×
Ad

ಗುಜರಾತ್ ಶ್ರೀಮಂತಿಕೆಯಲ್ಲಿ ಮುಂದೆ - ಲಸಿಕಾ ಸುರಕ್ಷೆಯಲ್ಲಿ ಹಿಂದೆ

Update: 2017-05-01 00:20 IST

ಭಾರತದ ದೊಡ್ಡ ರಾಜ್ಯಗಳ ಪೈಕಿ ಕನಿಷ್ಠ ಲಸಿಕೆ ಸಾಧನೆಯಾಗಿರುವುದು ಗುಜರಾತ್‌ನಲ್ಲಿ. 2015-16ರ ಅಂಕಿ ಅಂಶಗಳ ಪ್ರಕಾರ, ಇಲ್ಲಿ ಲಸಿಕೆ ಹಾಕಿಸಿಕೊಂಡ ಮಕ್ಕಳ ಪ್ರಮಾಣ ಶೇ.50.4ರಷ್ಟು ಮಾತ್ರ. ದೇಶದ ನಾಲ್ಕನೆ ಸಮೃದ್ಧ ರಾಜ್ಯದಲ್ಲಿ ಲಸಿಕೆ ಪ್ರಮಾಣ ಮಾತ್ರ ಬಿಮಾರು (ಅಸ್ವಸ್ಥ) ರಾಜ್ಯಗಳೆನಿಸಿಕೊಂಡ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶಕ್ಕಿಂತಲೂ ಕಡಿಮೆ.

ಒಂದು ದಶಕದ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಗುಜರಾತ್ ಸಾಧನೆ ಶೇ.11.5ರಷ್ಟು ಹೆಚ್ಚಿದೆ. ಆದಾಗ್ಯೂ ರಾಷ್ಟ್ರೀಯ ಸರಾಸರಿಯಾದ ಶೇ.62ಕ್ಕೆ ಹೋಲಿಸಿದರೆ ಇನ್ನೂ ಶೇ.11.6ರಷ್ಟು ಕಡಿಮೆ ಇದೆ ಎನ್ನುವುದು ಕಳೆದ 25 ವರ್ಷಗಳ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ಸ್ಪಷ್ಟವಾಗಿ ತಿಳಿದುಬರುತ್ತದೆ.

ಗುಜರಾತ್ ಲಸಿಕೆ ಪ್ರಮಾಣ 2005-06ರ ವೇಳೆಗೆ ಶೇ.45.2ರಷ್ಟಿತ್ತು. ಇದು ಅಂದಿನ ರಾಷ್ಟ್ರೀಯ ಸರಾಸರಿ (43.5)ಗಿಂತ ಮೇಲಿತ್ತು. ಪ್ರಸ್ತುತ ರಾಜ್ಯದ ಲಸಿಕೆ ಅಂಕಿ ಅಂಶಗಳು 23 ವರ್ಷಗಳ ಹಿಂದೆ ಅಂದರೆ 1992-93ರಲ್ಲಿ ದಾಖಲಾಗಿದ್ದಕ್ಕಿಂತ ಅಲ್ಪಪ್ರಮಾಣದಲ್ಲಿ ಅಕವಾಗಿದೆ.

ಇತ್ತೀಚಿನವರೆಗೂ ಬಿಮಾರು ರಾಜ್ಯಗಳ ಜತೆಗೆ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಸ್ಸಾಂ ಹಾಗೂ ಮೇಘಾಲಯ ಕನಿಷ್ಠ ಲಸಿಕೆ ಸಾಧನೆಯ ದಾಖಲೆ ಹೊಂದಿದ್ದವು. ದೇಶದಲ್ಲಿ ಮಕ್ಕಳ ರೋಗ ಹಾಗೂ ಸಾವು ತಡೆಯಲು ಅತ್ಯಂತ ಕನಿಷ್ಠ ವೆಚ್ಚದಾಯಕ ಕ್ರಮವೆಂದರೆ ಲಸಿಕೆ ಹಾಕಿಸುವುದು. ಲಸಿಕೆ ಹಾಕಿಸಿಕೊಂಡರೆ ತಡೆಯಬಹುದಾದ ರೋಗಗಳಿಂದಾಗಿ ಎರಡು ವರ್ಷಕ್ಕಿಂತ ಕೆಳಗಿನ ಐದು ಲಕ್ಷ ಮಕ್ಕಳು ಭಾರತದಲ್ಲಿ ಪ್ರತೀ ವರ್ಷ ಬಲಿಯಾಗುತ್ತಿದ್ದಾರೆ.

