ರಕ್ತಕ್ಕೆ ಧರ್ಮದ ಹೆಸರೇಕೆ?

Update: 2017-04-30 18:52 GMT

ಕೊಲೆ, ಅತ್ಯಾಚಾರಗಳು ಯಾರ ಮೇಲೆಯೇ ನಡೆಯಲಿ, ಎಲ್ಲೇ ನಡೆಯಲಿ, ಅದರ ವಿರುದ್ಧ ಸಮಾಜ ಒಂದಾಗುವುದು, ಆರೋಪಿಗಳನ್ನು ಪತ್ತೆ ಹಚ್ಚಲು ಕಾನೂನು ವ್ಯವಸ್ಥೆಯ ಮೇಲೆ ಒತ್ತಡ ಹೇರುವುದು ವರ್ತಮಾನದ ಅಗತ್ಯವಾಗಿದೆ. ಯಾವುದೇ ಕೊಲೆ ಅಥವಾ ಅತ್ಯಾಚಾರಗಳು ಸಮಾಜವನ್ನು ಒಳಿತಿನ ಕಡೆಗೆ ಕೊಂಡೊಯ್ಯಲಾರವು. ಕೊಲೆಗೈದವರು ಯಾವ ಧರ್ಮಕ್ಕೇ ಸೇರಿರಲಿ, ಅವರು ಆ ಧರ್ಮವನ್ನು ಪ್ರತಿನಿಧಿಸುವುದಿಲ್ಲ. ಕೊಲೆಗಾರರಿಗೆ, ಅತ್ಯಾಚಾರಿಗಳಿಗೆ ನಿರ್ದಿಷ್ಟ ಧರ್ಮವೆನ್ನುವುದೇ ಇಲ್ಲ.

ದುರದೃಷ್ಟವಶಾತ್ ಇಂದು ಯಾವುದೇ ಕೊಲೆ, ಅತ್ಯಾಚಾರ ಪ್ರಕರಣಗಳು ಸುದ್ದಿಯಾಗಬೇಕಾದರೆ, ರಾಜಕೀಯ ಸಂಘಟನೆಗಳಿಗೆ ಮುಖ್ಯವಾಗಬೇಕಾದರೆ ಅದಕ್ಕೆ ಕೆಲವು ಕಾರಣಗಳಿರಬೇಕಾಗುತ್ತದೆ. ಹಿಂದೂ ಹೆಸರಿನ ಒಬ್ಬ ಹುಡುಗಿಯ ಮೇಲೆ ನಡೆದ ಅತ್ಯಾಚಾರ ಇಡೀ ಊರನ್ನು ಗಾಬರಿಬೀಳಿಸಬೇಕಾದರೆ ಆಕೆಯನ್ನು ಇನ್ನೊಂದು ಧರ್ಮೀಯ ಅತ್ಯಾಚಾರ ಗೈದಿರಬೇಕು. ಒಂದು ವೇಳೆ ಸ್ವಧರ್ಮೀಯನಿಂದಲೇ ಆಕೆ ಅತ್ಯಾಚಾರಕ್ಕೊಳಗಾದರೆ ಕೆಲವು ಸಂಘಟನೆಗಳಿಗೆ, ರಾಜಕೀಯ ಪಕ್ಷಗಳಿಗೆ ಅದು ಹೆಣ್ಣಿನ ಮೇಲೆ ನಡೆದ ಅನ್ಯಾಯವೆಂದು ಅನಿಸುವುದಿಲ್ಲ. ಆ ಸಂತ್ರಸ್ತ ಹೆಣ್ಣಿನ ಪರವಾಗಿ ಬೀದಿಗಿಳಿದು ನ್ಯಾಯಕೇಳುವುದರಲ್ಲಿ ಅವರಿಗೆ ಆಸಕ್ತಿಯೂ ಇರುವುದಿಲ್ಲ. ಅದೇ ಹೆಣ್ಣಿನ ಮೇಲೆ ಅತ್ಯಾಚಾರಗೈದವನು ಬೇರೆ ಧರ್ಮಕ್ಕೆ ಸೇರಿದವನು ಎಂದು ಗೊತ್ತಾದಾಕ್ಷಣ ಕೆಲವು ಸಂಘಟನೆಗಳು ಒಮ್ಮೆಲೇ ಜಾಗೃತವಾಗುತ್ತವೆ. ಬೀದಿಗಿಳಿದು ದೊಂಬಿ ಎಬ್ಬಿಸುತ್ತವೆ. ಪೊಲೀಸ್ ಠಾಣೆಗೆ ದಾಳಿ ನಡೆಸುತ್ತವೆ.

