ಆರೆಸ್ಸೆಸ್ ಮುಖ್ಯಸ್ಥರಿಂದ ವಿಶೇಷ ಪ್ರಶಸ್ತಿ ಸ್ವೀಕರಿಸಿದ ಪ್ರಶಸ್ತಿಗಳಿಂದ ದೂರ ಉಳಿಯುವ ಆಮಿರ್!

Update: 2017-04-25 07:09 GMT

ಮುಂಬೈ, ಎ.25: ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಹೇಳಿಕೆ ನೀಡಿ ಬಲಪಂಥೀಯ ಸಂಘಟನೆಗಳಿಂದ ಭಾರೀ ಟೀಕೆಗೊಳಗಾಗಿದ್ದ ನಟ ಆಮಿರ್ ಖಾನ್ ಸೋಮವಾರ ನಗರದಲ್ಲಿ ನಡೆದ 75ನೇ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ್ ಪುರಸ್ಕಾರವನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಂದ ಸ್ವೀಕರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. 

ಅಸಹಿಷ್ಣುತೆ ಕುರಿತಂತೆ ಆಮಿರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಲವು ಸಂಘಟನೆಗಳು ಅವರ ಚಿತ್ರಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದರೆ, ಇನ್ನು ಕೆಲವರು ಅವರು ಪಾಕಿಸ್ತಾನಕ್ಕೆ ಹೋಗುವುದು ಲೇಸು ಎಂದಿದ್ದರು. 

ಪ್ರಶಸ್ತಿ ಪ್ರದಾನ ಸಮಾರಂಭಗಳಿಂದ ಸಾಮಾನ್ಯವಾಗಿ ದೂರವೇ ಇರುವ 53 ವರ್ಷದ ಆಮಿರ್ ಈ ಸಮಾರಂಭದಲ್ಲಿ ಭಾಗವಹಿಸಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. 2016ರ ಸೂಪರ್ ಹಿಟ್ ಚಿತ್ರ "ದಂಗಲ್"ನಲ್ಲಿನ ತಮ್ಮ ಅಭಿನಯಕ್ಕಾಗಿ ಈ ವಿಶೇಷ ಪುರಸ್ಕಾರ ಪಡೆದಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಮಿರ್, ‘‘ಇಂದು ನಾನು ಏನಾಗಿದ್ದರೂ, ನನ್ನ ಚಿತ್ರಕಥೆಗಳನ್ನು ಬರೆದ ಲೇಖಕರಿಗೆ ಈ ಗೌರವ ಸಲ್ಲುತ್ತದೆ. ಅವರು ಮಾಡಿದ ಅತ್ಯುತ್ತಮ ಕೆಲಸದಿಂದಾಗಿ ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ,’’ ಎಂದು ಹೇಳಿದರು.

ಖ್ಯಾತ ರಂಗಭೂಮಿ ಕಲಾವಿದ ಹಾಗೂ ಸಂಗೀತಗಾರ ದೀನಾನಾಥ್ ಮಂಗೇಶ್ಕರ್ ಅವರ ಸ್ಮರಣಾರ್ಥ ನೀಡಿದ ಪ್ರಶಸ್ತಿಯನ್ನು ಕಲಾವಿದೆ ವೈಜಯಂತಿಮಾಲಾ ಪಡೆದರು. ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಸಾಧನೆಯನ್ನು ಗುರುತಿಸಿ ಸಮಾರಂಭದಲ್ಲಿ ಅವರನ್ನೂ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News