ಪೋಲಿಯೊ, ಬಿಸಿಜಿ, ಟಿಪಿಟಿ ಹಾಗೂ ದಡಾರ ಲಸಿಕೆ ಹೀಗೆ ಸಂಪೂರ್ಣ ಲಸಿಕೆ ಹಾಕಿಸಿಕೊಳ್ಳುವ ಮಕ್ಕಳ ಪ್ರಮಾಣ ದಶಕದ ಹಿಂದೆಗೆ ಹೋಲಿಸಿದರೆ ಶೇ.40ರಷ್ಟು ಹೆಚ್ಚಿದೆ. 2005-06ರಲ್ಲಿ ಶೇ.43.5ರಷ್ಟಿದ್ದ ಲಸಿಕೆ ಪ್ರಮಾಣ ನಾಲ್ಕನೆ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವೇಳೆಗೆ ಶೇ.62ಕ್ಕೆ ಹೆಚ್ಚಿದೆ.

ಈ ಗಣನೀಯ ಹೆಚ್ಚಳಕ್ಕೆ ಮುಖ್ಯ ಕಾರಣವೆಂದರೆ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳು ತಮ್ಮ ಸಾಧನೆ ಉತ್ತಮ ಪಡಿಸಿಕೊಂಡಿರುವುದು. 2005-06ರ ಸಮೀಕ್ಷೆಯಲ್ಲಿ ಈ ರಾಜ್ಯಗಳ ಸಾಧನೆ ತೀರಾ ಕಳಪೆಯಾಗಿತ್ತು. ಕ್ರಮವಾಗಿ ಶೇ.23, 26.5, 32.8 ಹಾಗೂ 34.8ರಷ್ಟು ಮಕ್ಕಳಿಗೆ ಮಾತ್ರ ಲಸಿಕೆ ಸುರಕ್ಷೆ ಇತ್ತು. ಆದರೆ ಕಳೆದ ಒಂದು ದಶಕದಲ್ಲಿ ಈ ರಾಜ್ಯಗಳ ಲಸಿಕೆ ಸುರಕ್ಷೆ ಪ್ರಮಾಣ ಶೇ.97.45ರಷ್ಟು ಹೆಚ್ಚಿದೆ. ಉತ್ತರ ಪ್ರದೇಶದಲ್ಲಂತೂ ಈ ಪ್ರಮಾಣ ಶೇ.122ರಷ್ಟು ಹೆಚ್ಚಿದೆ. ಈಗ ಅನುಕ್ರಮವಾಗಿ ನಾಲ್ಕು ರಾಜ್ಯಗಳ ಲಸಿಕೆ ಸುರಕ್ಷೆ ಶೇ.51.1, 54.8, 61.7 ಹಾಗೂ 61.9ರಷ್ಟಿದೆ.

ಹನ್ನೆರಡರಿಂದ 23 ತಿಂಗಳ ಒಳಗಿನ ಅತಿಹೆಚ್ಚು ಮಕ್ಕಳಿಗೆ ಲಸಿಕೆ ಹಾಕಿಸಿರುವ ಸಾಧನೆ ಪಂಜಾಬ್, ಗೋವಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳದ್ದು. ಪಂಜಾಬ್ ಹಾಗೂ ಗೋವಾ 2005-06ನೇ ಸಾಲಿನ ಸಮೀಕ್ಷೆಯಲ್ಲಿ ಕ್ರಮವಾಗಿ 16.6 ಹಾಗೂ 4.8ರಷ್ಟು ಋಣಾತ್ಮಕ ಪ್ರಗತಿ ಸಾಸಿದ್ದವು. ಆದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಈ ರಾಜ್ಯಗಳ ಲಸಿಕೆ ಸುರಕ್ಷೆ ಹೆಚ್ಚಳ ಪ್ರಮಾಣ ಕ್ರಮವಾಗಿ 48.3 ಮತ್ತು 12.5 ಆಗಿದೆ. ಪಶ್ಚಿಮ ಬಂಗಾಳ ಶೇ.31.3ರಷ್ಟು ಪ್ರಗತಿ ಕಂಡಿದೆ. ಆದರೆ ಇದು 2005-06ನೆ ಸಾಲಿನಲ್ಲಿದ್ದ ಪ್ರಗತಿ ದರಕ್ಕೆ ಹೋಲಿಸಿದರೆ ಶೇ.15.6ರಷ್ಟು ಕಡಿಮೆ.

