ಹಿಂದಿ, ಸಂಸ್ಕೃತ ಹೇರಿಕೆ ಹುನ್ನಾರ

Update: 2017-04-23 18:34 GMT

ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ವಿಭಿನ್ನ ಸಂಸ್ಕೃತಿಗಳನ್ನು ಹೊಸಕಿ ಹಾಕಲು ಹೊರಟ ಕರಾಳ ಶಕ್ತಿಗಳು ಈಗ ದೇಶದ ಮೇಲೆ ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಬಲವಂತವಾಗಿ ಹೇರುವ ಮಸಲತ್ತು ನಡೆಸಿವೆ. ನೆಹರೂ ಕಾಲದಲ್ಲಿ ಭಾಷಾವಾರು ಪ್ರಾಂತ ರಚನೆಯನ್ನು ವಿರೋಧಿಸಿದ್ದ ಇವರು ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಮರಾಠಿಯಂತಹ ಪ್ರಾದೇಶಿಕ ಭಾಷೆಗಳನ್ನು ನಾಶ ಮಾಡಲು ಹೊರಟಿದ್ದಾರೆ. ದೇಶದ ಮೇಲೆ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯೆಂದು ಹೇರುವ ಹುನ್ನಾರ ಮೊದಲಿನಿಂದಲೂ ನಡೆದಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದು ತೀವ್ರ ಸ್ವರೂಪ ಪಡೆದಿದೆ.


ಭಾರತ ಎಂಬುದು ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಹಾಗೂ ರಾಷ್ಟ್ರೀಯತೆಗಳ ಸಂಗಮ. ಈ ವೈವಿಧ್ಯತೆಯೇ ಈ ದೇಶದ ಸೌಂದರ್ಯದ ಹಿರಿಮೆ. ಇಷ್ಟೊಂದು ಅನೇಕತೆಗಳನ್ನು ಒಳಗೊಂಡ, ಆದರೂ ಬೆಸೆದುಕೊಂಡ ಇನ್ನೊಂದು ದೇಶ ಈ ಜಗತ್ತಿನಲ್ಲಿ ಇಲ್ಲ. ಬೇರೆ ಭೂಖಂಡಗಳಲ್ಲಿ ಒಂದೇ ಧರ್ಮ, ಒಂದೇ ಭಾಷೆ ಮತ್ತು ಒಂದೇ ಸಂಸ್ಕೃತಿ ಹೊಂದಿರುವ ದೇಶಗಳನ್ನು ಕಾಣುತ್ತೇವೆ. ಆದರೆ ಭಾರತ ಆ ಎಲ್ಲಾ ದೇಶಗಳಿಗಿಂತ ಭಿನ್ನವಾದದ್ದು. ಇಲ್ಲಿ ಪ್ರತೀ 10 ಕಿ.ಮೀ.ಗೆ ಭಾಷೆ ಮತ್ತು ಸಂಸ್ಕೃತಿಗಳಲ್ಲಿ ಭಿನ್ನತೆ ಕಾಣುತ್ತೇವೆ. ಹೊರಗಿನಿಂದ ಬಂದವರು ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆತು ಇಲ್ಲಿನವರಾಗಿದ್ದಾರೆ. ಇಂಥ ಒಂದು ಅಪರೂಪದ ದೇಶ ಇಡೀ ಜಗತ್ತಿಗೆ ಮಾದರಿಯಾಗಿ ನಿಂತಿದೆ. ಇಷ್ಟೆಲ್ಲ ವೈವಿಧ್ಯತೆಯಿದ್ದರೂ ಜಾತಿ ವ್ಯವಸ್ಥೆ ಈ ದೇಶದ ಹಿರಿಮೆಗೆ ಕಳಂಕ ತಂದಿದೆ. ಅಂತಲೇ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಿಂದೂ ಸಮಾಜ ಎಂಬುದು ಮೆಟ್ಟಿಲುಗಳಿಲ್ಲದ ಬಹು ಅಂತಸ್ತಿನ ಕಟ್ಟಡ ಎಂದು ವರ್ಣಿಸಿದರು. ಸ್ವಾತಂತ್ರ್ಯದ ನಂತರ ಅಂಬೇಡ್ಕರ್ ರೂಪಿಸಿದ ಸಂವಿಧಾನ ಭಾರತಕ್ಕೆ ಅಂಟಿದ ಈ ಕಳಂಕವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಇಂಥ ವೈವಿಧ್ಯಪೂರ್ಣ ದೇಶವನ್ನು ನಾಶಪಡಿಸಿ, ಏಕ ಸಂಸ್ಕೃತಿ, ಏಕ ಧರ್ಮ, ಏಕ ಭಾಷೆಯನ್ನು ದೇಶದ ಮೇಲೆ ಹೇರಲು ಹೊರಟ ಮನುವಾದಿಗಳ ಕೈಯಲ್ಲಿ ಈಗ ದೇಶದ ಆಡಳಿತ ಸಿಕ್ಕಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವವರು ಬರೀ ಮುಸ್ಲಿಂ ಮತ್ತು ಕ್ರೈಸ್ತ ವಿರೋಧಿಗಳು ಮಾತ್ರವಲ್ಲ, ಹೀಗೇ ಬಿಟ್ಟರೆ ಅವರು ದಲಿತರನ್ನು, ಹಿಂದುಳಿದವರನ್ನು, ದ್ರಾವಿಡ ಭಾಷೆ ಮತ್ತು ಸಂಸ್ಕೃತಿಯನ್ನು ನಾಶಗೊಳಿಸಲು ಸಂಚು ರೂಪಿಸುತ್ತಾರೆ. ದಕ್ಷಿಣ ಭಾರತೀಯರನ್ನು ಹೀಯಾಳಿಸಿ, ಇತ್ತೀಚೆಗೆ ಬಿಜೆಪಿ ನಾಯಕ ತರುಣ್ ವಿಜಯ್ ಅವರಾಡಿದ ಮಾತುಗಳು ಎಲ್ಲರಿಗೂ ಗೊತ್ತಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ನಂತರ ಅವರು ಕ್ಷಮೆ ಯಾಚಿಸಿದರು. ದಿಲ್ಲಿಯಲ್ಲಿ ಆಫ್ರಿಕಾ ಮಹಿಳೆ ಮೇಲೆ ನಡೆದ ಹಲ್ಲೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ತರುಣ್ ವಿಜಯ್, ನಾವು ಭಾರತೀಯರು, ದಕ್ಷಿಣ ಭಾರತದ ಕಪ್ಪು ಜನರೊಂದಿಗೆ ಹೊಂದಿಕೊಂಡು ಬದುಕಿದ್ದೇವೆ ಎಂಬ ಹೇಳಿಕೆ ನೀಡಿ ಎಡವಿ ಬಿದ್ದರು.

ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ವಿಭಿನ್ನ ಸಂಸ್ಕೃತಿಗಳನ್ನು ಹೊಸಕಿ ಹಾಕಲು ಹೊರಟ ಈ ಕರಾಳ ಶಕ್ತಿಗಳು ಈಗ ದೇಶದ ಮೇಲೆ ಹಿಂದಿ ಮತ್ತು ಸಂಸ್ಕೃತ ಭಾಷೆ ಗಳನ್ನು ಬಲವಂತವಾಗಿ ಹೇರುವ ಮಸಲತ್ತು ನಡೆಸಿವೆ. ನೆಹರೂ ಕಾಲದಲ್ಲಿ ಭಾಷಾವಾರು ಪ್ರಾಂತ ರಚನೆಯನ್ನು ವಿರೋಧಿಸಿದ್ದ ಇವರು ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಮರಾಠಿಯಂತಹ ಪ್ರಾದೇಶಿಕ ಭಾಷೆಗಳನ್ನು ನಾಶ ಮಾಡಲು ಹೊರಟಿದ್ದಾರೆ. ದೇಶದ ಮೇಲೆ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಯೆಂದು ಹೇರುವ ಹುನ್ನಾರ ಮೊದಲಿನಿಂದಲೂ ನಡೆದಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದು ತೀವ್ರ ಸ್ವರೂಪ ಪಡೆದಿದೆ. ಹಿಂದಿ ಭಾಷೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರು ವರ್ಷಗಳ ಹಿಂದೆ ಅಧಿಕೃತ ಭಾಷೆಗಳ ಸಮಿತಿ ನೀಡಿದ ಶಿಫಾರಸುಗಳಲ್ಲಿ ಕೆಲವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಂಗೀಕರಿಸಿದ್ದಾರೆ.

