ಬಿಜೆಪಿಯೊಳಗಿನ ಅಸಂತೋಷ!

Update: 2017-05-03 04:25 GMT

ಅದೆಷ್ಟು ತೇಪೆಗಳನ್ನು ಹಾಕಿದರೂ ರಾಜ್ಯ ಬಿಜೆಪಿ ಒಂದಾಗುವ ಸೂಚನೆಗಳಿಲ್ಲ. ಉಸ್ತುವಾರಿ ವಹಿಸಿಕೊಂಡಿರುವ ಪಿ.ಮುರಳೀಧರ ರಾವ್ ಅವರು, ಭಿನ್ನರಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿ, ರಾಯಣ್ಣ ಬ್ರಿಗೇಡ್‌ಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಘೋಷಿಸಿದರೂ, ಬಿಜೆಪಿಯೊಳಗಿರುವ ಪರಿಸ್ಥಿತಿ ಮಾತ್ರ ತಣಿದಿಲ್ಲ. ಬಿಜೆಪಿಯೊಳಗಿರುವ ಬಿಕ್ಕಟ್ಟು ಕೇವಲ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಬಣಕ್ಕೆ ಸಂಬಂಧಿಸಿದ್ದೇ ಆಗಿದ್ದರೆ ಅದನ್ನು ಮುರಳೀದರ್ ರಾವ್ ಸುಲಭವಾಗಿ ಪರಿಹರಿಸಿ ಬಿಡುತ್ತಿದ್ದರೋ ಏನೋ. ಇದು ಬಿಜೆಪಿಯೊಳಗಿರುವ ಎರಡು ಬಣಗಳ ನಡುವಿನ ತಿಕ್ಕಾಟ ಅಲ್ಲವೇ ಅಲ್ಲ. ಇದು ಬಿಜೆಪಿಯೊಳಗಿರುವ ಎರಡು ಸಿದ್ಧಾಂತಗಳ ನಡುವಿನ ತಿಕ್ಕಾಟವಾಗಿರುವುದರಿಂದ ಮುರಳೀಧರ ರಾವ್ ಅಸಹಾಯಕರಾಗಿದ್ದಾರೆ. ಈಶ್ವರಪ್ಪ ವಿರುದ್ಧ ರಾವ್ ತೆಗೆದುಕೊಂಡಿರುವ ಕ್ರಮ ತೋರಿಕೆಯದ್ದಷ್ಟೇ ಆಗಿದೆ. ಅದರಿಂದ ಯಾವ ಯಡಿಯೂರಪ್ಪ ದಾರಿ ಸುಗಮವಾಗಲಾರದು. ಯಾಕೆಂದರೆ, ಯಡಿಯೂರಪ್ಪ ಅವರ ದಾರಿಗೆ ತೊಡಕಾಗಿರುವುದು ಈಶ್ವರಪ್ಪ ಅಲ್ಲವೇ ಅಲ್ಲ. ಅವರನ್ನು ಮುಂದಿಟ್ಟುಕೊಂಡು ತಮ್ಮ ದಾಳಗಳನ್ನು ಹಾಕುತ್ತಿರುವ ಬಿಜೆಪಿಯೊಳಗಿನ ವೈದಿಕ ಅಥವಾ ಬ್ರಾಹ್ಮಣ ಶಕ್ತಿಗಳೇ ಯಡಿಯೂರಪ್ಪ ಅವರನ್ನು ಮುಂದೆ ಹೆಜ್ಜೆಯಿಡದಂತೆ ತಡೆಯುತ್ತಿವೆ. ‘ಇದು ನನ್ನ ಹೋರಾಟ’ ಎಂದು ಈಶ್ವರಪ್ಪ ಭಾವಿಸಿಕೊಂಡಿರಬಹುದಾದರೂ, ನೇರವಾಗಿ ಮುಖವನ್ನು ಪ್ರದರ್ಶಿಸಲು ಸಾಧ್ಯವಿಲ್ಲದ ಶಕ್ತಿಗಳು ಈಶ್ವರಪ್ಪ ಅವರನ್ನು ಮುಂದಿಟ್ಟುಕೊಂಡು ಬಿಜೆಪಿಯೊಳಗಿನ ಲಿಂಗಾಯತ ಲಾಬಿಯನ್ನು