ಉತ್ತರಪ್ರದೇಶ: ಪೊಲೀಸರ ಮೇಲೆ ಸಂಘಪರಿವಾರ ದಾಳಿ

Update: 2017-04-24 15:34 GMT

ಲಕ್ನೋ,ಎ,24: ಕೆಲವು ಪ್ರಕರಣಗಳಲ್ಲಿ ಬಿಜೆಪಿ ನಾಯಕರು ಸೇರಿದಂತೆ ವಿವಿಧ ಹಿಂದೂಸಂಘಟನೆಗಳ ಕಾರ್ಯಕರ್ತರು ಪೊಲೀಸರ ಮೇಲೆ ದಾಳಿ ನಡೆಸಿದ ಘಟನೆಗಳ ಬಗ್ಗೆ ಪ್ರಸ್ತಾಪಿಸಲು, ಐಪಿಎಸ್ ಅಧಿಕಾರಿಗಳ ಸಂಘವು, ಮುಖ್ಯಮಂತ್ರಿ ಆದಿತ್ಯನಾಥ್ ಅವರ ಭೇಟಿಯನ್ನು ಕೋರಿದೆ.

ಮುಖ್ಯಮಂತ್ರಿಯವರು ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ತೆರಳಿದ್ದರು. ಇದೀಗ ಅವರು ಹಿಂತಿರುಗಿದ್ದಾರೆ. ಅವರಿಗೆ ಬಿಡುವು ದೊರೆತ ಕೂಡಲೇ, ಅವರನ್ನು ನಾವು ಅವರನ್ನು ಭೇಟಿಯಾಗುವ ಇಚ್ಛೆ ಹೊಂದಿದ್ದೇವೆ’’ ಐಪಿಎಸ್ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಪ್ರಕಾಶ್ ಡಿ. ತಿಳಿಸಿದ್ದಾರೆ.

ಸಹರಣ್‌ಪುರ,ಆಗ್ರಾ ಹಾಗೂ ಇತರ ಸ್ಥಳಗಳಲ್ಲಿ ಕೇಸರಿ ತೀವ್ರವಾದಿಗಳ ಗುಂಪುಗಳು ಹಾಗೂ ಸ್ಥಳೀಯ ಬಿಜೆಪಿ ನಾಯಕರು ಪೊಲೀಸರನ್ನು ಗುರಿಯಿರಿಸಿ ದಾಳಿ ನಡೆಸಿದ ಘಟನೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಸೆಳೆಯಲಿದ್ದಾರೆ.‘‘ಬಿಜೆಪಿ ಸಂಸದ ರಾಘವ್ ಲಖನ್‌ಪಾಲ್ ಶರ್ಮಾ ನೇತೃತ್ವದ ಬಿಜೆಪಿ ಬೆಂಬಲಿಗರ ಗುಂಪೊಂದು ಸಹರಣ್‌ಪುರ ಎಸ್‌ಎಸ್‌ಪಿಯವರ ನಿವಾಸದಲ್ಲಿ ದಾಂಧಲೆ ನಡೆಸಿದ ಘಟನೆಯ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗೆ ತಿಳಿಸಲಾಗಿದೆ. ಮುಖ್ಯಮಂತ್ರಿಯ ಆದೇಶ ದೊರೆತ ಕೂಡಲೇ ಎಂಪಿ ಹಾಗೂ ಇಬ್ಬರು ಬಿಜೆಪಿ ಶಾಸಕರು ಆಹಗೂ ಸ್ಥಳೀಯ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಹರಣ್‌ಪುರ ಜಿಲ್ಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಯಂಗವಾಗಿ ನಡೆದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೆಂದು ಅವರು ಹೇಳಿದ್ದಾರೆ.ಆಗ್ರಾದ ತಾಜ್‌ಮಹಲ್ ಬಳಿ ಪ್ರತಿಭಟನೆಯನ್ನು ಆಯೋಜಿಸಿದ್ದ ಉಪ ಪೊಲೀಸ್ ಅಧೀಕ್ಷಕರ ಕೆನ್ನೆಗೆ ಬಾರಿಸಿದ ವಿಎಚ್‌ಪಿ ನಾಯಕನೊಬ್ಬನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಯೆಂದರು. ಫತೇಹ್‌ಪುರ್ ಸಿಕ್ರಿಯಲ್ಲಿ ಪೊಲೀಸನೊಬ್ಬನ ಮೇಲೆ ಹಲ್ಲೆ ನಡೆಸಿ, ಆತನ ಮೋಟಾರ್‌ಸೈಕಲ್ ಸುಟ್ಟುಹಾಕಿದ ಬಜರಂಗ ದಳ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಿಸಲು ಸೂಚಿಸಲಾಗಿದೆಯೆಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ಈ ಮಧ್ಯೆ ಉತ್ತರಪ್ರದೇಶದ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿಕೆ ನೀಡಿ, ಹಿಂಸಾಚಾರದಲ್ಲಿ ತೊಡಗಿರುವ ಯಾವುದೇ ವ್ಯಕ್ತಿಗಳ ವಿರುದ್ಧ ಪಕ್ಷಭೇದವಿಲ್ಲದೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆಂದು ಹೇಳಿದ್ದಾರೆ.ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗೋರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿರುವ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳುತ್ತಿರುವ ರಾಜ್ಯದ ಪೊಲೀಸರ ಮೇಲೆ ಹಲ್ಲೆ ನಡೆದ ಹಲವು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News