ಈ ಶಿಫಾರಸಿನ ಅನ್ವಯ ರಾಷ್ಟ್ರಪತಿಗಳು ಸೇರಿದಂತೆ ಕೇಂದ್ರ ಸರಕಾರದ ಮಂತ್ರಿಗಳು ಮತ್ತು ಇತರ ಗಣ್ಯರು ತಮಗೆ ಹಿಂದಿ ಗೊತ್ತಿದ್ದರೆ, ಹಿಂದಿಯಲ್ಲೇ ಭಾಷಣ ಮಾಡಬೇಕು. ಎಲ್ಲಾ ವಿಮಾನಯಾನ ಸಂಸ್ಥೆಗಳು ಇಂಗ್ಲಿಷ್ ಜೊತೆ ಹಿಂದಿ ಯನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ. ದೇಶಾದ್ಯಂತ ಇರುವ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಎಲ್ಲಾ ಮಕ್ಕಳು ಹಿಂದಿ ಮತ್ತು ಸಂಸ್ಕೃತ ಕಲಿಯುವ ಶಿಫಾರಸಿಗೆ ರಾಷ್ಟ್ರಪತಿ ಒಪ್ಪಿಗೆ ನೀಡಿ ದ್ದಾರೆ. ಇದರ ಬಗ್ಗೆ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರದ ಎಲ್ಲಾ ಕಚೇರಿಗಳಲ್ಲಿ ಸಿಬ್ಬಂದಿ ತಮ್ಮ ಕೆಲಸಗಳನ್ನು ಹಿಂದಿಯಲ್ಲಿ ಮಾಡಲು ಸಾಧ್ಯವಾಗುವಂತೆ ಕಾಲಮಿತಿಯೊಳಗೆ ಕಡ್ಡಾಯವಾಗಿ ಹಿಂದಿ ಕಲಿಯಲು ಸೂಚಿಸಲಾಗಿದೆ.

ವಾಸ್ತವವಾಗಿ ಹಿಂದಿ ಎಂಬುದು ಐದಾರು ರಾಜ್ಯಗಳ ಜನರು ಮಾತನಾಡುವ ಭಾಷೆ. ಅಲ್ಲೂ ಕೂಡ ಪ್ರಾದೇಶಿಕ ಉಪಭಾಷೆಗಳಿವೆ. ಸಂವಿಧಾನದಲ್ಲಿ ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡಿಲ್ಲ. ಕನ್ನಡ ಸೇರಿದಂತೆ 22 ಭಾಷೆಗಳು ಕೂಡ ರಾಷ್ಟ್ರಭಾಷೆಗಳೇ. ಇವುಗಳಲ್ಲಿ ಯಾವುದೂ ಶ್ರೇಷ್ಠವಲ್ಲ ಮತ್ತು ಕನಿಷ್ಠವಲ್ಲ. ಪರಸ್ಪರ ಸಂವಹನ, ಸಂಪರ್ಕಕ್ಕಾಗಿ ತ್ರಿಭಾಷಾ ಸೂತ್ರ ಅಳವಡಿಸಲಾಗಿದೆ. ಇದರ ಪ್ರಕಾರ ಜಾಗತಿಕ, ರಾಷ್ಟ್ರ ಮತ್ತು ಸ್ಥಳೀಯವೆಂದು ಪರಿಗಣಿಸಿ ಅನುಕೂಲಕ್ಕೆ ತಕ್ಕಂತೆ ಹಿಂದಿ, ಇಂಗ್ಲಿಷ್ ಮತ್ತು ಆಯಾ ಪ್ರದೇಶದ ಭಾಷೆಗಳನ್ನು ಸಂಪರ್ಕ ಭಾಷೆಗಳನ್ನಾಗಿ ಅಳವಡಿಸಲಾಗಿದೆ. ಪರಸ್ಪರ ಸಂವಹನೆಗೆ ಹಿಂದಿಗಿಂತ ಇಂಗ್ಲಿಷ್ ಸೂಕ್ತ ಎಂಬುದು ಹಿಂದಿಯೇತರ ರಾಜ್ಯಗಳ ಅಭಿಪ್ರಾಯವಾಗಿದೆ. ಈ ಹಿಂದೆ ನೆಹರೂ ಕಾಲದಲ್ಲಿ ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಮಾಡಲು ಹೊರಟಾಗ, ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳುನಾಡಿನಲ್ಲಿ ವ್ಯಾಪಕ ವಿರೋಧ ಬಂತು. ಅದು ನಿಧಾನವಾಗಿ ಪ್ರತ್ಯೇಕತಾ ರೂಪ ತಾಳಿತು. ಆಗ ನೆಹರೂ ಅವರು ತ್ರಿಭಾಷಾ ಸೂತ್ರ ಜಾರಿಗೊಳಿಸಿದರು.

