಟು ಪಿಂಚಣಿ ಇದ್ದರೆ, ಕೆಲಸ ಮಾಡುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಮರ್ಪಕ ಪ್ರಮಾಣದ ಪಿಂಚಣಿ ನೀಡಿದರೆ, ಬಹುತೇಕ ಪುರು ಷರು, ಮಹಿಳೆಯರಿಗೆ ಹೋಲಿಸಿದರೆ ಕಡಿಮೆ ಕೆಲಸ ಮಾಡುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಪೈಕಿ ಬಹುತೇಕ ಮಂದಿ ಆದಾಯ ಗಳಿಸುವ ಉದ್ಯೋಗ ಮಾಡುತ್ತಿಲ್ಲ.

ಭಾರತದಲ್ಲಿ ಆದಾಯ ಗಳಿಕೆ ಉದ್ಯೋಗ ಮಾಡುವವರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಅಂದಾಜಿನಂತೆ ಭಾರತದ ಶ್ರಮಶಕ್ತಿಯ ಶೇ.25ರಷ್ಟು ಮಾತ್ರ ಮಹಿಳೆಯರು. 60 ವರ್ಷಕ್ಕಿಂತ ಹೆಚ್ಚಿನವರಲ್ಲಿ ಈ ಪ್ರಮಾಣ ಮತ್ತೂ ಕಡಿಮೆ. ‘ಇಂಟರ್‌ನ್ಯಾಶಾನಲ್ ಜರ್ನಲ್ ಆಫ್ ಸೋಶಿಯಲ್ ಎಕನಾಮಿಕ್ಸ್’ನಲ್ಲಿ ಎ.ಭೀಮೇಶ್ವರ ರೆಡ್ಡಿ ಅವರು ಬರೆದ ಒಂದು ಲೇಖನದ ಪ್ರಕಾರ, ‘‘ಗಳಿಕೆ ಉದ್ಯೋಗದ ಜತೆಗೆ ಮಹಿಳೆಯರಿಗೆ ಇರುವ ಸಂಬಂಧ ಪುರುಷರಿಗೆ ಹೋಲಿಸಿದರೆ ಸಂಕೀರ್ಣ. ವ್ಯಾಪಕ ವಾಗಿರುವ ಲಿಂಗ ಆಧಾರಿತ ಶ್ರಮ ಹಂಚಿಕೆಯಿಂದಾಗಿ, ಮಹಿಳೆಯರು ಕಡಿಮೆ ವೇತನಕ್ಕೆ ಪುರುಷರಿಗೆ ಸಮಾನವಾದ ಕೆಲಸವನ್ನು ಮಾಡುತ್ತಾರೆ ಮತ್ತು ಮನೆಯಲ್ಲಿ ಯಾವ ಪ್ರತಿಫಲವೂ ಇಲ್ಲದ ಕೆಲಸವನ್ನೂ ಮಾಡುತ್ತಾರೆ’’.

ಆದ್ದರಿಂದ ಸಾಕಷ್ಟು ಪಿಂಚಣಿ ಸೌಲಭ್ಯ ಇದ್ದಿದ್ದರೆ, ನಿವೃತ್ತಿ ವಯಸ್ಸಿನ ಬಳಿಕ ಕೆಲಸ ಮಾಡುವ ಸಾಧ್ಯತೆ ಇರಲಿಲ್ಲ ಎಂಬ ಮಹಿಳಾ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಮಹಿಳೆಯರ ವಿಚಾರಕ್ಕೆ ಬಂದರೆ ಅವರ ಶ್ರಮವನ್ನು ಅವರೇ ಹಲವು ವಿಧದಲ್ಲಿ ಗುರುತಿಸಿಕೊಳ್ಳುವುದಿಲ್ಲ. ಅವರಿಗೆ ನಿವೃತ್ತಿ ಎನ್ನುವುದೇ ತಪ್ಪು ಪರಿಕಲ್ಪನೆ.

ಸೂಕ್ತ ಪಿಂಚಣಿ ಸೌಲಭ್ಯ ಇಲ್ಲದೇ, ಬಡಕುಟುಂಬಗಳ ಹಿರಿಯ ನಾಗರಿಕರು, ಕೆಲಸ ಮಾಡಬೇಕೇ ಅಥವಾ ಬೇಡವೇ ಎನ್ನುವುದನ್ನು ಕಲ್ಪಿಸಿಕೊಳ್ಳುವಂತೆಯೂ ಇಲ್ಲ. ಹಿರಿಯರಿಗೆ ಗೌರವಯುತ ಜೀವನ ಗುಣಮಟ್ಟವನ್ನು ಖಾತ್ರಿಪಡಿಸಬೇಕಾದರೆ, ಸಕಾಲಿಕ ಹಾಗೂ ಸಮರ್ಪಕ ಪಿಂಚಣಿ ಅನಿವಾರ್ಯ.
ಕೆಲಸ ಮಾಡಬೇಕೇ ಅಥವಾ ಬೇಡವೇ ಎಂಬ ಆಯ್ಕೆ ಸಾಮಾನ್ಯ ವಾಗಿ ಸೇವೆಯಲ್ಲಿದ್ದು, ಖಾತ್ರಿ ಪಿಂಚಣಿಯನ್ನು ಪಡೆಯುವವರಿಗೆ ಸಂಬಂಧಿಸಿದ್ದು. ಈ ಆಯ್ಕೆಯನ್ನು ಎಲ್ಲ ಹಿರಿಯ ನಾಗರಿಕರಿಗೂ ವಿಸ್ತರಿಸಬೇಕಾದ ಅಗತ್ಯವಿದೆ.

ಕೃಪೆ: Indiaspend.com 


 

Writer - ಕಿಂಜಲ್ ಸಂಪತ್ & ನಂದಿನಿ ಡೇ

contributor

Editor - ಕಿಂಜಲ್ ಸಂಪತ್ & ನಂದಿನಿ ಡೇ

contributor

Similar News

ಜಗದಗಲ

ಜಗ ದಗಲ