×
Ad

ಪೊಲೀಸರಿಗೆ ಉಚಿತ ಆಹಾರ ನೀಡದಿದ್ದುದೇ ಈ ಕುಟುಂಬದ ಅಪರಾಧ!

Update: 2017-04-29 00:06 IST

ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ಭಾವನಗರ ಜಿಲ್ಲೆಯ ಪುಟ್ಟ ಪಟ್ಟಣ ಪಲಿತಾಣದಲ್ಲಿ ಕಳೆದ ಮಾರ್ಚ್ 15ರಂದು ವಿಚಿತ್ರ ಘಟನೆಯೊಂದು ನಡೆಯಿತು. ಉಚಿತವಾಗಿ ಊಟ ನೀಡಿಲ್ಲ ಎಂಬ ಕಾರಣಕ್ಕೆ ಪೊಲೀಸರು ಹೊಟೇಲ್ ಮಾಲಕ ಹಾಗೂ ಅವರ ಕುಟುಂಬದವರನ್ನು ಅಮಾನುಷವಾಗಿ ಥಳಿಸಿದ್ದಾರೆ ಎಂದು ಆಪಾದಿಸಲಾಗಿದೆ.

ದಿಲೀಪ್‌ಭಾಯ್ ಯೂಸುಫ್ ಭಾಯ್ ನೋದಿಯಾ (52) ಹಲವು ತಲೆಮಾರುಗಳಿಂದ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡವರು. ಪಲಿತಾಣದಲ್ಲಿ ಅವರು ಆರು ರೆಸ್ಟೋರೆಂಟ್‌ಗಳು ಹಾಗೂ ಒಂದು ಸಿದ್ಧ ಉಡುಪುಗಳ ಮಳಿಗೆ ಹೊಂದಿದ್ದಾರೆ.

ಕಳೆದ ನಾಲ್ಕೆದು ವರ್ಷಗಳಿಂದ ನೋದಿಯಾ ಸಹೋದರರು ನಡೆಸುತ್ತಿದ್ದ ಈ ಹೊಟೇಲ್‌ಗಳು ಪೊಲೀಸರ ಪಾಲಿಗೆ ಉಚಿತ ಊಟ- ತಿಂಡಿ ಸಿಗುವ ಅಡ್ಡೆಗಳಾದ್ದವು. ಪ್ರತಿ ದಿನ ಪೊಲೀಸರು ತಮ್ಮ ಸ್ವಂತಕ್ಕೆ, ಅಕಾರಿಗಳು ನಡೆಸುವ ಖಾಸಗಿ ಪಾರ್ಟಿಗಳಿಗೆ ಹಾಗೂ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಿಗೆ ಕೂಡಾ ಈ ಆರು ಹೊಟೇಲ್‌ಗಳ ಪೈಕಿ ಒಂದರಿಂದ ಬಿಡಿಕಾಸೂ ನೀಡದೆ ಊಟ- ತಿಂಡಿ ಒಯ್ಯುತ್ತಿದ್ದರು. ‘‘ಕಳೆದ ಕೆಲ ವರ್ಷಗಳಲ್ಲಿ ಕಳೆದ ನವೆಂಬರ್‌ನಲ್ಲಿ ಮಾತ್ರ ಎರಡು ಬಾರಿ ಬಿಲ್ ಪಾವತಿಸಿದ್ದರು. ನೋಟು ರದ್ದತಿಯಿಂದಾಗಿ ವಹಿವಾಟು ಅಸ್ತವ್ಯವಸ್ತವಾಗಿತ್ತು. ಆದ್ದರಿಂದ ನಾವು ಬಿಲ್ ಕೇಳಿದ್ದೆವು. ಆಗ ಒಮ್ಮೆ 10 ಸಾವಿರ ರೂಪಾಯಿ ಹಾಗೂ ಮತ್ತೊಮ್ಮೆ 900 ರೂಪಾಯಿ ಪಾವತಿಸಿದ್ದರು’’ ಎಂದು ಸಹೋದರರ ಪೈಕಿ ಕಿರಿಯರಾದ ರಾಜೇಶ್‌ಭಾಯ್ ನೋದಿಯಾ ವಿವರಿಸುತ್ತಾರೆ.

