ನಾರದ ಕುಟುಕು ಕಾರ್ಯಾಚರಣೆ: ಟಿಎಂಸಿ ಮುಖಂಡರ ವಿರುದ್ಧ ಹಣ ಚಲುವೆ ಪ್ರಕರಣ ದಾಖಲು

Update: 2017-04-28 14:54 GMT

ಪ.ಬಂಗಾಲ, ಎ.28: ನಾರದ ಕುಟುಕು ಕಾರ್ಯಾಚರಣೆಯಲ್ಲಿ ಹಣ ಚಲುವೆ ಪ್ರಕರಣದಲ್ಲಿ ಒಳಗೊಂಡಿದ್ದಾರೆ ಎನ್ನಲಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮುಖಂಡರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಿಕೊಂಡಿದೆ.

ಇವರಲ್ಲಿ ರಾಜ್ಯಸಭೆಯ ಸಂಸದ ಮುಕುಲ್ ರಾಯ್, ಲೋಕಸಭೆಯ ಸಂಸದರಾದ ಸುಲ್ತಾನ್ ಅಹ್ಮದ್ ಮತ್ತು ಸೌಗತ ರಾಯ್ ಸೇರಿದ್ದಾರೆ.

 12 ಟಿಎಂಸಿ ಮುಖಂಡರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ ಒಂದು ವಾರದ ಬಳಿಕ ಇ.ಡಿ. ಈ ಕ್ರಮ ಕೈಗೊಂಡಿದೆ. ಹಣ ಚಲುವೆ ತಡೆ ಕಾಯ್ದೆಯಡಿ ಟಿಎಂಸಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಶೀಘ್ರವೇ ಸಮನ್ಸ್ ಜಾರಿಗೊಳಿಸಲಾಗುವುದು ಎಂದು ಇ.ಡಿ. ತಿಳಿಸಿದೆ.

 2016ರಲ್ಲಿ ನಡೆದ ಪ.ಬಂಗಾಲ ವಿಧಾನಸಭಾ ಚುನಾವಣೆಯ ಸಂದರ್ಭ ಕೆಲವು ಟಿಎಂಸಿ ಮುಖಂಡರು ‘ಅನುಕೂಲ’ ಮಾಡಿಕೊಡುವ ಭರವಸೆ ನೀಡಿ ಹಲವರಿಂದ ಹಣ ವಸೂಲು ಮಾಡುತ್ತಿರುವುದನ್ನು ನಾರದ ಕುಟುಕು ಕಾರ್ಯಾಚರಣೆ ಬಯಲಿಗೆಳೆದಿತ್ತು. ಆದರೆ ಇದನ್ನು ತಳ್ಳಿಹಾಕಿದ್ದ ಪ.ಬಂಗಾಲ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಇದೊಂದು ರಾಜಕೀಯ ಸೇಡಿನ ಕ್ರಮ. ಸಿಬಿಐ ಮೋದಿ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News