ಗುಜರಾತ್‌ನ ಜತೆಗೆ ದೊಡ್ಡ, ಸಮೃದ್ಧ ರಾಜ್ಯಗಳ ಪೈಕಿ ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಲಸಿಕೆ ಪ್ರಮಾಣ ಕೂಡಾ ಕುಸಿದಿದೆ. ದೇಶದ ಸಮೃದ್ಧ ದೇಶ ಎನಿಸಿಕೊಂಡ ಮಹಾರಾಷ್ಟ್ರದಲ್ಲಿ 2005-06ನೆ ಸಾಲಿಗೆ ಹೋಲಿಸಿದರೆ 2015-16ರಲ್ಲಿ ಲಸಿಕೆ ಹಾಕಿಸಿಕೊಂಡ ಮಕ್ಕಳ ಪ್ರಮಾಣ ಶೇ.4.3ರಷ್ಟು ಕುಸಿದಿದೆ. ಇದೀಗ ಮಹಾರಾಷ್ಟ್ರದ ಸಾಧನೆ, ಈ ಅವಯಲ್ಲಿ ಶೇ.88.1ರಷ್ಟು ಪ್ರಗತಿ ಸಾಸಿದ ಬಿಹಾರಕ್ಕಿಂತಲೂ ಕಳಪೆ.

ಮೂರನೆ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2005-06)ಯಲ್ಲಿ ತಮಿಳುನಾಡು ಶೇ.80.9ರಷ್ಟು ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ದೇಶದಲ್ಲಿ ಅತಿಹೆಚ್ಚು ಲಸಿಕಾ ಸುರಕ್ಷೆ ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿತ್ತು. ಅದರೆ ಒಂದು ದಶಕದ ಬಳಿಕ ಈ ಪ್ರಮಾಣ ಶೇ.13.8ರಷ್ಟು ಕಡಿಮೆಯಾಗಿದೆ. 2015-16ರಲ್ಲಿ ದೇಶದ ಎರಡನೆ ದೊಡ್ಡ ಆರ್ಥಿಕತೆ ಎನಿಸಿದ ತಮಿಳುನಾಡಿನ ಲಸಿಕೆ ಪ್ರಮಾಣ 69.1ರಷ್ಟಿದೆ.

ಉತ್ತರಾಖಂಡ ಕೂಡಾ ಮಕ್ಕಳಿಗೆ ಲಸಿಕೆ ಹಾಕಿಸುವಲ್ಲಿ ಕಳೆದ ಒಂದು ದಶಕದಲ್ಲಿ ಶೇ.3.8ರಷ್ಟು ಕುಸಿತ ಕಂಡಿದೆ. ದಶಕದ ಹಿಂದೆ ಈ ರಾಜ್ಯದ ಲಸಿಕೆ ಪ್ರಮಾಣ ಶೇ.60 ಇತ್ತು. ಈ ಹೊಸ ರಾಜ್ಯದಲ್ಲಿ ಜಿಡಿಪಿ, ತಲಾದಾಯ, ಬಡತನ ನಿರ್ಮೂಲನೆ, ಸಾಕ್ಷರತೆ ಮತ್ತಿತರ ಅಂಶಗಳಲ್ಲಿ ಮಾತೃರಾಜ್ಯಕ್ಕಿಂತ ಉತ್ತಮ ಸಾಧನೆ ಹೊಂದಿದ್ದರೂ, ಲಸಿಕೆ ವಿಚಾರದಲ್ಲಿ ಮಾತ್ರ ಹಿಂದುಳಿದಿದೆ.