ಈ ಪ್ರತಿಭಟನೆಯ ನಿಜವಾದ ಉದ್ದೇಶ ಸಂತ್ರಸ್ತೆಗೆ ನ್ಯಾಯ ದೊರಕಿಸುವುದಲ್ಲ, ಬದಲಿಗೆ ಆ ಸಂತ್ರಸ್ತೆಯ ಹೆಸರಿನಲ್ಲಿ ಊರಿಗೆ ಬೆಂಕಿ ಹಚ್ಚುವುದು. ಎರಡು ಧರ್ಮಗಳ ನಡುವೆ ವಿಷಬೀಜ ಬಿತ್ತುವುದು. ಆ ಮೂಲಕ ರಾಜಕೀಯ ಲಾಭಗಳನ್ನು ತನ್ನದಾಗಿಸುವುದು. ಒಂದು ಕೊಲೆ ನಡೆದರೆ ಸತ್ತವನ ಮತ್ತು ಕೊಂದವನ ಧರ್ಮದ ಹಿನ್ನೆಲೆ ಯಾವುದು ಎಂಬ ಆಧಾರದಲ್ಲಿ ಅದು ಮಹತ್ವವನ್ನು ಪಡೆಯುತ್ತದೆ. ಒಂದು ವೇಳೆ ಸ್ವಧರ್ಮೀಯನೇ ಕೊಲೆಗೈದರೆ ಅಂತಹ ಕೊಲೆಗಳಿಗೆ ತಮ್ಮ ವೌನದ ಮೂಲಕ ರಾಜಕೀಯ ಸಂಘಟನೆಗಳು ಸಮ್ಮತಿಯನ್ನು ನೀಡುತ್ತವೆ. ಆದರೆ ಅದು ಬೇರೆ ಜಾತಿಯಿಂದ ನಡೆದಿರಬಹುದು ಎಂಬ ಸಣ್ಣ ಶಂಕೆಯಿದ್ದರೂ, ಬೀದಿಗಿಳಿದು ಇನ್ನಷ್ಟು ಕೊಲೆಗಳಿಗೆ ಕುಮ್ಮಕ್ಕು ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಕರಾವಳಿಯ ಸಂಘಪರಿವಾರ ಸಂಘಟನೆಗಳು ತಮ್ಮ ಕಾರ್ಯಕರ್ತರು ತಮ್ಮ ವೈಯಕ್ತಿಕ ಮನಸ್ತಾಪಗಳಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೇ ಹತ್ಯೆಯಾದರೆ ಸಾಕು, ಅದನ್ನು ರಾಜಕೀಯಗೊಳಿಸಿ ಸಮಾಜಕ್ಕೆ ಬೆಂಕಿ ಹಚ್ಚಲು ನೋಡುತ್ತಿವೆ. ಸಂಘಪರಿವಾರದ ಕಾರ್ಯಕರ್ತ ಎಲ್ಲಾದರೂ ಕೊಲೆಗೀಡಾದರೆ ಅದನ್ನು ಮುಸ್ಲಿಮ್ ಸಂಘಟನೆಗಳೇ ಮಾಡಿವೆ ಎನ್ನುವುದನ್ನು ಪೊಲೀಸ್ ತನಿಖೆಗೆ ಮೊದಲೇ ಸಂಘಪರಿವಾರ ಘೋಷಿಸಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸುತ್ತದೆ.