ಮಣಿಸಲು ಹೊರಟಿದೆ. ಇಲ್ಲಿ ಈಶ್ವರಪ್ಪ ಆರೆಸ್ಸೆಸ್ ಮುಖಂಡ ಸಂತೋಷ್‌ರ ದಾಳವಾಗಿದ್ದಾರೆ. ಹಿಂದುಳಿದ ವರ್ಗ ಮತ್ತು ಲಿಂಗಾಯತ ಶಕ್ತಿಯನ್ನು ಮುಖಾಮುಖಿಯಾಗಿಸಿ, ಅಂತಿಮವಾಗಿ ಇದರ ಲಾಭವನ್ನು ತನ್ನದಾಗಿಸಿಕೊಳ್ಳಲು ಆರೆಸ್ಸೆಸ್ ಸಂಚು ನಡೆಸುತ್ತಿದೆ. ಬಿಜೆಪಿಯೊಳಗಿನ ವೈದಿಕ-ಲಿಂಗಾಯತ ಮುಸುಕಿನ ತಿಕ್ಕಾಟಗಳಿಗೆ ಸುದೀರ್ಘ ಇತಿಹಾಸವಿದೆ. ರಾಜ್ಯಾದ್ಯಂತ ತಳಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಸಂಘಟಿಸಿ ಅದನ್ನು ಅಧಿಕಾರದೆಡೆಗೆ ತಂದುದು ಯಡಿಯೂರಪ್ಪ. ಲಿಂಗಾಯತ ತತ್ವವನ್ನು ಆರೆಸ್ಸೆಸ್‌ನ ತೆಕ್ಕೆಗೆ ಅರ್ಪಿಸುವಲ್ಲೂ ಯಡಿಯೂರಪ್ಪರ ಪಾತ್ರ ಸಣ್ಣದೇನೂ ಅಲ್ಲ. ಲಿಂಗಾಯತರೇನಾದರೂ ಕೈ ಬಿಟ್ಟರೆ, ಈಗಲೂ ಬಿಜೆಪಿ ಬೀದಿಯಲ್ಲಿ ನಿಲ್ಲಬೇಕಾಗುತ್ತದೆ. ರಾಜ್ಯದ ಲಿಂಗಾಯತರ ಮೇಲೆ ಹಿಡಿತ ಇಟ್ಟುಕೊಂಡಿರುವ ಯಡಿಯೂರಪ್ಪ ಆ ಮೂಲಕವೇ ಬಿಜೆಪಿಯೊಳಗೆ ತನ್ನ ಸ್ವತಂತ್ರ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದವರು. ಈ ಹಿಂದೆ ಬಿಜೆಪಿಯನ್ನು ಯಡಿಯೂರಪ್ಪ ಅಧಿಕಾರಕ್ಕೆ ತಂದಾಗ, ರಾಜ್ಯದ ಮುಖ್ಯಮಂತ್ರಿಯಾಗಿ ಅನಂತಕುಮಾರ್ ಅಥವಾ ಸುರೇಶ್ ಕುಮಾರ್‌ರನ್ನು ಆರಿಸುವುದಕ್ಕೆ ಆರೆಸ್ಸೆಸ್ ಸಂಚು ನಡೆಸಿತ್ತು. ಆದರೆ ಯಡಿಯೂರಪ್ಪ ಅದಕ್ಕೆ ಅವಕಾಶ ಕೊಡಲಿಲ್ಲ. ಈ ಸಂದರ್ಭದಲ್ಲಿ ರೆಡ್ಡಿ ಸಹೋದರರನ್ನು ಮುಂದಿಟ್ಟುಕೊಂಡು ಆರೆಸ್ಸೆಸ್ ಯಡಿಯೂರಪ್ಪ ಅವರನ್ನು ದುರ್ಬಲಗೊಳಿಸಲು ಸಕಲ ರೀತಿಯಲ್ಲಿ ಪ್ರಯತ್ನಿಸಿತು. ಯಡಿಯೂರಪ್ಪ ಅವರೂ ಅದನ್ನು ಅಷ್ಟೇ ತೀವ್ರವಾಗಿ ಪ್ರತಿರೋಧಿಸಿದರು. ಕೊನೆಗೂ ಆರೆಸ್ಸೆಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಯಶಸ್ವಿಯಾಯಿತು. ಆದರೆ ತನ್ನ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿಸುವಲ್ಲಿ ವಿಫಲವಾಯಿತು. ಸದಾನಂದ ಗೌಡ ಮತ್ತು ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿಸುವಲ್ಲಿಗೆ ಅದು ತೃಪ್ತಿ ಪಡಬೇಕಾಯಿತು. ಸಂತೋಷ್ ಹೆಸರು ಮಾಧ್ಯಮಗಳಲ್ಲಿ ಪ್ರಥಮವಾಗಿ ಹೊರಬಿದ್ದುದೂ ಇದೇ ಸಂದರ್ಭದಲ್ಲಿ. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ ಕುರಿತಂತೆ ಲಿಂಗಾಯತ ಸಮುದಾಯದ ನಡುವೆ ವ್ಯಾಪಕ ಆಕ್ರೋಶವಿತ್ತು. ಅದನ್ನು ತಣಿಸಲು ಶೆಟ್ಟರ್ ಅವರನ್ನು ಆರೆಸ್ಸೆಸ್ ಮುಂದಿಟ್ಟಿತು. ಆದರೆ ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪರ ಹೊರತು, ಬಿಜೆಪಿಯೊಳಗೆ ಇನ್ನಾರೂ ಪ್ರತಿನಿಧಿಸಲು ಸಾಧ್ಯವಿರಲಿಲ್ಲ. ಮುಂದೆ ಕೆಜೆಪಿ ಕಟ್ಟಿ, ಬಿಜೆಪಿಯನ್ನು ರಾಜ್ಯದಲ್ಲಿ ಹೀನಾಯವಾಗಿ ಸೋಲಿಸುವಲ್ಲೂ ಯಡಿಯೂರಪ್ಪ ಯಶಸ್ವಿಯಾದರು. ದೂರ ಸರಿದಿರುವ ಲಿಂಗಾಯತರನ್ನು ಹತ್ತಿರವಾಗಿಸಬೇಕಾದರೆ ಯಡಿಯೂರಪ್ಪರನ್ನು ಹತ್ತಿರ ಮಾಡಿಕೊಳ್ಳುವುದು ಅತ್ಯಗತ್ಯ ಎನ್ನುವುದು ದಿಲ್ಲಿಯ ವರಿಷ್ಠರಿಗೆ ಮನವರಿಕೆಯಾದ ಪರಿಣಾಮವಾಗಿ ಯಡಿಯೂರಪ್ಪ ಮರಳಿ ಬಿಜೆಪಿ ಸೇರ್ಪಡೆಗೊಂಡರು ಮಾತ್ರವಲ್ಲ, ಮತ್ತೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.

  
ರಾಜ್ಯಾಧ್ಯಕ್ಷರಾಗಿದ್ದರೂ, ಈ ಹಿಂದಿನ ಗಾಯಗಳು ಯಡಿಯೂರಪ್ಪ ಬೆನ್ನಲ್ಲಿ ಇನ್ನೂ ಹಸಿಯಾಗಿಯೇ ಇವೆೆ. ಪಕ್ಷವನ್ನು ಪುನರ್‌ಸಂಘಟಿಸಿ ಅಧಿಕಾರಕ್ಕೇರಿಸಿದ ಬೆನ್ನಿಗೇ ತನ್ನನ್ನು ಹಿಂದಿನಂತೆಯೇ ಮೂಲೆಗುಂಪು ಮಾಡುವ ಸಾಧ್ಯತೆಗಳ ಬಗ್ಗೆ ಯಡಿಯೂರಪ್ಪರಿಗಿದ್ದ ಅನುಮಾನ ಇದೀಗ ನಿಜವಾಗಿದೆ. ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿ ಮತ್ತೆ ಪಕ್ಷದಲ್ಲಿ ಪಾರಮ್ಯವನ್ನು ಪಡೆಯುವುದು ರಾಜ್ಯ ಆರೆಸ್ಸೆಸ್‌ಗೆ ಬೇಕಾಗಿಲ್ಲ. ಲಿಂಗಾಯತರ ಮತಗಳಷ್ಟೇ ಬಿಜೆಪಿಗೆ ಬೇಕು. ಆದರೆ ಅಧಿಕಾರಕ್ಕೆ ತಮ್ಮದೇ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಆರೆಸ್ಸೆಸ್‌ನ ಗುರಿ. ಉತ್ತರ ಪ್ರದೇಶದಲ್ಲಿ ಏಕಾಏಕಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿರುವುದು ರಾಜ್ಯದಲ್ಲಿ ಆರೆಸ್ಸೆಸ್‌ನ ಮುಖಂಡ ಸಂತೋಷ್‌ಗೆ ಆತ್ಮವಿಶ್ವಾಸ ತಂದಿದೆ. ಅಲ್ಲಿ ನಡೆದಿರುವುದು ಇಲ್ಲಿ ಯಾಕೆ ಮೋದಿಯ ಹೆಸರಿನಲ್ಲಿ ನಡೆಯಬಾರದು ಎನ್ನುವ ಲೆಕ್ಕ ಆರೆಸ್ಸೆಸ್‌ನದು. ಮುಂದಿನ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಹೆಸರಲ್ಲಿ ಮತಯಾಚನೆ ಮಾಡುವ ಬದಲು ಮೋದಿಯ ಹೆಸರಲ್ಲಿ ಮತ ಯಾಚನೆ ಮಾಡುವ ಹೊಸ ತಂತ್ರವನ್ನು ಆರೆಸ್ಸೆಸ್ ರೂಪಿಸುತ್ತಿದೆ. ಅದಕ್ಕೆ ಪೂರಕವಾಗಿ ಸಂತೋಷ್ ಅವರು ಈಶ್ವರಪ್ಪ ಮತ್ತು ಬಳಗದ ಅಸಮಾಧಾನವನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಈಗಾಗಲೇ ಯಡಿಯೂರಪ್ಪ ಅವರೇ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಈವರೆಗೆ ಯಡಿಯೂರಪ್ಪ ಯಾವತ್ತೂ ಆರೆಸ್ಸೆಸ್‌ನ ಮೇಲೆ ನೇರವಾಗಿ ಟೀಕೆಯನ್ನು ಮಾಡಿರಲಿಲ್ಲ. ಆದರೆ ಈಶ್ವರಪ್ಪ ಅವರ ಬಣ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಲು ಹೊರಟದ್ದೇ, ಯಡಿಯೂರಪ್ಪ ತನ್ನ ಬಾಣವನ್ನು ನೇರವಾಗಿ ಆರೆಸ್ಸೆಸ್‌ನ ಸಂತೋಷ್‌ಗೆ ಕಡೆ ಬಿಟ್ಟಿದ್ದಾರೆ. ಬಾಣ ಆರೆಸ್ಸೆಸ್‌ನ್ನು ಇರಿದದ್ದೇ ತಡ, ಕೇಂದ್ರದಿಂದ ತಕ್ಷಣ ಉಸ್ತುವಾರಿಗಳು ರಾಜ್ಯಕ್ಕೆ ಆಗಮಿಸಿ ಈಶ್ವರಪ್ಪರ ಬಾಯಿ ಮುಚ್ಚಿಸಿದ್ದಾರೆ. ಯಾಕೆಂದರೆ, ಈ ತಿಕ್ಕಾಟ ಯಾವ ಕಾರಣಕ್ಕೂ ಲಿಂಗಾಯತ-ಆರೆಸ್ಸೆಸ್ ಆಗಿ ಪರಿವರ್ತನೆಯಾಗುವುದು