×
Ad

ಸಾಲಮನ್ನಾಗಳು ಕೃಷಿ ಬಿಕ್ಕಟ್ಟನ್ನು ನಿವಾರಿಸುವ ಸಂಜೀವಿನಿಯಲ್ಲ

Update: 2017-04-25 23:23 IST

ಆಳವಾಗಿ ಬೇರುಬಿಟ್ಟಿರುವ ಭಾರತದ ರೈತಾಪಿಯ ಸಮಸ್ಯೆಗಳನ್ನು ಸಾಲರದ್ದತಿಗಳು ಮಾತ್ರ ಬಗೆಹರಿಸುವುದಿಲ್ಲ.

ವ್ಯವಸ್ಥೆಯ ಒಳಗೇ ಬೇರುಬಿಟ್ಟಿರುವ ಸಮಸ್ಯೆಗಳನ್ನು ನಿವಾರಿಸಲು ಸಮಗ್ರ ಪ್ರಯತ್ನಗಳನ್ನು ಮಾಡದೇ ಈ ವಿಷಚಕ್ರವನ್ನು ಭೇದಿಸಲು ಸಾಧ್ಯವಿಲ್ಲ. ಸಾಲಮನ್ನಾಗಳು ಹೆಚ್ಚೆಂದರೆ ಗಾಯಕ್ಕೆ ಮುಲಾಮನ್ನು-ಬ್ಯಾಂಡೇಜನ್ನು ಹಚ್ಚಬಲ್ಲವು. ಅವು ತಾತ್ಕಾಲಿಕ ಪರಿಹಾರಗಳನ್ನಷ್ಟೇ ನೀಡಬಲ್ಲವು. ಹೀಗಾಗಿ ಶಾಶ್ವತ ಪರಿಹಾರದ ಕಡೆ ಈಗಲಾದರೂ ಗಮನ ನೀಡಬೇಕಿದೆ.

 ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ, ಮುಂಗಾರು ಮಳೆಗಳ ವೈಪರೀತ್ಯ ಮತ್ತು ಅದರಿಂದ ಸಂಭವಿಸುವ ಬರ ಅಥವಾ ನೆರೆ-ಪ್ರವಾಹ, ಅಥವಾ ಅಪಾರ ಸಂಖ್ಯೆಯಲ್ಲಿ ರೈತಾಪಿಯನ್ನು ಮತ್ತು ರೈತ ಕೂಲಿಗಳನ್ನು ಬೀದಿಪಾಲು ಮಾಡುವ ಬೆಳೆ ವೈಫಲ್ಯ ಇತ್ಯಾದಿಗಳು ಇಂದಿಗೂ ಅನುದಿನದ ಸಂಗತಿಗಳಾಗಿಯೇ ಮುಂದುವರಿದಿವೆ. ನಿಜ ಹೇಳಬೇಕೆಂದರೆ ವರ್ಷಗಳು ಕಳೆದಂತೆ ಕೃಷಿ ಬಿಕ್ಕಟ್ಟು ಇನ್ನೂ ಆಳಗೊಳ್ಳುತ್ತಲೇ ಸಾಗಿದೆ. ವ್ಯವಸ್ಥೆಯೊಳಗಿನ ಮೂಲಭೂತ ಸಮಸ್ಯೆಗಳನ್ನು ಸರಿಪಡಿಸಲು ಬೇಕಾದ ಕೃಷಿ ನೀತಿಯೇ ಇಲ್ಲದಿರುವುದರಿಂದ ಗ್ರಾಮೀಣ ಭಾರತ ತೀರದ ಬವಣೆಗೀಡಾಗಿದೆ. ರಾಜಧಾನಿ ದಿಲ್ಲಿಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿಭಟನೆ ಮಾಡುತ್ತಿರುವ ತಮಿಳುನಾಡಿನ ರೈತರು ಇತ್ತೀಚೆಗೆ ಸತ್ತ ಹಾವುಗಳನ್ನು ಮತ್ತು ಇಲಿಗಳನ್ನು ತಮ್ಮ ಬಾಯಲ್ಲಿ ಕಚ್ಚಿಕೊಂಡು (ಹಸಿವನ್ನು ನೀಗಿಸಿಕೊಳ್ಳಲು ತಮ್ಮ ಹೊಲಗದ್ದೆಗಳಲ್ಲಿ ಉಳಿದಿರುವುದು ಅವುಗಳಷ್ಟೇ ಎಂದು ತೋರಿಸಿಕೊಡುತ್ತಾ), ದಾರಿದ್ರ್ಯದಿಂದ ಸಾವನ್ನಪ್ಪಿದ ತಮ್ಮ ನಿಕಟ ಬಂಧುಗಳ ತಲೆಬುರುಡೆಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಚಿತ್ರಗಳು ಕೃಷಿ ಬಿಕ್ಕಟ್ಟು ಎಷ್ಟು ಆಳವಾಗುತ್ತಿದೆ ಎಂಬುದನ್ನು ತಿಳಿಯಪಡಿಸುತ್ತದೆ.

