ನಾನು ಯಾರೆಂದು ನಿಮಗೆ ಗೊತ್ತೇ ? ಗೊತ್ತಾಗುವುದೇ ಬೇಡ!: ಅಬ್ದುಲ್ಲಾ

Update: 2017-04-24 08:29 GMT

ಕಳೆದ ಏಳು ವರ್ಷಗಳಿಂದ ಪ್ರತೀ ಶುಕ್ರವಾರ ನಾನು ನನ್ನ ಅಜ್ಜಿಯೊಂದಿಗೆ ವಿವಿಧ ಸ್ಥಳಗಳಿಗೆ ಹೋಗಿ ‘‘ನಿಮಗೆ ನಾನು ಗೊತ್ತೇ ?’’ ಎಂಬ ಪ್ರಶ್ನೆಯನ್ನು ಜನರ ಬಳಿ ಕೇಳುತ್ತೇನೆ. ಕೆಲ ದಿನ ನನಗೆ ಅದೆಷ್ಟು ಸುಸ್ತಾಗುವುದೆಂದರೆ ಆಕೆಗೆ ನಾನು ಹಿಂದಿರುಗಲು ಹೇಳುತ್ತೇನೆ. ಆದರೆ ಆಕೆ ಯಾವತ್ತೂ ನನ್ನನ್ನು ತಬ್ಬಿ ಹಿಡಿದು, ನನ್ನ ಹಣೆಗೆ ಮುತ್ತಿಕ್ಕಿ ಇದೇ ಪ್ರಶ್ನೆಯನ್ನು ಹೆಚ್ಚು ಜನರ ಬಳಿ ಕೇಳುವಂತೆ ಹೇಳುತ್ತಿದ್ದಳು. ಹೆಚ್ಚಿನ ದಿನಗಳಲ್ಲಿ ನಮಗೆ ತಿನ್ನಲು ಅನ್ನ ಮತ್ತು ಹಸಿ ಮೆಣಸು ಮಾತ್ರ ಇರುತ್ತಿತ್ತು. ನನ್ನ ಅಜ್ಜಿ ಓರ್ವ ಭಿಕ್ಷುಕಿಯಾಗಿದ್ದರು.

ಆಕೆಗೆ ತೀವ್ರ ಮೊಣಕಾಲು ನೋವಿದೆ. ಆಕೆ ತನಗಾಗಿ ಮರದ ಕೈಗಾಡಿಯೊಂದನ್ನು ಮಾಡಿದ್ದಾಳೆ ಹಾಗೂ ಕೆಲವೊಮ್ಮೆ ನಾನು ಆಕೆ ಭಿಕ್ಷೆ ಬೇಡುತ್ತಿರುವಾಗ ಆಕೆಯನ್ನು ಅದರಲ್ಲಿ ಎಳೆದುಕೊಂಡು ಹೋಗುತ್ತೇನೆ. ನಾನು ನನ್ನ ಹೆತ್ತವರನ್ನು ಹುಡುಕಬೇಕೆಂದು ಆಕೆ ಸದಾ ನನಗೆ ಹೇಳುತ್ತಿದ್ದಳು. ನನ್ನ ಹೆತ್ತವರನ್ನು ಒಂದು ದಿನ ಕಂಡುಹಿಡಿದು ನನ್ನನ್ನು ಅವರಿಗೆ ಒಪ್ಪಿಸುವುದಾಗಿ ಆಕೆ ಹೇಳಿದಾಗಲೆಲ್ಲಾ ನನಗೆ ಭಯವುಂಟಾಗುತ್ತದೆ. ಆದರೆ ಆಕೆಯನ್ನು ಬಿಗಿದಪ್ಪುವುದೆಂದರೆ ನನಗೆಷ್ಟು ಇಷ್ಟವೆಂಬ ಬಗ್ಗೆ ಆಕೆಗೆ ಅರಿವಿಲ್ಲ. ನನಗೂ ಆಕೆಯನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ನನಗೆ ಎಲ್ಲೋ ನನ್ನದೇ ಆದ ಕುಟುಂಬವಿದೆಯೆಂದು ಆಕೆ ಸದಾ ನನಗೆ ನೆನಪಿಸುತ್ತಿರುತ್ತಾಳೆ.

ನಾನು ಮೂರು ವರ್ಷದವನಿರುವಾಗ ಕಳೆದು ಹೋಗಿದ್ದೆ. ನಾನು ರಸ್ತೆ ಬದಿಯಲ್ಲಿ ಒಬ್ಬನೇ ಅಪರಿಚಿತರ ನಡುವೆ ನಿಂತು ಅಳುತಿರುವುದನ್ನು ನನ್ನ ಅಜ್ಜಿ ನೋಡಿದ್ದಳು. ನಾನು ಯಾರೆಂದು ಯಾರೂ ಆಕೆಗೆ ಹೇಳಲಿಲ್ಲ ಹಾಗೂ ಆಕೆಯ ಹೊರತಾಗಿ ಎಲ್ಲರೂ ನನ್ನನ್ನು ರಸ್ತೆಯಲ್ಲಿ ಒಂಟಿಯಾಗಿ ಬಿಟ್ಟು ಹೊರಟು ಹೋಗಿದ್ದರು. ಆಕೆ ನನ್ನನ್ನು ಸ್ಥಳೀಯ ಮಸೀದಿಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನೊಂದಿಗೆ ಒಂದು ವಾರ ಕಾದಿದ್ದಳು.

