ಗೋರ(ಭ)ಕ್ಷಕ ಪಡೆ ನಿಷೇಧವಾಗಲಿ

Update: 2017-04-23 18:38 GMT

ಗೋರಕ್ಷಕರ ಕೌರ್ಯಕ್ಕೆ ಉತ್ತರ ಪ್ರದೇಶ ತತ್ತರಗೊಂಡಿರುವಂತೆಯೇ, ರಾಜ್ಯದ ನೂತನ ಡಿಜಿಪಿ ಅಧಿಕಾರ ಸ್ವೀಕರಿಸುತ್ತಾ ‘ಗೋರಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇನೆ’ ಎಂದು ಹೇಳಿದ್ದಾರೆ. ಗೋರಕ್ಷಣೆ ಅಥವಾ ಇನ್ನಾವುದೇ ಪ್ರಕರಣದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಲಾರೆ. ಗಣ್ಯ ವ್ಯಕ್ತಿಗಳಿಗೂ ಇದು ಅನ್ವಯಿಸುತ್ತದೆ ಎಂದು ಡಿಜಿಪಿ ಸುಲ್ಖನ್ ಸಿಂಗ್ ಹೇಳಿದ್ದಾರೆ. ಸ್ವತಃ ಮುಖ್ಯಮಂತ್ರಿ ಆದಿತ್ಯನಾಥ್ ಅವರೇ ನನಗೆ ಇದನ್ನು ಸೂಚಿಸಿದ್ದಾರೆ ಎಂಬ ಅಡಿ ಟಿಪ್ಪಣಿಯನ್ನು ಅವರು ಈ ಸಂದರ್ಭದಲ್ಲಿ ಸೇರಿಸಿದ್ದಾರೆ. ಅಂದರೆ ನೂತನ ಡಿಜಿಪಿಯ ಮೂಲಕ ಆದಿತ್ಯನಾಥ್ ಅವರೇ ಮಾತನಾಡಿದ್ದಾರೆ.

ವಿಪರ್ಯಾಸವೆಂದರೆ, ಪೊಲೀಸ್ ವರಿಷ್ಠರ ಈ ಹೇಳಿಕೆ ಕಾನೂನಿನ ಪುನರ್ ಸ್ಥಾಪನೆಯ ಹಿನ್ನೆಲೆಯಲ್ಲಿ ಬಂದಿರದೇ, ಆದಿತ್ಯನಾಥ್ ಅವರ ಸದ್ಯದ ರಾಜಕೀಯ ಅಗತ್ಯದ ಹಿನ್ನೆಲೆಯಲ್ಲಿ ಹೊರಬಿದ್ದಿದೆ. ಇಂದು ದೇಶಾದ್ಯಂತ ಪ್ರಜಾಸತ್ತೆಗೆ ಪರ್ಯಾಯವಾಗಿ, ಗೋರಕ್ಷಣೆಯ ಹೆಸರಿನಲ್ಲಿ ಹುಟ್ಟಿಕೊಂಡಿರುವ ಈ ಗೂಂಡಾಗಳ ತಂಡ ಯಾರ ಸೃಷ್ಟಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಅಂಶವೇ ಆಗಿದೆ. ಇದೊಂದು ಥರ ‘ಭಸ್ಮಾಸುರನ’ ಸೃಷ್ಟಿ. ಭಸ್ಮ ಮಾಡುವ ಶಕ್ತಿಕೊಟ್ಟವನನ್ನೇ ಭಸ್ಮಾಸುರ ನಾಶ ಮಾಡಲು ಹೊರಟ ಕತೆಯಂತಿದೆ ಇದು. ಸ್ವತಃ ಸಂಘಪರಿವಾರ ಅದರಲ್ಲೂ ಆದಿತ್ಯನಾಥ್‌ನಂತಹ ಉಗ್ರ ಕೇಸರಿವಾದಿಗಳು ಸಾಕಿ ಬೆಳೆಸಿದ ವಿಷದ ಹಾವುಗಳಾಗಿವೆ ಗೋರಕ್ಷಕ ಪಡೆ.