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಾನೂನು ವ್ಯವಸ್ಥೆಗೆ ಬೆದರಿಕೆ ಹಾಕುತ್ತದೆ. ಇಡೀ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂದು ಶ್ರೀಸಾಮಾನ್ಯನ ಬದುಕನ್ನೇ ಆತಂಕದಲ್ಲಿ ಕೆಡಹುತ್ತದೆ. ಉಗ್ರರ ಕೈವಾಡವಿದೆ ಎಂದೆಲ್ಲ ವದಂತಿಗಳನ್ನು ಹರಡಿ ತನಿಖೆಯ ದಾರಿಯನ್ನೇ ತಪ್ಪಿಸಲು ಹವಣಿಸುತ್ತದೆ. ಇಂತಹ ಬೆಂಕಿ ಹಚ್ಚುವ ಯತ್ನಗಳಿಗೆ ಬಿಜೆಪಿಯ ಸಂಸದ, ರಾಜ್ಯಮಟ್ಟದ ಬಿಜೆಪಿ ನಾಯಕರೂ ಕೈ ಜೋಡಿಸುತ್ತಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಕರಾವಳಿಯ ಕಾರ್ತಿಕ್ ರಾಜ್ ಎಂಬ ಸಂಘಪರಿವಾರದ ಕಾರ್ಯಕರ್ತನ ಕೊಲೆ ಪ್ರಕರಣ ನಮ್ಮ ಮುಂದಿದೆ. ಈ ಕೊಲೆಯನ್ನು ಮುಂದಿಟ್ಟುಕೊಂಡು ಕಳೆದ ಕೆಲವು ತಿಂಗಳುಗಳಿಂದ ಸಂಘಪರಿವಾರ ಮತ್ತು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸುತ್ತಾ ಬಂದಿತ್ತು.

ಇದೀಗ ಕೊಲೆ ಯಾರಿಂದ ಯಾಕೆ ನಡೆದಿದೆ ಎನ್ನುವುದು ಗೊತ್ತಾದದ್ದೇ ಸಂಘಪರಿವಾರ ಮತ್ತು ಬಿಜೆಪಿ ಬಾಲ ಮುದುರಿ ಮೂಲೆ ಸೇರಿದೆ. ಕಾರ್ತಿಕ್ ರಾಜ್ ಕೊಲೆಯನ್ನು ಮುಸ್ಲಿಂ ಸಂಘಟನೆಗಳ ತಲೆಯ ಮೇಲೆ ಕಟ್ಟುವಲ್ಲಿ ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲು ಮೊದಲಾದವರು ಸಂಪೂರ್ಣ ಯಶಸ್ವಿಯಾಗಿದ್ದರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾದರಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲಿದ್ದೇವೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು. ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಹಿತ ವಿವಿಧ ನಾಯಕರು ಕಾರ್ತಿಕ್ ರಾಜ್ ಮನೆಗೆ ಭೇಟಿ ನೀಡಿದ್ದಲ್ಲದೆ, ಕೃತ್ಯದಲ್ಲಿ ಉಗ್ರ ಸಂಘಟನೆಗಳ ಕೈವಾಡವಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತನ ಕೊಲೆಗಾರರಿಗೂ, ಉಳ್ಳಾಲದಲ್ಲಿ ನಡೆದಿರುವ ಕೊಲೆಯ ಹಿಂದಿರುವವರಿಗೂ ಸಂಬಂಧವಿದೆ ಎಂದು ಗಾಳಿಯಲ್ಲಿ ಗುಂಡನ್ನೂ ಹಾರಿಸಿದ್ದರು.

ನಳಿನ್ ಕುಮಾರ್ ಕಟೀಲು ಅವರ ಉದ್ವಿಗ್ನಕಾರಿ ಭಾಷಣದಿಂದ ಪ್ರಚೋದನೆಗೊಂಡ ಉಳ್ಳಾಲ ಮೂಲದ ಸಂಘಪರಿವಾರ ಯುವಕನೊಬ್ಬ ಉಡುಪಿಯಲ್ಲಿ ಮಸೀದಿಯೊಂದಕ್ಕೆ ದಾಳಿ ನಡೆಸಿ, ಬಳಿಕ ರಿಕ್ಷಾ ಚಾಲಕನೊಬ್ಬನನ್ನು ಮುಸ್ಲಿಮ್ ಎಂಬ ಕಾರಣಕ್ಕಾಗಿಯೇ ಕೊಲೆಗೈದಿದ್ದ. ಹಲವು ಸಭೆಗಳಲ್ಲೂ ಕಾರ್ತಿಕ್ ರಾಜ್ ಕೊಲೆಯನ್ನು ಮುಂದಿಟ್ಟುಕೊಂಡು ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುವ ಕೆಲಸ ನಡೆದಿತ್ತು. ಇದೀಗ ಪೊಲೀಸರು ಅಪರಾಧಿಗಳನ್ನು ಪತ್ತೆ ಹಚ್ಚಿದ್ದಾರೆ. ಸ್ವತಃ ಕಾರ್ತಿಕ್ ರಾಜ್ ಸೋದರಿಯೇ ತನ್ನ ಪ್ರಿಯಕರನ ಮೂಲಕ ಸುಪಾರಿಕೊಟ್ಟು ಆತನನ್ನು ಕೊಲೆಗೈದಿರುವುದು ಬೆಳಕಿಗೆ ಬಂದಿದೆ.