ವರಿಷ್ಠರಿಗೆ ಇಷ್ಟವಿಲ್ಲ. ಇಷ್ಟಕ್ಕೂ ಈಶ್ವರಪ್ಪ ಅವರು ಹಿಂದುಳಿದವರ್ಗವನ್ನು ಸಂಘಟಿಸುತ್ತಿದ್ದೇನೆ ಎಂದು ಹೇಳುತ್ತಾರಾದರೂ, ಆ ವರ್ಗದ ಹಿತಾಸಕ್ತಿ ಕಾಪಾಡುವಂತಹ ಯಾವ ಅಜೆಂಡಾಗಳೂ ಅವರ ಬಳಿ ಇಲ್ಲ. ಹಿಂದುಳಿದವರ್ಗಗಳಿಗೆ ಜಾತಿಯ ನೆಲೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಈವರೆಗೆ ಅವರು ಪ್ರಸ್ತಾಪಿಸಿಲ್ಲ. ಹಿಂದುಳಿದವರ್ಗದ ಮೀಸಲಾತಿಯನ್ನು ಆರೆಸ್ಸೆಸ್ ವಿರೋಧಿಸುತ್ತದೆ. ಹೀಗಿರುವಾಗ, ಮೀಸಲಾತಿಯ ಕುರಿತಂತೆ ರಾಯಣ್ಣ ಬ್ರಿಗೇಡ್‌ನ ನಿಲುವೇನು ಎನ್ನುವುದು ಈವರೆಗೆ ಬಹಿರಂಗವಾಗಿಲ್ಲ. ಯಡಿಯೂರಪ್ಪರ ಲಿಂಗಾಯತ ಲಾಬಿಗೆ ಪರ್ಯಾಯವಾಗಿ ಆರೆಸ್ಸೆಸ್ ಎತ್ತಿಕಟ್ಟಿರುವ ಬ್ರಿಗೇಡ್ ಇದಾಗಿದೆ. ಹಿಂದುಳಿದ ವರ್ಗ ಆರೆಸ್ಸೆಸ್‌ಗೆ ಗುರಾಣಿಯಷ್ಟೇ. ಈ ಎರಡೂ ಬಣಗಳ ತಿಕ್ಕಾಟಗಳ ಮೂಲಕ ಬಿಜೆಪಿ ನಾಯಕತ್ವಕ್ಕೆ ಮೂರನೆ ಹೆಸರಿಗೆ ಚಾಲನೆ ನೀಡುವುದು ಆರೆಸ್ಸೆಸ್‌ನ ಉದ್ದೇಶ. ಕಳೆದ ಉಪಚುನಾವಣೆಯ ಸೋಲನ್ನೂ ಯಡಿಯೂರಪ್ಪ ವಿರುದ್ಧ ಆರೆಸ್ಸೆಸ್ ಬಳಸಿಕೊಂಡು, ಹೊಸ ನಾಯಕನ ಅಗತ್ಯವನ್ನು ಎತ್ತಿ ಹಿಡಿದಿದೆ. ಕೆಲವು ಟಿವಿ ವಾಹಿನಿಗಳಿಗೆ ಅಪಾರ ಹಣ ಸುರಿದು ಸಂತೋಷ್ ಭವಿಷ್ಯದ ಮುಖ್ಯಮಂತ್ರಿ ಎಂಬಂತೆ ಬಿಂಬಿಸುವ ಪ್ರಯತ್ನವನ್ನೂ ಆರೆಸ್ಸೆಸ್ ಮಾಡುತ್ತಿದೆ ಎನ್ನುವುದು ಯಡಿಯೂರಪ್ಪ ಬಣದ ಆರೋಪ. ಮುಂದಿನ ದಿನಗಳಲ್ಲಿ ಆರೆಸ್ಸೆಸ್ ಸಂತೋಷ್ ಅವರನ್ನು ‘ಮೋದಿಯ ಆಯ್ಕೆ’ ಎಂದು ಹೇಳಿ ಕರ್ನಾಟಕದ ಜನರ ಮೇಲೆ ಹೇರುವುದರಲ್ಲಿ ಅನುಮಾನವಿಲ್ಲ. ಆ ಆಯ್ಕೆಯನ್ನು ನಾಡಿನ ಲಿಂಗಾಯತ ಸಮುದಾಯ ಎಷ್ಟರಮಟ್ಟಿಗೆ ಒಪ್ಪುತ್ತದೆ ಎನ್ನುವುದರಲ್ಲಿ ರಾಜ್ಯದಲ್ಲಿ ಬಿಜೆಪಿಯ ಭವಿಷ್ಯ ನಿಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News