ಕೈಯಲ್ಲಿ ಒಂದು ದಿನವೂ ನೇಗಿಲನ್ನು ಹಿಡಿದಿರದ, ಹಟ್ಟಿಯ ಪಕ್ಕದಲ್ಲೂ ಸುಳಿಯದ, ಗೋವಿನ ಸೆಗಣಿ ಯನ್ನು ಕೈಯಲ್ಲಿ ಮುಟ್ಟದ ಚಾಕು, ಚೂರಿ ಹಿಡಿದಷ್ಟೇ ಗೊತ್ತಿರುವ ರೌಡಿಗಳು, ಗೂಂಡಾಗಳನ್ನು ಜೊತೆ ಸೇರಿಸಿ ಕಟ್ಟಿದ ಪಡೆಗಳೇ ‘ಗೋರಕ್ಷಕ ಪಡೆ’. ಒಂದು ಕಾಲವಿತ್ತು. ಗೋರಕ್ಷಕರೆಂದರೆ ನಾವು ರೈತರ ಕಡೆಗೆ ಮುಖಮಾಡುತ್ತಿದ್ದೆವು. ಯಾರು ಹಟ್ಟಿಯಲ್ಲಿ ಗೋವುಗಳನ್ನು ಸಾಕಿ, ಅವುಗಳ ಮೂಲಕ ಹಾಲು ಕರೆದು ಬದುಕು ಕಟ್ಟಿಕೊಳ್ಳುತ್ತಾರೆಯೋ ಅವರೇ ನಿಜವಾದ ಗೋರಕ್ಷಕರು. ಕೃಷಿ ಸರ್ವನಾಶವಾಗುತ್ತಿರುವ ಈ ದಿನಗಳಲ್ಲಿ ಗೋವುಗಳನ್ನು ಸಾಕುವ ರೈತರು ಅದು ಹೇಗೋ ಈ ಹೈನೋದ್ಯಮವನ್ನು ಸಂಬಾಳಿಸುತ್ತಾ ಬರುತ್ತಿದ್ದಾರೆ.

ಆದರೆ ಇದೀಗ ಸಂಘಪರಿವಾರ ಸೃಷ್ಟಿಸಿರುವ ನಕಲಿ ಗೋರಕ್ಷಕರಿಂದಾಗಿ ಗ್ರಾಮೀಣ ಪ್ರದೇಶದ ಅಸಲಿ ಗೋರಕ್ಷಕರು ಗೋವುಗಳನ್ನು ಸಾಕದಂತಹ ಸ್ಥಿತಿ ನಿರ್ಮಾಣವಾಗಿದೆ. ತಾವು ಸಾಕಿದ ಗೋವುಗಳನ್ನು ಯಾರಿಗೆ ಮಾರಬೇಕು, ಎಷ್ಟು ಬೆಲೆಗೆ ಮಾರಬೇಕು ಎನ್ನುವುದನ್ನು ಊರಿನ ಗೋರಕ್ಷಕ ಪಡೆಯ ವೇಷದಲ್ಲಿರುವ ರೌಡಿಗಳ ಅಪ್ಪಣೆಯನ್ನು ಪಡೆಯಬೇಕಾಗಿದೆ. ತಾನು ಸಾಕುವುದಕ್ಕೆ ಗೋವುಗಳನ್ನು ಸಾಗಿಸಬೇಕಾದರೂ, ಈ ರೌಡಿಗಳಿಗೆ ಹಫ್ತಾ ನೀಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಹಾಲುಕೊಡದ ಹಸುಗಳನ್ನು ಮಾರಿ ಮನೆ ಖರ್ಚು, ಹಟ್ಟಿಯ ಖರ್ಚು ನಿಭಾಯಿಸುತ್ತಿದ್ದ ರೈತರು ಇಂದು ಗೊಡ್ಡು ಹಸುಗಳನ್ನು ಅತ್ತ ಮಾರಾಟ ಮಾಡಲೂ ಆಗದೆ, ಇಟ್ಟುಕೊಳ್ಳಲೂ ಆಗದೆ ಕೈಸುಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೈನುಗಾರಿಕೆ ಮಾಡುವ ನಿಜವಾದ ರೈತರಿಗೆ ಸೇರಬೇಕಾದ ಅನುದಾನಗಳು ಬೀದಿಯಲ್ಲಿ ಗೋರಕ್ಷಕರ ವೇಷದಲ್ಲಿರುವ ದುಷ್ಕರ್ಮಿಗಳ ಕೈ ಸೇರುತ್ತಿದೆ. ಗೋರಕ್ಷಣೆಯ ಹೆಸರಲ್ಲಿ ದರೋಡೆ ಮಾಡಿದರೂ, ಹಲ್ಲೆ ನಡೆಸಿದರೂ, ಕೊಂದು ಹಾಕಿದರೂ ಅದು ಮಾನ್ಯ ಎನ್ನುವಂತಹ ಸ್ಥಿತಿ ನಿರ್ಮಾಣ ವಾಗಿದೆ. ಹಟ್ಟಿಯಲ್ಲಿ ಗೋವುಗಳನ್ನು ಸಾಕಿ ಶ್ರಮಪಡುವುದಕ್ಕಿಂತಲೂ ನಗರದ ಬೀದಿಗಳಲ್ಲಿ ಗೋರಕ್ಷಕರ ಹೆಸರಲ್ಲಿ ಗೂಂಡಾಗಿರಿ ಮಾಡುವುದು ಹೆಚ್ಚು ಲಾಭದಾಯಕ ಎನ್ನುವುದನ್ನು ನಿರುದ್ಯೋಗಿ ಹುಡುಗರು ಕಂಡುಕೊಳ್ಳುತ್ತಿದ್ದಾರೆ.