ನೈರುತ್ಯ ಮಾರುತವು ಭಾರತದ ಬಹುಪಾಲು ಕಡೆಗಳಲ್ಲಿ ಒಳ್ಳೆಯ ಮಳೆಯನ್ನು ತಂದಿದ್ದರೂ ಈಶಾನ್ಯ ಮಾರುತದ ವೈಫಲ್ಯದಿಂದಾಗಿ ಈಗಾಗಲೇ ಸತತ ಎರಡು ಬರವನ್ನು ಎದುರಿಸಿರುವ ಭಾರತದ ಹಲವು ಪ್ರದೇಶಗಳು ತೀವ್ರ ಕ್ಷಾಮದ ಪರಿಸ್ಥಿತಿಯನ್ನು ಅನುಭವಿಸಬೇಕಾಗಿದೆ. ಕೇಂದ್ರ ಸರಕಾರವು ಎಂಟು ರಾಜ್ಯಗಳನ್ನು- ಕೇರಳ, ಕರ್ನಾಟಕ, ತಮಿಳು ನಾಡು, ಆಂಧ್ರ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ-ಬರ ಪೀಡಿತ ರಾಜ್ಯಗಳೆಂದು ಘೋಷಿಸಿದೆ. 2017ರ ಜನವರಿಯಲ್ಲಿ ತಮಿಳು ನಾಡು ಸರಕಾರವು ಇಡೀ ರಾಜ್ಯವೇ ಬರಪೀಡಿತವೆಂದು ಘೋಷಿಸಿ ಸಣ್ಣ ಮತ್ತು ಮಧ್ಯಮ ರೈತರು (ಇವರು ರಾಜ್ಯದ ರೈತಾಪಿಯ ಶೇ.92 ರಷ್ಟಾಗುತ್ತಾರೆ) ಸಹಕಾರಿ ಬ್ಯಾಂಕುಗಳಿಂದ ಮಾಡಿದ್ದ ಸಾಲವನ್ನೆಲ್ಲಾ ಮನ್ನಾ ಮಾಡಿತು. ನಂತರ, ತಮಿಳುನಾಡು ಉಚ್ಚನ್ಯಾಯಾಲಯವು ಸಹಕಾರಿ ಬ್ಯಾಂಕುಗಳಲ್ಲಿ ರಾಜ್ಯದ ಎಲ್ಲಾ ಬಗೆಯ ರೈತರು ಮಾಡಿದ ಸಾಲವನ್ನು ಮನ್ನಾ ಮಾಡಲು ಆದೇಶಿಸಿತು.