ನಷ್ಟ ತಾಳಿಕೊಳ್ಳಲಾಗದೇ ಹಿರಿಯರಾದ ದಿಲೀಪ್‌ಭಾಯ್, ಪೊಲೀಸರಿಗೆ ಉಚಿತವಾಗಿ ಆಹಾರ ನೀಡಲು ನಿರಾಕರಿಸಿದರು. ಸುಮಾರು 3 ಲಕ್ಷ ರೂಪಾಯಿಯಷ್ಟಿರುವ ಹಳೆಯ ಬಾಕಿ ಪಾವತಿಸುವಂತೆ ಮನವಿ ಮಾಡಿದರು.

‘‘ಪೊಲೀಸರಿಗೆ ಉಚಿತ ಆಹಾರ ನೀಡಲು ನಿರಾಕರಿಸಿ, ಬಾಕಿ ಬಿಲ್ ಪಾವತಿಗೆ ಆಗ್ರಹಿಸಿದ ಮರುದಿನ ರಾವತ್‌ಸಿಂಗ್ ಎಂಬ ಪೊಲೀಸ್ ಪೇದೆ ಬೆಳಗ್ಗೆ 10ರ ಸುಮಾರಿಗೆ ಹೊಟೇಲ್‌ಗೆ ಬಂದು ಮೇಲಕಾರಿ ಕರೆಯುತ್ತಿದ್ದಾರೆ ಎಂದು ಹೇಳಿದರು. ಆಗ ದಿಲೀಪ್‌ಭಾಯ್ ಇಲ್ಲದ್ದರಿಂದ ಕರೀಂಭಾಯ್ ಅವರ ಜತೆಗೆ ಪೊಲೀಸ್ ಠಾಣೆಗೆ ತೆರಳಿದರು ಎಂದು ರಾಜೇಶ್‌ಭಾಯ್ ಘಟನೆಯ ವಿವರ ನೀಡಿದರು. ಸುದ್ದಿ ತಿಳಿಯುತ್ತಿದ್ದಂತೆಯೇ, ದಿಲೀಪ್‌ಭಾಯ್, ಸಹೋದರರಾದ ಯೂಸುಫ್ ಭಾಯ್, ದಿಲೀಪ್‌ಭಾಯ್ ಪತ್ನಿ ಜೈನುಬಾ ಬೇಗಂ, ಮಕ್ಕಳಾದ ಫೈಸಲ್‌ಭಾಯ್ ಹಾಗೂ ಫಾರೂಕ್‌ಭಾಯ್, ಕರೀಂಭಾಯ್ ಅವರ ದೊಡ್ಡ ಮಗ ಫಿರೋಝ್ ಭಾಯ್ ಠಾಣೆಗೆ ಧಾವಿಸಿದರು. ಪಲಿತಾಣ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವಿ.ಎಸ್.ಮಂಜಾರಿಯಾ ಎಲ್ಲರನ್ನೂ ಬಂಸಿ ಲಾಕಪ್‌ನಲ್ಲಿ ಕೂಡಿ ಹಾಕಿ ಥಳಿಸಿದರು.