ಎಲ್ಲಕ್ಕಿಂತ ದುಃಖದಾಯಕ ವಿಷಯವೆಂದರೆ, ಹಲವು ದಶಕಗಳಿಂದ ಗೋವುಗಳನ್ನೇ ಸಾಕಿ ಬದುಕು ನಡೆಸುತ್ತಿದ್ದ ಪೆಹ್ಲೂ ಖಾನ್ ಎಂಬ ರೈತನನ್ನು ಕೊಂದ ಗೂಂಡಾಗಳನ್ನು ಓರ್ವ ಸ್ವಯಂಘೋಷಿತ ಸ್ವಾಧ್ವಿ ‘ಭಗತ್ ಸಿಂಗ್’ಗೆ ಹೋಲಿಸಿದಳು. ಅಮಾಯಕ ರೈತರನ್ನು ಕೊಂದು, ಅವರಲ್ಲಿದ್ದ ಹಣವನ್ನು ದೋಚಿ ಬದುಕನ್ನು ಮೂರಾಬಟ್ಟೆ ಮಾಡಿದ ಗೂಂಡಾಗಳೆಲ್ಲಿ? ದೇಶದ ಜನಸಾಮಾನ್ಯರಿಗಾಗಿ ತನ್ನ ಪ್ರಾಣವನ್ನೇ ತೆತ್ತ ಭಗತ್ ಸಿಂಗ್ ಎಲ್ಲಿ? ಅಂದರೆ ಇವರೆಲ್ಲ ಸೇರಿ ಭವಿಷ್ಯದಲ್ಲಿ ಎಂತಹ ದೇಶವನ್ನು ಕಟ್ಟಲು ಹೊರಟಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ರೌಡಿಗಳನ್ನು ಭಗತ್‌ಸಿಂಗ್‌ಗೆ ಹೋಲಿಸಿದ ಕಾರಣಕ್ಕಾಗಿ ತಕ್ಷಣ ಈಕೆಯ ಮೇಲೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಬೇಕಾಗಿತ್ತು.

ಯಾಕೆಂದರೆ ಗೋರಕ್ಷಕರ ವೇಷದಲ್ಲಿ ಹಲ್ಲೆ ನಡೆಸಿದವರು ಕೇವಲ ಬಳಸಲ್ಪಟ್ಟ ಆಯುಧಗಳಷ್ಟೇ. ಅವುಗಳನ್ನು ಸಿದ್ಧಗೊಳಿಸಿರುವುದು ಇಂತಹ ಸಾಧ್ವಿಯ ವೇಷದಲ್ಲಿರುವ ನಾಯಕರು. ರೈತನನ್ನು ಕೊಲೆಗೈದ ಗೂಂಡಾಗಳನ್ನು ಭಗತ್‌ಸಿಂಗ್‌ಗೆ ಹೋಲಿಸುವ ಮೂಲಕ ಆಕೆ ಇನ್ನಷ್ಟು ಕೊಲೆಗಳಿಗೆ ಕರೆ ನೀಡಿದ್ದಾಳೆ ಮಾತ್ರವಲ್ಲ, ಭಗತ್‌ನ ತ್ಯಾಗ, ಬಲಿದಾನಗಳನ್ನು ಅವಮಾನಿಸಿದ್ದಾಳೆ. ಪೆಹ್ಲೂಖಾನ್‌ನ ನಿಜವಾದ ಕೊಲೆ ಆರೋಪಿ ಈಕೆಯೇ ಆಗಿದ್ದಾಳೆ. ಗೋರಕ್ಷಕ ಪಡೆಯೆನ್ನುವುದು ಸೃಷ್ಟಿಯಾಗಿರುವುದು ಗೋವಿನ ರಕ್ಷಣೆಗಾಗಿ ಅಲ್ಲ. ರಾಜಕೀಯ ಕಾರಣಗಳಿಗಾಗಿ. ಗೋವಿನ ಹೆಸರಲ್ಲಿ ಕೋಮುವಿದ್ವೇಷಗಳನ್ನು ಸೃಷ್ಟಿಸಿ ಸಮಾಜವನ್ನು ಒಡೆಯುವುದಕ್ಕಾಗಿ ರಚನೆಯಾಗಿರುವುದು.

ಈ ದೇಶದ ರೈತರು ತಮ್ಮ ಗೋವುಗಳನ್ನು ರಕ್ಷಿಸಿ ಎಂದು ಯಾವತ್ತೂ ಯಾವುದೇ ಸರಕಾರಕ್ಕೆ ಮನವಿ ನೀಡಿಲ್ಲ. ಕೃಷಿಯ ಏಳುಬೀಳುಗಳ ಹಿನ್ನೆಲೆಯಲ್ಲಿ ಹೈನುಗಾರಿಕೆಗೆ ಪೂರಕವಾಗಿರುವ ಆರ್ಥಿಕ ನೀತಿಯನ್ನು ರೈತರು ಸರಕಾರದಿಂದ ಬೇಡುತ್ತಿದ್ದಾರೆಯೇ ಹೊರತು, ಅವರೆಂದೂ ತಮ್ಮ ಗೋವುಗಳಿಗೆ ರಕ್ಷಣೆಯನ್ನು ಕೊಡಿ ಎಂದು ಸ್ಥಳೀಯ ರೌಡಿಗಳ ಜೊತೆಗೋ, ರಾಜಕಾರಣಿಗಳ ಜೊತೆಗೋ ಕೇಳಿಕೊಂಡಿಲ್ಲ. ಹಾಗೊಂದು ವೇಳೆ ಅವರ ಗೋವುಗಳಿಗೆ ರಕ್ಷಣೆ ಬೇಕಾಗಿದ್ದರೆ, ಅದಕ್ಕಾಗಿಯೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪೊಲೀಸ್ ಇಲಾಖೆಗಳಿವೆ. ಸ್ಥಳೀಯ ರೌಡಿಗಳು, ಗೂಂಡಾಗಳು ಸೇರಿಕೊಂಡು ರಕ್ಷಣಾ ಪಡೆ ಕಟ್ಟುವುದೆಂದರೆ, ಪರ್ಯಾಯ ಪೊಲೀಸ್ ವ್ಯವಸ್ಥೆ ಎಂದೇ ಅರ್ಥ. ಅದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಆದುದರಿಂದ ಗೋರಕ್ಷಕರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎನ್ನುವ ಪೊಲೀಸ್ ಇಲಾಖೆಯ ಹೇಳಿಕೆಯೇ ಆಷಾಢಭೂತಿತನದಿಂದ ಕೂಡಿದೆ. ಇಂದು ಬೇಕಾಗಿರುವುದು ‘ಗೋರಕ್ಷಕ ಪಡೆ’ಯ ಸಂಪೂರ್ಣ ನಿಷೇಧ.