ಈ ವಿಚಾರಗಳ ಬಗ್ಗೆ ನನಗೆ ನೆನಪಿಲ್ಲದೇ ಇದ್ದರೂ ಪ್ರತಿ ಶುಕ್ರವಾರ ಆಕೆ ನನ್ನನ್ನು ಆಕೆಯೊಂದಿಗೆ ಬಲವಂತವಾಗಿ ಪ್ರಾರ್ಥನೆ ಸಲ್ಲಿಸಲು ಕರೆದುಕೊಂಡು ಹೋಗುವ ಮಸೀದಿಯ ಬಗ್ಗೆ ನನಗೆ ಗೊತ್ತು. ನಾನು ಕಳೆದುಹೋಗಿ ರಸ್ತೆಯಲ್ಲಿ ನಿಂತುಕೊಂಡಿದ್ದಾಗ ಧರಿಸಿದ್ದ ಬಟ್ಟೆಗಳನ್ನು ನನ್ನ ಅಜ್ಜಿ ಜೋಪಾನವಾಗಿ ತೆಗೆದಿಟ್ಟಿದ್ದಳು. ಆಕೆಯೊಂದಿಗೆ ಮೈಲಿಗಟ್ಟಲೆ ನಡೆಯುತ್ತಾ ನನ್ನ ಬಗ್ಗೆ ತಿಳಿದಿದೆಯೇನು ಎಂದು ನಾನು ಅವರನ್ನು ಕೇಳುತ್ತಾ ಇರುತ್ತೇನೆ.

ಆಕೆ ನನ್ನನ್ನು ಶಾಲೆಗೆ ಕಳುಹಿಸಿದ್ದಳು. ಆದರೆ ಅಲ್ಲಿ ಎಲ್ಲರೂ ಕಳೆದು ಹೋದ ನನ್ನ ಹೆತ್ತವರ ಬಗ್ಗೆ ಕೇಳುವುದರಿಂದ ಹಾಗೂ ಭಿಕ್ಷುಕಿಯೊಬ್ಬಳು ಬೆಳೆಸುವುದರಿಂದ ನಿನಗೆ ಏನನಿಸುತ್ತದೆ ಎಂದು ಅಲ್ಲಿ ಜನರು ಕೇಳುವುದರಿಂದ ನನಗೆ ಆ ಜಾಗವೆಂದರೆ ಇಷ್ಟವಿಲ್ಲ. ‘‘ನಿನ್ನ ತಂದೆ ಏನು ಮಾಡುತ್ತಾರೆ?’’ ಈ ಪ್ರಶ್ನೆಗೆ ‘‘ನನಗೆ ಗೊತ್ತಿಲ್ಲ’’ ಎಂದು ಬರೆದು ಬಿಟ್ಟೆ ಇದಕ್ಕಾಗಿ ನನ್ನ ಟೀಚರ್ ನನಗೆ ಶಿಕ್ಷೆ ನೀಡಿದರು. ನಂತರ ನಾನು ಶಾಲೆಗೆ ಹೋಗಲೇ ಇಲ್ಲ. ನನ್ನ ಅಜ್ಜಿಯೊಂದಿಗೆ ಕೆಲಸ ಮಾಡಲು ಆರಂಭಿಸಿದೆ.

ಏಕೆಂದರೆ ಆಕೆ ಮೊಣಕಾಲಿನ ನೋವನ್ನಿಟ್ಟುಕೊಂಡು ಭಿಕ್ಷೆ ಬೇಡುವುದು ನನಗೆ ಬೇಡವಾಗಿತ್ತು. ಜನರು ಆಕೆಯನ್ನು ನೋಡಿ ಜೋರಾಗಿ ಬೊಬ್ಬೆ ಹೊಡೆದು ಆ ಸ್ಥಳ ಬಿಟ್ಟು ಕದಲುವಂತೆ ಹೇಳುವಾಗ ನನಗಿಷ್ಟವಾಗುವುದಿಲ್ಲ. ಒಂದು ದಿನ ನನ್ನ ಅಜ್ಜಿ ನನಗೆ ಊಟ ಮಾಡಿಸುತ್ತಿರುವಾಗ ನಾನಿಲ್ಲದೆ ಆಕೆ ಬದುಕಬಲ್ಲಳೇ ಎಂದು ಕೇಳಿಬಿಟ್ಟೆ. ಆಗ ಆಕೆ ಅಳಲಾರಂಭಿಸಿದ್ದಳು ಹಾಗೂ ನನ್ನನ್ನು ಬಿಟ್ಟರೆ ಈ ಜಗತ್ತಿನಲ್ಲಿ ಆಕೆಗೆ ಬೇರೆ ಯಾರೂ ಇಲ್ಲ ಎಂದುಬಿಟ್ಟಳು. ಅದರ ನಂತರ ‘‘ನಿಮಗೆ ನಾನು ಗೊತ್ತೇ ?’’ಎಂಬ ಪ್ರಶ್ನೆಯನ್ನು ಕೇಳುವುದನ್ನು ನಾನು ಬಿಟ್ಟು ಬಿಟ್ಟೆ. ಯಾರಿಗೂ ಕೂಡ ನನ್ನ ಬಗ್ಗೆ ತಿಳಿಯುವುದು ನನಗೆ ಬೇಕಿಲ್ಲ. ನನ್ನ ಅಜ್ಜಿಯೇ ನನಗೆ ಸರ್ವಸ್ವ. ಆಕೆ ನನ್ನನ್ನು ಚೆನ್ನಾಗಿ ಅರಿಯಬೇಕೆಂದು ಮಾತ್ರ ನಾನು ಬಯಸುತ್ತೇನೆ.

ಅಬ್ದುಲ್ಲಾ

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News