‘‘ಪೊಲೀಸರು ಝೈನಬಾ (40) ಅವರನ್ನೂ ಬಿಡಲಿಲ್ಲ. ಇಡೀ ದಿನ ಅವರೆಲ್ಲರನ್ನೂ ಲಾಕಪ್‌ನಲ್ಲಿ ಇಟ್ಟುಕೊಂಡರು. ಸಂಜೆ 5ರ ಸುಮಾರಿಗೆ ಪೊಲೀಸರು ಕರೀಂಭಾಯ್ ಅವರ ಕೈಗೆ ಕೋಳ ತೊಡಿಸಿ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಲು ನಿರ್ಧರಿಸಿದರು. ಅವರಿಗೆ ಕೈಕೋಳ ತೊಡಿಸಿ, ದೊಡ್ಡ ಸಂಖ್ಯೆಯ ಪೊಲೀಸ್ ವಾಹನಗಳು ಹಾಗೂ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಮೆರವಣಿಗೆ ಮಾಡಿಸಿದರು. ದಾರಿ ಮಧ್ಯೆ ನಮ್ಮ ಹೊಟೇಲ್ ಬಳಿ ನಿಂತು, ಹೊಟೇಲ್ ನಿರ್ವಹಿಸುತ್ತಿದ್ದ ಕರೀಂಭಾಯ್ ಅವರ ಕಿರಿಯ ಮಗ ನವಾಬ್‌ನಲ್ಲೂ ಕರೆದುಕೊಂಡರು’’ ಎಂದು ರಾಜೇಶ್‌ಭಾಯ್ ವಿವರಿಸಿದರು. ಇನ್ನೂ ವಿದ್ಯಾರ್ಥಿಯಾಗಿರುವ 18ರ ವಯಸ್ಸಿನ ನವಾಬ್‌ನಲ್ಲೂ ಪೊಲೀಸರು ಬಿಡಲಿಲ್ಲ. ಒಂದು ಗಂಟೆ ಕಾಲ ನಗರದಲ್ಲಿ ಮೆರವಣಿಗೆ ಮಾಡಿಸಿ ಪೊಲೀಸ್ ಠಾಣೆಗೆ ಕರೆತಂದರು. ಸಂಜೆ ಯೂಸುಫ್ ಭಾಯ್ ಹಾಗೂ ಫಿರೋಝ್‌ಭಾಯ್ ಅವರನ್ನು ಬಿಟ್ಟುಬಿಟ್ಟರು. ಉಳಿದ ಎಲ್ಲರನ್ನೂ ಕಸ್ಟಡಿಯಲ್ಲಿ ಇರಿಸಿಕೊಂಡರು. ಪೊಲೀಸರು ಥಳಿಸಿದ್ದರಿಂದ ಗಾಯಗೊಂಡಿದ್ದ ಝೈನಬಾ, ಅಸ್ವಸ್ಥರಾದರು ಹಾಗೂ ಆಸ್ಪತ್ರೆಗೆ ಸೇರಿಸುವುದು ಅನಿವಾರ್ಯವಾಯಿತು. ಭಾವನಗರ ನಾಗರಿಕ ಆಸ್ಪತ್ರೆಗೆ ಎರಡು ದಿನಗಳ ಕಾಲ ಅವರನ್ನು ದಾಖಲಿಸಲಾಯಿತು.

ರಾತ್ರಿ 11ರ ಸುಮಾರಿಗೆ ಪೊಲೀಸರು ನೋದಿಯಾ ಕುಟುಂಬದ ವಿರುದ್ಧ ಎ್ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಿದರು. ಸ್ಥಳೀಯ ಬಟ್ಟೆ ವ್ಯಾಪಾರಿ ರಾಜನ್ ಭಗವಾನ್‌ಭಾಯ್ ಸಾಂಘ್ವಿ ಎಂಬಾತ ನೋದಿಯಾ ಕುಟುಂಬದ ಆರು ಮಂದಿಯ ವಿರುದ್ಧ ದೂರು ನೀಡಿದ್ದರು. ಪಕ್ಕದಲ್ಲಿರುವ ತಮ್ಮ ಅಂಗಡಿಯಿಂದ 2,000 ರೂಪಾಯಿ ಕದ್ದಿದ್ದಾರೆ ಎಂದು ಆಪಾದಿಸಿದ್ದರು. ಇದಕ್ಕೂ ಮುನ್ನ ಸಾಂಘ್ವಿ ಅತ್ಯಾಚಾರದ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಮೂರು ತಿಂಗಳ ಹಿಂದೆ ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಸಾಂಘ್ವಿ ನೀಡಿದ ದೂರಿನ ಆಧಾರದಲ್ಲಿ ಪಲಿತಾಣ ಪೊಲೀಸರು ಆರು ಮಂದಿಯ ವಿರುದ್ಧ ಡಕಾಯಿತಿ ಪ್ರಕರಣ ದಾಖಲಿಸಿದರು.

‘‘ಒಬ್ಬ ಗಣ್ಯ ಉದ್ಯಮಿ ಏಕೆ 2,000 ರೂಪಾಯಿ ಕಳವು ಮಾಡುತ್ತಾರೆ?’’ ಎನ್ನುವುದು ನೋದಿಯಾ ಸಹೋದರರ ವಹಿವಾಟು ಪಾಲುದಾರ ಮತ್ತು ಇಡೀ ಪ್ರಕರಣದ ಪ್ರತ್ಯಕ್ಷದರ್ಶಿಯಾಗಿದ್ದ ನೀಲೇಶ್‌ಭಾಯ್ ನವ್ರಿ ಅವರ ಪ್ರಶ್ನೆ.

