ದಿಲ್ಲಿ ಗೋರಕ್ಷಕರ ದಾಳಿ: 'ಮೇನಕಾ ಗಾಂಧಿ ಸೂಚನೆಯಂತೆ ನಾನೇ ತರಬೇತಿ ಕೊಟ್ಟಿದ್ದೆ' ಎಂದ ಸಂಘಟನೆಯ ಮುಖ್ಯಸ್ಥ

Update: 2017-04-25 06:07 GMT

ಹೊಸದಿಲ್ಲಿ, ಎ.25: ದಿಲ್ಲಿಯಲ್ಲಿ ಎಮ್ಮೆಗಳನ್ನು ಸಾಗಾಟ ಮಾಡುತ್ತಿದ್ದ ಮೂವರ ಮೇಲೆ ದಾಳಿ ನಡೆಸಿದ ಇಬ್ಬರಿಗೆ ತಾನು ತರಬೇತಿ ನೀಡಿದ್ದಾಗಿ ಹಾಗೂ ಇಂತಹ ತರಬೇತಿಗಳನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಯವರ ನಿರ್ದೇಶನದಂತೆ 2005ರಿಂದ ನೀಡುತ್ತಿದ್ದುದಾಗಿ ಹರ್ಯಾಣಧ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಅಧ್ಯಕ್ಷ ನರೇಶ್ ಕದ್ಯನ್ ಹೇಳಿದ್ದಾರೆ.

‘‘ಆಗ ತರಬೇತಿ ನೀಡಲು ನನಗೆ ಮೇನಕಾ ಗಾಂಧಿ ಹೇಳಿದ್ದರು. ಈ ಸಂದರ್ಭ ನಾವು ಮುಂಗುಸಿಯ ಕೂದಲಿನಿಂದ ತಯಾರಿಸಲಾದ ಬ್ರಶ್ ಗಳನ್ನು ಸಾಗಾಟ ಮಾಡುತ್ತಿದ್ದ ಒಂದು ವಾಹನವನ್ನು ತಡೆದಿದ್ದೆವು. ಇಂತಹ ಸಂದರ್ಭಗಳಲ್ಲಿ ಮೊದಲು ಪೊಲಿಸರಿಗೆ ಕರೆ ಮಾಡಿ ಅವರು ತಮ್ಮ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ನಾನು ಕಾರ್ಯಕರ್ತರಲ್ಲಿ ಹೇಳಿದ್ದೆ,’’ ಎಂದು ನರೇಶ್ ಹೇಳಿದ್ದಾರೆ.

‘‘ಶನಿವಾರದ ದಾಳಿಯ ಆರೋಪಿಗಳಾಗಿರುವ ಸಹೋದರರಾದ ಗೌರವ್ ಗುಪ್ತಾ ಮತ್ತು ಸೌರಭ್ ಗುಪ್ತಾ ಅವರಿಗೂ ತರಬೇತಿ ನೀಡಲಾಗಿತ್ತು. ಆದರೆ ಈಗ ಈ ಜನರು ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯಲ್ಲಿ ಯಾವ ರೀತಿಯ ಕೆಲಸ ನಿರ್ವಹಿಸುತ್ತಿದ್ದಾರೆಂದು ತಿಳಿಯದು. ಈ ರೀತಿಯ ತರಬೇತಿಯನ್ನು ನಾನು ಅವರಿಗೆ ನೀಡಿಲ್ಲ,’’ ಎಂದು ಅವರು ಹೇಳಿದ್ದಾರೆ.

ಸಂಘಟನೆಯ ಫೇಸ್ ಬುಕ್ ಪುಟದ ಪ್ರಕಾರ ಅದರ ವೆಬ್ ಸೈಟ್ ಪೀಪಲ್‌ ಫಾರ್‌ ಅನಿಮಲ್ಸ್‌ ಇಂಡಿಯಾ ಡಾಟ್ ಆರ್ಗ್ ಶನಿವಾರದಿಂದ ಮುಚ್ಚಲಾಗಿದೆ ಹಾಗೂ ಪಿಎಫ್‌ಎ ದೇಶದ ಅತ್ಯಂತ ದೊಡ್ಡ ಪ್ರಾಣಿ ಕಲ್ಯಾಣ ಸಂಘಟನೆಯಾಗಿದ್ದು 26 ಆಸ್ಪತ್ರೆಗಳು, 165 ಘಟಕಗಳು ಹಾಗೂ 2.5 ಲಕ್ಷ ಸದಸ್ಯರನ್ನು ಹೊಂದಿದೆಯೆಂದು ಹೇಳಲಾಗಿದೆ.

ಸಂಘಟನೆಯ ಹಲವಾರು ಘಟಕಗಳ ವೆಬ್ ಸೈಟ್ ಗಳ ಪ್ರಕಾರ ಅವುಗಳನ್ನು "ಶ್ರೀಮತಿ ಮೇನಕಾ ಗಾಂಧಿಯವರ ಸಲಹೆಯಂತೆ’’ ಸ್ಥಾಪಿಸಲಾಗಿತ್ತು.
ಶನಿವಾರದ ಘಟನೆಯ ಸಂಬಂಧ ದಾಖಲಿಸಲಾಗಿರುವ ಎರಡು ಎಫ್ ಐಆರ್ ಪ್ರಕಾರ ಹಾಗೂ ಪಿಎಫ್‌ಎ ವೆಬ್ ಸೈಟ್ ಪ್ರಕಾರ ಸಂಘಟನೆಯ ವಿಳಾಸ 14, ಅಶೋಕ ರೋಡ್, ನವದೆಹಲಿ 11001 ಎಂದಾಗಿದ್ದು, ಇದು ಮೇನಕಾ ಗಾಂಧಿಯವರ ಅಧಿಕೃತ ನಿವಾಸವಾಗಿದೆ.

2013ರಲ್ಲಿ ಪಿಎಫ್‌ಎ ತನ್ನ ಫೇಸ್ ಬುಕ್ ಪುಟದಲ್ಲಿ ‘‘ಯು ಆಸ್ಕ್ ಶಿ ಆನ್ಸರ್ಸ್‌" ಎಂಬ ಸರಣಿ ನಡೆಸಿದ್ದು ಎಲ್ಲಾ ಉತ್ತರಗಳನ್ನು ಮೇನಕಾ ಗಾಂಧಿ ನೀಡಿದ್ದರು.
ಆದರೆ ಪಿಎಫ್‌ಎ ಸಂಘಟನೆಯಲ್ಲಿ ತಮ್ಮ ಪಾತ್ರದ ಬಗ್ಗೆ ಪ್ರತಿಕ್ರಿಯಿಸಲು ಮೇನಕಾ ಗಾಂಧಿ ನಿರಾಕರಿಸಿದ್ದಾರೆ.

ಸಂಘಟನೆಯ ಫೇಸ್ ಬುಕ್ ಪುಟಕ್ಕೆ 1,11,068 ಲೈಕ್ ಗಳು ಇದ್ದು, ಸಂಘಟನೆ ಅಸೌಖ್ಯದಿಂದಿರುವ ಹಾಗೂ ಸಂಕಷ್ಟದಲ್ಲಿರುವ ಪ್ರಾಣಿಗಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸುತ್ತದೆ ಎಂದು ಹೇಳಲಾಗಿದೆಯಾದರೂ ದಾಳಿ ನಡೆಸುವುದು ಕೂಡ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಒಂದಾಗಿದೆ ಎಂದು ಅದರ ಹಲವು ಸದಸ್ಯರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News