(ಸಹಕಾರಿ ಬ್ಯಾಂಕುಗಳು ರೈತಾಪಿಗೆ ಕೊಡುವ ಸಾಲದ ಶೇ. 30 ರಷ್ಟು ಸಾಲವನ್ನು ದೊಡ್ಡ ರೈತಾಪಿಯು ಪಡೆದುಕೊಳ್ಳುತ್ತಾರೆ). ಈಗ ತಮಿಳುನಾಡು ರೈತರು ತಾವು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮಾಡಿರುವ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸುತ್ತಿರುವುದಲ್ಲದೆ ಬೆಳೆ ವೈಫಲ್ಯಕ್ಕೆ ಸೂಕ್ತವಾದ ಪರಿಹಾರವನ್ನು ನೀಡಬೇಕೆಂದೂ ಕೇಳುತ್ತಿದ್ದಾರೆ. ಇತ್ತೀಚೆಗೆ ಹೊಸದಾಗಿ ಆಯ್ಕೆಯಾದ ಉತ್ತರ ಪ್ರದೇಶ ಸರಕಾರವು ರೈತಾಪಿಯ ಕೃಷಿ ಸಾಲವನ್ನು ರದ್ದು ಮಾಡುವುದಾಗಿ ಘೋಷಿಸಿದೆ. ಇದರಿಂದ ಉತ್ತರ ಪ್ರದೇಶದ ಸರಕಾರಕ್ಕೆ ರೂ. 36,359 ಕೋಟಿಯಷ್ಟು ಹೆಚ್ಚುವರಿ ವೆಚ್ಚವಾಗಲಿದೆ.


ಈ ಕ್ರಮಗಳು ರೈತಾಪಿಗೆ ಸ್ವಲ್ಪಪರಿಹಾರವನ್ನು ನೀಡುವುದು ನಿಜವಾದರೂ ಇವ್ಯಾವುದೂ ಆಳವಾಗಿ ಬೇರುಬಿಟ್ಟಿರುವ ಕೃಷಿ ಬಿಕ್ಕಟ್ಟಿಗಾಗಲಿ, ಗ್ರಾಮೀಣ ಭಾರತ ಎದುರಿಸುತ್ತಿರುವ ಸಾಲದ ಭಾರಗಳಿಗಾಗಲಿ ಯಾವುದೇ ರೀತಿಯ ಸಂಜೀವಿನಿಯನ್ನೇನೂ ಒದಗಿಸುವುದಿಲ್ಲ. ಸಾಲಮನ್ನಾಗಳು ಹೆಚ್ಚೆಂದರೆ ಒಂದು ತುರ್ತುಸ್ಥಿತಿಯನ್ನು ಎದುರಿಸಲು ಬೇಕಾದ ತಕ್ಷಣದ ಕಾರ್ಯಕ್ರಮವಷ್ಟೇ ಆಗಿರುತ್ತದೆ. 2008ರಲ್ಲಿ ಯುಪಿಎ ಸರಕಾರವು ದೊಡ್ಡ ಮಟ್ಟದ ಸಾಲಮನ್ನಾ ಕಾರ್ಯಕ್ರಮವನ್ನು ಜಾರಿಮಾಡಿತು. ಭಾರತದ ಬೊಕ್ಕಸಕ್ಕೆ 70,000 ಕೋಟಿಗೂ ಹೆಚ್ಚು ವೆಚ್ಚವನ್ನು ಹೊರಿಸಿದ ಈ ಕ್ರಮದ ಅನುಭವ ಏನು ಹೇಳುತ್ತದೆ? ಕೆಲವೊಮ್ಮೆ ಅನಿವಾರ್ಯವಾಗುವ ಇಂತಹ ಕ್ರಮಗಳು ಸಾಲದ ಹೊರೆಯಿಂದ ಭಾಗಶಃ ಮಾತ್ರ ವಿಮುಕ್ತಗೊಳಿಸುವ ಮತ್ತು ಒಂದು ಬಾರಿ ಮಾತ್ರ ಕೈಗೊಳ್ಳಬಹುದಾದ ಕ್ರಮವಷ್ಟೇ ಆಗಿದ್ದು ಮತ್ತೆ ಮತ್ತೆ ಮರುಕಳಿಸುವ ವ್ಯಾಪಕ ಗ್ರಾಮೀಣ ಸಾಲದ ಭಾರವನ್ನು ತಡೆಯುವಲ್ಲಿ ಏನನ್ನೂ ಮಾಡುವುದಿಲ್ಲ.