‘‘ಈ ದಿನ ನಾನು ಹೊಟೇಲ್‌ಗೆ ಭೇಟಿ ನೀಡಿದಾಗ ಪೊಲೀಸರು ದಿಢೀರನೇ ದಾಳಿ ಮಾಡಿ ಕರೀಂಭಾಯ್ ಜತೆಗೆ ನನ್ನನ್ನೂ ನಿಂದಿಸಿದರು. ನನ್ನನ್ನೂ ಜೀಪಿನಲ್ಲಿ ಕೂರುವಂತೆ ಬಲವಂತ ಮಾಡಿದರು. ಆದರೆ ನಾನು ಆ ಕುಟುಂಬದ ವ್ಯಕ್ತಿ ಅಲ್ಲ ಎಂದು ಪದೇ ಪದೇ ಹೇಳಿದ ಬಳಿಕ ಬಿಟ್ಟರು. ಈ ರೀತಿ ಒಂದು ಕುಟುಂಬವನ್ನು ಅವಮಾನಿಸುವ ಯಾವ ಅಕಾರ ಪೊಲೀಸರಿಗೆ ಇದೆ? ಒಬ್ಬ ಕಳ್ಳನಾಗಿದ್ದರೂ, ಅವರನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡುವ ಅಕಾರ ಪೊಲೀಸರಿಗೆ ಇಲ್ಲ’’ ಎನ್ನುವುದು ಅವರ ವಾದ.

ಘಟನೆ ದಿನ ನಗರದಿಂದ ಹೊರಗಿದ್ದ ರಾಜೇಶ್‌ಭಾಯ್, ಘಟನೆ ಬಗ್ಗೆ ರಾಜ್ಯ ಹೈಕೋರ್ಟ್‌ನ ಮೊರೆ ಹೋದರು. ಐಪಿಎಸ್ ಅಕಾರಿಯಾಗಿದ್ದು, ರಾಜೀನಾಮೆ ನೀಡಿ ವಕೀಲಿ ವೃತ್ತಿ ಆರಂಭಿಸಿದ ರಾಹುಲ್ ಶರ್ಮಾ, ಈ ಕುಟುಂಬದ ಪರವಾಗಿ ದಾವೆ ಹೂಡಿದರು. ಈ ಅರ್ಜಿಯ ಆಧಾರದಲ್ಲಿ ಎಪ್ರಿಲ್ 3ರಂದು ನೋದಿಯಾ ಕುಟುಂಬದ ಆರು ಮಂದಿಯ ವಿರುದ್ಧ ದಾಖಲಿಸಿದ್ದ ದೂರನ್ನು ಹೈಕೋರ್ಟ್ ರದ್ದು ಮಾಡಿತು.

ವಿಚಾರಣೆ ವೇಳೆ, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ‘‘ದೂರಿನಲ್ಲಿ ಎಲ್ಲೂ ಡಕಾಯಿತಿ ಬಗ್ಗೆ ಉಲ್ಲೇಖವೇ ಇಲ್ಲ’’ ಎಂದು ಸ್ಪಷ್ಟಪಡಿಸಿದ್ದರು. ನ್ಯಾಯಾಲಯ ಇನ್ನೂ ವಿವರವಾದ ಆದೇಶ ನೀಡಬೇಕಾಗಿದೆ. ಆರು ಮಂದಿಯ ವಿರುದ್ಧದ ಎ್ಐಆರ್ ರದ್ದುಪಡಿಸುವ ವೇಳೆ ಹೈಕೋರ್ಟ್, ದಿಲೀಪ್‌ಭಾಯ್, ಕರೀಂಭಾಯ್, ಫೈಸಲ್‌ಭಾಯ್, ಫಾರೂಕ್‌ಭಾಯ್ ಮತ್ತು ನವಾಬ್ ನೋದಿಯಾ ಮೂರು ತಿಂಗಳ ವರೆಗೆ ಪಲಿತಾಣದಿಂದ ಹೊರಗಿರಬೇಕು ಎಂದು ಸೂಚಿಸಿದೆ. ಝೈನಬಾ ಅವರು ಮಾತ್ರ ಪಲಿತಾಣದಲ್ಲಿ ಇರಲು ಅವಕಾಶ ನೀಡಲಾಗಿದೆ.