ಭಾರತದ 125 ಕೋಟಿ ಜನಸಂಖ್ಯೆಯಲ್ಲಿ ಶೇ.65ರಷ್ಟು ಜನರು ಹಿಂದಿಯೇತರ ಭಾಷೆ ಮಾತನಾಡುತ್ತಾರೆ. 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳ ಪೈಕಿ 12 ರಾಜ್ಯಗಳಿಗೆ ಹಿಂದಿ ಮಾತೃಭಾಷೆಯಾಗಿದೆ. ಯುನೆಸ್ಕೊ ಅಧ್ಯಯನದ ಪ್ರಕಾರ, ಭಾರತದ 192 ಭಾಷೆಗಳು ಸಮರ್ಪಕ ಉತ್ತೇಜನವಿಲ್ಲದೇ ನಾಶವಾಗುವ ಸ್ಥಿತಿಯಲ್ಲಿವೆ. ಪ್ರತಿಯೊಂದು ಭಾಷೆಯನ್ನಾಡುವ ಜನರಿಗೆ ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ. ಹಿಂದಿಯೇತರ ಭಾಷೆಗಳ ಬಳಕೆಯನ್ನು ಕ್ರಮೇಣ ಕಡಿಮೆ ಮಾಡಿ, ಹಿಂದಿಯನ್ನು ಹೇರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.

ರಾಷ್ಟ್ರಪತಿಗಳು ಸಂಸತ್ತು ಸಮಿತಿ ಶಿಫಾರಸಿಗೆ ಸಹಿ ಹಾಕುವ ಮುನ್ನವೇ ಕೇಂದ್ರ ಸರಕಾರ ದಕ್ಷಿಣ ಭಾರತದ ರಾಜ್ಯಗಳ ಮೇಲೆ ನಯವಾಗಿ ಹಿಂದಿಯನ್ನು ಹೇರುತ್ತ ಬಂದಿದೆ. ನಮ್ಮ ರಾಜ್ಯದ ಹೆದ್ದಾರಿಯಲ್ಲಿರುವ ಅನೇಕ ಮೈಲುಗಲ್ಲು ಮೇಲೆ ಹಿಂದಿ ವಿಜೃಂಭಿಸುತ್ತಿದೆ. ರೈಲುಗಾಡಿಗಳ ಮೇಲೆಯೂ ಹಿಂದಿ ಫಲಕಗಳಿವೆ. ಕೇಂದ್ರ ಸರಕಾರಿ ಕಚೇರಿಗಳಲ್ಲಿ ಹಿಂದಿ ಭಾಷೆ ಗೊತ್ತಿರದ ಜನರು ಪರದಾಡುವುದನ್ನು ನಿತ್ಯ ನೋಡುತ್ತೇವೆ. ಅಂತಲೇ ತಮಿಳುನಾಡು, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಈ ಭಾಷೆ ಹೇರಿಕೆ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಒಕ್ಕೂಟ ವ್ಯವಸ್ಥೆ ಸುರಕ್ಷಿತವಾಗಿ ಮುಂದುವರಿಯಬೇಕಿದ್ದರೆ, ಈ ಭಾಷಾ ಹೇರಿಕೆಯನ್ನು ಕೇಂದ್ರ ಸರಕಾರ ಕೈ ಬಿಡಬೇಕು.