ಸಾಮಾನ್ಯವಾಗಿ ಬಾಯಿಯನ್ನೇ ಬಿಚ್ಚದ ರಿಸರ್ವ ಬ್ಯಾಂಕಿನ ಗವರ್ನರ್ ಮತ್ತು ನಬಾರ್ಡ್‌ನ ಮುಖ್ಯಸ್ಥರು ಈ ವಿಷಯದಲ್ಲಿ ಸ್ವಪ್ರೇರಿತರಾಗಿ ಹೇಳಿಕೆಯನ್ನು ನೀಡಿದ್ದಾರೆ. ಈ ಸಾಲ ಮನ್ನಾಗಳು ಪ್ರಾಮಾಣಿಕ ಸುಸ್ತಿದಾರರು ತಮ್ಮ ಸಾಲವನ್ನು ಮರು ಪಾವತಿ ಮಾಡದಿರುವಂತೆ ನಿರುತ್ತೇಜನಗೊಳಿಸಿಬಿಡುವ ನೈತಿಕ ಅವಘಡವನ್ನು ಉಂಟುಮಾಡಬಹುದೆಂದು ಅವರು ಎಚ್ಚರಿಸಿದ್ದಾರೆ. ಇದರ ಜೊತೆಗೆ ಸಾಲಮನ್ನಾಗಳು ಮರುಪಾವತಿ ಶಿಸ್ತನ್ನು ಕಡೆಗಣಿಸುವುದರಿಂದ ಸರಕಾರದ ಋಣಭಾರ ಹೆಚ್ಚಿಸುತ್ತದೆಂದೂ ಮತ್ತದು ಇತರರ ಸಾಲದ ವೆಚ್ಚವನ್ನು ಹೆಚ್ಚು ಮಾಡಿ ಕೊನೆಗೆ ರಾಷ್ಟ್ರದ ಬ್ಯಾಲೆನ್ಸ್ ಶೀಟ್ ಮೇಲೆಯೇ ಪ್ರಭಾವ ಬೀರಬಹುದು ಎಂದು ಕೂಡಾ ಅವರಿಬ್ಬರೂ ಎಚ್ಚರಿಸಿದ್ದಾರೆ.