ಇತ್ತೀಚೆನ ಸಮೀಕ್ಷೆಯಲ್ಲಿ ಈಶಾನ್ಯ ರಾಜ್ಯಗಳ ಲಸಿಕೆ ಪ್ರಮಾಣ ಇನ್ನೂ ಕಡಿಮೆ ಇರುವುದು ವ್ಯಕ್ತವಾಗಿದೆ. ಆದಾಗ್ಯೂ ಈ ಪ್ರದೇಶದ ಏಳು ರಾಜ್ಯಗಳ ಪೈಕಿ ಐದರಲ್ಲಿ ಕಳೆದ ಸಮೀಕ್ಷೆಗೆ ಹೋಲಿಸಿದರೆ, ಗಣನೀಯ ಸುಧಾರಣೆ ಕಂಡುಬಂದಿದೆ. ಮೇಘಾಲಯ ಕಳೆದ ದಶಕದಲ್ಲಿ ಶೇ.87ರಷ್ಟು ಪ್ರಗತಿ ಕಂಡಿದ್ದರೆ, ನಾಗಾಲ್ಯಾಂಡ್ ಹಾಗೂ ಅಸ್ಸಾಂನಲ್ಲಿ ಏರಿಕೆ ಪ್ರಮಾಣ ಕ್ರಮವಾಗಿ ಶೇ.70 ಮತ್ತು 50 ಆಗಿದೆ.

ಪ್ರತೀ ವರ್ಷ ಲಸಿಕೆ ಪ್ರಮಾಣವನ್ನು ಶೇ.5ರಷ್ಟು ಹೆಚ್ಚಿಸುವ ಉದ್ದೇಶದಿಂದ 2014ರ ಡಿಸೆಂಬರ್‌ನಲ್ಲಿ ಮಿಷನ್ ಇಂದ್ರಧನುಷ್ ಯೋಜನೆಗೆ ಚಾಲನೆ ನೀಡಲಾಯಿತು. ಅಂದರೆ 2020ರ ವೇಳೆಗೆ ಶೇ.90ರಷ್ಟು ಮಕ್ಕಳಿಗೆ ಲಸಿಕಾ ಸುರಕ್ಷೆ ಒದಗಿಸುವುದು ಇದರ ಗುರಿ.

ಯೋಜನೆಯ ಮೊದಲ ಹಂತದಲ್ಲಿ ಸರಕಾರ 201 ಜಿಲ್ಲೆಗಳ ಮೇಲೆ ಅಕ ಗಮನ ಕೇಂದ್ರೀಕರಿಸಲು ನಿರ್ಧರಿಸಿದೆ. ಲಸಿಕಾ ಸುರಕ್ಷೆಗೆ ಒಳಪಡದ ಮಕ್ಕಳ ಪೈಕಿ ಶೇ.50ಕ್ಕಿಂತಲೂ ಅಕ ಮಕ್ಕಳು ಈ ಜಿಲ್ಲೆಗಳಲ್ಲಿದ್ದಾರೆ.

ಇಂಥ ಜಿಲ್ಲೆಗಳ ಪೈಕಿ 82 ಜಿಲ್ಲೆಗಳು ಬಿಮಾರು ರಾಜ್ಯಗಳಿಗೆ ಸೇರಿವೆ. ಬಿಹಾರದ 14, ಮಧ್ಯಪ್ರದೇಶದ 15, ರಾಜಸ್ಥಾನದ 9 ಹಾಗೂ ಉತ್ತರ ಪ್ರದೇಶದ 44 ಜಿಲ್ಲೆಗಳು ಸೇರಿವೆ. ದೇಶದ ಒಟ್ಟು ಲಸಿಕೆ ಹಾಕಿಸಿಕೊಳ್ಳದ ಮಕ್ಕಳ ಪೈಕಿ ಶೇ.25ರಷ್ಟು ಮಂದಿ ಈ ಜಿಲ್ಲೆಗಳಲ್ಲಿದ್ದಾರೆ.

ಈ ರಾಜ್ಯಗಳ ಮೇಳೆ ಹೆಚ್ಚಿನ ಗಮನ ಹರಿಸುವುದರಿಂದ ಲಸಿಕೆ ಹಾಕಿಸುವಲ್ಲಿ ಗಣನೀಯ ಪ್ರಗತಿ ಕಾಣಬಹುದಾಗಿದೆ. ಹೆಚ್ಚು ಸಮೃದ್ಧ ರಾಜ್ಯಗಳಿಂದ ಇತರ ರಾಜ್ಯಗಳಿಗೆ ಹೆಚ್ಚಿನ ಗಮನ ಕೇಂದ್ರೀಕರಿಸಿರುವುದು ಕೂಡಾ ಲಸಿಕಾ ಸುರಕ್ಷೆ ಪ್ರಗತಿ ಕುಂಠಿತಗೊಳ್ಳಲು ಕಾರಣವಾಗುವ ಸಾಧ್ಯತೆ ಇದೆ.