ಯಾರಾದರೂ ಗೋರಕ್ಷಕ ಪಡೆಯ ಹೆಸರಿನಲ್ಲಿ ಗುರುತಿಸಿಕೊಂಡಿದ್ದರೆ ಅವರ ಮೇಲೆಯೇ ಪ್ರಕರಣ ದಾಖಲಿಸಿ ತಕ್ಷಣ ಜೈಲಿಗೆ ತಳ್ಳುವುದು ಪೊಲೀಸರು ಮಾಡಬೇಕಾಗಿರುವ ಕೆಲಸ. ಆದರೆ ಅದು ಸದ್ಯಕ್ಕೆ ಪೊಲೀಸರಿಗೆ ಅಸಾಧ್ಯವಾಗಿದೆ. ಯಾಕೆಂದರೆ, ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಆದಿತ್ಯನಾಥ್‌ರಂತಹ ನಾಯಕ ಮುಖ್ಯಮಂತ್ರಿ ಸ್ಥಾನಕ್ಕೇರಿರುವುದರ ಹಿಂದೆ ಈ ಗೋರಕ್ಷಕಪಡೆಗಳ ಅಕ್ರಮಗಳು ಬಹಳಷ್ಟು ಕೆಲಸ ಮಾಡಿವೆ. ಹೀಗಿರುವಾಗ, ತಾನೇ ಸಾಕಿ ಬೆಳೆಸಿದ ಮಗುವನ್ನು ಸರಕಾರ ಇಲ್ಲವಾಗಿಸುತ್ತದೆ ಎಂದು ನಾವು ಭಾವಿಸುವುದೇ ತಪ್ಪಾಗಿ ಬಿಡುತ್ತದೆ.

ಸದ್ಯಕ್ಕೆ, ಅದು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎನ್ನುವುದಷ್ಟೇ ಸರಕಾರದ ಗುರಿ. ತಾನು ಸೂಚನೆ ನೀಡಿದಾಗಷ್ಟೇ ಕಾರ್ಯಾಚರಣೆ ಆರಂಭಿಸಬೇಕು ಎನ್ನುವುದನ್ನು ಆದಿತ್ಯನಾಥ್ ಸರಕಾರ ಪೊಲೀಸ್ ಅಧಿಕಾರಿಯ ಮುಖಾಂತರ ಹೇಳಿಸುತ್ತಿದೆಯಷ್ಟೇ. ಇಂದು ನ್ಯಾಯವ್ಯವಸ್ಥೆ ಗೋರಕ್ಷಕರ ಹೆಸರಿನಲ್ಲಿ ವಿಜೃಂಭಿಸುತ್ತಿರುವ ಗೂಂಡಾಗಳ ವಿರುದ್ಧ ಮಾತನಾಡದೇ ಇದ್ದರೆ, ಈ ದೇಶದಲ್ಲಿ ಗೋಸಾಕಣೆ ಹಂತಹಂತವಾಗಿ ನಾಶವಾಗಲಿದೆ ಮಾತ್ರವಲ್ಲ, ಪೊಲೀಸ್ ಠಾಣೆಗಳನ್ನು ಈ ಗೋರಕ್ಷಕ ಪಡೆಗಳು ಅಧಿಕೃತವಾಗಿ ತಮ್ಮ ಕೈವಶ ಮಾಡುವ ದಿನ ದೂರವಿಲ್ಲ. ಮುಂದಿನ ದಿನಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ರೌಡಿಗಳು ತಮ್ಮದೇ ನೇತೃತ್ವದ ಪೊಲೀಸ್ ಠಾಣೆಗಳನ್ನು ತೆರೆದು ಸಮಾಜವನ್ನು ನಿಯಂತ್ರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News