 ವಿಷಯ ಸರಳವಾಗಿದೆ. ನೈತಿಕ ಅವಘಡವೋ ಮತ್ತೊಂದೋ ಒತ್ತಟ್ಟಿಗಿರಲಿ. ರಾಜಕಾರಣಿಗಳು ಸಾಲಮನ್ನಾಗಳು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ. 2009ರಲ್ಲಿ ಯುಪಿಎ ಸರಕಾರ ಸಾಲಮನ್ನಾ ಮಾಡದೆ ಹೋಗಿದ್ದಲ್ಲಿ ಎರಡನೆ ಬಾರಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲವೆಂದು ಕೆಲವರು ವಾದಿಸುತ್ತಾರೆ. ಕೃಷಿ ಸಾಲಮನ್ನಾಗಳು ಮತ್ತು ಸಬ್ಸಿಡಿಗಳು ಗ್ರಾಮೀಣ ಪ್ರದೇಶದ ಬಡವರಿಗೆ ಯಾವುದೇ ರೀತಿಯ ಲಾಭವನ್ನೂ ತರುವುದಿಲ್ಲ. ನಿಜ ಹೇಳಬೇಕೆಂದರೆ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಅತಂತ್ರರಾಗಿರುವ ಸಣ್ಣ ಮತ್ತು ಭೂಹೀನ ರೈತಾಪಿಯ ಋಣಭಾರವನ್ನು ಸಾಲಮನ್ನಾಗಳು ಯಾವುದೇ ರೀತಿಯಿಂದಲೂ ಕಡಿಮೆ ಮಾಡುವುದಿಲ್ಲ. ಈ ಅತಂತ್ರ ರೈತರನ್ನು ಬ್ಯಾಂಕುಗಳು ಸಾಲ ಪಡೆಯಲು ಅನರ್ಹರೆಂದು ಪರಿಗಣಿಸುವುದರಿಂದ ಅವರಿಗೆ ಸಾಂಸ್ಥಿಕ ಮೂಲಗಳಿಂದ ಸಾಲಗಳು ದೊರೆಯುವುದೇ ಇಲ್ಲ. ಅವರು ತಮ್ಮ ಸಾಲದ ಅಗತ್ಯಗಳಿಗೆ ಅತೀ ಹೆಚ್ಚು ಬಡ್ಡಿದರವನ್ನು ವಿಧಿಸುವ ಬಡ್ಡಿ ವ್ಯಾಪಾರಸ್ಥರನ್ನೇ ಸಂಪೂರ್ಣವಾಗಿ ಅವಲಂಬಿಸಿರುತ್ತಾರೆ. ಸಬ್ಸಿಡಿ ಲಭ್ಯತೆಯಲ್ಲಿ ತಾರತಮ್ಯ, ಭೂ ಹಿಡುವಳಿಗಳಲ್ಲಿ ಅಸಮಾನತೆ ಮತ್ತು ಹಾದಿತಪ್ಪಿರುವ ಸರಕಾರಿ ಬೆಂಬಲಿತ ಕೃಷಿ ವಿಸ್ತರಣಾ ಕಾರ್ಯಕ್ರಮಗಳನ್ನೂ ಒಳಗೊಂಡಂತೆ ಭಾರತದ ಆರ್ಥಿಕತೆಯಲ್ಲಿ ಆಳವಾಗಿ ಬೇರುಬಿಟ್ಟಿರುವ ಕೃಷಿ ಬಿಕ್ಕಟ್ಟನ್ನು ಈ ಸಾಲಮನ್ನಾಗಳು ಉದ್ಧರಿಸುವುದಿಲ್ಲ.


ಮತ್ತೊಂದೆಡೆ ಕೃಷಿ ಬಿಕ್ಕಟ್ಟು ಮುಂದುವರಿದಿರುವುದು ಮಾತ್ರವಲ್ಲ, ಇನ್ನಷ್ಟು ಬಿಗಡಾಯಿಸಿದೆ. ಹವಾಮಾನ ಬದಲಾವಣೆ ಮತ್ತು ಅತಿರೇಕದ ವಾತಾವರಣ ವೈಪರೀತ್ಯಗಳು ರೈತಾಪಿಯ ಆತಂಕಗಳನ್ನು ಮತ್ತಷ್ಟು ಹೆಚ್ಚಿಸಿದೆ. ಮೇಲ್ಮೈ ನೀರಾವರಿ ಮತ್ತು ಮಳೆಕೊಯ್ಲುಗಳಲ್ಲಿ ಗುಣಮಟ್ಟದ ಬಂಡವಾಳ ಹೂಡಿಕೆಯ ಕೊರತೆಗಳು ಸವಾಲಾಗಿ ಪರಿಣಮಿಸಿವೆ. ಇದರಿಂದಾಗಿ ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲವೇ ನೀರಾವರಿಯ ಪ್ರಧಾನ ಮೂಲವಾಗಿಬಿಡುತ್ತಿದೆ. ಈಗಲೂ ದೇಶದ ಅರ್ಧಕ್ಕೂ ಹೆಚ್ಚಿನ ಬೆಳೆ ಬೆಳೆಯುವ ಪ್ರದೇಶಗಳಿಗೆ ವಿಶ್ವಾಸಾರ್ಹ ನೀರಾವರಿ ಮೂಲಗಳಿಲ್ಲ. ಬರಪೀಡಿತ ಎಂದು ಘೋಷಿಸಲಾದ ಎಂಟು ರಾಜ್ಯಗಳಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಉದ್ಯೋಗದ ದಿನಗಳನ್ನು 150ಕ್ಕೆ ಹೆಚ್ಚಿಸಬೇಕೆಂದು ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹವಾದುದು. ನೀರನ್ನು ಸಂರಕ್ಷಿಸುವ, ನೀರಾವರಿಯನ್ನು ಸುಧಾರಿಸುವ ಮತ್ತು ಬರದಂಥ ಪರಿಸ್ಥಿತಿಯನ್ನು ತಡೆಗಟ್ಟುವಂಥ ಸಮುದಾಯ ಸಂಪತ್ತುಗಳನ್ನು ತ್ವರಿತವಾಗಿ ಸೃಷ್ಟಿಸಬೇಕಿದೆ.