ಮಕ್ಕಳು ಭಾಗಶಃ ಲಸಿಕೆ ಹಾಕಿಸಿಕೊಳ್ಳಲು ಅಥವಾ ಲಸಿಕೆ ಹಾಕಿಸಿಕೊಳ್ಳದಿರಲು ಹಲವು ಕಾರಣಗಳಿವೆ. ಆದರೆ ಸಾಮಾನ್ಯ ಕಾರಣ ಎಂದರೆ, ಲಸಿಕೆಯ ಅಗತ್ಯತೆ ಬಗ್ಗೆ ಜಾಗೃತಿ ಇಲ್ಲದಿರುವುದು ಅಥವಾ ಮನವರಿಕೆಯಾಗದಿರುವುದು.

ಗುಜರಾತ್‌ನ ನಿದರ್ಶನದಲ್ಲಿ ಇದು ಸ್ಪಷ್ಟವಾಗಿ ತಿಳಿಯುತ್ತದೆ. ಇಲ್ಲಿ ಶೇ.22.3ರಷ್ಟು ಮಂದಿಗೆ ಲಸಿಕೆ ಅಗತ್ಯ ಇದೆ ಎನಿಸಿಲ್ಲ. ಅಂತೆಯೇ ಶೇ.15.5ರಷ್ಟು ಮಂದಿಗೆ ಲಸಿಕೆ ಬಗ್ಗೆ ತಿಳುವಳಿಕೆ ಇಲ್ಲ. ಈ ಎರಡು ಅಂಶಗಳು ಲಸಿಕಾ ಕಾರ್ಯಕ್ರಮ ಕುಂಠಿತವಾಗಲು ಕಾರಣ. ಈಶಾನ್ಯ ರಾಜ್ಯಗಳಲ್ಲಿ ಲಸಿಕಾ ಸುರಕ್ಷೆ ಕಡಿಮೆ ಇದ್ದು, ಸರಾಸರಿ 44.9ರಷ್ಟು ಮಂದಿಗೆ ಲಸಿಕೆ ಅಗತ್ಯತೆ ಇದೆ ಎನಿಸಿಲ್ಲ.

ಸಾರ್ವತ್ರಿಕ ಲಸಿಕಾ ಸುರಕ್ಷೆ ಇನ್ನೂ ಸಂಕೀರ್ಣವಾಗಿದ್ದು, ವಿಭಿನ್ನ ಹಂತಗಳಲ್ಲಿ ಲಸಿಕೆಯ ಡೋಸ್‌ಗಳನ್ನು ಕೊಡಿಸುವುದು ಅಗತ್ಯ. ನಿರಂತರವಾಗಿ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಕಾಳಜಿ ವಹಿಸಬೇಕಾದ ಆರೋಗ್ಯಸಂಸ್ಥೆಗಳು, ಕ್ಲಿನಿಕ್ ಹಾಗೂ ದಾದಿಯರಲ್ಲಿ ಕ್ಷಮತೆ ಮತ್ತು ಸಾಮರ್ಥ್ಯದ ಕೊರತೆ, ಗುಜರಾತ್‌ನ ಕಳಪೆ ಸಾಧನೆಗೆ ಮುಖ್ಯ ಕಾರಣ ಎಂದು ‘ದ ಎಕನಾಮಿಸ್ಟ್’ನ ಇತ್ತೀಚಿನ ವರದಿ ಹೇಳಿದೆ.

ಕೃಪೆ; ಇಂಡಿಯಾಸ್ಪೆಂಡ್

Writer - ಎಲಿಸನ್ ಸಲ್ಡಾನಾ

contributor

Editor - ಎಲಿಸನ್ ಸಲ್ಡಾನಾ

contributor

Similar News

ಜಗದಗಲ

ಜಗ ದಗಲ