ಆದರೆ ಕಾರ್ತಿಕ್ ರಾಜ್ ಕೊಲೆಯನ್ನು ಅಮಾಯಕ ಮುಸ್ಲಿಮರ ತಲೆಗೆ ಕಟ್ಟಲು ಸರ್ವ ಪ್ರಯತ್ನ ಮಾಡಿದ ನಾಯಕರು ಮಾತ್ರ ಬಾಯಿ ತೆರೆಯುತ್ತಿಲ್ಲ. ಕನಿಷ್ಠ ಜಿಲ್ಲೆಯ, ರಾಜ್ಯದ ಜನರ ಜೊತೆಗೆ ಕ್ಷಮೆಯಾಚನೆ ಮಾಡಬೇಕು ಎಂದೂ ಅವರಿಗೆ ಅನ್ನಿಸುತ್ತಿಲ್ಲ. ಸಂಘಪರಿವಾರದ ಕಾರ್ಯಕರ್ತರ ವೇಷದಲ್ಲಿ ರೌಡಿಗಳು, ಗೂಂಡಾಗಳು ಸಮಾಜದ ಶಾಂತಿಯನ್ನು ಕೆಡಿಸುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ವೈಯಕ್ತಿಕವಾಗಿ ಹಲವು ಅಕ್ರಮ ವ್ಯವಹಾರಗಳಲ್ಲಿ ತೊಡಗಿರುವ ತಮ್ಮ ತಮ್ಮಿಳಗೆ ಪರಸ್ಪರ ಸ್ಪರ್ಧೆಯನ್ನು ಹೊಂದಿರುವ ಇವರು ಕೊಲೆಯಾಗುವುದಕ್ಕೆ ಯಾವ ಉಗ್ರರ ಅಗತ್ಯವೂ ಇಲ್ಲ. ಅವರ ಪಾಪಗಳೇ ಅವರನ್ನು ಕೊಂದು ಹಾಕುವುದಕ್ಕೆ ಧಾರಾಳ ಸಾಕು. ಹೀಗಿರುವಾಗ, ಅವರ ಹೆಸರಲ್ಲಿ ಜನಪ್ರತಿನಿಧಿಗಳೆನಿಸಿದವರು ಸಮಾಜದ ಇರುವ ಶಾಂತಿಯನ್ನು ಕೆಡಿಸಲು ಹೊರಡುವುದು ಎಷ್ಟು ಸರಿ?

ಕೊಲೆಯಾದವನು, ಕೊಂದವನು ಯಾವ ಧರ್ಮಕ್ಕೇ ಸೇರಿರಲಿ, ಅಪರಾಧಿಯ ಬಂಧನ ಆಗಲೇ ಬೇಕು. ಕಾರ್ತಿಕ್ ರಾಜ್ ಕೊಲೆಯ ಹಿಂದಿರುವವರಿಗೆ ಕಠಿಣ ಶಿಕ್ಷೆಯಾ ಗಬೇಕು. ಹಾಗೆಯೇ ಕಾರ್ತಿಕ್ ರಾಜ್ ಹೆಸರನ್ನು ಬಳಸಿ ಜಿಲ್ಲೆಯಲ್ಲಿ ಇನ್ನಷ್ಟು ಅಮಾಯಕರ ಕೊಲೆಗಳನ್ನು ಮಾಡಲು ಹೊರಟ ಜನನಾಯಕರನ್ನು ಶಿಕ್ಷಿಸಲು ಇಲ್ಲಿ ಯಾವ ಕಾನೂನೂ ಇಲ್ಲ. ಇಂಥವರ ವಿರುದ್ಧ ಸಜ್ಜನ ಸಮಾಜವೇ ಜಾಗೃತವಾಗಬೇಕಾಗಿದೆ ಮತ್ತು ವದಂತಿಗಳನ್ನು ಹರಡಿ ಸಮಾಜದ ನೆಮ್ಮದಿ ಕೆಡಿಸುವವರ ನಡುವೆ ಜನರು ಗರಿಷ್ಠ ಸಹನೆಯನ್ನು, ವಿವೇಕವನ್ನು ಬಳಸಿಕೊಂಡು ಸಮಾಜದ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News