ಭಾರತೀಯ ರೈತರ ಬ್ಯಾಲೆನ್ಸ್ ಶೀಟು ಅಸ್ತವ್ಯಸ್ತವಾಗಿರುವುದಕ್ಕೆ ಇನ್ನೂ ಹತ್ತುಹಲವು ಕಾರಣಗಳಿವೆ. ಒಂದೆಡೆ ಉತ್ಪಾದನೆಯ ವೆಚ್ಚ ಹೆಚ್ಚುತ್ತಿದ್ದರೂ ಆದಾಯ ಕಡಿಮೆಯಾಗುತ್ತಿರುವುದು ಮಾತ್ರವಲ್ಲ ಅನಿಶ್ಚಿತವೂ ಆಗುತ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿಶ್ವ ಮಾರುಕಟ್ಟೆಯಲ್ಲೂ ಸಹ ಕೃಷಿ ಉತ್ಪನ್ನಗಳ ಮಾರುಕಟ್ಟೆ ಅತ್ಯಂತ ದೋಷಯುಕ್ತವಾಗಿದೆ ಮತ್ತು ಭಯಂಕರ ಏರುಪೇರುಗಳಿಂದ ಕೂಡಿದೆ. ಕುಸಿಯುತ್ತಿರುವ ಕೃಷಿ ಆದಾಯ ಮತ್ತು ಗ್ರಾಮೀಣ ರೈತಾಪಿಯ ಸಾಲಗಳನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ವ್ಯವಸ್ಥೆಯ ಒಳಗೇ ಬೇರುಬಿಟ್ಟಿರುವ ಈ ಸಮಸ್ಯೆಗಳನ್ನು ನಿವಾರಿಸಲು ಸಮಗ್ರ ಪ್ರಯತ್ನಗಳನ್ನು ಮಾಡದೇ ಈ ವಿಷಚಕ್ರವನ್ನು ಭೇದಿಸಲು ಸಾಧ್ಯವಿಲ್ಲ. ಸಾಲಮನ್ನಾಗಳು ಹೆಚ್ಚೆಂದರೆ ಗಾಯಕ್ಕೆ ಮುಲಾಮನ್ನು-ಬ್ಯಾಂಡೇಜನ್ನು ಹಚ್ಚಬಲ್ಲವು. ಅವು ತಾತ್ಕಾಲಿಕ ಪರಿಹಾರಗಳನ್ನಷ್ಟೇ ನೀಡಬಲ್ಲವು. ಹೀಗಾಗಿ ಶಾಶ್ವತ ಪರಿಹಾರದ ಕಡೆ ಈಗಲಾದರೂ ಗಮನ ನೀಡಬೇಕಿದೆ.

ಕೃಪೆ :  Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