ಪೊಲೀಸರು ಈ ಸಂಬಂಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ತಿಂಗಳ ಬಳಿಕ, ನೋದಿಯಾ ಕುಟುಂಬ, ಪಲಿತಾಣ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಲಿಖಿತ ದೂರು ನೀಡಿದೆ ಎಂದು ಭಾವನವಗರ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ದೀಪನ್‌ಕರ್ ತ್ರಿವೇದಿ ದೃಢಪಡಿಸಿದ್ದಾರೆ. ಅಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ‘‘ ಪ್ರಕರಣದ ಬಗ್ಗೆ ಪರಿಶೀಲನೆ ನಡೆಯುತ್ತಿದೆ’’ ಎಂದು ಅವರು ವಿವರಿಸಿದ್ದಾರೆ.

‘‘ನಾವು 35 ಕಿಲೋಮೀಟರ್ ದೂರದ ಗರಿಯಾರ್ದರ್ ಎಂಬ ಗ್ರಾಮದಲ್ಲಿ ಒಂದು ಬಾಡಿಗೆಮನೆ ಹಿಡಿದಿದ್ದೇವೆ. ಮೂರು ತಿಂಗಳ ಕಾಲ ಐದು ಮಂದಿ ಅಲ್ಲಿ ವಾಸವಿರುತ್ತೇವೆ. ಆದರೆ ಮನೆಯ ಎಲ್ಲ ಪುರುಷರು ಪಲಿತಾಣದಿಂದ ಹೊರಗೆ ಇರಬೇಕಾದ್ದರಿಂದ ಹೊಟೇಲ್‌ಗಳನ್ನು ಮುಚ್ಚಲಾಗಿದೆ. ವ್ಯವಹಾರ ನೋಡಿಕೊಳ್ಳುವವರು ಯಾರೂ ಇಲ್ಲ’’ ಎಂದು ರಾಜೇಶ್‌ಭಾಯ್ ಹೇಳುತ್ತಾರೆ.

‘‘ಆರೇಳು ವರ್ಷಗಳ ಹಿಂದೆ, ಪೊಲೀಸರು ಇನ್ನೊಂದು ಹೊಟೇಲ್‌ನಿಂದ ಬಿಟ್ಟಿ ಊಟ ಪಡೆಯುತ್ತಿದ್ದರು. ಆದರೆ ಅವರ ಕಿರುಕುಳ ತಾಳಲಾರದೆ, ಹೊಟೇಲ್ ಮಾಲಕ ಹೊಟೇಲ್ ಮುಚ್ಚಿದರು. ಆ ಬಳಿಕ ಪೊಲೀಸರು ನೊದಿಯಾ ಹೊಟೇಲ್‌ನಿಂದ ಆಹಾರ ಒಯ್ಯುತ್ತಿದ್ದಾರೆ’’ ಎಂದು ಮತ್ತೊಬ್ಬ ವ್ಯಾಪಾರಿ ವಿವರಿಸಿದರು.