ಹಿಂದಿಯನ್ನು ಒಂದು ಭಾಷೆಯನ್ನಾಗಿ ಕಲಿಯಲು ಯಾರ ಅಭ್ಯಂತರವೂ ಇಲ್ಲ. ಆದರೆ ಅದನ್ನು ರಾಷ್ಟ್ರಭಾಷೆಯನ್ನಾಗಿ ಎಲ್ಲರೂ ಒಪ್ಪಬೇಕು ಎಂದು ಬಲವಂತ ವಾಗಿ ಹೇರುವುದು ಸರಿಯಲ್ಲ. ತಮಿಳುನಾಡಿನಲ್ಲಿ ಈಗ ದ್ರಾವಿಡ ಚಳವಳಿ ದುರ್ಬಲಗೊಂಡಿರುವ ಕಾರಣ ಹಿಂದಿಗೆ ಅಂಥ ವಿರೋಧ ಕಂಡು ಬರುತ್ತಿಲ್ಲ. ಆದರೆ ಸರಕಾರ ಬಲವಂತವಾಗಿ ಹೇರಲು ಹೊರಟರೆ, ಮತ್ತೆ 60ರ ದಶಕದ ಹಿಂದಿ ವಿರೋಧಿ ಆಂದೋಲನ ಭುಗಿಲೆದ್ದು ಪ್ರತ್ಯೇಕತಾ ರೂಪ ತಾಳುವ ಎಲ್ಲ ಲಕ್ಷಣಗಳಿವೆ. ಹಿಂದಿ ಹೇರಿಕೆ ಬದಲಾಗಿ ನಶಿಸಿ ಹೋಗುತ್ತಿರುವ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸಬೇಕಿದೆ. ಪ್ರಾದೇಶಿಕ ಭಾಷೆಗಳು ಮಾತ್ರವಲ್ಲದೇ ಕೊಂಕಣಿ, ತುಳು ಮತ್ತು ಬ್ಯಾರಿ ಭಾಷೆಗಳಂತಹ ಉಪಭಾಷೆಗಳಿಗೆ ಪೋತ್ಸಾಹ ನೀಡಬೇಕಿದೆ.

ಒಟ್ಟಾರೆ, ರಾಷ್ಟ್ರೀಯತೆ ಹೆಸರಿನಲ್ಲಿ ಯಾವುದೋ ಪ್ರದೇಶದ ಜನರು ಆಡುವ ಭಾಷೆಯನ್ನು ರಾಷ್ಟ್ರಭಾಷೆಯೆಂದು ಹೇರಿ, ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡಲು ಬಿಡಬಾರದು. ಭಾಷೆ ಸಂಸ್ಕೃತಿಯೊಂದಿಗೆ ಬೆರೆತಿರುತ್ತದೆ. ಸಂದರ್ಭ ಬಂದರೆ, ಧರ್ಮಕ್ಕಿಂತ ಭಾಷೆಯನ್ನು ಜನರು ಹೆಚ್ಚು ಪ್ರೀತಿಸುತ್ತಾರೆ. ತಮ್ಮ ಬಂಗಾಳಿ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಪೂರ್ವ ಪಾಕಿಸ್ತಾನದಲ್ಲಿನ ಮುಸ್ಲಿಮರು ಸೇರಿದಂತೆ ಎಲ್ಲಾ ಜನ ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಬಾಂಗ್ಲಾದೇಶ ನಿರ್ಮಿಸಿಕೊಂಡರು. ತಾವಾಡುವ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು.

ಹಿಂದಿ ಮತ್ತು ಸಂಸ್ಕೃತವನ್ನು ರಾಷ್ಟ್ರದ ಮೇಲೆ ಹೇರುವುದು ಸಂಘ ಪರಿವಾರದ ಕಾರ್ಯಸೂಚಿಯ ಪ್ರಮುಖ ಅಂಶ. ಗೋಳ್ವಾಲ್ಕರ್ ಕಲ್ಪನೆಯ ಹಿಂದೂ ರಾಷ್ಟ್ರದಲ್ಲಿ ಕನ್ನಡದಂತಹ ಪ್ರಾದೇಶಿಕ ಭಾಷೆಗೆ ಸ್ಥಾನವಿಲ್ಲ. ಕೇಂದ್ರದ ನರೇಂದ್ರ ಮೋದಿ ಸರಕಾರ ಈ ಕಾರ್ಯಸೂಚಿಯನ್ನು ಜಾರಿಗೆ ತರಲು ಹೊರಟಿದೆ. ಜನರು ಆಡುವ ಭಾಷೆಗಳು ಅಪಾಯದ ಅಂಚಿನಲ್ಲಿವೆ. ತಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಜನರು ಸಂಕಲ್ಪ ಮಾಡಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News