‘‘ನಾಲ್ಕು ವರ್ಷ ಮೊದಲು ಪೊಲೀಸರು ನಮ್ಮ ಬಳಿ ಬಂದು, ಲಾಕಪ್‌ನಲ್ಲಿ ಇರುವ ಆರೋಪಿಗಳಿಗೆ ಆಹಾರ ಪೂರೈಸಲು ಗುತ್ತಿಗೆ ನೀಡುತ್ತಿದ್ದೇವೆ ಎಂದು ಹೇಳಿದರು. ನಾವು ಟೆಂಡರ್ ಸಲ್ಲಿಸದೇ ಇದ್ದರೂ ನಮಗೆ ಆದೇಶ ನೀಡಿರುವುದು ಅಚ್ಚರಿ ತಂದಿತು.’’ ಇದೆಲ್ಲ ಆರಂಭವಾದದ್ದು ಹೀಗೆ ಎಂದು ರಾಜೇಶ್‌ಭಾಯ್ ಘಟನಾವಳಿ ಬಿಚ್ಚಿಟ್ಟರು. ‘‘ನಾವು ಬಿಲ್ ಪಾವತಿಸುವಂತೆ ಕೋರಿಕೆ ಸಲ್ಲಿಸಿದಾಗೆಲ್ಲ, ಪೊಲೀಸರು ನಮ್ಮ ಕುಟುಂಬಕ್ಕೆ ಬೆದರಿಕೆ ಒಡ್ಡುತ್ತಿದ್ದರು. ಒಂದು ಬಾರಿಯಂತೂ ಪೊಲೀಸ್ ಪೇದೆಯೊಬ್ಬ ನನ್ನ ಸಹೋದರನನ್ನು ಕುರಿತು ನೀನು ಮುಸ್ಲಿಂ; ನಿಮ್ಮ ವಹಿವಾಟು ಇಲ್ಲಿ ಮುಂದುವರಿಸಲು ಅವಕಾಶ ಕೊಟ್ಟಿರುವುದೇ ಹೆಚ್ಚು ಎಂದು ನಿಂದಿಸಿದ್ದ.’’

ನಲುವತ್ತು ವರ್ಷದ ಹಿಂದೆ, ನೋದಿಯಾ ಸಹೋದರರ ತಂದೆ ಇತುಭಾಯ್ ನೋದಿಯಾ ಭಾವನಗರ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಹತ್ತು ವರ್ಷಗಳ ಕಾಲ ಕಾರ್ಪೊರೇಟರ್ ಆಗಿದ್ದ ಅವರ ಬಳಿಕ ಪತ್ನಿ ರೆಹಮತ್‌ಬೆನ್ ನೋದಿಯಾ 15 ವರ್ಷಗಳ ಕಾಲ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

‘‘ನಮ್ಮ ತಂದೆ- ತಾಯಿ ಚುನಾಯಿತರಾಗಿದ್ದ ಅವಯಲ್ಲಿ ಆಗ ನಾವು ವಾಸವಾಗಿದ್ದ ಬಾಹರಪುರದಲ್ಲಿ ನಮ್ಮದು ಮಾತ್ರ ಮುಸ್ಲಿಂ ಕುಟುಂಬ ಇತ್ತು. ಸ್ಥಳೀಯರ ಜತೆಗೆ ಹಾಗೂ ಎಲ್ಲ ಸಮುದಾಯಗಳ ಜತೆಗೆ ಅಷ್ಟೊಂದು ಗೌರವಯುತ ಸಂಬಂಧ ನಮಗಿತ್ತು. ಈಗಲೂ ನಾವು ವಾಸಿಸುವ ಪ್ರದೇಶದಲ್ಲಿ ಬ್ರಾಹ್ಮಣರು ಹಾಗೂ ಜೈನರು ಬಹುಸಂಖ್ಯೆಯಲ್ಲಿದ್ದಾರೆ. ಇತರ ನಿವಾಸಿಗಳ ಜತೆ ಸೌಹಾರ್ದ ಸಂಬಂಧ ಇದೆ. ನಮ್ಮ ಕುಟುಂಬದ ಬಗ್ಗೆ ಜನರಿಗೂ ಒಳ್ಳೆಯ ಗೌರವ ಭಾವನೆ ಇದೆ. ಆದರೆ ಈಗ ಎಲ್ಲವೂ ಮಣ್ಣುಪಾಲಾಯಿತು’’ ಎಂದು ರಾಜೇಶ್‌ಭಾಯ್ ವಿಷಾದಿಸುತ್ತಾರೆ.

‘‘ಇದೀಗ ಇದು ಹಣದ ಪ್ರಶ್ನೆಯಾಗಿ ಉಳಿದಿಲ್ಲ. ಇದು ನಮ್ಮ ಸಾಮಾಜಿಕ ಗೌರವದ ಮೇಲಿನ ದಾಳಿ. ಇದರ ವಿರುದ್ಧದ ಹೋರಾಟ ಮುಗಿದಿಲ್ಲ.’’
ಕೃಪೆ: thewire.in

Writer - ದಮಯಂತಿ ಧರ್

contributor

Editor - ದಮಯಂತಿ ಧರ್

contributor

Similar News

ಜಗದಗಲ

ಜಗ ದಗಲ